Bengaluru Crime: ದುಪ್ಪಟ್ಟು ಬಾಡಿಗೆ ಕೇಳಿ ಪ್ರಯಾಣಿಕನ ಕೊಲೆ ಮಾಡಿದ ಆಟೋ ಚಾಲಕನಿಗೆ ಇದೆ ಅಪರಾಧ ಹಿನ್ನೆಲೆ; ಬೆಂಗಳೂರು ಕ್ರೈಂ
Jun 14, 2023 03:51 PM IST
ಬೆಂಗಳೂರು ಕ್ರೈಂ (ಪ್ರಾತಿನಿಧಿಕ ಚಿತ್ರ)
- Auto driver kills passenger: ಆಟೋ ಚಾಲಕ ಅಶ್ವಥ್ ಮೊದಲು 100 ರೂಪಾಯಿ ಬಾಡಿಗೆ ಒಪ್ಪಿಕೊಂಡಿದ್ದಾನೆ. ಆದರೆ ಮಾರ್ಗಮಧ್ಯೆ ಒಬ್ಬರಿಗೆ 1,500 ರೂ ಬಾಡಿಗೆ, ಹೀಗಾಗಿ ಇಬ್ಬರಿಂದ 3,000 ರ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ. ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಅವೋದ್- ಅಯೂಬ್ ಸಹೋದರರು ಒಪ್ಪಲಿಲ್ಲ. ಇದೇ ವಿಚಾರಕ್ಕೆ ಮೂವರ ನಡುವೆ ಗಲಾಟೆ ನಡೆದಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದಿರುವ ಘಟನೆಯೊಂದು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಬಾಡಿಗೆ ಜಾಸ್ತಿ ಕೇಳಿದ್ದಲ್ಲದೇ, ಅಷ್ಟು ದುಡ್ಡು ಕೊಡಲು ನಿರಾಕರಿಸಿದ ಪ್ರಯಾಣಿಕನನ್ನು ಆಟೋ ಚಾಲಕ ಕೊಲೆಗೈದಿರುವ ಘಟನೆ (Auto driver kills passenger) ಜೂನ್ 11 ರ ತಡರಾತ್ರಿ ನಡೆದಿತ್ತು.
ಆರೋಪಿ ಆಟೋ ಚಾಲಕನನ್ನು ಕೇವಲ 27 ವರ್ಷ ಪ್ರಾಯದ ಎಸ್.ಆರ್.ಅಶ್ವಥ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅವೋದ್ (28) ಸಾವನ್ನಪ್ಪಿದ್ದು, ಆತನ ಸಹೋದರ ಅಯೂಬ್ (26) ಗಾಯಗೊಂಡಿದ್ದಾರೆ. ಆರೋಪಿ ಅಶ್ವಥ್ ಸಾಮಾನ್ಯ ಆಟೋ ಚಾಲಕನಾಗಿರಲ್ಲಿಲ್ಲ, ಈತನಿಗಿದೆ ಅಪರಾಧ ಹಿನ್ನೆಲೆ.
ಘಟನೆ ವಿವರ
ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅವೋದ್ ಮತ್ತು ಅಯೂಬ್ ಬೆಂಗಳೂರಿನಿಂದ ಒಡಿಶಾಗೆ ಹೊರಟಿದ್ದರು. ಯಶವಂತಪುರ ರೈಲು ನಿಲ್ದಾಣಕ್ಕೆ ತೆರಳಲು ಚಂದಾಪುರದಿಂದ ಆಟೋರಿಕ್ಷಾ ಹತ್ತಿದ್ದಾರೆ. ಆಟೋ ಚಾಲಕ ಅಶ್ವಥ್ ಮೊದಲು 100 ರೂಪಾಯಿ ಬಾಡಿಗೆ ಒಪ್ಪಿಕೊಂಡಿದ್ದಾನೆ. ಆದರೆ ಮಾರ್ಗಮಧ್ಯೆ ಒಬ್ಬರಿಗೆ 1,500 ರೂ ಬಾಡಿಗೆ, ಹೀಗಾಗಿ ಇಬ್ಬರಿಂದ 3,000 ರ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ. ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಅವೋದ್- ಅಯೂಬ್ ಸಹೋದರರು ಒಪ್ಪಲಿಲ್ಲ.
