ಲೋಕಾಯುಕ್ತ ದಾಳಿಯಲ್ಲಿ 23 ಕೋಟಿ ರೂ. ಆಸ್ತಿ ಪತ್ತೆ, ಬೆಸ್ಕಾಂ ಎಂಜಿನಿಯರ್-ರೌಡಿಶೀಟರ್ ಅರೆಸ್ಟ್: ಇಲ್ಲಿವೆ ಕ್ರೈಂ ಸುದ್ದಿಗಳು
Feb 01, 2024 02:41 PM IST
ಲೋಕಾಯುಕ್ತ ದಾಳಿ
- ಲೋಕಾಯುಕ್ತ ದಾಳಿಯಲ್ಲಿ 10 ಭ್ರಷ್ಟ ಅಧಿಕಾರಿಗಳ ಬಳಿ 23 ಕೋಟಿ ರೂಪಾಯಿ ಆಸ್ತಿ ಪತ್ತೆ, ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಂಜಿನಿಯರ್, ಗಡಿಪಾರು ಆದೇಶ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದ ರೌಡಿಶೀಟರ್ ಬಂಧನ ಸೇರಿದಂತೆ ಅಪರಾಧ ಸುದ್ದಿಗಳು ಇಲ್ಲಿವೆ. (ವರದಿ: ಎಚ್. ಮಾರುತಿ)
ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ ವಿವಿಧ ಇಲಾಖೆಗಳ 10 ಅಧಿಕಾರಿಗಳಿಗೆ ಸೇರಿದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.
ಭ್ರಷ್ಟ ಅಧಿಕಾರಿಗಳು ಮತ್ತು ಅವರ ಅಕ್ರಮ ಆಸ್ತಿ:
ಲೋಕೋಪಯೋಗಿ ಇಲಾಖೆಯ ಮಂಡ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹರ್ಷ ಎಚ್.ಆರ್., ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಮಧುಗಿರಿ ಉಪ ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎ. ಹನುಮಂತರಾಯಪ್ಪ, ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ರವಿ, ಜೆಸ್ಕಾಂ ವಿಜಯನಗರ ವಿಭಾಗದ ಎಇಇ ಆರ್.ಆರ್. ಭಾಸ್ಕರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹುಣಸೂರು ಉಪ ವಿಭಾಗದ ಎಇಇ ಪಿ. ರವಿಕುಮಾರ್, ಚಿಕ್ಕಮಗಳೂರಿನ ವಾಣಿಜ್ಯ ತೆರಿಗೆ ಅಧಿಕಾರಿ ನೇತ್ರಾವತಿ ಕೆ.ಆರ್., ಹೂವಿನ ಹಡಗಲಿ ವಲಯ ಅರಣ್ಯಾಧಿಕಾರಿ ರೇಣುಕಮ್ಮ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಎಂ.ಎನ್. ಯಜ್ಞೇಂದ್ರ, ಮೆಸ್ಕಾಂ ಅತ್ತಾವರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಾಂತಕುಮಾರ್ ಎಚ್.ಎಂ. ಮತ್ತು ಹಾಸನ ತಾಲ್ಲೂಕು ಆಹಾರ ನಿರೀಕ್ಷಕ ಜಗನ್ನಾಥ ಜಿ.ಪಿ. ದಾಳಿಗೆ ಒಳಗಾದ ಅಧಿಕಾರಿಗಳು.
ಎಚ್.ಆರ್. ಹರ್ಷ ಬಳಿ ರೂ.4.50 ಕೋಟಿ ಆಸ್ತಿ ಪತ್ತೆಯಾಗಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ರೂ.2.82 ಕೋಟಿ ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ತನಿಖಾ ತಂಡ ವಶಕ್ಕೆ ಪಡೆದಿದೆ. ನೇತ್ರಾವತಿ ಅವರ ಮನೆಯಲ್ಲಿ ರೂ.4.58 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. 5 ನಿವೇಶನ ಮತ್ತು ಒಂದು ಮನೆಯನ್ನೂ ಇವರು ಹೊಂದಿರುವುದು ಪತ್ತೆಯಾಗಿದೆ.
ರೇಣುಕಮ್ಮ ಮನೆಯಲ್ಲಿ ರೂ.2.09 ಲಕ್ಷ ನಗದು ಪತ್ತೆಯಾಗಿದ್ದು, ಎರಡು ಮನೆ ಮತ್ತು ನಿವೇಶನ, 11 ಎಕರೆ ಕೃಷಿ ಜಮೀನು ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳೂ ಸಿಕ್ಕಿವೆ. ಶಾಂತಕುಮಾರ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ರೂ.74.77 ಲಕ್ಷ ಇಟ್ಟಿರುವ ದಾಖಲೆಯನ್ನು ತನಿಖಾ ತಂಡ ಪತ್ತೆ ಹಚ್ಚಿದೆ.
ಜಗನ್ನಾಥ ಅವರ ಬಳಿ 7 ನಿವೇಶನ, ಒಂದು ಮನೆ ಇರುವುದು ತಪಾಸಣೆಯಲ್ಲಿ ದೃಢಪಟ್ಟಿದೆ. ರವಿಕುಮಾರ್ ಬಳಿ ಒಂದು ವಾಸದ ಮನೆ, ನಿವೇಶನ, ವಾಣಿಜ್ಯ ಸಂಕೀರ್ಣ ಮತ್ತು 4 ಎಕರೆ ಕೃಷಿ ಜಮೀನು ಇದೆ.
