logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Sankranti: ಸಂಕ್ರಾಂತಿ ಆಚರಣೆಗೆ ಬೆಂಗಳೂರು ಸಜ್ಜು; ಹೂ-ಹಣ್ಣು, ಕಬ್ಬು, ಕಡಲೆಕಾಯಿ, ಅವರೆಕಾಯಿ ಬೆಲೆ ಗಗನಕ್ಕೆ

Bengaluru Sankranti: ಸಂಕ್ರಾಂತಿ ಆಚರಣೆಗೆ ಬೆಂಗಳೂರು ಸಜ್ಜು; ಹೂ-ಹಣ್ಣು, ಕಬ್ಬು, ಕಡಲೆಕಾಯಿ, ಅವರೆಕಾಯಿ ಬೆಲೆ ಗಗನಕ್ಕೆ

Meghana B HT Kannada

Jan 14, 2024 01:48 PM IST

google News

ಬೆಂಗಳೂರು ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

    • ಸಂಕ್ರಾಂತಿ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ ವ್ಯಾಪಾರಿಗಳು ಅಗತ್ಯ ಹಣ್ಣು, ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು ಬೆಲೆಯನ್ನು ದುಪ್ಪಟ್ಟು ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಬೆಲೆ ಹೆಚ್ಚಳವಾದರೂ ಗ್ರಾಹಕರ ಉತ್ಸಾಹಕ್ಕೆ ಕೊರತೆ ಇರಲಿಲ್ಲ. (ವರದಿ: ಎಚ್​ ಮಾರುತಿ)
ಬೆಂಗಳೂರು ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು
ಬೆಂಗಳೂರು ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

ಬೆಂಗಳೂರು: ಸೋಮವಾರ ಸಂಕ್ರಾಂತಿ ಹಬ್ಬದ ಆಚರಣೆಗೆ ಬೆಂಗಳೂರು ಸಡಗರ ಸಂಭ್ರಮದಿಂದ ಸಜ್ಜಾಗಿದೆ. ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು, ಕಡಲೆಕಾಯಿ, ಬಾಳೆಹಣ್ಣು ಮತ್ತು ಅವರೆಕಾಯಿ ಮಾರಾಟ ಜೋರಾಗಿದೆ. ಭಾನುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿದೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಕೆ.ಆರ್‌. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು ರಾಶಿಯೇ ಕಾಣಿಸುತ್ತಿತ್ತು. ಹಬ್ಬದ ಸಂದರ್ಭ, ವ್ಯಾಪಾರಿಗಳು ಅಗತ್ಯ ಹಣ್ಣು, ಕಡಲೆಕಾಯಿ, ಅವರೆಕಾಯಿ, ಗೆಣಸು ಬೆಲೆಯನ್ನು ದುಪ್ಪಟ್ಟು ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಬೆಲೆ ಹೆಚ್ಚಳವಾದರೂ ಗ್ರಾಹಕರ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಚೌಕಾಸಿ ಮಾಡಿಯಾದರೂ ಕೊಳ್ಳುತ್ತಿದ್ದರು. ಜೋಡಿ ಕಬ್ಬಿಗೆ 120 ರೂ.ಗಳಂತೆ ಮಾರಾಟ ಮಾಡಲಾಗುತ್ತಿತ್ತು.

