Bengaluru News: ಬೆಂಗಳೂರು ಪಿಜಿಗಳಿಗೆ 10 ಅಂಶಗಳ ಪೊಲೀಸ್ ಮಾರ್ಗಸೂಚಿ ಪ್ರಕಟ; ವಾಸಕ್ಕೆ ಬರುವವರ ಪೂರ್ವಾಪರ ಮಾಹಿತಿ ಕಡ್ಡಾಯ
Jan 29, 2024 08:45 AM IST
ಬೆಂಗಳೂರಿನಲ್ಲಿ ಪಿಜಿ ಕೇಂದ್ರಗಳಿಗೆ ಪೊಲೀಸ್ ಮಾರ್ಗಸೂಚಿ ಪ್ರಕಟ (ಸಾಂಕೇತಿಕ ಚಿತ್ರ)
Do's and Don'ts for Safety in your PG: ಬೆಂಗಳೂರು ಮಹಾನಗರದಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ) ಕೇಂದ್ರಗಳು ಬಹಳಷ್ಟಿವೆ. ನಿತ್ಯವೂ ಒಂದಿಲ್ಲೊಂದು ಅಪರಾಧ ಪ್ರಕರಣ, ಅಕ್ರಮಗಳು ಇಂತಹ ಕೇಂದ್ರಗಳಿಂದ ಬೆಳಕಿಗೆ ಬರುತ್ತಿರುವ ಕಾರಣ, ಪಿಜಿಗಳಿಗೆ 10 ಅಂಶಗಳ ಮಾರ್ಗಸೂಚಿಯನ್ನು ಪೊಲೀಸರು ಪ್ರಕಟಿಸಿದ್ದಾರೆ.
ಬೆಂಗಳೂರು: ಸುರಕ್ಷೆ ಸಲುವಾಗಿ ಬೆಂಗಳೂರು ಮಹಾನಗರದಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ಕೇಂದ್ರಗಳಿಗೆ 10 ಅಂಶಗಳ ಮಾರ್ಗಸೂಚಿಯನ್ನು ಪೊಲೀಸರು ಪ್ರಕಟಿಸಿದ್ದಾರೆ.
ಈ ಬಗ್ಗೆ, ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ರಮಣ ಗುಪ್ತಾ ಅವರು ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ ಕಾಲಂ 34 (ಡಿ) ಮತ್ತು 70 ಅನ್ವಯದ ಕಡ್ಡಾಯ ಮಾರ್ಗಸೂಚಿಯನ್ನು ಪಿಜಿಗಳ ಮಾಲೀಕರು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಪಿಜಿಗಳಲ್ಲಿ ಸಿಬ್ಬಂದಿ ನೇಮಕ ಮಾಡುವಾಗ ಮಾರ್ಗಸೂಚಿ ಪಾಲಿಸದೇ ಸಿಬ್ಬಂದಿ ನೇಮಕ ಮಾಡಿದರೆ ಅಥವಾ ಸುರಕ್ಷಾ ಕ್ರಮ ಅನುಸರಿಸದೇ ದುರಂತಗಳು, ಅಪರಾಧಗಳು ಸಂಭವಿಸಿದರೆ ಅದಕ್ಕೆ ಪಿಜಿ ಮಾಲೀಕರೇ ಹೊಣೆಗಾರರು ಎಂಬುದನ್ನು ಮಾರ್ಗಸೂಚಿ ಸ್ಪಷ್ಟಪಡಿಸಿದೆ.
