Banana Price; ಗೌರಿ ಗಣೇಶ ಹಬ್ಬಕ್ಕೆ ವಾರ ಇರುವಾಗಲೇ ಬಾಳೆಹಣ್ಣು ಬೆಲೆ ಗಗನಮುಖಿ, ಬಡ ಮಧ್ಯಮ ವರ್ಗಕ್ಕೆ ಹೆಚ್ಚಿದ ಚಿಂತೆ
Aug 31, 2024 05:26 PM IST
ಗೌರಿ ಗಣೇಶ ಹಬ್ಬಕ್ಕೆ ವಾರ ಇರುವಾಗಲೇ ಬಾಳೆಹಣ್ಣು ಬೆಲೆ ಗಗನಮುಖಿ (ಸಾಂಕೇತಿಕ ಚಿತ್ರ)
Banana Prices Surge; ಗಣಪತಿ ಹಬ್ಬಕ್ಕೆ ವಾರ ಇರುವಂತೆಯೇ ಬೆಂಗಳೂರಿನಲ್ಲಿ ಬಾಳೆಹಣ್ಣಿನ ದರ ಏರಿಕೆಯಾಗಿದ್ದು, ಬಡ ಮಧ್ಯಮ ವರ್ಗದವರ ಚಿಂತೆಯನ್ನು ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಬೆಲೆ ನಿಜಕ್ಕೂ ಕಂಗಾಲು ಮಾಡುವಂಥದ್ದು!
ಬೆಂಗಳೂರು: ಗಣೇಶನ ಹಬ್ಬ ಹತ್ತಿರದಲ್ಲಿದೆ. ಗಣಪತಿಗೆ ಇಷ್ಟವಾದ ಬಾಳೆಹಣ್ಣು ಈ ಬಾರಿ ಸ್ವಲ್ಪ ದುಬಾರಿಯಾಗಿದೆ. ಹೌದು, ಗಣಪತಿ ಹಬ್ಬಕ್ಕೆ ವಾರ ಇರುವಂತೆಯೇ ಬೆಂಗಳೂರಿನಲ್ಲಿ ಬಾಳೆಹಣ್ಣಿನ ದರ ಏರಿಕೆಯಾಗಿದ್ದು, ಗಣೇಶನಿಗೆ ನೈವೇದ್ಯಕ್ಕೇನು ಮಾಡೋದು ಎಂಬ ಚಿಂತೆ ಬಡ, ಕೆಳ ಮಧ್ಯಮ ಕುಟುಂಬ ಹೆಣ್ಣುಮಕ್ಕಳದ್ದು.
ಗೌರಿ ಗಣೇಶನ ಹಬ್ಬ ಕಳೆಯುತ್ತಿದ್ದಂತೆ ದಸರಾ, ಅದಾಗಿ ದೀಪಾವಳಿ ಹಬ್ಬ ಬರಲಿದೆ. ಅಷ್ಟರೊಳಗೆ ಹಣ್ಣು ಹಂಪಲುಗಳ ದರ ಗಗನಮುಖಿಯಾದರೆ ಹೇಗೆ ಎಂಬ ಚಿಂತೆ ಹಲವರನ್ನು ಕಾಡಿದೆ. 100 ರೂಪಾಯಿ ದಾಟಿ ಮುನ್ನುಗ್ಗುತ್ತಿರುವ ಬಾಳೆಹಣ್ಣು ದರ ಗಣೇಶನ ಹಬ್ಬಕ್ಕಾಗುವಾಗ ಇನ್ನಷ್ಟು ಏರಿಕೆ ಕಾಣಬಹುದು ಎನ್ನುತ್ತಿದ್ದಾರೆ ವ್ಯಾಪಾರಿಗಳು.
