ಬೆಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಮೇಲೆ ಸೀನಿಯರ್‌ಗಳಿಂದ ರ‍್ಯಾಗಿಂಗ್; ಹಲ್ಲೆಗೊಳಗಾಗಿ ಕೈಮುರಿದುಕೊಂಡ ವಿದ್ಯಾರ್ಥಿ
Sep 03, 2024 08:53 PM IST
ಬೆಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಮೇಲೆ ಸೀನಿಯರ್‌ಗಳಿಂದ ರ‍್ಯಾಗಿಂಗ್ (ಸಾಂದರ್ಭಿಕ ಚಿತ್ರ)
- ಬೆಂಗಳೂರಿನಲ್ಲಿ ಮತ್ತೆ ರ‍್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಕಾಲೇಜಿನ ವಿದ್ಯಾರ್ಥಿ ಮೇಲೆ ಸೀನಿಯರ್‌ಗಳು ರ‍್ಯಾಗಿಂಗ್ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು, ವಿದ್ಯಾರ್ಥಿ ಕೈ ಮುರಿದಿದೆ. (ವರದಿ: ಎಚ್.ಮಾರುತಿ)
ಹೇಳಿದಂತೆ ಕೇಳಲಿಲ್ಲ ಎಂದು ಜೂನಿಯರ್ ವಿದ್ಯಾರ್ಥಿಯೊಬ್ಬನ ಮೇಲೆ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿರುವ ಪ್ರಕರಣ ವರದಿಯಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯ ಚಿಕ್ಕಬೆಳ್ಳಂದೂರಿನ ಕೃಪಾನಿಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಗಡ್ಡ ಮತ್ತು ಮೀಸೆಯನ್ನು ಬೋಳಿಸಬೇಕು ಎಂಬ ಆದೇಶವನ್ನು ಪಾಲನೆ ಮಾಡದ ಕಾರಣಕ್ಕೆ ಸೀನಿಯರ್ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು, ವಿದ್ಯಾರ್ಥಿಯ ಕೈ ಮುರಿದಿದೆ. ಅಲ್ಲದೆ ಹಣೆಯೆ ಮೇಲೆ ಗಾಯಗಳಾಗಿವೆ.
ಕೇರಳ ಮೂಲದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದ್ದು, ರ‍್ಯಾಗಿಂಗ್ ಮಾಡಿದವರನ್ನು ಇದೇ ಕಾಲೇಜಿನ ಕ್ಸೇವಿಯರ್, ವಿಷ್ಣು ಮತ್ತು ಶರತ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕೇರಳ ಮೂಲದ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 10 ವಿದ್ಯಾರ್ಥಿಗಳ ಗುಂಪು ಸಂತ ಸ್ಟೀಫನ್ ಮಾರ್ಥೋಮಾ ಚರ್ಚ್ ಬಳಿಯ ನಿರ್ಜನ ಪ್ರದೇಶದಲ್ಲಿ ನಮ್ಮ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ.
ಆಗಸ್ಟ್ 30ರಂದು ರಾತ್ರಿ 8.30ರಿಂದ 9 ಗಂಟೆಯ ಒಳಗೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಕಾಲೇಜಿಗೆ ಸೇರಿಕೊಂಡಾಗ ಹಿರಿಯ ವಿದ್ಯಾರ್ಥಿಗಳು ಗಡ್ಡ ಮತ್ತು ಮೀಸೆಯನ್ನು ಬೋಳಿಸುವಂತೆ ತಾಕೀತು ಮಾಡಿದ್ದರು. ಅವರ ಮಾತನ್ನು ನಿರ್ಲಕ್ಷಿಸಿ ನಾನು ಕಾಲೇಜಿಗೆ ಬರುತ್ತಿದ್ದೆ. ಇದರಿಂದ ಕೋಪಗೊಂಡ ಅವರು ನನ್ನ ಮೇಲೆ ರ‍್ಯಾಗಿಂಗ್ ಮಾಡುತ್ತಿದ್ದರು. ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಕೊಡುತ್ತಿಲ್ಲ ಎಂದು ಗುರಾಯಿಸುತ್ತಿದ್ದರು. ಕಾಲೇಜು ಆವರಣದಲ್ಲಿ ಕನಿಷ್ಠ 4 ಬಾರಿ ನನ್ನ ಮೇಲೆ ರ‍್ಯಾಗಿಂಗ್ ಮಾಡಿದ್ದರು. ನಾವು ವಾಸಿಸುತ್ತಿದ್ದ ಮನೆಯ ಬಳಿಗೂ ಹುಡುಕಿಕೊಂಡು ಬಂದಿದ್ದರು ಎಂದು ಆ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ.
