ಸೈಬರ್ ವಂಚನೆ ಪ್ರಕರಣ, ಪ್ರಾಂಶುಪಾಲೆಯಿಂದ 24 ಲಕ್ಷ ಸುಲಿಗೆ; ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆ ಕೊಂದು ಯುವಕ ಆತ್ಮಹತ್ಯೆ
Dec 13, 2024 06:30 AM IST
ಸೈಬರ್ ವಂಚನೆ ಪ್ರಕರಣ, ಪ್ರಾಂಶುಪಾಲೆಯಿಂದ 24 ಲಕ್ಷ ಸುಲಿಗೆ; ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆ ಕೊಂದು ಯುವಕ ಆತ್ಮಹತ್ಯೆ
- ಬೆಂಗಳೂರಿನಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಂಶುಪಾಲೆಯಿಂದ 24 ಲಕ್ಷ ಸುಲಿಗೆ ಮಾಡಿದ ಸೈಬರ್ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ವರದಿ-ಎಚ್.ಮಾರುತಿ)
ಬೆಂಗಳೂರು: ಸಿಬಿಐ ಅಧಿಕಾರಿ ಹೆಸರಿನಲ್ಲಿ ಬೆಂಗಳೂರಿನ ಕಾಲೇಜೊಂದರ ಪ್ರಾಂಶುಪಾಲೆಯೊಬ್ಬರಿಂದ ಸೈಬರ್ ವಂಚಕರು 24 ಲಕ್ಷ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೀಡಾದ ಪ್ರಾಂಶುಪಾಲರು ವೈಟ್ ಫೀಲ್ಡ್ ವಿಭಾಗದ ಎಸ್ಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚಕ ತಾನು ಸಿಬಿಐ ಅಧಿಕಾರಿ ಅಶೀಶ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾನೆ. ನವೆಂಬರ್ 22 ರಂದು ಪ್ರಾಂಶುಪಾಲೆ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಬಳಸಿ ಮಾನವ ಕಳ್ಳಸಾಗಣಿಕೆ ಮತ್ತು ಅಕ್ರಮ ಹಣ ಸಾಗಣಿಕೆ ನಡೆಯುತ್ತಿದೆ. ಸುಮಾರು 80 ಮಕ್ಕಳು ಸಿಂಗಪುರದಲ್ಲಿ ಸಿಲುಕಿರುವ ವರದಿ ಬಂದಿದೆ ಎಂದು ಬೆದರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಂತರ ಈತ ಭಯಪಡಬೇಡಿ, ನಿಮಗೆ ನಾನು ಸಹಾಯ ಮಾಡುತ್ತೇನೆ ಎಂದು ಸಂತ್ರಸ್ತೆಗೆ ಧೈರ್ಯ ತುಂಬಿದ್ದಾನೆ. ಈ ಪ್ರಕರಣ ಕುರಿತು ನಿಮ್ಮೊಂದಿಗೆ ದೆಹಲಿ ಪೊಲೀಸರು ಮಾತನಾಡಲಿದ್ದಾರೆ ಎಂದು ಕರೆಯನ್ನು ಸ್ಥಗಿತಗೊಳಿಸಿದ್ದಾನೆ. ಕೆಲ ನಿಮಿಷಗಳ ನಂತರ ಪ್ರಾಂಶುಪಾಲೆಯ ವಾಟ್ಸ್ಯಾಪ್ಗೆ ದೆಹಲಿ ಪೊಲೀಸರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಕಳುಹಿಸಲಾಗಿದೆ. ನಂತರ ಅಪರಿಚಿತನೊಬ್ಬ ಮತ್ತೆ ಕರೆ ಮಾಡಿ ಪ್ರಕರಣದ ಕುರಿತು ವಿಚಾರಣೆಗೆ ಹಾಜತರಾಗಬೇಕು ಎಂದು ಸೂಚನೆ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ಅಕ್ರಮ ಹಣ ಸಾಗಾಣಿಕೆ ಆರೋಪ ಸಂಬಂಧ ಬ್ಯಾಂಕ್ ಖಾತೆ ಪರಿಶೀಲಿಸಬೇಕಿದೆ ಎಂದು ಪ್ರಾಂಶುಪಾಲರ ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದ್ದಾನೆ.