ಬೆಂಗಳೂರಲ್ಲಿ 120 ರೂ ದಾಟಿದೆ ಬಾಳೆಹಣ್ಣ ದರ
ಸಾಲು ಸಾಲು ಹಬ್ಬ ಹರಿದಿನಗಳ ಆರಂಭವಾದ ಕೂಡಲೇ, ದೇವರ ನೈವೇದ್ಯಕ್ಕೆ ಬಳಕೆಯಾಗುವ ಪುಟ್‌ಬಾಳೆ, ಏಲಕ್ಕಿ ಬಾಳೆ ಹಣ್ಣುಗಳ ದರ ಏರಿಕೆಯಾಗಿದೆ. ಈ ಸಲ ಏರಿಕೆ ತುಸು ಹೆಚ್ಚೇ ಎನ್ನುವಂತಿದೆ. ಗಣೇಶನ ಹಬ್ಬಕ್ಕೆ ಇನ್ನು ಒಂದು ವಾರ ಇದೆ. ಅದಾಗಲೇ ಪುಟ್‌ಬಾಳೆ ಅಥವಾ ಏಲಕ್ಕಿ ಬಾಳೆಹಣ್ಣಿನ ದರ ಕಿಲೋಗೆ 120 ರೂಪಾಯಿ ದಾಟಿದೆ. ಇದು ಗಣೇಶನ ಹಬ್ಬದ ಸಂದರ್ಭದಲ್ಲಿ 150 ರೂಪಾಯಿ ಆದರೂ ಅಚ್ಚರಿ ಇಲ್ಲ ಎನ್ನುತ್ತಿದ್ಧಾರೆ ಗಿರಿನಗರದ ತರಕಾರಿ ವ್ಯಾಪಾರಿ ಚಂದ್ರು.
ಹಬ್ಬ ಹರಿದಿನಗಳ ಸಂದರ್ಭದಲ್ಲಿ ಬಡ, ಮಧ್ಯಮ ವರ್ಗದವರು ಹೆಚ್ಚಾಗಿ ಹಣ್ಣುಹಂಪಲು ಖರೀದಿಸುತ್ತಾರೆ. ವಿಶೇಷವಾಗಿ ಪುಟ್ ಬಾಳೆ (ಏಲಕ್ಕಿ ಬಾಳೆ) ಹಣ್ಣಿಗೆ ಹೆಚ್ಚು ಬೇಡಿಕೆ. ಈ ಬಾರಿ ಬೇಡಿಕೆ ತಕ್ಕಂತೆ ಪುಟ್ ಬಾಳೆ ಹಣ್ಣು ಪೂರೈಕೆ ಇಲ್ಲ. ರಾಜ್ಯದಲ್ಲಿ ಅತಿವೃಷ್ಟಿ ಕಾರಣ ಬಾಳೆ ಬೆಳೆಗೆ ಹಾನಿಯಾಗಿದೆ. ಇಳುವರಿಯೂ ಶೇಕಡ 50 ಕುಸಿತ ಕಂಡಿದೆ. ಆದ್ದರಿಂದ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ ಎಂಬ ವಿವರಣೆ ಕೊಡ್ತಾರೆ ಚಂದ್ರು.
ನೆರೆ ರಾಜ್ಯಗಳಿಂದ ಬೆಂಗಳೂರಿಗೆ ಏಲಕ್ಕಿ, ಪಚ್ಚೆಬಾಳೆ
ಬೆಂಗಳೂರಿಗೆ ಏಲಕ್ಕಿ ಮತ್ತು ಪಚ್ಚೆಬಾಳೆ ನೆರೆಯ ಆಂಧ್ರ, ತೆಲಂಗಾಣದಿಂದ ಬರುತ್ತದೆ. ಅದರಲ್ಲೂ ಈ ಬಾರಿ ಪೆಚ್ಚೆಬಾಳೆ ಹೆಚ್ಚು ಬರುತ್ತಿದ್ದು, ಈಗ ಜನ ಪಚ್ಚೆಬಾಳೆಯನ್ನೇ ಖರೀದಿಸುತ್ತಿದ್ದಾರೆ. ಕರ್ನಾಟಕದಲ್ಲೂ ಪಚ್ಚೆಬಾಳೆ ಬೆಳೆಯತ್ತಿದ್ದು, ಈಗ ಇಳುವರಿ ಕಡಿಮೆಯಾದರೂ ಉತ್ತಮ ದರ ಸಿಗುತ್ತಿರುವ ಕಾರಣ ಚಿಂತೆ ಇಲ್ಲ ಎನ್ನುತ್ತಿದ್ದಾರೆ ಬೆಂಗಳೂರು ಹೊರವಲಯದ ಬಾಳೆ ಕೃಷಿಕ ರಾಜಣ್ಣ.
