ನಂದಿನಿ ತುಪ್ಪ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಲಾಗಿದೆಯೇ? ಎಕ್ಸ್‌ನಲ್ಲಿ ಭಾರಿ ಚರ್ಚೆ; ಕೆಎಂಎಫ್ ಕೊಟ್ಟಿಲ್ಲ ಸ್ಪಷ್ಟನೆ
Nov 03, 2024 03:14 PM IST
ನಂದಿನಿ ತುಪ್ಪ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಲಾಗಿದೆಯೇ? ಎಂಬ ವಿಚಾರದ ಕುರಿತು ಎಕ್ಸ್‌ನಲ್ಲಿ ಭಾರಿ ಚರ್ಚೆ ನಡೆದಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕೆಎಂಎಫ್‌ನ ನಂದಿನಿ ತುಪ್ಪ ಮತ್ತೆ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ತುಪ್ಪ ಉತ್ಪಾದನೆ ವಿಚಾರ ಗಮನಸೆಳೆದಿದ್ದು, ಖಾಸಗಿ ಕಂಪನಿಯವರಿಗೆ ನಂದಿನಿ ತುಪ್ಪ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಲಾಗಿದೆಯೇ? ಎಂಬುದು ಚರ್ಚೆಯ ಮುಖ್ಯ ವಿಷಯವಾಗಿ ಮಾರ್ಪಟ್ಟಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ನ ನಂದಿನಿ ತುಪ್ಪ ಮತ್ತೆ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಎಂಎಫ್ ನಂದಿನಿ ತುಪ್ಪದ ವಿಚಾರ ಭಾರಿ ಚರ್ಚೆಗೆ ಒಳಗಾಗಿದ್ದು, ನಂದಿನಿ ತುಪ್ಪ ತಯಾರಿ ಹೊರಗುತ್ತಿಗೆ ನೀಡಲಾಗಿದೆಯೇ? ಎಂಬ ಪ್ರಶ್ನೆಯೊಂದಿಗೆ ನಿನ್ನೆ (ನವೆಂಬರ್ 2) ಸಂಜೆ ಇದು ಶುರುವಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಇನ್ನೂ ಇದಕ್ಕೆ ಸ್ಪಷ್ಟೀಕರಣ ನೀಡಿಲ್ಲ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ನಂದಿನಿ ತುಪ್ಪ ಉತ್ಪಾದನೆಯನ್ನು ಹೊರಗುತ್ತಿಗೆ ನೀಡಿರುವ ವಿಚಾರ, ಅದರ ಗುಣಮಟ್ಟ ಹೀಗೆ ಹಲವು ವಿಷಯಗಳು ಚರ್ಚೆಯಲ್ಲಿವೆ. ಚುನಾವಣೆ ಸಂದರ್ಭದಲ್ಲಿ ನಂದಿನಿ ವಾರಿಯರ್‌ಗಳಾಗಿ ಕಾಣಿಸಿಕೊಂಡವರೆಲ್ಲ ಈಗ ಎಲ್ಲಿದ್ದೀರಿ ಎಂಬ ಪ್ರಶ್ನೆಯೂ ಅಲ್ಲಿದೆ.
ನಂದಿನಿ ತುಪ್ಪ ಉತ್ಪಾದನೆ ಹೊರಗುತ್ತಿಗೆ ನೀಡಲಾಗಿದೆಯೇ?
ಎನ್‌ಕೆ ಬಿಎಲ್‌ಆರ್ (@NkBlr) ಎಂಬ ಎಕ್ಸ್ ಖಾತೆಯಲ್ಲಿ ನಂದಿನಿ ತುಪ್ಪದ ಉತ್ಪಾದನೆ ಹೊರಗುತ್ತಿಗೆ ನೀಡಲಾಗಿದೆ ಎಂಬ ವಿಚಾರ ಪ್ರಸ್ತಾಪವಾಗಿದೆ. ಅವರು ನಂದಿನಿ ತುಪ್ಪದ ಪ್ಯಾಕೆಟ್ ಮೇಲಿರುವ ಉತ್ಪಾದಕರ ವಿವರ ಇರುವ ಚಿತ್ರವನ್ನೂ ಶೇರ್ ಮಾಡಿದ್ದಾರೆ. "ಹಾಗಾದರೆ ನಂದಿನಿ ತುಪ್ಪ ಉತ್ಪಾದನೆಯನ್ನೂ ಹೊರಗುತ್ತಿಗೆ ನೀಡುತ್ತಿದ್ದಾರೆ ಎಂದಾಯಿತು ಎಂಬರ್ಥದಲ್ಲಿ ವಿಷಯವನ್ನೂ ಅಲ್ಲಿ ಪ್ರಸ್ತಾಪಿಸಿದ್ದರು. ಅವರು ಅದನ್ನಿ ನಿನ್ನೆ ಸಂಜೆ 5.30ಕ್ಕೆ ಟ್ವೀಟ್ ಮಾಡಿದ್ದು, ಇದುವರೆಗೆ 39 ಸಾವಿರ ವೀಕ್ಷಣೆಗಳಾಗಿದ್ದು, 50ಕ್ಕೂ ಹೆಚ್ಚು ಕಾಮೆಂಟ್‌ಗಳಿವೆ. 300ಕ್ಕೂ ಹೆಚ್ಚು ಲೈಕ್ಸ್ ಇವೆ.
