logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಸೌಂದರ್ಯವರ್ಧಕ ಚಿಕಿತ್ಸೆಗೆ ಬಂದ ಮಹಿಳೆ 6 ಕೋಟಿ ರೂ ವಂಚನೆ, ದೂರು ನೀಡಿದ ಡಾಕ್ಟರ್

Bengaluru Crime: ಸೌಂದರ್ಯವರ್ಧಕ ಚಿಕಿತ್ಸೆಗೆ ಬಂದ ಮಹಿಳೆ 6 ಕೋಟಿ ರೂ ವಂಚನೆ, ದೂರು ನೀಡಿದ ಡಾಕ್ಟರ್

Umesh Kumar S HT Kannada

Feb 08, 2024 06:35 AM IST

google News

ಸೌಂದರ್ಯವರ್ಧಕ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರು 6 ಕೋಟಿ ರೂಪಾಯಿ ವಂಚನೆ ಎಸಗಿರುವುದಾಗಿ ಡಾಕ್ಟರ್ ಒಬ್ಬರು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. (ಸಾಂಕೇತಿಕ ಚಿತ್ರ)

  • Bengaluru Crime: ಸೌಂದರ್ಯವರ್ಧಕ ಚಿಕಿತ್ಸೆಗೆ ಬಂದ ಮಹಿಳೆ 6 ಕೋಟಿ ರೂ ವಂಚನೆ ಎಸಗಿರುವುದಾಗಿ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಡಾಕ್ಟರ್ ದೂರು ನೀಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ,   ಇಂದಿರಾನಗರ ಠಾಣೆ ಪೊಲೀಸರು ಇಬ್ಬರು ಮೊಬೈಲ್‌ ಕಳ್ಳರ ಬಂಧಿಸಿದ್ದಾರೆ. (ವರದಿ- ಎಚ್‌. ಮಾರುತಿ, ಬೆಂಗಳೂರು)

ಸೌಂದರ್ಯವರ್ಧಕ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರು 6 ಕೋಟಿ ರೂಪಾಯಿ ವಂಚನೆ ಎಸಗಿರುವುದಾಗಿ ಡಾಕ್ಟರ್ ಒಬ್ಬರು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. (ಸಾಂಕೇತಿಕ ಚಿತ್ರ)
ಸೌಂದರ್ಯವರ್ಧಕ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರು 6 ಕೋಟಿ ರೂಪಾಯಿ ವಂಚನೆ ಎಸಗಿರುವುದಾಗಿ ಡಾಕ್ಟರ್ ಒಬ್ಬರು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. (ಸಾಂಕೇತಿಕ ಚಿತ್ರ) (Pixabay)

ಮುಖದ ಸೌಂದರ್ಯದ ಚಿಕಿತ್ಸೆಗೆ ಬಂದಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬರು ಕಾರು ಕೊಡಿಸುವುದಾಗಿ ನಂಬಿಸಿ ವೈದ್ಯರೊಬ್ಬರಿಗೆ ಬರೋಬ್ಬರಿ 6 ಕೋಟಿ ರೂಪಾಯಿ ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ವಿಜಯನಗರದ ನಿವಾಸಿ ಡಾ.ಗಿರೀಶ್ ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತಮ್ಮ ಬಳಿ ಚಿಕಿತ್ಸೆಗೆ ಬಂದಿದ್ದ ಐಶ್ವರ್ಯ ಗೌಡ ಎಂಬುವವರು ರೂ. 6.20 ಕೋಟಿ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

2022ರ ಮಾರ್ಚ್‌ನಲ್ಲಿ ಗಿರೀಶ್ ಅವರ ಆಸ್ಪತ್ರೆಗೆ ರಾಜರಾಜೇಶ್ವರಿ ನಗರದ ನಿವಾಸಿ ಐಶ್ವರ್ಯ ಗೌಡ ಅವರು ಸೌಂದರ್ಯವರ್ಧಕ ಚಿಕಿತ್ಸೆಗೆ ಬಂದಿದ್ದಾಗ ವೈದ್ಯರಿಗೆ ಮಹಿಳೆಯ ಪರಿಚಯವಾಗಿತ್ತು. ತಾನು ರಿಯಲ್‌ ಎಸ್ಟೇಟ್‌ ವ್ಯವಹಾರ ಮತ್ತು ಲಕ್ಸುರಿ ಸೆಕೆಂಡ್ ಹ್ಯಾಂಡ್‌ ಕಾರುಗಳ ಮಾರಾಟವನ್ನೂ ನಡೆಸುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದರು.

