logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Water: ಸಾಲದ ಯೋಜನೆ ರೂಪಿಸಿದರೂ ಬೆಂಗಳೂರು ಸುತ್ತಮುತ್ತಲ110 ಹಳ್ಳಿಗಳಿಗೆ ಇನ್ನೂ ಕಾವೇರಿ ನೀರು ಮರೀಚಿಕೆ

Bangalore water: ಸಾಲದ ಯೋಜನೆ ರೂಪಿಸಿದರೂ ಬೆಂಗಳೂರು ಸುತ್ತಮುತ್ತಲ110 ಹಳ್ಳಿಗಳಿಗೆ ಇನ್ನೂ ಕಾವೇರಿ ನೀರು ಮರೀಚಿಕೆ

HT Kannada Desk HT Kannada

Sep 25, 2023 07:15 AM IST

google News

ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳು ಬಿಬಿಎಂಪಿ ಸೇರಿದರೂ ಒಂದೂವರೆ ದಶಕದಿಂದ ಕಾವೇರಿ ನೀರು ಪಡೆಯಲು ಆಗುತ್ತಿಲ್ಲ.

    • Bangalore Water Woes ಬಿಬಿಎಂಪಿ(BBMP)ಗೆ ಸೇರ್ಪಡೆಯಾಗಿ 15 ವರ್ಷ ಕಳೆದರೂ 110 ಹಳ್ಳಿಗಳಿಗೆ ಕಾವೇರಿ(Cauvery) ನೀರು ಮರೀಚಿಕೆಯಾಗಿದೆ. ಇವರಿಗೆಲ್ಲ ಈಗಲೂ ಬೋರ್‌ವೆಲ್ ಮತ್ತು ಟ್ಯಾಂಕರ್ ನೀರೇ ಗತಿ. ಮುಗಿಯದ ಕಾವೇರಿ ನೀರು ಒದಗಿಸುವ 5550 ಕೋಟಿ ರೂ. ಯೋಜನೆಯಿಂದ ಬೆಂಗಳೂರು ಜನ ಇನ್ನೂ ಕಾಯಬೇಕಾದ ಸ್ಥಿತಿಯಿದೆ.
ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳು ಬಿಬಿಎಂಪಿ ಸೇರಿದರೂ ಒಂದೂವರೆ ದಶಕದಿಂದ ಕಾವೇರಿ ನೀರು ಪಡೆಯಲು ಆಗುತ್ತಿಲ್ಲ.
ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳು ಬಿಬಿಎಂಪಿ ಸೇರಿದರೂ ಒಂದೂವರೆ ದಶಕದಿಂದ ಕಾವೇರಿ ನೀರು ಪಡೆಯಲು ಆಗುತ್ತಿಲ್ಲ.

ಬೆಂಗಳೂರು: ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತೊಂದಿದೆ. ಆದರೆ ಬೆಂಗಳೂರು ನಗರಕ್ಕೆ ಹೊಂದಿಕೊಂಡ ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ಸಾಲ ಮಾಡಿ ಕಾವೇರಿ ಕುಡಿಯುವ ನೀರು ತರಲು ಮುಂದಾದ ಯೋಜನೆ ಐದು ವರ್ಷವಾದರೂ ಮುಗಿದಿಲ್ಲ. ಜನ ಕಾವೇರಿ ನೀರಿಗಾಗಿ ಕಾಯುವುದೊಂದೇ ಬಂದಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಸೇರ್ಪಡೆಯಾಗಿ 15 ವರ್ಷಗಳೇ ಕಳೆದರೂ 110 ಹಳ್ಳಿಗಳಿಗೆ ಕಾವೇರಿ ನದಿಯ ನೀರು ಕುಡಿಯುವ ಭಾಗ್ಯವನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2024ರ ಜನವರಿ ವೇಳೆಗೆ ಈ ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ವ್ಯವಸ್ಥೆಯಾಗಬೇಕಿತ್ತು. ಆದರೆ ಸಾಧ್ಯವಾಗುತ್ತಿಲ್ಲ.

