logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ನಮ್ಮ ಯಾತ್ರಿಯಿಂದ ಹೊರನಡೆದ ಆಟೋ ಚಾಲಕರ ಸಂಘ: ಆ್ಯಪ್‌ ವಿರುದ್ಧ ಹಲವು ಆಕ್ಷೇಪ

Bengaluru News: ನಮ್ಮ ಯಾತ್ರಿಯಿಂದ ಹೊರನಡೆದ ಆಟೋ ಚಾಲಕರ ಸಂಘ: ಆ್ಯಪ್‌ ವಿರುದ್ಧ ಹಲವು ಆಕ್ಷೇಪ

HT Kannada Desk HT Kannada

Dec 13, 2023 08:28 AM IST

google News

ಪ್ರಾತಿನಿಧಿಕ ಚಿತ್ರ

    • ನಮ್ಮ ಯಾತ್ರಿ ಅಪ್ಲಿಕೇಶನ್ ಬಿಡುಗಡೆಯ ಸಮಯದಲ್ಲಿ ಆಟೋ ಚಾಲಕರ ಮನವೊಲಿಸಲು ಬೆಂಗಳೂರು ಆಟೊ ಚಾಲಕರ ಸಂಘವು ಪ್ರಮುಖ ಪಾತ್ರ ವಹಿಸಿತ್ತು. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ನಗರದ ಪ್ರಮುಖ ಆಟೋ ರಿಕ್ಷಾ ಒಕ್ಕೂಟಗಳಲ್ಲಿ ಒಂದಾದ ಆಟೋ ರಿಕ್ಷಾ ಚಾಲಕರ ಸಂಘ (Auto Rickshaw Drivers Union - ARDU) ಒಎನ್‌ಡಿಸಿ ಬೆಂಬಲಿತ 'ರೈಡ್' ಅಪ್ಲಿಕೇಶನ್ 'ನಮ್ಮ ಯಾತ್ರಿ'ಯಿಂದ ನಿರ್ಗಮಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಕೆಲ ಚಾಲಕರು ಇನ್ನೂ ಆ್ಯಪ್‌ ಬಳಸುವುದಾಗಿ ಹೇಳಿರುವುದರಿಂದ 'ನಮ್ಮ ಯಾತ್ರಿ' ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ತೊಂದರೆ ಎದುರಿಸುತ್ತಿದ್ದ ಪ್ರಯಾಣಿಕರೂ 'ಯಾತ್ರಿ' ಮುಂದುವರೆದಿರುವುದನ್ನು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.