ಇದೇ ವಿಚಾರಕ್ಕೆ ಮೂವರ ನಡುವೆ ಗಲಾಟೆ ನಡೆದಿದೆ. ಜಗಳ ತಾರಕ್ಕೇರಿದ್ದು, ಹೊಡೆದಾಟ ನಡೆದಿದೆ. ಅವೋದ್ನ ಹೊಟ್ಟೆ, ಎದೆ ಮತ್ತು ಮುಖಕ್ಕೆ ಅಶ್ವಥ್ ಪದೇ ಪದೇ ಹೊಡೆದಿದ್ದಾನೆ. ಅಯೂಬ್ಗೆ ಕೂಡ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಯಶವಂತಪುರ ಸೋಪ್ ಫ್ಯಾಕ್ಟರಿ ಬಳಿ ಘಟನೆ ನಡೆದಿದೆ. ಇದೇ ವೇಳೆ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಗಲಾಟೆಯನ್ನು ಗಮನಿಸಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಗೊಂಡ ಅವೋದ್- ಅಯೂಬ್ ಸಹೋದರರನ್ನು ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಅವೋದ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಸುಬ್ರಹ್ಮಣ್ಯ ನಗರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಶ್ವಥ್ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆಟೋ ಚಾಲಕ, ಆರೋಪಿ ಅಶ್ವಥ್ ಅಪರಾಧ ಹಿನ್ನೆಲೆ ಹೊಂದಿದ್ದು, ಪ್ರಯಾಣಿಕರ ಸುಲಿಗೆ, ದರೋಡೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಉಪ್ಪಾರಪೇಟೆ, ಹೊಳೆನರಸೀಪುರ, ಮತ್ತು ಹಾಸನದಲ್ಲೇ ಮೂರು ಪ್ರತ್ಯೇಕ ಕೇಸ್ಗಳು ದಾಖಲಾಗಿರುವುದು ತಿಳಿದು ಬಂದಿದೆ. ಈತ ತನ್ನ ಆಟೋ ಹತ್ತುವ ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂಬ ಮಾಹಿತಿ ಇದೆ.
ಆಟೋ ನಿರಾಕರಿಸಿ ರ‍್ಯಾಪಿಡೋ ಬೈಕ್ ಬುಕ್ ಮಾಡಿದ ವ್ಯಕ್ತಿಯ ಮೇಲೆ ಆಟೋ ಹತ್ತಿಸಲು ಚಾಲಕ ಯತ್ನಿಸಿರುವ ಘಟನೆ ಇತ್ತೀಷೆಗಷ್ಟೇ ಬೆಂಗಳೂರಿನಲ್ಲಿ ನಡೆದಿತ್ತು. ಮೆ 24 ರಂದು ತಡರಾತ್ರಿ 3 ಗಂಟೆಯ ವೇಳೆಗೆ ಬೆಂಗಳೂರಿನ ಟೆಕ್ಕಿ ಅಜರ್ ಖಾನ್ ಎಂಬುವವರು ಹಾಗೂ ಆಟೋ ಚಾಲಕನ ಜೊತೆ ಮಾತಿನ ಚಕಮಕಿ ನಡೆದಿದೆ. ಆಟೋ ಹತ್ತಲು ನಿರಾಕರಿಸಿದ ಅಜರ್ ಖಾನ್ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಾರೆ. ಬೈಕ್ ಟ್ಯಾಕ್ಸಿಗೆ ಕಾಯುತ್ತಾ ಇರುವ ವೇಳೆ ಆಟೋ ಚಾಲಕ ಅಜರ್ ಖಾನ್ಗೆ ಡಿಕ್ಕಿ ಹೊಡೆದು ಆತನ ಮೇಲೆ ಆಟೋ ಹತ್ತಿಸಲು ಯತ್ನಿಸಿರುವುದು ಅಜರ್ ಖಾನ್ ಶೇರ್ ಮಾಡಿದ ವಿಡಿಯೋದಲ್ಲಿ ಕಂಡುಬಂದಿದೆ. ಅದೃಷ್ಟವಶಾತ್ ಅಜರ್ ಖಾನ್ ಅಪಘಾತದಿಂದ ಪಾರಾಗಿದ್ದಾರೆ, ಆದರೆ ರಸ್ತೆ ಬದಿ ಬಿದ್ದಿದ್ದಾರೆ.