ಕಳೆದ ವರ್ಷ ಇದೇ ಅವಧಿಯಲ್ಲಿ ಏಲಕ್ಕಿ ಬಾಳೆ ಹಣ್ಣು ಕಿಲೋಗೆ 20 ರೂಪಾಯಿಯಿಂದ 25 ರೂಪಾಯಿ ಇತ್ತು. ಈಗ ಇದು ಕೆಲವು ಕಡೆ 130 ರೂಪಾಯಿ ತಲುಪಿದೆ. ಸಗಟು ಮಾರಾಟಗಾರರು ರೈತರಿಂದ 60 ರೂಪಾಯಿಯಿಂದ 80 ರೂಪಾಯಿ ಕೊಟ್ಟು ಬಾಳೆ ಹಣ್ಣು ಖರೀದಿಸುತ್ತಾರೆ. ಬಳಿಕ 120 ರೂಪಾಯಿಯಿಂದ 130 ರೂಪಾಯಿಗೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಕೆಆರ್ ಮಾರುಕಟ್ಟೆಯ ಬಾಳೆಹಣ್ಣು ಮಂಡಿ ವ್ಯಾಪಾರಿಯೊಬ್ಬರು.
ಪಚ್ಚೆ ಬಾಳೆಹಣ್ಣು ಕಳೆದ ವರ್ಷ ಇದೇ ಅವಧಿಯಲ್ಲಿ ಕಿಲೋಗೆ 20 ರೂಪಾಯಿ ಕೊಟ್ಟು ರೈತರಿಂದ ಖರೀದಿಸುತ್ತಿದ್ದ ಸಗಟು ವ್ಯಾಪಾರಿಗಳು ಈ ಬಾರಿ 40 ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಗ್ರಾಹಕರಿಗೆ 80 ರೂಪಾಯಿಗೆ ಒಂದು ಕಿಲೋ ಹಣ್ಣು ಮಾರಾಟ ಮಾಡುತ್ತಾರೆ. ಬಹುತೇಕ ಸಗಟು ವ್ಯಾಪಾರಿಗಳು ಬಾಳೆ ಕೃಷಿಕರಿಂದ ಹಸಿ ಬಾಳೆ ಕಾಯಿಯನ್ನೇ ಖರೀದಿಸಿ ಸಾಗಿಸುತ್ತಾರೆ. ಅದು ಒಂದೆರಡು ದಿನದಲ್ಲಿ ಹಣ್ಣಾಗುವ ಹಾಗೆಯೇ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿಬಿಡುತ್ತಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ.
ಈ ಬಾರಿ ಹಬ್ಬ ಮಾಡಿದಂಗೇನೆ. ಹಣ್ಣು ಹಂಪಲು ಎಲ್ಲ ಏನ್ ರೇಟು ಅಂತೀರಿ, ಬಾಳೆ ಹಣ್ಣು ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಸರಿ ಡಬಲ್ ಆಗಿದೆ ಎಂದು ಮನೆಗೆಲಸಕ್ಕೆ ಬರುವ ಸರೋಜಮ್ಮ ಹೇಳ್ತಾ ಇರೋದು ಬೆಲೆ ಏರಿಕೆ ಬಿಸಿ ಬಡ, ಮಧ್ಯಮ ವರ್ಗವನ್ನು ಕಾಡುತ್ತಿರುವುದನ್ನು ಬಿಂಬಿಸುವಂತಿದೆ.