Bengaluru News: ಬೆಂಗಳೂರಿನ ಸರ್ಜಾಪುರದಲ್ಲಿ ಪ್ರತ್ಯಕ್ಷವಾದ ಚಡ್ಡಿ ಗ್ಯಾಂಗ್; ಶಸ್ತ್ರಸಜ್ಜಿತರಾಗಿ ಬಂದು ಮನೆಗಳಿಗೆ ನುಗ್ಗಲು ಯತ್ನ
Jul 15, 2023 04:47 PM IST
ಬೆಂಗಳೂರಿನ ಸರ್ಜಾಪುರ ಪ್ರದೇಶ
- Bengaluru chaddi gang: ಈ ಕಳ್ಳರ ಗ್ಯಾಂಗ್ ಇದೀಗ ಆಯುಧಗಳನ್ನು ಹಿಡಿದು ಶಸ್ತ್ರಸಜ್ಜಿತರಾಗಿ ಬಂದಿರುವುದನ್ನು ಕಂಡು ಸರ್ಜಾಪುರ ನಿವಾಸಿಗಳು ಭಯಭೀತರಾಗಿದ್ದಾರೆ.
ಬೆಂಗಳೂರು: ಈ ಹಿಂದೆ ಕೆಲವು ಬಾರಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದ ಚಡ್ಡಿ ಗ್ಯಾಂಗ್ ಈಗ ಸರ್ಜಾಪುರದಲ್ಲಿ ಪ್ರತ್ಯಕ್ಷವಾಗಿದೆ. ಈ ಕಳ್ಳರ ಗ್ಯಾಂಗ್ ಇದೀಗ ಆಯುಧಗಳನ್ನು ಹಿಡಿದು ಶಸ್ತ್ರಸಜ್ಜಿತರಾಗಿ ಬಂದಿರುವುದನ್ನು ಕಂಡು ಸರ್ಜಾಪುರ ನಿವಾಸಿಗಳು ಭಯಭೀತರಾಗಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸರ್ಜಾಪುರ ರಸ್ತೆ ಸುತ್ತಮುತ್ತ ವಿಲ್ಲಾಗಳು ಹಾಗೂ ದೊಡ್ಡ ದೊಡ್ಡ ಮನೆಗಳ ಬಳಿ ಕಳ್ಳತನಕ್ಕೆ ಯತ್ನಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಸ್ತ್ರಸಜ್ಜಿತವಾದ ಐದು ಸದಸ್ಯರ ಗ್ಯಾಂಗ್ ಕಾಲ ಮನೆಗಳ ಸುತ್ತಮುತ್ತ ಓಡಾಡಿದ್ದಾರೆ. ಜುಲೈ 10 ರಂದು ಇಬ್ಬರು ಹಾಗೂ ಜುಲೈ 11 ರಂದು ಅವರು ಮತ್ತೆ ಮೂವರನ್ನು ಕರೆದುಕೊಂಡಯ ಸುಮಾರು ಎರಡು ಗಂಟೆಗಳ ಕಾಲ ಮನೆಗಳ ಸುತ್ತಮುತ್ತ ಓಡಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಎರಡೂ ಘಟನೆಗಳು ನಸುಕಿನ ಜಾವ 1 ಗಂಟೆಯಿಂದ 3 ಗಂಟೆಯ ನಡುವೆ ಸಂಭವಿಸಿವೆ.
ಯಾವುದೇ ಮನೆಗಳಿಂದ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಆದರೆ ಚಡ್ಡಿ ಗ್ಯಾಂಗ್ ಕೈಯಲ್ಲಿ ಆಯುಧಗಳನ್ನು ನೋಡಿ ಬೆಚ್ಚಿಬಿದ್ದಿರುವ ನಿವಾಸಿಗಳು ಕಳಪೆ ಪೊಲೀಸ್ ಗಸ್ತು ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಕಳ್ಳರ ಗ್ಯಾಂಗ್ ಸಂಬಂಧ ದೂರು ದಾಖಲಿಸಿದ್ದಾರೆ.
ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 37 ಗ್ರಾಮಗಳು ಬರುತ್ತವೆ ಮತ್ತು ವೇಗವಾಗಿ ಬೆಳೆಯುತ್ತಿರುವ ಪ್ರದೇಶ ಇದಾಗಿದೆ. ಇಲ್ಲಿ ಸಾಕಷ್ಟು ವಿಲ್ಲಾಗಳು, ದೊಡ್ಡ ದೊಡ್ಡ ಬಂಗಲೆಗಳು ಇವೆ. ಠಾಣೆ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಗಸ್ತು ತಿರುಗಲು ಸಿಬ್ಬಂದಿ ಕೊರತೆ ಇದೆ. ನಗರ ಪೊಲೀಸರಿಗೆ ಹೋಲಿಸಿದರೆ ನಮ್ಮಲ್ಲಿ ಅರ್ಧದಷ್ಟು ಸಿಬ್ಬಂದಿ ಮಾತ್ರ ಇದ್ದಾರೆ. ನಾವು ರಾತ್ರಿ ಗಸ್ತುಗಾಗಿ ಕೇವಲ ಇಬ್ಬರು ಸಿಬ್ಬಂದಿಯನ್ನು ಹೊಂದಿದ್ದೇವೆ. ಇದು ಸವಾಲಾಗಿದೆ ಎಂದು ಬೆಂಗಳೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.