logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕೇಂದ್ರ: ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಬಿಜೆಪಿಯ ಪಿಸಿ ಮೋಹನ್‌ಗೆ ಗೆಲುವು, ಕಾಂಗ್ರೆಸ್‌ ವೈಫಲ್ಯಕ್ಕೆ ಏನು ಕಾರಣ?

ಬೆಂಗಳೂರು ಕೇಂದ್ರ: ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಬಿಜೆಪಿಯ ಪಿಸಿ ಮೋಹನ್‌ಗೆ ಗೆಲುವು, ಕಾಂಗ್ರೆಸ್‌ ವೈಫಲ್ಯಕ್ಕೆ ಏನು ಕಾರಣ?

D M Ghanashyam HT Kannada

Jun 04, 2024 06:07 PM IST

google News

ಬಿಜೆಪಿ ಸಂಸದ ಪಿಸಿ ಮೋಹನ್‌

    • ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಸೋಲಿಸಿ 4ನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ 2009, 2014 ಮತ್ತು 2019ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಪಿ.ಸಿ.ಮೋಹನ್ ಅವರಿಗೆ ನಾಲ್ಕನೇ ಬಾರಿಯೂ ಅದೃಷ್ಟ ಕೈ ಹಿಡಿದಿದೆ. (ಮಾರುತಿ ಎಚ್.)
ಬಿಜೆಪಿ ಸಂಸದ ಪಿಸಿ ಮೋಹನ್‌
ಬಿಜೆಪಿ ಸಂಸದ ಪಿಸಿ ಮೋಹನ್‌

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಗೆಲುವು ಸಾಧಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಈ ಕ್ಷೇತ್ರದಲ್ಲಿ ಬಿಜೆಪಿ ಸತತ ಗೆಲುವು ದಾಖಲಿಸುತ್ತಿದೆ. ಈ ಬಾರಿ ಕಾಂಗ್ರೆಸ್‌ ವೈಫಲ್ಯಕ್ಕೆ ಏನು ಕಾರಣ ಎನ್ನುವ ಸಂಗತಿ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಸೋಲಿಸಿ 4ನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬಿಜೆಪಿ ಗೆಲುವು ದಾಖಲಿಸುತ್ತಿರುವುದು ಅಚ್ಚರಿಯೇ ಸರಿ. 2009, 2014 ಮತ್ತು 2019ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಪಿ.ಸಿ.ಮೋಹನ್ ಅವರಿಗೆ ನಾಲ್ಕನೇ ಬಾರಿಯೂ ಅದೃಷ್ಟ ಕೈ ಹಿಡಿದಿದೆ.

ಬೆಂಗಳೂರಿನ ಹೃದಯ ಭಾಗದ 8 ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಈ ಕ್ಷೇತ್ರದಲ್ಲಿ ಮುಸ್ಲಿಮರು ಶೇ 17.5, ಎಸ್‌ಸಿ ಮತ್ತು ಎಸ್‌ಟಿ ಶೇ 18 ಮತ್ತು ಕ್ರಿಶ್ಚಿಯನ್ನರು ಶೇ 4.4 ರಷ್ಟಿದ್ದಾರೆ. ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3 ರಲ್ಲಿ ಗೆಲುವು ಸಾಧಿಸಿದೆ.

ಸಚಿವರಾದ ಕೆ.ಜೆ.ಜಾರ್ಜ್(ಸರ್ವಜ್ಞ ನಗರ), ದಿನೇಶ್ ಗುಂಡೂರಾವ್ (ಗಾಂಧಿನಗರ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ರಿಜ್ವಾನ್ ಅರ್ಷದ್ (ಶಿವಾಜಿ ನಗರ), ಎನ್.ಎ.ಹ್ಯಾರಿಸ್ (ಶಾಂತಿನಗರ) ಕಾಂಗ್ರೆಸ್ ಶಾಸಕರು. ಸುರೇಶ್ ಕುಮಾರ್ (ರಾಜಾಜಿನಗರ), ರಘು (ಸಿವಿ ರಾಮನ್ ನಗರ) ಮತ್ತು ಮಂಜುಳ ಲಿಂಬಾವಳಿ (ಮಹದೇವಪುರ) ಬಿಜೆಪಿ ಶಾಸಕರು.

