logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆಗಳಲ್ಲಿ ಮಿತಿ ಮೀರುತ್ತಿದೆ ವ್ಹೀಲಿಂಗ್ ಪುಂಡರ ಹಾವಳಿ; ಕಾರ್ ಚಾಲಕನಿಗೆ ಬೆದರಿಕೆ ಹಾಕಿದ್ದವರನ್ನು ಲಾಕಪ್‌ಗೆ ಹಾಕಿದ ಪೊಲೀಸರು

ಬೆಂಗಳೂರು ರಸ್ತೆಗಳಲ್ಲಿ ಮಿತಿ ಮೀರುತ್ತಿದೆ ವ್ಹೀಲಿಂಗ್ ಪುಂಡರ ಹಾವಳಿ; ಕಾರ್ ಚಾಲಕನಿಗೆ ಬೆದರಿಕೆ ಹಾಕಿದ್ದವರನ್ನು ಲಾಕಪ್‌ಗೆ ಹಾಕಿದ ಪೊಲೀಸರು

D M Ghanashyam HT Kannada

Jul 27, 2024 12:07 PM IST

google News

ಬೆಂಗಳೂರು ರಸ್ತೆಗಳಲ್ಲಿ ಮಿತಿ ಮೀರುತ್ತಿದೆ ವ್ಹೀಲಿಂಗ್ ಪುಂಡರ ಹಾವಳಿ; ಕಾರ್ ಚಾಲಕನಿಗೆ ಬೆದರಿಕೆ ಹಾಕಿದ್ದವರನ್ನು ಬಂಧಿಸಿದ ಪೊಲೀಸರು

    • Bengaluru Crime News: ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ಫ್ಲೈಓವರ್ ಮೇಲೆ ಬೈಕ್ ಸವಾರರು ಕಿಡಿಗೇಡಿತನ ಪ್ರದರ್ಶಿಸಿದ್ದಾರೆ. ಮಾರ್ಗ ಮಧ್ಯೆ ಚಲಿಸುತ್ತಿದ್ದ ಕಾರಿಗೆ ಕಾಲಿನಿಂದ ಒದೆಯುತ್ತಿರುವುದರಲ್ಲದೆ, ಚಾಲಕನಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ವರದಿ: ಪ್ರಿಯಾಂಕಾ ಗೌಡ)
ಬೆಂಗಳೂರು ರಸ್ತೆಗಳಲ್ಲಿ ಮಿತಿ ಮೀರುತ್ತಿದೆ ವ್ಹೀಲಿಂಗ್ ಪುಂಡರ ಹಾವಳಿ; ಕಾರ್ ಚಾಲಕನಿಗೆ ಬೆದರಿಕೆ ಹಾಕಿದ್ದವರನ್ನು ಬಂಧಿಸಿದ ಪೊಲೀಸರು
ಬೆಂಗಳೂರು ರಸ್ತೆಗಳಲ್ಲಿ ಮಿತಿ ಮೀರುತ್ತಿದೆ ವ್ಹೀಲಿಂಗ್ ಪುಂಡರ ಹಾವಳಿ; ಕಾರ್ ಚಾಲಕನಿಗೆ ಬೆದರಿಕೆ ಹಾಕಿದ್ದವರನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಭಾರತದ ಐಟಿ-ಬಿಟಿ ನಗರ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ಟ್ರಾಫಿಕ್‍ಗೆ ಕುಖ್ಯಾತಿ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವಷ್ಟರಲ್ಲಿ ವಾಹನ ಸವಾರರು ಹೈರಾಣರಾಗಿರುತ್ತಾರೆ. ಅದರಲ್ಲೂ ಪೀಕ್ ಹವರ್‌ನಲ್ಲಂತೂ ಆ ದೇವರಿಗೇ ಪ್ರೀತಿ. ಇಂತಹ ಸಂಚಾರ ದಟ್ಟಣೆಯಿರುವ ಬೆಂಗಳೂರಿನ ನಗರದಲ್ಲಿ ಕೆಲವು ಕಿಡಿಗೇಡಿಗಳು ತಮಗಿಷ್ಟ ಬಂದಂತೆ ವಾಹನಗಳನ್ನು ಚಲಾಯಿಸುವುದಲ್ಲದೆ, ಬೇರೆಯವರಿಗೂ ಕಿರಿಕಿರಿ ಮಾಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಈ ಮೊದಲು ಟ್ವಿಟರ್) ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ತೆರಳುತ್ತಾ ಮಾರ್ಗಮಧ್ಯೆ ದುರ್ವರ್ತನೆ ತೋರಿದ್ದಾರೆ.