ಕಳೆದ ವಾರ ಕೆಜಿ ಅವರೆಕಾಯಿಗೆ 40-50 ಇದ್ದ ಬೆಲೆ ಇಂದು ಕೆಜಿಗೆ 100 ರೂಪಾಯಿ ನಿಗದಿಯಾಗಿತ್ತು. ಗೆಣಸಿನ ಬೆಲೆ ಕೆಜಿಗೆ 40-60 ರೂ ಮತ್ತು ಕಡಲೆಕಾಯಿ ಕೆಜಿಗೆ 100 ರೂಗಳಂತೆ ಮಾರಾಟ ಮಾಡುತ್ತಿದ್ದರು. ನಗರದ ಮಲ್ಲೇಶ್ವರ, ಜಯನಗರ, ಯಶವಂತಪುರ, ಮಡಿವಾಳ, ರಾಜಾಜಿನಗರ, ಗಾಂಧಿ ಬಜಾರ್​​ನಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು. ಕೇವಲ ಮಾರುಕಟ್ಟೆಗಳಲ್ಲಿ ಮಾತ್ರವಲ್ಲದೆ ನಗರದ ಬಹುತೇಕ ಕಡೆ ವ್ಯಾಪಾರಿಗಳು ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು ಮಾರುತ್ತಿದ್ದರು. ಸರ್ಕಲ್, ಪಾದಚಾರಿ ರಸ್ತೆ, ಜಂಕ್ಷನ್​​​ಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದೆ ದೃಶ್ಯಗಳು ಸಾಮಾನ್ಯವಾಗಿದ್ದವು.

ಎಳ್ಳು ಬೆಲ್ಲ ಮಾರಾಟ:

ಒಂದು ಕೆ.ಜಿ.ಯ ಎಳ್ಳುಬೆಲ್ಲ ಮಿಶ್ರಣದ ಪೊಟ್ಟಣದ ಬೆಲೆ ರೂ. 320 ರಿಂದ ರೂ. 350 ವರೆಗೆ ಮಾರಲಾಗುತ್ತಿತ್ತು. ಕತ್ತರಿಸಿರುವ ಬೆಲ್ಲ, ಕೊಬರಿ ಬೆಲೆ ಗಗನಕ್ಕೇರಿತ್ತು. ಒಂದು ಕೆ.ಜಿ ಸಕ್ಕರೆ ಅಚ್ಚು ಬೆಲೆ ರೂ. 300ರಂತೆ ಮಾರಾಟವಾಗುತ್ತಿದೆ. ರಸ್ತೆಬದಿಗಳಲ್ಲಿಯು ಎಳ್ಳು ಬೆಲ್ಲ ಸಕ್ಕರೆ ಹಾಗೂ ಬೆಲ್ಲದ ಅಚ್ಚುಗಳನ್ನೂ ಮಾರಲಾಗುತ್ತಿದೆ.

ಕೈಗಳಿಗೆ ಭಾರವಾದ ಹೂ

ಸಂಕ್ರಾಂತಿ ಹಬ್ಬಕ್ಕೆ ಹೂವಿನ ದರಗಳು ವಿಪರೀತ ಏರಿಕೆ ಕಂಡಿದೆ. ಪ್ರತಿ ಕೆ.ಜಿ. ಕನಕಾಂಬರಕ್ಕೆ ರೂ. 1,000, ಮಲ್ಲಿಗೆ ರೂ.1,400, ಸೇವಂತಿಗೆ ರೂ 150-200, ಚೆಂಡು 70, ಗುಲಾಬಿ ರೂ. 200 ಮತ್ತು ಸುಗಂಧರಾಜ ರೂ. 120 ರಂತೆ ಮಾರಾಟವಾಗುತ್ತಿದೆ ಎಂದು ಹೂವಿನ ವ್ಯಾಪಾರಿಗಳು ಹೇಳಿದರು.

ಏಲಕ್ಕಿ ಬಾಳೆ ಕೆಜಿಗೆ ರೂ. 70, ಸೇಬು ಕೆಜಿಗೆ ರೂ. 180, ದ್ರಾಕ್ಷಿ ಕೆಜಿಗೆ ರೂ. 80, ದಾಳಿಂಬೆ ಕೆಜಿಗೆ ರೂ.120ರಂತೆ ಮಾರಲಾಗುತ್ತಿದೆ. ತರಕಾರಿಗಳ ಬೆಲೆಗಳು ಸಹ ಏರಿಕೆಯಾಗಿವೆ. ಕೇವಲ ಮಾರುಕಟ್ಟೆ ಸರ್ಕಕ್​​ಗಳಲ್ಲಿ ಮಾತ್ರವಲ್ಲದೆ ಲಗೇಜ್ ವಾಹನ ದ್ವಿಚಕ್ರ ವಾಹನ ಮತ್ತು ತಳ್ಳುವ ಗಾಡಿಗಳಲ್ಲೂ ಹೂವು-ಹಣ್ಣು, ಅವರೆಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಮಾರಾಟ ಮಾಡಲಾಗುತ್ತಿರುವ ದೃಶ್ಯಗಳು ಕಂಡು ಬಂದವು.

