logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Politics: ಲೋಕಸಭಾ ಚುನಾವಣೆಗೆ ಶುರುವಾಗಿದೆ ಸಿದ್ಧತೆ, ಈ ಬಾರಿಯಾದರೂ ಬಿಬಿಎಂಪಿಗೆ ಸಿಗಬಹುದೇ ಮೋಕ್ಷ

Bengaluru Politics: ಲೋಕಸಭಾ ಚುನಾವಣೆಗೆ ಶುರುವಾಗಿದೆ ಸಿದ್ಧತೆ, ಈ ಬಾರಿಯಾದರೂ ಬಿಬಿಎಂಪಿಗೆ ಸಿಗಬಹುದೇ ಮೋಕ್ಷ

HT Kannada Desk HT Kannada

Dec 25, 2023 12:07 PM IST

google News

ಬಿಬಿಎಂಪಿ ಚುನಾವಣೆ ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ

    • 2023 ರ ಕೊನೆಯ ದಿನಗಳಲ್ಲಿದ್ದೇವೆ. ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಬೆಂಗಳೂರು ಮಹಾನಗರದ 2024ರ ರಾಜಕೀಯ ನಿರೀಕ್ಷೆಗಳನ್ನು ಕಟ್ಟಿಕೊಡುವ ಬರಹ ಇಲ್ಲಿದೆ. (ವಿಶ್ಲೇಷಣೆ: ಎಚ್.ಮಾರುತಿ)
ಬಿಬಿಎಂಪಿ ಚುನಾವಣೆ ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ
ಬಿಬಿಎಂಪಿ ಚುನಾವಣೆ ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ (ಪ್ರಾತಿನಿಧಿಕ ಚಿತ್ರ)

2023ರಲ್ಲಿ ಬೆಂಗಳೂರಿನ ರಾಜಕಾರಣದಲ್ಲಿ ಭಾರಿ ಬದಲಾವಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿತ್ತಾದರೂ ನಡೆಯಲೇ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಆದರೆ ಬೆಂಗಳೂರಿನಲ್ಲಿ ಅಂತಹ ಮಹತ್ವದ ಬೆಳವಣಿಗೆಗಳೇನೂ ಆಗಲಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದರೂ ಬೆಂಗಳೂರಿನಲ್ಲಿ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವದರ ಜೊತೆಗೆ ಶೇ 5.4ರಷ್ಟು ಮತ ಗಳಿಕೆಯನ್ನು ಹೆಚ್ಚಿಸಿಕೊಂಡಿತು. ಹಾಗೆ ನೋಡಿದರೆ ಎಲ್ಲಾ ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲಿ ಮಾತ್ರ ಬಿಜೆಪಿ ತನ್ನ ಗೌರವವನ್ನು ಉಳಿಸಿಕೊಂಡಿತು.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಮೂವರು ಸದಸ್ಯರು ಮಾತ್ರ ಮರು ಆಯ್ಕೆಯಾಗುವಲ್ಲಿ ವಿಫಲರಾದರು. ಮಹದೇವಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಬದಲಿಗೆ ಅವರ ಪತ್ನಿ ವಿಧಾನಸಭೆ ಪ್ರವೇಶಿಸಿದ್ದಾರೆ. ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರಡ್ಡಿ ಪರಾಭವಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಮೊದಲ ಪ್ರಯತ್ನದಲ್ಲೇ ಆಯ್ಕೆಯಾದರು. ಇವರ ಗೆಲುವಿನ ಅಂತರ ರಾಜ್ಯದಲ್ಲೇ ಅತ್ಯಂತ ಕಡಿಮೆಯಾಗಿದೆ.

2018ರಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನ ಮಂಜುನಾಥ್ ಗೆಲುವು ಸಾಧಿಸಿದ್ದರು. ಈ ಬಾರಿ ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕರು ಇಲ್ಲವೇ ಇಲ್ಲ. ಇನ್ನು ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಈ ಬಾರಿ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲುವು ಸಾಧಿಸಲು ವಿಫಲರಾದರು. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಪಕ್ಷಭೇದವಿಲ್ಲದೆ 24 ಶಾಸಕರು ಮರು ಆಯ್ಕೆಯಾದರು. ಅಚ್ಚರಿ ಎಂದರೆ ಕೆಲವು ಶಾಸಕರು ನಾಲ್ಕೈದು ಬಾರಿಯಿಂದ ಮರು ಆಯ್ಕೆಯಾಗುತ್ತಲೇ ಇದ್ದಾರೆ. ಇಡೀ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ವ್ಯಕ್ತವಾಗಿದ್ದರೆ ಬೆಂಗಳೂರಿನಲ್ಲಿ ಶಾಸಕರಿಗೆ ಅಂತಹ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎನ್ನುವುದು ಕುತೂಹಲಕಾರಿಯಾದ ಆಂಶವಾಗಿದೆ.