ಮಾರೇನಹಳ್ಳಿಯಿಂದ ಸಿಲ್ಕ್ ಬೋರ್ಡ್‌ವರೆಗೆ ಹೊಸದಾಗಿ ನಿರ್ಮಿಸಲಾಗಿರುವ ಮೇಲ್ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ತಮ್ಮ ಕಿಡಿಗೇಡಿತನವನ್ನು ಪ್ರದರ್ಶಿಸಿದ್ದಾರೆ. ಚಲಿಸುತ್ತಿದ್ದ ಕಾರಿಗೆ ಪದೇಪದೇ ಕಾಲಿನಿಂದ ಒದೆಯುತ್ತಿರುವ ವಿಡಿಯೋವನ್ನು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ರಸ್ತೆ ಮಧ್ಯೆ, ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡುತ್ತಾ ಕಿಡಿಗೇಡಿಗಳು ತಮ್ಮ ದುರ್ವರ್ತನೆ ತೋರಿದ್ದಾರೆ. ಅಲ್ಲದೆ, ಚಾಕುವನ್ನು ತೋರಿಸಿ ಕಾರು ಚಾಲಕನನ್ನು ಬೆದರಿಸಿದ್ದಾರೆ. ಇದು ಇತರ ವಾಹನ ಸವಾರರನ್ನು ಕೆರಳಿಸಿದೆ.

ಜುಲೈ 24ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ‘ಮಾರೇನಹಳ್ಳಿಯಿಂದ ಸಿಲ್ಕ್ ಬೋರ್ಡ್‌ಗೆ ಹೊಸದಾಗಿ ನಿರ್ಮಿಸಲಾಗಿರುವ ಮೇಲ್ಸೇತುವೆಯಲ್ಲಿ, ಈ ಯುವಕರು ತಮ್ಮ ಮಿತಿಯನ್ನು ಮೀರಿ ವರ್ತಿಸಿದ್ದರು. ಇದರಿಂದ ರಸ್ತೆಗಳಲ್ಲಿ ಪ್ರಯಾಣಿಸಲು ಆತಂಕವಾಗುತ್ತದೆ. ದಯವಿಟ್ಟು ಈ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಹಲವರು ಪೋಸ್ಟ್ ಹಂಚಿಕೊಂಡಿದ್ದರು.

ವೈರಲ್ ವಿಡಿಯೊ: ವ್ಯಾಪಕ ಆಕ್ರೋಶ

ಇನ್ನು ಈ ವಿಡಿಯೋವನ್ನು ಗಮನಿಸಿದ ಬೆಂಗಳೂರು ಪೊಲೀಸರು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಬೆಂಗಳೂರಿನ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರು ಪೋಸ್ಟ್ ಹಂಚಿಕೊಂಡಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಈ ರೀತಿ ದುರ್ವರ್ತನೆ ತೋರುವುದು ಮಾತ್ರವಲ್ಲದೆ, ವ್ಹೀಲೀಂಗ್‍ನಂತಹ ಅಪಾಯಕಾರಿ ಮೋಟಾರ್ ಸೈಕಲ್ ಸ್ಟಂಟ್ ಮಾಡುವ ಬಗ್ಗೆ ಎಸ್‍ಜಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಣೆಯಿಂದ ದೂರು ದಾಖಲಾಗಿದೆ. ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ತ್ವರಿತ ಕ್ರಮ ಕೈಗೊಂಡ ಪೊಲೀಸರು ಮಡಿವಾಳದ ಸುಭಾಷ್ ಲೇಔಟ್ ನಿವಾಸಿಗಳಾದ 17 ವರ್ಷದ ಇಬ್ಬರು ಅಪ್ರಾಪ್ತರನ್ನು ಹಾಗೂ 19 ವರ್ಷದ ಸಂಜಯ್ ಎಂಬಾತನನ್ನು ಜಂಟಿ ಕಾರ್ಯಾರಣೆಯಲ್ಲಿ ಬಂಧಿಸಿದ್ದರು. ಯುವಕರು ಯಾವುದಾದರೂ ಹಿಂದಿನ ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಕಿಡಿಗೇಡಿಗಳು ದುರ್ವರ್ತನೆ ತೋರಿದ ದೃಶ್ಯವನ್ನು ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಸಹ ಪೊಲೀಸರು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.

ಆರೋಪಿಗಳ ವಿರುದ್ಧ ಕಾರು ಚಾಲಕನಿಗೆ ಚಾಕು ಹಿಡಿದು ಬೆದರಿಕೆ, ಉದ್ಧಟತನ ಹಾಗೂ ನಿರ್ಲಕ್ಷ್ಯದ ಸವಾರಿ ಸೇರಿದಂತೆ ಹಲವು ಆರೋಪಗಳನ್ನು ಪೊಲೀಸರು ದಾಖಲಿಸಿದ್ದಾರೆ. ವ್ಹೀಲಿಂಗ್ ಮಾಡಲಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಬೈಕ್‍ನ ಮಾಲೀಕತ್ವದ ವಿವರಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ನಗರದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಪೊಲೀಸರು ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು, ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