ಗೋವುಗಳಿಗೆ ಕಿಚ್ಚು ಹಾಯಿಸಲು ಸಿದ್ದತೆ:

ಎಷ್ಟೇ ಆಧುನಿಕತೆ ಬೆಳೆದರೂ ಬೆಂಗಳೂರಿನಲ್ಲಿ ಸಂಪ್ರದಾಯಗಳು ಕಣ್ಮರೆಯಾಗಿಲ್ಲ. ಆಯಾ ಹಬ್ಬಗಳಿಗೆ ತಕ್ಕಂತೆ ಸಂಪ್ರದಾಯಗಳ ಆಚರಣೆ ನಡೆಯುತ್ತದೆ. ಸಂಕ್ರಾಂತಿಗೆ ಕಿಚ್ಚು ಹಾಯಿಸುವ ಪದ್ಧತಿಯನ್ನು ಬೆಂಗಳೂರು ಮರೆತಿಲ್ಲ. ಮಲ್ಲೇಶ್ವರ, ರಾಜರಾಜೇಶ್ವರಿ ನಗರ, ಪದ್ಮನಾಭನಗರ, ಯಶವಂತಪುರ ಮತ್ತಿಕೆರೆ, ಯಲಹಂಕ ಉಪನಗರ, ಸೇರಿದಂತೆ ಅನೇಕ ಭಾಗಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಕಿಚ್ಚು ಹಾಯಿಸಲು ಸಿದ್ದತೆ ಮಾಡಿಕೊಂಡಿವೆ. ನಾಳೆ ಗೋವುಗಳನ್ನು ಅಲಂಕರಿಸಿ, ಬೆನ್ನ ಮೇಲೆ ಅಲಂಕಾರಿಕ ಬಟ್ಟೆ ಹೊದಿಸಿ, ಕೊರಳಿಗೆ ಗಂಟೆ ಕಾಲಿಗೆ ಗೆಜ್ಜೆ ಕಟ್ಟಿ ಹೂ ಮಾಲೆಯಿಂದ ಸಿಂಗರಿಸಿ ಖಾಲಿ ಪ್ರದೇಶ ಅಥವಾ ಸ್ಥಳೀಯ ಮೈದಾನಗಳಲ್ಲಿ ಕಿಚ್ಚು ಹಾಯಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರಖ್ಯಾತ ಗವಿಗಂಗಾಧರೇಶ್ವರ ದೇವಸ್ಥಾನ, ಬನಶಂಕರಿಯ ಬನಶಂಕರಿದೇವಿ, ಮಲ್ಲೇಶ್ವರದ ಕಾಡುಮಲ್ಲೇಶ್ವರ, ಬಸವನಗುಡಿ ದೊಡ್ಡಬಸವಣ್ಣ, ಕೆ.ಆರ್.ಮಾರುಕಟ್ಟೆಯ ಕೋಟೆ ವೆಂಕಟರಮಣ, ಹಲಸೂರಿನ ಸೋಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ದಿನವಿಡೀ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸೂರ್ಯದೇವ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ದಿನ. ಸಂಜೆ 5.20 ರಿಂದ 5.32 ಸಮಯದಲ್ಲಿ ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯನ ಕಿರಣಗಳು ಬೀಳಲಿವೆ. 2 ರಿಂದ 3 ನಿಮಿಷಗಳ ಕಾಲ ನಡೆಯುವ ಈ ಕೌತುಕವನ್ನು ನೋಡಲು ಬರುವ ಭಕ್ತರಿಗೆ ದೇಗುಲದ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.

ವರದಿ: ಎಚ್​ ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