ಅಪ್ಲಿಕೇಶನ್ ಬಿಡುಗಡೆಯ ಸಮಯದಲ್ಲಿ ಆಟೋ ಚಾಲಕರ ಸಂಘ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಸಂಘದ ಬೇಡಿಕೆಗಳನ್ನು ಈಡೇರಿಸುವಲ್ಲಿ 'ನಮ್ಮ ಯಾತ್ರಿ' ವಿಫಲವಾಗಿದೆ. 'ಆರಂಭದಿಂದಲೂ, ಎಆರ್‌ಡಿಯು ನಮ್ಮ ಯಾತ್ರಿ ಆ್ಯಪ್‌ನ ಭಾಗವಾಗಿತ್ತು. ಆ್ಯಪ್‌ ಬಿಡುಗಡೆಯಾಗುವ ಮೊದಲೇ ಒಟ್ಟು 10,000 ಚಾಲಕರು ಈ ವ್ಯವಸ್ಥೆಗೆ ಸೇರಿದ್ದರು. ಬಿಡುಗಡೆಯಾದ ನಂತರ ಇನ್ನೂ 50,000 ಚಾಲಕರು ನೋಂದಣಿ ಮಾಡಿಕೊಂಡರು. ಆದರೆ 'ನಮ್ಮ ಯಾತ್ರಿ' ನಂತರದ ದಿನಗಳಲ್ಲಿ ನಮ್ಮನ್ನು ನಿರ್ಲಕ್ಷಿಸಿತು' ಎಂದು ಆಟೋ ಚಾಲಕರ ಸಂಘದ ಪ್ರತಿನಿಧಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರತಿ ಸವಾರಿಗೆ ಇಂತಿಷ್ಟು ಎಂದು ಕಮಿಷನ್ ಸಂಗ್ರಹಿಸುವ ಓಲಾ, ಉಬರ್ ಮತ್ತು ರ‍್ಯಾಪಿಡೊದಂಥ ಅಗ್ರಿಗೇಟರ್‌ಗಳಿಗೆ 'ನಮ್ಮ ಯಾತ್ರಿ' ಪರ್ಯಾಯ ಎಂದು ಹೇಳಲಾಗುತ್ತಿತ್ತು. ಆ್ಯಪ್‌ ನಡೆಸುವ ಸಂಸ್ಥೆಗೆ ಯಾವುದೇ ಕಮಿಷನ್ ನೀಡದೇ ಚಾಲಕರು ಸವಾರಿ ಬಾಡಿಗೆಯ ಸಂಪೂರ್ಣ ಹಣ ಪಡೆಯುವ ವ್ಯವಸ್ಥೆಯು ಈ ಆ್ಯಪ್‌ ಜನಪ್ರಿಯಗೊಳ್ಳಲು ಮುಖ್ಯ ಕಾರಣವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 'ನಮ್ಮ ಯಾತ್ರಿ' ಸಹ ಚಾಲಕರಿಗೆ ಚಂದಾದಾರಿಕೆ ಶುಲ್ಕ ವಿಧಿಸಲು ಪ್ರಾರಂಭಿಸಿತು. ಅಲ್ಲಿ ಅವರು ದಿನಕ್ಕೆ 25 ಮತ್ತು ಪ್ರತಿ ಸವಾರಿಗೆ 3.50 ಪಾವತಿಸಬೇಕೆನ್ನುವ ಷರತ್ತು ಹಾಕಲಾಗಿತ್ತು (ದಿನದ 10 ಸವಾರಿಗಳ ನಂತರ ಉಚಿತ). ಈ ಹಣವನ್ನು ಆ್ಯಪ್‌ ಸುಧಾರಣೆಗೆ ಬಳಸಲಾಗುವುದು ಎಂದು ವಿವರ ನೀಡಲಾಗಿತ್ತು.

ಈ ಹಣ ಹೊರತುಪಡಿಸಿದರೆ ಇತರ ಯಾವುದೇ ರೀತಿಯಲ್ಲಿ ನಾವು ಚಾಲಕರಿಂದ ಅಥವಾ ಗ್ರಾಹಕರಿಂದ ಯಾವುದೇ ಹಣವನ್ನು ಸಂಗ್ರಹಿಸುತ್ತಿರಲಿಲ್ಲ. ನಮ್ಮ ಯಾತ್ರಿ ಫಿನ್ ಟೆಕ್ ಬ್ರಾಂಡ್ ಜುಸ್ಪೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಒಡೆತನದಲ್ಲಿದೆ.

ಈ ವರ್ಷದ ಅಕ್ಟೋಬರ್‌ವರೆಗೆ ಬೆಂಗಳೂರಿನ 'ನಮ್ಮ ಯಾತ್ರಿ' ಆ್ಯಪ್‌ ತನ್ನ ಚಾಲಕರಿಗೆ 189 ಕೋಟಿ ರೂಪಾಯಿ ಆದಾಯ ಗಳಿಸಲು ನೆರವಾಗಿದೆ. ಶೂನ್ಯ ಕಮಿಷನ್ ಮಾದರಿಯ ಮೂಲಕ ಆಟೊ ಚಾಲಕರಿಗೆ ಸುಮಾರು 19 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು 'ನಮ್ಮ ಯಾತ್ರಿ' ತಿಳಿಸಿದೆ.

ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟ ನಮ್ಮ ಯಾತ್ರಿ

ತನ್ನ ವಿರುದ್ಧ ಕೇಳಿ ಬಂದ ಆಕ್ಷೇಪಗಳಿಗೆ 'ನಮ್ಮ ಯಾತ್ರಿ' ಆ್ಯಪ್‌ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ನಮ್ಮ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