ಕಾವೇರಿ 5ನೇ ಹಂತದ ಯೋಜನೆ ಪ್ರಕಾರ ಬೆಂಗಳೂರಿಗೆ 775 ದಶಲಕ್ಷ ಲೀಟರ್ ನೀರನ್ನು ತರಬೇಕಿತ್ತು. ಜಪಾನ್ ಇಂಟರ್ ನ್ಯಾಶನಲ್ ಕೋ ಆಪರೇಟೀವ್ ಏಜೆನ್ಸಿ ಜೈಕಾ ನೆರವಿನೊಂದಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಈ ಮುಂಗಾರಿನಲ್ಲಿ ಮಳೆ ಕೊರತೆಯಾಗಿರುವುದರಿಂದ ಈ ಯೋಜನೆ ಮತ್ತೊಂದು ವರ್ಷ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ನೀರಿನ ಕೊರತೆ

ಇಡೀ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಅಭಾವ ಉಂಟಾಗಿದೆ. ಇರುವ ಅಲ್ಪ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಬೆಂಗಳೂರಿಗೆ ಪ್ರತಿದಿನ ಒದಗಿಸಲಾಗುತ್ತಿರುವ 1460 ಎಂಎಲ್‌ಡಿ ನೀರು ಲಭ್ಯವಾಗುವುದೂ ದುಸ್ತರವಾಗಿದೆ. ಪರಿಸ್ಥಿತಿ ಹೀಗಿರುವಾಗ ಹೆಚ್ಚುವರಿಯಾಗಿ 775ಎಂಎಲ್‌ಡಿ ನೀರನ್ನು ಒದಗಿಸುವುದು ಅಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

ನೀರಿನ ಬಿಕ್ಕಟ್ಟು ಉಂಟಾಗುವುದನ್ನು ನಿರೀಕ್ಷಿಸಿರುವ ಬಿ.ಡಬ್ಲ್ಬುಯಸ್.ಎಸ್.ಬಿ( BWSSB) ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಪ್ರತಿ ತಿಂಗಳು 1.6 ಟಿಎಂಸಿ ನೀರನ್ನು ಮೀಸಲಿಡುವವಂತೆ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ. ಜೊತೆಗೆ ಜನವರಿ 2024ರಿಂದ 110 ಹಳ್ಳಿಗಳಿಗೆ ಹೆಚ್ಚುವರಿಯಾಗಿ 8.82 ಟಿಎಂಸಿ ನೀರು ಅಗತ್ಯವಿದೆ ಎಂದೂ ತಿಳಿಸಿದೆ.

