Bengaluru Metro: ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಬಿಎಂಆರ್‌ಸಿಎಲ್ ವಿರುದ್ಧ ತಿರುಗಿಬಿದ್ದ ಮಹಿಳೆಯರು
Nov 22, 2023 04:04 PM IST
ಪ್ರಾತಿನಿಧಿಕ ಚಿತ್ರ
- ನಮ್ಮ ಮೆಟ್ರೋ ಅಂದರೆ ಮಹಿಳೆಯರಿಗೆ ತುಂಬಾನೇ ಸೇಫೆಸ್ಟ್ ಕಮ್ಯುಟರ್ ಎಂಬ ಮಾತಿದೆ. ಆದರೆ, ಬರ್ತಾ ಬರ್ತಾ ಇದು ಕೂಡ ಅನ್ ಸೇಫ್ ಅನಿಸುತ್ತಿದೆ. (ವರದಿ: ಅಕ್ಷರ ಕಿರಣ್)
ಬೆಂಗಳೂರು: ನಗರದ ಸಾರಿಗೆ ವ್ಯವಸ್ಥೆಯ ಜೀವನಾಡಿ ಎನಿಸಿರುವ 'ನಮ್ಮ ಮೆಟ್ರೋ' ರೈಲು ಮಹಿಳೆಯರಿಗೆ ಸುರಕ್ಷಿತ ಎನ್ನುವ ಮಾತು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧೆಡೆ ಮಹಿಳೆಯರಿಗೆ ಮೆಟ್ರೋ ರೈಲುಗಳಲ್ಲಿ ಲೈಂಗಿಕ ಕಿರುಕುಳದ ವರದಿಗಳು ಪ್ರಕಟವಾಗುತ್ತಿದ್ದವು. ಇದೀಗ ಬೆಂಗಳೂರಿನಲ್ಲಿಯೂ ಇಂಥದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಗುರುತಿಸಿ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ನಮ್ಮ ಮೆಟ್ರೋ ಅಂದರೆ ಮಹಿಳೆಯರಿಗೆ ತುಂಬಾನೇ ಸೇಫೆಸ್ಟ್ ಕಮ್ಯುಟರ್ ಎಂಬ ಮಾತಿದೆ. ಆದರೆ, ಬರ್ತಾ ಬರ್ತಾ ಇದು ಕೂಡ ಅನ್ ಸೇಫ್ ಅನಿಸುತ್ತಿದೆ. ದಿನೇ ದಿನೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಮಹಿಳೆಯರು ಸೋಷಿಯಲ್ ಮೀಡಿಯಾದಲ್ಲಿ ಬಿಎಂಆರ್‌ಸಿಎಲ್ ವಿರುದ್ಧಿ ತಿರುಗಿಬಿದ್ದಿದ್ದಾರೆ.
ಹೆಚ್ಚುತ್ತಿರುವ ದಟ್ಟಣೆಯಿಂದ ನಮ್ಮ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ಯುವತಿಯರು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೇಳಿಬರುತ್ತಿವೆ. ಬಿಎಂಆರ್ ಸಿಎಲ್ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲೆಡೆ ಸಿಸಿಟಿವಿ ಕೂಡ ಅಳವಡಿಸಿದೆ. ಆದರೂ, ಇಂತಹ ಪ್ರಕರಣಗಳು ಮರು ಕಾಣಿಸಿಕೊಳ್ಳುತ್ತಿರುವುದು ಮಹಿಳೆಯರಿಗೆ ಆತಂಕ ಉಂಟುಮಾಡಿದೆ. ಬೆಳಗಿನ ವೇಳೆ ಮೆಟ್ರೋ ರೈಲುಗಳು ಶೇ 90 ರಷ್ಟು ಭರ್ತಿಯಾಗಿರುತ್ತವೆ. ಈ ಸಂದರ್ಭದಲ್ಲಿ ಒಬ್ಬರ ಮೈ ಮತ್ತೊಬ್ಬರಿಗೆ ಅಂಟಿಕೊಂಡು ನಿಲ್ಲಲೇ ಬೇಕಾಗಿರುತ್ತದೆ. ಹೀಗಿರುವಾಗ ಯಾರ ಮೇಲೆಯೂ ಆರೋಪ ಮಾಡುವುದು ಸರಿಯಿರುವುದಿಲ್ಲ. ಆದರೆ, ಗುಡ್ ಟಚ್ ಮತ್ತು ಬ್ಯಾಡ್ ಟಚ್ ಗುರುತಿಸುವುದು ಕಷ್ಟವೇನಲ್ಲ. ಇಂತಹ ಬ್ಯಾಡ್ ಟಚ್ ಘಟನೆಯೊಂದು ಮೆಟ್ರೋದಲ್ಲಿ ನಡೆದಿದೆ.
ಕಿಕ್ಕಿರಿದಿದ್ದ ಮೆಟ್ರೋದಲ್ಲಿ ಪುರುಷನಿಂದ ಅಸಭ್ಯ ವರ್ತನೆ
ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಬೆಳಿಗ್ಗೆ 8.30ರ ಸುಮಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಆರಂಭಿಸಿದ್ದಾಳೆ. ಆ ಸಂದರ್ಭದಲ್ಲಿ ಮೆಟ್ರೋ ತುಂಬಿ ತುಳುಕುತಿತ್ತು. ಕಷ್ಟಪಟ್ಟು ಮೆಟ್ರೋ ಹತ್ತಿದ ಯುವತಿಗೆ ಆಕೆಯ ಹಿಂದೆ ನಿಂತಿದ್ದ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆಕೆಯ ಹಿಂದಿನ ಭಾಗವನ್ನು ಪದೇಪದೇ ಮುಟ್ಟಿದ್ದಾನೆ. ಆರಂಭದಲ್ಲಿ ಆಕೆಗೆ ಇದು ಜನರ ಒತ್ತಡದ ನಡುವೆ ಆಗುತ್ತಿದೆ ಎಂದು ಸುಮ್ಮನಾಗಿದ್ದಾಳೆ. ಆದರೆ, ಮತ್ತೆ ಮತ್ತೆ ಅದೇ ತರಹ ಆಗುತ್ತಿರುವುದನ್ನು ಗಮನಿಸಿದ ಆಕೆ ಮುಂದಕ್ಕೆ ಹೋಗಿದ್ದಾಳೆ. ಆ ಸಂದರ್ಭದಲ್ಲಿ ಸಹ ಪ್ರಯಾಣಿಕರ ಬಳಿ ಸಹಾಯ ಕೋರಿದರೂ ಯಾರು ನೆರವಿಗೆ ಬರಲಿಲ್ಲ. ಎಲ್ಲರೂ ಅವರವರ ಲೋಕದಲ್ಲಿ ಮುಳುಗಿದ್ದರು ಎಂದು ಆಕೆಯ ಗೆಳತಿ ಹೇಳಿಕೊಂಡಿದ್ದಾಳೆ.
ಈ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದು ಸಂಚಾರ ದಟ್ಟಣೆಯ ಪರಿಸ್ಥಿತಿಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ. ಇಂತಹ ಪರಿಸ್ಥಿಯನ್ನು ನಿಭಾಯಿಸುವುದು ಕಷ್ಟ. ಮೆಟ್ರೊ ಸಂಪೂರ್ಣ ಸಿಸಿ ಟಿ.ವಿ ಕ್ಯಾಮೆರಾದ ಕಣ್ಣಾವಲಿನಲ್ಲಿದೆ. ದೂರು ಸಲ್ಲಿಸಿದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಹಲವರು ಸಲಹೆ ನೀಡಿದ್ದಾರೆ.