ಕೆ.ಆರ್.ಪುರ ಕ್ಷೇತ್ರದ ಭೈರತಿ ಬಸವರಾಜ್, ಯಶವಂತಪುರದ ಎಸ್.ಟಿ.ಸೋಮಶೇಖರ್ ಮತ್ತು ರಾಜರಾಜೇಶ್ವರಿ ನಗರದ ಮುನಿರತ್ನ (ಮೂವರೂ ಕಾಂಗ್ರೆಸ್) ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕೆ.ಗೋಪಾಲಯ್ಯ (ಜೆಡಿಎಸ್) 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಮರು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲೂ ಇವರು ಮತ್ತೆ ಬಿಜೆಪಿಯಿಂದಲೇ ಆಯ್ಕೆಯಾಗಿದ್ದಾರೆ.

ನಡೆಯಲಿಲ್ಲ ಬಿಬಿಎಂಪಿ ಚುನಾವಣೆ

ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತ 2020ರ ಸೆಪ್ಟೆಂಬರ್‌ಗೆ ಅಂತ್ಯವಾಯಿತು. ಈವರೆಗೂ ಚುನಾವಣೆ ನಡೆದಿಲ್ಲ. ಆರಂಭದಲ್ಲಿ ಕೋವಿಡ್ ನೆಪದಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ನಂತರ ಬಿಜೆಪಿ ಸರ್ಕಾರ ಚುನಾವಣೆ ನಡೆಸಲೇ ಇಲ್ಲ. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 249ಕ್ಕೆ ಹೆಚ್ಚಿಸಿ ಮತ್ತೆ 225ಕ್ಕೆ ಇಳಿಸಲಾಯಿತು. ಈ ಮಧ್ಯೆ ಎರಡು ಬಾರಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಎರಡು ಬಾರಿ ವಾರ್ಡ್ ಮೀಸಲಾತಿಯನ್ನು ಬದಲಾಯಿಸಲಾಯಿತು. ಆದರೂ ಚುನಾವಣೆ ನಡೆಯಲೇ ಇಲ್ಲ. ಯಾವುದೇ ಪಕ್ಷಕೂ ಚುನಾವಣೆ ಬೇಕಿರಲಿಲ್ಲ ಎನ್ನುವುದು ನಿಜವಾದ ಸತ್ಯ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿರಿಯ ಶಾಸಕ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸುವ ಸಂಬಂಧ ಆಂತರಿಕ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಡಿಸೆಂಬರ್ ಅಂತ್ಯಕ್ಕೆ ಚುನಾವಣೆ ನಡೆಸುವ ಭರವಸೆ ನೀಡಿತ್ತಾದರೂ ಚುನಾವಣೆ ನಡೆಯಲೇ ಇಲ್ಲ. ಇದೀಗ ಮತ್ತೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಲೋಕಸಭಾ ಚುನಾವಣೆಗೂ ಮುನ್ನ ಬಿಬಿಎಂಪಿಗೆ ಚುನಾವಣೆ ನಡೆಸಲು ಒತ್ತಡ ಹೇರುತ್ತಿದ್ದಾರೆ. ಆದರೆ ಸರ್ಕಾರ ಲೋಕಸಭಾ ಚುನಾವಣೆ ನಂತರವಷ್ಟೇ ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆ ವಾತಾವರಣ ಹೇಗಿರಲಿದೆ?

2019ರ ಲೋಕಸಭಾ ಚುನಾವನೆಯಲ್ಲಿ ಬೆಂಗಳೂರಿನ ಮೂರೂ ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಿ.ಸಿ.ಮೋಹನ್ ಮತ್ತೆ ಅಭ್ಯರ್ಥಿಗಳಾಗುವ ಸಾಧ್ಯತೆ ನಿಚ್ಚಳವಾಗಿದೆ. ಮತ ಗಳಿಕೆ ಪ್ರಮಾಣ ಹೆಚ್ಚಿರುವುದನ್ನು ಅವಲೋಕಿಸಿದರೆ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳುವ ಬಗ್ಗೆ ಬಿಜೆಪಿ ವಿಶ್ವಾಸ ಹೊಂದಿದೆ. ಕಾಂಗ್ರೆಸ್ ಕನಿಷ್ಠ ಎರಡು ಸ್ಥಾನಗಳನ್ನು ಕಿತ್ತುಕೊಳ್ಳಲು ತಂತ್ರಗಾರಿಕೆ ರೂಪಿಸುತ್ತಿದೆ.

ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ಮತ್ತು ತದನಂತರ ನಡೆಯುವ ಬಿಬಿಎಂಪಿ ಚುನಾವಣೆ ಬೆಂಗಳೂರಿನ 2024ರ ರಾಜಕೀಯ ವಾತಾವರಣವನ್ನು ಹೇಗೆ ಬದಲಾಯಿಸಲಿವೆ ಎಂದು ಕಾದು ನೋಡಬೇಕಷ್ಟೇ.

(ಬರಹ: ಮಾರುತಿ ಎಚ್.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