ಬೋರೆವೆಲ್‌ ನೀರೇ ಗತಿ

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2007ರಲ್ಲಿ ಬೊಮ್ಮನಹಳ್ಳಿ ವಲಯಕ್ಕೆ 33 ಹಳ್ಳಿಗಳು, ಮಹದೇವಪುರ(23), ರಾಜರಾಜೇಶ್ವರಿ ನಗರ(17), ದಾಸರಹಳ್ಳಿ(11) ಮತು ಯಲಹಂಕ ವಲಯಕ್ಕೆ 26 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿತ್ತು.110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದರೂ ನಗರ ಪ್ರದೇಶದ ಯಾವುದೇ ಸೌಲಭ್ಯವನ್ನು ಪಡೆಯುವಲ್ಲಿ ವಿಫಲವಾಗಿವೆ. ಉತ್ತಮ ರಸ್ತೆ, ಆಸ್ಪತ್ರೆ, ಕಸ ಸಂಗ್ರಹ, ಸೇರಿದಂತೆ ನಗರ ಪ್ರದೇಶದ ಯಾವುದೇ ಸವಲತ್ತುಗಳು ಈ ಹಳ್ಳಿಗೆಳಿಗೆ ಸಿಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯಂತೂ ಅಗಾಧವಾಗಿದೆ. ಬಹುತೇಕ ಈ ಎಲ್ಲ ಹಳ್ಳಿಗಳು ಬೋರ್‌ವೆಲ್ ಇಲ್ಲವೇ ಟ್ಯಾಂಕರ್ ನೀರನ್ನು ಅವಲಂಭಿಸಿವೆ. ಜನರ ಆಕ್ರೋಶ ಕಟ್ಟೆಯೊಡೆದಾಗ ಸರ್ಕಾರವೇ ಆಗೊಮ್ಮೆ ಈಗೊಮ್ಮೆ ಬೋರ್‌ವೆಲ್ ತೆಗೆಸಿ ನೀರು ಒದಗಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ ಉತ್ತಮ ಮಳೆಯಾಗಿ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿತ್ತು. ಈ ವರ್ಷ ಮಳೆ ಇಲ್ಲದ ಕಾರಣ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಟ್ಯಾಂಕರ್ ನೀರು ಕುಡಿಯಲು ಯೋಗ್ಯವಲ್ಲ. ಇದು ಜನರ ಸಮಸ್ಯೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾವಿ ಹೊಲಿಸಿದಂತೆ ಜಲ ಮಂಡಲಿ ಮನೆ ಮನೆಗಳಿಗೆ ಕಾವೇರಿ ನೀರು ಸರಬರಾಜು ಸಂಪರ್ಕ ಕಲ್ಪಿಸಿದೆ. ಎರಡು ವರ್ಷಗಳಾದರೂ ಅಲ್ಲಿನ ನಾಗರೀಕರು ನಲ್ಲಿಯಲ್ಲಿ ನೀರು ಬಂತೇ ಎಂದು ಕಾಯುತ್ತಿದ್ದಾರೆ. ಟ್ಯಾಂಕರ್ ನೀರು ದುಬಾರಿಯಾಗಿದ್ದು 12000 ಲೀ. ಟ್ಯಾಂಕರ್ ನೀರಿಗೆ 1500 ರೂ.ಗೆ ಏರಿಕೆಯಾಗಿದೆ.

ಏನಿದು ಜೈಕಾ ಯೋಜನೆ?

2017ರ ಅಕ್ಟೋಬರ್ 12ರಂದು ಈ ಯೋಜನೆಗೆ 5550 ಕೋಟಿ ರೂಪಾಯಿ ಅಂದಾಜು ವೆಚ್ಚಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದಕ್ಕಾಗಿ ಜೈಕಾ(Japan International Cooperation Agency)ದಿಂದ 4661 ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ. ರಾಜ್ಯ ಸರ್ಕಾರ ಮತ್ತು ಜಲ ಮಂಡಲಿ ತಲಾ 444.50 ಕೋಟಿ ರೂ. ವೆಚ್ಚವನ್ನು ಭರಿಸುತ್ತಿವೆ. ಯೋಜನೆಯ ಕಾಮಗಾರಿ ಆರಂಭವಾಗಿ 5 ವರ್ಷಗಳೇ ಕಳೆದಿದ್ದರೂ ಪ್ರಗತಿ ನಿರಾಶಾದಾಯಕವಾಗಿದೆ. ಕನಕಪುರದಲ್ಲಿ ನೀರಿನ ಪೈಪ್ ಗಳನ್ನು ಅಳವಡಿಸುವ ನಕ್ಷೆ ಬದಲಾಗಿರುವುದು ಮತ್ತು ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕಾಗಿರುವುದು ತಡವಾಗಲು ಕಾರಣವಾಗಿದೆ. 2024ರ ಜನವರಿಯಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಗುರಿ ಹೊಂದಲಾಗಿತ್ತಾದರೂ ಈ ಅವಧಿಯಲ್ಲಿ ಇದು ಅಸಾಧ್ಯವಾಗಿದೆ. ಬಹುಶಃ ವರುಣನ ಕೃಪೆಯಾದರೆ 2024ರ ಅಂತ್ಯ ಇಲ್ಲವೇ 2025ರ ಆರಂಭದಲ್ಲಿ ಸಾಧ್ಯವಾಗಬಹುದು ಎಂದು ಭಾವಿಸಲಾಗಿದೆ.

(ವಿಶೇಷ ವರದಿ: ಎಚ್.ಮಾರುತಿ, ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