ಬ್ಯಾಂಕ್ನಲ್ಲಿರುವ ನಿಮ್ಮ ಹಣವನ್ನು ಸರ್ಕಾರದ ಖಾತೆಗೆ ವರ್ಗಾಯಿಸಬೇಕು. ವಿಚಾರಣೆ ಪೂರ್ಣಗೊಂಡ ನಂತರ ನಿಮ್ಮ ಹಣ ಮರಳಿಸಲಾಗುವುದು ಎಂದು ನಂಬಿಸಿದ್ದಾನೆ. ಈತನನ್ನು ನಂಬಿದ ಅವರು 24.36 ಲಕ್ಷ ರೂಪಾಯಿ ಹಣವನ್ನು ಆರ್ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ನಂತರ ಕರೆ ಸ್ಥಗಿತಗೊಂಡಿದೆ. ನಂತರ ಇವರಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ
ವಿವಾಹಿತ ಮಹಿಳೆಯೊಬ್ಬರಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್ ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಮೊಹುವಾ ಮಂಡಲ್(26) ಕೊಲೆಯಾದ ಮಹಿಳೆ. ಈಕೆಯ ಕೊಲೆ ಮಾಡಿದ ನಂತರ ಮಿಥುನ್ ಮಂಡಲ್ (26) ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮೊಹುವಾ ಮಂಡಲ್ ಹಾಗೂ ಅವರ ಪತಿ ಹರಿಪ್ರಸಾದ್ ಮಂಡಲ್ ಮೂರು ವರ್ಷಗಳ ಹಿಂದೆ ಬೆಂಗಳುರಿಗೆ ಉದ್ಯೋಗ ಹುಡುಕಿಕೊಂಡು ಬಂದಿದ್ದರು. ವೈಟ್‌ಫೀಲ್ಡ್ ಸಮೀಪದ ಶೆಡ್‌ನಲ್ಲಿ ತಮ್ಮ ಮಗುವಿನ ಜತೆ ವಾಸಿಸುತ್ತಿದ್ದರು. ಮೊಹುವಾ, ಖಾಸಗಿ ಕಾಲೇಜಿನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದರು. ಹರಿಪ್ರಸಾದ್ ರಾಪಿಡೊ ಬೈಕ್ ಓಡಿಸುತ್ತಿದ್ದರು. ಆರೋಪಿ ಮಿಥುನ್ ಮಂಡಲ್, ಮೊಹುವಾ ಮಂಡಲ್ ಅವರು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತನೂ ಮೂರು ವರ್ಷಗಳ ಹಿಂದೆ ಬೆಂಗಲುರಿಗೆ ಆಗಮಿಸಿದ್ದು ಪಿಜಿಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಿಥುನ್ ಮತ್ತು ಮೊಹುವಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಪರಸ್ಪರ ಪರಿಚಯವಾಗಿದ್ದರು.
ನಲ್ಲೂರು ಸಮೀಪ ಆತ್ಮಹತ್ಯೆ
ಕೆಲವು ದಿನಗಳ ನಂತರ ಆರೋಪಿ ತನ್ನನ್ನು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. ಈ ಬೇಡಿಕೆಯನ್ನು ಮೊಹುವಾ ತಿರಸ್ಕರಿಸಿ ಇಂತಹ ಕೆಲಸ ಮಾಡಬಾರದು ಎಂದು ಬುದ್ಧಿಮಾತು ಹೇಳಿದ್ದರು. ಆದರೂ ಆರೋಪಿ ಮಿಥುನ್, ಗಂಡ ಮತ್ತು ಮಗುವನ್ನು ಬಿಟ್ಟು ತನ್ನೊಂದಿಗೆ ಬಾಳುವಂತೆ ಒತ್ತಡ ಹೇರುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಬೇರೆ ಕಡೆ ಕೆಲಸ ಹುಡುಕಿ ಕೊಂಡಿದ್ದರು. ಬುಧವಾರ ಸಂಜೆ ಆಕೆಯನ್ನು ಭೇಟಿ ಮಾಡಿದ್ದ ಆರೋಪಿ ತನ್ನ ಜತೆ ಬರುವಂತೆ ಬಲವಂತ ಮಾಡಿದ್ದ. ಆಕೆ ನಿರಾಕರಿಸಿದಾಗ ಚಾಕುವಿನಿಂದ ಆಕೆಯ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಇರಿದಿದ್ದ. ಇದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು. ನಂತರ ಆತನೂ ನಲ್ಲೂರು ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.