ಮೋಹನ್ ಅವರ ಗೆಲುವಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲ ಪ್ರಮುಖ ಕಾರಣ. ಈ ಕ್ಷೇತ್ರದಲ್ಲಿ ಐಟಿ-ಬಿಟಿ ಕಂಪನಿಗಳು ಹೆಚ್ಚಿದ್ದು, ನಗರ ಪ್ರದೇಶದ ಮತದಾರರು ಎಂದಿನಂತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪಿ.ಸಿ.ಮೋಹನ್ ಅವರು ಲೋಕಸಭೆಯಲ್ಲಿ ಗಮನಾರ್ಹ ಸಾಧನೆ ಮಾಡಿಲ್ಲ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನೇನೂ ಕೊಟ್ಟಿಲ್ಲ ಎನ್ನುವ ವಿಚಾರ ಚುನಾವಣೆ ವೇಳೆ ಪ್ರಸ್ತಾಪವಾಗಿತ್ತು. ಆದರೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಕಾರಣಕ್ಕೆ ಮತದಾರರು ಬಿಜೆಪಿಗೆ ಜೈ ಅಂದಿದ್ದಾರೆ.

ಸಂಸದರ ವೈಫಲ್ಯಗಳನ್ನು ಸರಿಯಾದ ಕ್ರಮದಲ್ಲಿ ಪ್ರಸ್ತಾಪಿಸಿದ್ದರೆ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಬಹುದಿತ್ತು ಎನ್ನುವ ಮಾತು ಇಂದಿಗೂ ಕೇಳಿಬರುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಇಲ್ಲಿ ಐವರು ಶಾಸಕರಿದ್ದರು. ಆದರೆ ಇತರ ಕ್ಷೇತ್ರಗಳಲ್ಲಿ ಕಂಡುಬಂದಂತೆ ಇಲ್ಲಿ ಕಾಂಗ್ರೆಸ್‌ ಪಕ್ಷವು ಸಂಘಟಿತ ಹೋರಾಟ ನಡೆಸಿದ್ದು ಕಂಡು ಬರಲೇ ಇಲ್ಲ.

ಮತ ಎಣಿಕೆ ವೇಳೆ ಆರಂಭದಲ್ಲಿ ಮುನ್ನಡೆಯಲ್ಲಿದ್ದ ಪಿ.ಸಿ.ಮೋಹನ್ ನಂತರ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದರು. ಮನ್ಸೂರ್ ಅಲಿಖಾನ್ ಗೆದ್ದೇ ಗೆಲ್ಲುತ್ತಾರೆ ಎನ್ನುವುದು ಖಚಿತವಾಗಿತ್ತು. ಒಂದು ಹಂತದಲ್ಲಿ ಮನ್ಸೂರ್ ಅವರು 70 ಸಾವಿರ ಮತಗಳ ಲೀಡ್ ಪಡೆದಿದ್ದರು. ಕೊನೆಯಲ್ಲಿ ಎಣಿಕೆಗೆ ಬಂದ ಮಹದೇವಪುರ ಮತ್ತು ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬಿಜೆಪಿಯನ್ನು ಗೆಲುವಿನ ದಡ ದಾಟಿಸಿತು. ಬಿಜೆಪಿ ಶಾಸಕರು ಪ್ರತಿನಿಧಿಸುವ ಈ ಎರಡೂ ಕ್ಷೇತ್ರಗಳಲ್ಲಿ 40 ಸಾವಿರ ಮತಗಳ ಮುನ್ನಡೆ ಸಿಕ್ಕಿದ್ದು ಗಮನ ಸೆಳೆಯಿತು. ಈ ಬಾರಿ ಜೆಡಿಎಸ್ ಇವರ ಬೆನ್ನಿಗಿದ್ದರೂ ಗೆಲುವಿನ ಅಂತರವು ನಿರಾಸೆ ಮೂಡಿಸಿದೆ.

ಪಿ.ಸಿ.ಮೋಹನ್ ಅವರು 2019ರ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. 70,968 ಮತಗಳ ಅಂತರದಿಂದ ರಿಜ್ವಾನ್‌ ಅರ್ಷದ್‌ ಅವರನ್ನು ಸೋಲಿಸಿದ್ದರು. ಈ ಬಾರಿ ಅಂತರ ಕೇವಲ 40 ಸಾವಿರಕ್ಕೆ ಕುಸಿದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