Bengaluru Crime: ಬೆಂಗಳೂರಲ್ಲಿ ನಕಲಿ ಕಂಪನಿ ಹೆಸರಲ್ಲಿ ಸಾರ್ವಜನಿಕರಿಗೆ 25 ಕೋಟಿ ರೂಪಾಯಿ ವಂಚಿಸಿದ್ದ ತಂಡದ ಬಂಧನ
Dec 19, 2023 05:53 PM IST
ಬೆಂಗಳೂರಲ್ಲಿ ನಕಲಿ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ 25 ಕೋಟಿ ವಂಚಿಸಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ, ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ಪೊಲೀಸರು ಸೆರೆಹಿಡಿದು ದ್ವಿಚಕ್ರವಾಹ ವಶಪಡಿಸಿಕೊಂಡಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ನಕಲಿ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ 25 ಕೋಟಿ ವಂಚಿಸಿದ್ದ ತಂಡ ಪೊಲೀಸರ ಬಲೆಗೆ ಬಿದ್ದಿದೆ. ಇನ್ನೊಂದೆಡೆ, ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಮೂರು ಕಳ್ಳರು ಕೂಡ ಪೊಲೀಸರಿಗೆ ಸೆರೆಯಾಗಿದ್ದಾರೆ. ಅವರಿಂದ ದ್ವಿಚಕ್ರ ವಾಹನ ಮತ್ತು ಲ್ಯಾಪ್‌ಟಾಪ್ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ನಕಲಿ ಕಂಪನಿ ಹೆಸರಿನಲ್ಲಿ ಅಧಿಕ ಲಾಭದ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರದ ಕೋಣನಕುಂಟೆ ಸಮೀಪ ಪ್ರಮ್ಯ ಇಂಟರ್‌ನ್ಯಾಷನಲ್ ಎಂಬ ಕಂಪನಿಯನ್ನು ತೆರೆದ ಆರೋಪಿಗಳು, ಸಾರ್ವಜನಿಕರಿಗೆ ಅಧಿಕ ಲಾಭಾಂಶದ ಆಮಿಷವೊಡ್ಡಿ, ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಇವರ ಆಮಿಷಕ್ಕೆ ಬಲಿಯಾಗಿ 700 ಕ್ಕೂ ಹೆಚ್ಚು ಸಾರ್ವಜನಿಕರು ಸುಮಾರು 25 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿರುತ್ತಾರೆ. ಈ ಹಣವನ್ನು ಚರ ಹಾಗೂ ಸ್ಥಿರಾಸ್ತಿ ಖರೀದಿಗೆ ಬಳಸಿಕೊಂಡು ವೈಯಕ್ತಿಕ ಲಾಭ ಮಾಡಿಕೊಂಡಿರುವ ಮಾಹಿತಿ ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ.
ಆರೋಪಿಗಳಿಂದ 7 ಲಕ್ಷ ರೂಪಾಯಿ ನಗದು, ದಾಖಲಾತಿಗಳು ಮತ್ತು ಕಂಪ್ಯೂಟರ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದವರ ಬಂಧನ, 20 ದ್ವಿಚಕ್ರ ವಾಹನ ವಶ
ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರು ದ್ವಿಚಕ್ರ ವಾಹನ ಕಳ್ಳರು ಎನ್ನುವುದು ತಿಳಿದು ಬಂದಿದೆ.
ಇವರು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 20 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಮೌಲ್ಯ 25 ಲಕ್ಷ ರೂಪಾಯಿ ಎಂದು ತಿಳಿದು ಬಂದಿರುತ್ತದೆ. ಪೊಲೀಸ್ ವಿಚಾರಣೆ ಬಳಿಕ ಈ ಇಬ್ಬರು ಆರೋಪಿಗಳ ಜತೆಗಾರನಾಗಿದ್ದ ಇನ್ನೊಬ್ಬ ಆರೋಪಿಯ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಆತನನ್ನೂ ಬಂಧಿಸಿದ್ದಾರೆ.
ಈ ಆರೋಪಿಗಳು ಬೆಂಗಳೂರು ನಗರ, ಚಿಕ್ಕಮಗಳೂರು, ಮಂಡ್ಯ, ದಾವಣಗೆರೆ ಮತ್ತು ಹಾಸನ ಜಿಲ್ಲೆಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. 20 ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದ ಮೂವರು ಅಂತಾರಾಜ್ಯ ಕಳ್ಳರ ಬಂಧನ
ಯಶವಂತಪುರ ಠಾಣಾ ವ್ಯಾಪ್ತಿಯ ಮತ್ತಿಕೆರೆಯ ಎಂ.ಎಸ್ ರಾಮಯ್ಯ ಕಾಲೇಜ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಅವರು ಕಳ್ಳರು ಎಂದು ತಿಳಿದುಬಂದಿದ್ದು, ಅವರಿಂದ 16 ಲಕ್ಷ ರೂಪಾಯಿ ಬೆಲೆ ಬಾಳುವ 50 ವಿವಿಧ ಕಂಪನಿ ಲ್ಯಾಪ್ ಟಾಪ್‌ಗಳು ಹಾಗೂ ವಿವಿಧ ಕಂಪನಿಯ 7 ಮೊಬೈಲ್ ಫೋನ್‌ಗಳನ್ನು ವಶಪಡಿಸಿದ್ದಾರೆ.
ಆರೋಪಿಗಳು ಕಳವು ಮಾಡಿದ್ದ ಮೊಬೈಲ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೂಲತಃ ತಮಿಳುನಾಡು ಮತ್ತು ಆಂಧ್ರಪ್ರದೇಶದ ಇವರು ಕಾಲೇಜ್ ವಿದ್ಯಾರ್ಥಿಗಳು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಸುತ್ತಾಡಿ ಪಿ.ಜಿ., ಹಾಸ್ಟೆಲ್‌ಗಳನ್ನು ಗುರುತಿಸಿಕೊಂಡು ವಿದ್ಯಾರ್ಥಿಗಳು ಇಲ್ಲದೇ ಇದ್ದಾಗ ಅವರ ಕೊಠಡಿಗೆ ತೆರಳಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 25 ಲ್ಯಾಪ್‌ಟಾಪ್ ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ - ಎಚ್. ಮಾರುತಿ