ಒಂದು ಬಾರಿ ಮೂವರು ಸೀನಿಯರ್ ವಿದ್ಯಾರ್ಥಿಗಳು ಚರ್ಚ್ ಬಳಿಗೆ ಬರುವಂತೆ ಕರೆ ಮಾಡಿದ್ದರು. ಅವರು ತನ್ನ ಮೇಲೆ ಹಲ್ಲೆ ನಡೆಸಬಹುದು ಎಂದು ಊಹಿಸಿ ನನ್ನ ಸ್ನೇಹಿತರೊಂದಿಗೆ ತೆರಳಿದ್ದೆ ಎಂದು ಆ ವಿದ್ಯಾರ್ಥಿ ತಿಳಿಸಿದ್ದಾನೆ. ಅಲ್ಲಿ 10 ವಿದ್ಯಾರ್ಥಿಗಳು ನನಗಾಗಿ ಕಾಯುತ್ತಿದ್ದರು. ಗಡ್ಡ ಮೀಸೆ ಬೋಳಿಸಬೇಕೆಂಬ ವಿಷಯಕ್ಕೆ ಮತ್ತೆ ಜಗಳವಾಯಿತು. ಈಗಲೇ ಗಡ್ಡ ಮೀಸೆ ತೆಗೆಯುವಂತೆ ಧಮಕಿ ಹಾಕಿದರು. ನಾನು ಒಪ್ಪದೇ ಇದ್ದಾಗ ಹೆದರಿಸಿದರು. ಕೊನೆಗೆ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ವಿದ್ಯಾರ್ಥಿ ಪೊಲೀಸೆರಿಗೆ ತಿಳಿಸಿದ್ದಾನೆ. ನಂತರ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿಯಿಂದ ಕಠಿಣ ಕ್ರಮದ ಭರವಸೆ
ಶನಿವಾರ ಈ ವಿದ್ಯಾರ್ಥಿಗೆ ಆಪರೇಷನ್ ನಡೆದಿದೆ. ಹಲ್ಲೆಕೋರರ ಮೇಲೆ ಕ್ರಮ ಜರುಗಿಸುವುದಾಗಿ ಕಾಲೇಜಿನ ಆಡಳಿತ ಮಂಡಳಿ ಭರವಸೆ ನೀಡಿದೆ. ಆಸ್ಪತ್ರೆಯಲ್ಲಿದ್ದಾಗಲೂ ಆ ಮೂವರು ವಿದ್ಯಾರ್ಥಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ. ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆ 118, 126, 189, 189, 190, 191 ಮತ್ತು 351ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರು ಇನ್ನೂ ವಿದ್ಯಾರ್ಥಿಗಳಾಗಿರುವುದರಿಂದ ಅವರಿಗೆ ನೋಟಿಸ್ ನೀಡಲಾಗುತ್ತದೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಬೆಂಗಳೂರಿನಲ್ಲಿ ಬ್ಯುಸಿನೆಸ್ ಕ್ಲಾಸ್ ಆಟೋ; ಗಾಜಿನ ವಿಂಡೋ ನೋಡಿ ಮುಂಬೈನ 1BHK ಫ್ಲಾಟ್ನಂತಿದೆ ಎಂದ ನೆಟ್ಟಿಗರು