ಚಿತ್ರದಲ್ಲಿರುವ ಮಾಹಿತಿ ಪ್ರಕಾರ, ಕೆಎಂಎಫ್ ನಂದಿನಿ ತುಪ್ಪವನ್ನು ಹಾವೇರಿ ಜಿಲ್ಲೆ ಅಗಡಿ ಅಂಚೆಯ ಕರಜಗಿ ಹೋಬಳಿ, ಜಂಗಮನಕೊಪ್ಪದ ಎಸ್‌ಕೆಎ ಫುಡ್ಸ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಉತ್ಪಾದಿಸುತ್ತಿದೆ. ಉತ್ಪಾದಕರ ವಿವರದಲ್ಲಿ ಮೊದಲನೇ ಹೆಸರು ಇದೇ ಇದ್ದು, ಎರಡನೇ ಹೆಸರು ಮತ್ತು ವಿವರ ಗಮನಿಸಿದರೆ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವಿವರ ಇರುವುದು ಕಂಡುಬಂದಿದೆ.
ಗುಣಮಟ್ಟ ಪರೀಕ್ಷಿಸಿ: ನಾನಾ ವಿಚಾರಗಳು ಪ್ರತಿಕ್ರಿಯೆಗಳಲ್ಲಿ ಪ್ರಸ್ತಾಪ
ನಿಷ್ಕಾಮ ಕರ್ಮ ಎಂಬ ಖಾತೆಯಿಂದ ಬರೆದಿರುವ ಪ್ರತಿಕ್ರಿಯೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಬಹುತೇಕ ಉತ್ಪನ್ನಗಳು ಹೊರಗುತ್ತಿಗೆಯಲ್ಲಿ ಉತ್ಪಾದಿಸಲ್ಪಡುತ್ತಿವೆ. ಕೆಎಂಎಫ್‌ಗೆ ಅದರದ್ದೇ ಆದ ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಇಲ್ಲ. ಜಿಲ್ಲಾ ಹಾಲು ಒಕ್ಕೂಟಗಳು ನೇಮಕಾತಿ, ನಿರ್ವಹಣೆಯಲ್ಲಿ ಭಾರಿ ಭ್ರಷ್ಟಾಚಾರದಿಂದ ನಲುಗಿವೆ ಎಂದು ಹೇಳಿದ್ದಾರೆ.
ಸುಮಂತ್ ಎಂಬುವವರು, “ ಪ್ರತಿ ಜಿಲ್ಲೆಯಲ್ಲಿ ಕೆಎಂಎಫ್ ಉತ್ಪಾದನಾ ಸೌಲಭ್ಯವನ್ನು ಹೊಂದಿಲ್ಲ - ನನಗೆ ತಿಳಿದಿರುವಂತೆ ಅವರು ಅದನ್ನು ಬೆಂಗಳೂರು, ಹಾಸನದಲ್ಲಿ ಹೊಂದಿದ್ದಾರೆ ಮತ್ತು ಮಧ್ಯ ಕರ್ನಾಟಕದಲ್ಲಿ ಇನ್ನೂ ಒಂದಾಗಿರಬಹುದು. ಕೆಎಂಎಫ್‌ಗಾಗಿ ಎಷ್ಟು ಥರ್ಡ್ ಪಾರ್ಟಿ ತಯಾರಕರು ಇದನ್ನು ಮಾಡುತ್ತಿದ್ದಾರೆ ಮತ್ತು ಯಾವ ಗುಣಮಟ್ಟದ ತಪಾಸಣೆಗಳನ್ನು ನಡೆಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯ ಇದೆ” ಎಂದು ಹೇಳಿದ್ದಾರೆ.
ಹಾವೇರಿ ಹಾಲು ಒಕ್ಕೂಟಕ್ಕೆ ಉತ್ಪಾದಕರು ಎಂದು ಹೇಳುವಂತೆ ಇದು ಆ ಪ್ರದೇಶಕ್ಕೆ ಮಾತ್ರ ಸೀಮಿತ ಎಂದು ನಾನು ಭಾವಿಸುತ್ತೇನೆ. ಇದು ಪ್ರತಿ ಪ್ರದೇಶದಲ್ಲಿ ಒಂದೇ ಆಗಿದೆಯೇ ಎಂದು ಖಚಿತವಾಗಿಲ್ಲ. ಬೇಡಿಕೆ ಘಾತೀಯವಾಗಿದ್ದಾಗ ಒಪ್ಪಂದದ ತಯಾರಿಕೆಯು ವ್ಯವಹಾರಗಳಲ್ಲಿ ಸಾಮಾನ್ಯವಾಗಿದೆ. ಆದಾಗ್ಯೂ, ಸ್ಪಷ್ಟತೆಗಾಗಿ ಇನ್ನಷ್ಟು ವಿವರ ತಿಳಿದುಕೊಳ್ಳಬೇಕು ಎಂದು ನವೀನ್ ಶಾಂಡಿಲ್ಯ ಹೇಳಿದ್ದಾರೆ.
ಮಹೇಂದ್ರ ಕುಮಾರ್ ಅವರು ಪ್ರತಿಕ್ರಿಯಿಸುತ್ತಾ, " ಸೇವ್ ನಂದಿನಿ ವಾರಿಯರ್ಸ್ ಎಲ್ಲಿ ಹೋದರು? ತುಪ್ಪ ತಯಾರಿಸೋಕೆ ಆಗದಷ್ಟು ಬರಗೆಟ್ರಾ? ಎಂದು ಟೀಕಿಸಿದ್ದಾರೆ.
ನವೀನ್ ಹಿತ್ತಲಮನಿ ಎಂಬುವವರು ಪ್ರತಿಕ್ರಿಯೆ ನೀಡುತ್ತ, ಕೆಎಂಎಫ್ (@kmfnandinimilk) ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದಿದ್ದಾರೆ.