ಮಾರ್ಗಸೂಚಿಯ ಪ್ರಕಾರ, ಪಿಜಿ ಆರಂಭಕ್ಕೆ ಬಿಬಿಎಂಪಿ ಒಪ್ಪಿಗೆ ಕಡ್ಡಾಯ. ಅಗ್ನಿ ಸುರಕ್ಷತಾ ವ್ಯವಸ್ಥೆ, ಸಿಸಿಟಿವಿ ಇರಬೇಕು. ವಿದೇಶಿ ಪ್ರಜೆಗಳ ಬಗ್ಗೆ ಪೊಲೀಸ್‌ಗೆ ಮಾಹಿತಿ ನೀಡಬೇಕು. ಕಾನೂನು ಬಾಹಿರ ಚುಟವಟಿಕೆಗೆ ಅವಕಾಶ ಇಲ್ಲ. ಪ್ರಾಥಮಿಕ ವೈದ್ಯಕೀಯ ಕಿಟ್ ಕಡ್ಡಾಯ. ದೃಢೀಕರಣ ದಾಖಲೆಗಳನ್ನು ಸಂಗ್ರಹಿಸಬೇಕು. ವಾಸಕ್ಕೆ ಪ್ರವೇಶ ಪಡೆದಿರುವವರ ಹೊರತುಪಡಿಸಿ ಇತರರಿಗೆ ತಾತ್ಕಾಲಿಕ ವಾಸ ಕಲ್ಪಿಸಬಾರದು. ನ್ಯಾಯಾಲಯದ ಆದೇಶದನ್ವಯದ ರಾತ್ರಿ 10ರಿಂದ ಬೆಳಗ್ಗೆ 6 ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ.
ಬೆಂಗಳೂರಿನಲ್ಲಿ ಪಿಜಿಗೆ ಸಂಬಂಧಿಸಿ ಪೊಲೀಸ್ ಮಾರ್ಗಸೂಚಿ ವಿವರದ 10 ಮುಖ್ಯ ಅಂಶಗಳು
1) ಪಿಜಿ ಆರಂಭಿಸಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು.
2) ಪಿಜಿಯಲ್ಲಿ ವಾಸಕ್ಕೆ ಬರುವ ಎಲ್ಲ ವ್ಯಕ್ತಿಗಳ ಗುರುತಿನ ಚೀಟಿ ಹಾಗೂ ಇತ್ತೀಚಿನ ಭಾವಚಿತ್ರ ಪಡೆಯಬೇಕು.
3) ಪಿಜಿಯಲ್ಲಿ ವಾಸಕ್ಕೆ ಬರುವವರ ರಕ್ತ ಸಂಬಂಧಿಗಳ ವಿವರ, ಮೊಬೈಲ್ ಸಂಖ್ಯೆ ಪಡೆದು ಗಣಕೀಕೃತ ದಾಖಲಾತಿ ಮಾಡಬೇಕು.
4) ಪಿಜಿಯಲ್ಲಿ ವಾಸವಿರುವವರನ್ನು ಭೇಟಿ ಮಾಡಲು ಬರುವ ಸಂಬಂಧಿಕರ ಮತ್ತು ಸಾರ್ವಜನಿಕರ ವಿವರ ಪ್ರತ್ಯೇಕವಾಗಿ ನಿರ್ವಹಿಸಬೇಕು.
5) ಪಿಜಿಯ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ದೃಶ್ಯಗಳನ್ನು ನಿಗದಿತ ಅವಧಿ ತನಕ ಕಾಯ್ದಿರಿಸಬೇಕು.
6) ಅದೇ ರೀತಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು.
7) ಪಿಜಿಯಲ್ಲಿ ಮಾದಕ ವಸ್ತು ಸೇವನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು.
8) ಪಿಜಿಯ ಫಲಕಗಳಲ್ಲಿ ಪೊಲೀಸ್-112, ವೈದ್ಯಕೀಯ- 103 ಹಾಗೂ ಸೈಬರ್ -1930 ಸಹಾಯವಾಣಿ ಕೇಂದ್ರಗಳ ದೂರವಾಣಿಯನ್ನು ಪ್ರಕಟಿಸಬೇಕು.
9) ಪ್ರಾಥಮಿಕ ವೈದ್ಯಕೀಯ ಚಿಕಿತ್ಸಾ ಕಿಟ್ ಅನ್ನು ಇಟ್ಟು ನಿರ್ವಹಿಸಬೇಕು.
10) ಅಡುಗೆ, ಕಾವಲುಗಾರ ಸೇರಿದಂತೆ ಇತರರ ಪೂರ್ವಾಪರ ಮಾಹಿತಿಯನ್ನು ಪೊಲೀಸರ ಪರಿಶೀಲನೆ ಒಳಪಟ್ಟಂತೆ ಮಾಡಿಕೊಂಡು ಬಳಿಕ ನೇಮಿಸಿಕೊಳ್ಳಬೇಕು.