ಸಹಾಯಕ ಪ್ರಾಧ್ಯಾಪಕರಾಗಿರುವ ರವಿ 7 ನಿವೇಶನಗಳು ಮತ್ತು 2 ಮನೆಗಳ ಒಡೆಯ. ಹನುಮಂತರಾಯಪ್ಪ ಬಳಿ ಮೂರು ಮನೆಗಳು ಮತ್ತು ಕೃಷಿ ಜಮೀನು ಇರುವುದು ತನಿಖೆಯಲ್ಲಿ ಕಂಡುಬಂದಿದೆ. ಯಜ್ಞೇಂದ್ರ ನಾಲ್ಕು ನಿವೇಶನ, ಒಂದು ಮನೆ ಮತ್ತು 2 ಎಕರೆ ಕೃಷಿ ಜಮೀನು ಹೊಂದಿರುವ ದಾಖಲೆಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.
ಲೋಕಾಯುಕ್ತದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಪಿಗಳು, ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು ಸೇರಿದಂತೆ 41 ತಂಡಗಳಲ್ಲಿ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಂಜಿನಿಯರ್;
ಬಹುಮಹಡಿ ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೂ.1 ಲಕ್ಷ ಲಂಚ ಪಡೆದ ಬೆಂಗಳೂರಿನ ಬೆಸ್ಕಾಂ ನ ವಿಜಯನಗರ ಉಪ ವಿಭಾಗದ ಕಿರಿಯ ಎಂಜಿನಿಯರ್ ಪ್ರಕಾಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರದಲ್ಲಿರುವ ರತ್ನಾ ಆ್ಯಂಡ್ ಉಮರಾಣಿ ಎಂಬ ಬಹುಮಹಡಿ ಕಟ್ಟಡಕ್ಕೆ ನೀಡಿದ್ದ ವಿದ್ಯುತ್ ಪೂರೈಕೆಯ ಸಂಪರ್ಕವನ್ನು ಮರು ಚಾಲನೆಗೊಳಿಸಬೇಕಿತ್ತು. ಇದಕ್ಕಾಗಿ ವಿದ್ಯುತ್ ಕಾಮಗಾರಿಗಳ ಗುತ್ತಿಗೆದಾರ ಮಂಜೇಶ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲು ರೂ. 2.50 ಲಕ್ಷ ಲಂಚ ನೀಡುವಂತೆ ಪ್ರಕಾಶ್ ಬೇಡಿಕೆ ಇಟ್ಟಿದ್ದರು. ಅರ್ಜಿದಾರರು ಚೌಕಾಸಿ ನಡೆಸಿದಾಗ 1 ಲಕ್ಷ ರೂಪಾಯಿ ಕೊಟ್ಟರೆ ಒಪ್ಪಿಗೆ ನೀಡುವುದಾಗಿ ಹೇಳಿದ್ದರು. ಈ ಕುರಿತು ಅರ್ಜಿದಾರ ಮಂಜೇಶ್ ಲೋಕಾಯುಕ್ತ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ಸಲ್ಲಿಸಿದ್ದರು.
ಆರೋಪಿಯ ಸೂಚನೆಯಂತೆ ಬೆಸ್ಕಾಂ ವಿಜಯನಗರ ಉಪ ವಿಭಾಗದ ಕಚೇರಿಯಲ್ಲಿ ಮಂಜೇಶ್ ಅವರಿಂದ ರೂ.1 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದಂತೆಯೇ ಪ್ರಕಾಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.
ಲೋಕಾಯುಕ್ತ ಬೆಂಗಳೂರು ನಗರ ಎಸ್‌ಪಿ ಶ್ರೀನಾಥ್ ಜೋಶಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಿ.ಎಲ್. ಶ್ರೀನಿವಾಸಮೂರ್ತಿ ಉಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಆನಂದ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಗಡಿಪಾರು ಆದೇಶ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದ ರೌಡಿಶೀಟರ್ ಬಂಧನ
ಗಡಿಪಾರು ಮಾಡಿದ್ದ ಆದೇಶವನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ನೆಲೆಸಿದ್ದ ರೌಡಿಶೀಟರ್ ಒಬ್ಬನನ್ನು ಮತ್ತೆ ಬಂಧಿಸುವಲ್ಲಿ ಬೆಂಗಳೂರಿನ ನಗರದ ಡಿ.ಜಿ.ಹಳ್ಳಿ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಒಬ್ಬನನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ದಿ. 24/04/2023 ರಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿದ್ದರು.
ಈ ಆದೇಶವನ್ನು ಉಲ್ಲಂಘಿಸಿ ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ನೆಲೆಸಿದ್ದ ರೌಡಿಶೀಟರ್ ನನ್ನು ಸಿ.ಸಿ.ಬಿಯ ಸಂಘಟಿತ ಅಪರಾಧ ದಳ (ಪೂರ್ವ)ದ ಅಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ವಿರುದ್ಧ ವಿರುದ್ಧ 2 ಕೊಲೆ ಮತ್ತು 2 ಕೊಲೆಯತ್ನ ಮತ್ತು ಇತರೆ 4 ಪ್ರಕರಣಗಳು ದಾಖಲಾಗಿದ್ದವು. ಈತನು ತನ್ನ ಎದುರಾಳಿ ಗ್ಯಾಂಗ್ ನ ಮೇಲಿನ ದ್ವೇಷದಿಂದ ಕೊಲೆ, ಕೊಲೆಯತ್ನ ಹಲ್ಲೆ ಹಾಗೂ ಗುಂಪು ಗಲಭೆಯಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ತರುವ ಸಾಧ್ಯತೆ ಇದ್ದುದರಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಸಿ.ಸಿ.ಬಿಯು ಸಂಘಟಿತ ಅಪರಾಧದಳದ ಸಿಬ್ಬಂದಿ ಈ ತಲೆ ಮರೆಸಿಕೊಂಡಿದ್ದ ರೌಡಿಶೀಟರ್ ನನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ಎಚ್. ಮಾರುತಿ