ಐಶಾರಾಮಿ ಕಾರು ಖರೀದಿಸುವ ಹಿನ್ನೆಲೆಯಲ್ಲಿ ಗಿರೀಶ್‌ ಅವರು ಐಶ್ವರ್ಯ ಅವರನ್ನು ಸಂಪರ್ಕಿಸಿದ್ದರು. ಅತ್ಯುತ್ತಮ ಕಾರು ಕೊಡಿಸುವುದಾಗಿ ನಂಬಿಸಿ ಐಶ್ವರ್ಯ ಗೌಡ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದರು ಎಂದು ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರ್‌ಟಿಜಿಎಸ್ ಮೂಲಕ, 2.75 ಕೋಟಿ ರೂಪಾಯಿ ಮತ್ತು ನಗದು ರೂಪದಲ್ಲಿ 3.25 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದರು. ಆದರೆ, ಕಾರು ಕೊಡಿಸಿರಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದಾಗ ತಪ್ಪಿಸಿಕೊಂಡಿದ್ದರು ಎಂದು ಗಿರೀಶ್ ಹೇಳಿದ್ದಾರೆ.

ಮತ್ತೆ ಡಿಸೆಂಬರ್‌ನಲ್ಲಿ ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದಾಗ ವಿಜಯನಗರ ಕ್ಲಬ್ ಹತ್ತಿರ ಬರಲು ಸೂಚಿಸಿದ್ದರು. ಅದರಂತೆ ತಾನು ಮತ್ತು ತನ್ನ ಪತ್ನಿ ಕ್ಲಬ್ ಹತ್ತಿರ ಹೋದಾಗ ಬೆದರಿಕೆ ಒಡ್ಡಿದ್ದರು. ಹಣ ವಾಪಸ್‌ ಕೇಳಿದರೆ ಅತ್ಯಾಚಾರದ ದೂರು ನೀಡಲಾಗುವುದು ಎಂದು ಮಹಿಳೆ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇಬ್ಬರು ಮೊಬೈಲ್‌ ಕಳ್ಳರ ಬಂಧನ

ಬೆಂಗಳೂರು ನಗರದ ಮೂರು ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಪಾದಚಾರಿಗಳ ಮೊಬೈಲ್‌ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿನೋದ್‌ ಅಲಿಯಾಸ್‌ ಗುಂಡು ಹಾಗೂ ಸ್ಟೀಫನ್‌ ರಾಜ್‌ ಅಲಿಯಾಸ್‌ ರಾಜ್‌ ಬಂಧಿತ ಆರೋಪಿಗಳು. ಇವರು ಪಾದಚಾರಿಗಳನ್ನು ಗುರಿಯಾಗಿಸಿಕೊಂಡು, ಮೊಬೈಲ್‌ ಕಸಿದು ಪರಾರಿಯಾಗುತ್ತಿದ್ದರು.

ಎಚ್‌.ಕೆ.ಸಿದ್ದೇಶ್‌ ಎಂಬುವವರು ಇಂದಿರಾನಗರದ ಅರ್ಥರ್‌ ಶೋರೂಂ ಬಳಿ ರಸ್ತೆಯಲ್ಲಿ ಅಮ್ಮ ಆಟೊವನ್ನು ನಿಲ್ಲಿಸಿಕೊಂಡು ಅದರಲ್ಲಿಯೇ ಮಲಗಿದ್ದರು. ಅಲ್ಲಿಗೆ ಆಗಮಿಸಿದ್ದ ಇಬ್ಬರು ಆರೋಪಿಗಳು, ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಸಿದ್ದೇಶ್‌ ಅವರು ಬೇರೊಬ್ಬರ ಮೊಬೈಲ್‌ ಪಡೆದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿ ಇಬ್ಬರೂ ಕಳ್ಳರನ್ನು ಬೆನ್ನಟ್ಟಿ ಹಿಡಿದು ಮೊಬೈಲ್‌ ಜಪ್ತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮೊಬೈಲ್‌ ಸುಲಿಗೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇವರ ವಿರುದ್ಧ ಇಂದಿರಾನಗರ ಹಾಗೂ ಹಲಸೂರಿನಲ್ಲಿ ತಲಾ ಒಂದು ಹಾಗೂ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಸವಾರ ಸಾವು

ಸ್ನೇಹಿತರನ್ನು ಭೇಟಿಯಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಬುಲೆಟ್‌ ಬೈಕ್‌ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದ ಪರಿಣಾಮ ವೈದ್ಯಕೀಯ ಉಪಕರಣಗಳ ವಿತರಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಕೊ ಲೇಔಟ್ ನ ಎನ್.ಎಸ್.ಪಾಳ್ಯ ಬಳಿ ನಡೆದಿದೆ.

ದೊಮ್ಮಲೂರಿನ ನಿವಾಸಿ 26 ವರ್ಷದ ಕುಲದೀಪ್ ಮೃತಪಟ್ಟಿದ್ದಾರೆ. ಇವರು ಸ್ನೇಹಿತರನ್ನು ಭೇಟಿಯಾಗಲು ಬನ್ನೇರುಘಟ್ಟ ಸಮೀಪ ಬುಲೆಟ್‌ನಲ್ಲಿ ಹೋಗಿದ್ದರು. ತಡರಾತ್ರಿ 1 ಗಂಟೆ ಸುಮಾರಿಗೆ ಅತಿ ವೇಗದಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಎನ್.ಎಸ್.ಪಾಳ್ಯ ಬಳಿ ಬುಲೆಟ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಕುಲದೀಪ್ ಉರುಳಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೈಕೊ ಲೇಔಟ್ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