logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಿನ ಈ ಪ್ರದೇಶದಲ್ಲಿ ಸೆಪ್ಟೆಂಬರ್ 8ರಂದು ಮದ್ಯ ಮಾರಾಟ ಬಂದ್: ಕಾರಣ ಏನು

Bengaluru News: ಬೆಂಗಳೂರಿನ ಈ ಪ್ರದೇಶದಲ್ಲಿ ಸೆಪ್ಟೆಂಬರ್ 8ರಂದು ಮದ್ಯ ಮಾರಾಟ ಬಂದ್: ಕಾರಣ ಏನು

Priyanka Gowda HT Kannada

Sep 03, 2024 05:00 PM IST

google News

ಸೆಪ್ಟೆಂಬರ್ 8 ರಂದು ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ನಲ್ಲಿ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಯಲಿದೆ. 

  • ಸೆಪ್ಟೆಂಬರ್ 8 ರಂದು ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ (St. Mary's Church)ನಲ್ಲಿ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಗೊಳಿಸಲಾಗಿದೆ. (ವರದಿ: ಎಚ್. ಮಾರುತಿ)

ಸೆಪ್ಟೆಂಬರ್ 8 ರಂದು ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ನಲ್ಲಿ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಯಲಿದೆ. 
ಸೆಪ್ಟೆಂಬರ್ 8 ರಂದು ಬೆಂಗಳೂರಿನ ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ನಲ್ಲಿ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಯಲಿದೆ.  (ANI)

ಬೆಂಗಳೂರು:  ಬೆಂಗಳೂರು ನಗರ ಪೊಲೀಸ್‌ ಕಮೀಷನರೇಟ್ ವ್ಯಾಪ್ತಿಯ ಪೂರ್ವ ವಿಭಾಗದ ಶಿವಾಜಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿವಾಜಿನಗರದ ಸೇಂಟ್ ಮೇರಿ ಚರ್ಚ್‌ನಲ್ಲಿ ಆರೋಗ್ಯ ಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಹಾಗೂ ಮೆರವಣಿಗೆ ಸೆಪ್ಟೆಂಬರ್ 8 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷದವರೆಗೆ ಜನರು ಸೇರುವ ಸಂಭವವಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜಾರಿಗೊಳಿಸಲಾಗಿದೆ.

ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಮಾಡಬಹುದಾದ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೆಪ್ಟೆಂಬರ್ 8 ರಂದು ಮುಂಜಾನೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಎಲ್ಲಾ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್ ಮತ್ತು ವೈನ್‌ ಶಾಪ್, ಪಬ್, ಎಂಎಸ್ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.

ಇನ್ನು ರಥೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿವಿಧ ಭಾಷೆಗಳಲ್ಲಿ ಪ್ರಾರ್ಥನೆಗಳು ಜರುಗಲಿವೆ. ನಂತರ ಬೃಹತ್‌ ತೇರಿನಲ್ಲಿ ಆರೋಗ್ಯ ಮಾತೆಯ ಮೆರವಣಿಗೆಯು ಸೇಂಟ್ ಮೇರಿ ಚರ್ಚ್‌ನಿಂದ ಪ್ರಾರಂಭವಾಗಿ ಎಂ.ಕೆ.ಸ್ಟ್ರೀಟ್‌, ಶಿವಾಜಿ ರಸ್ತೆ, ಬ್ರಾಡ್‌ವೇ ರಸ್ತೆ, ರಸೆಲ್ ಮಾರ್ಕೇಟ್ ಮತ್ತು ನರೋನ್ಹಾ ರಸ್ತೆ ಮಾರ್ಗವಾಗಿ ಮರಳಿ ಚರ್ಚ್‌ಗೆ ಬರಲಿದೆ.

ರೇಷ್ಮೆ ಸೀರೆ ಕಳ್ಳಿಯರ ಬಂಧನ

ಬೆಂಗಳೂರಿನ ಜೆ.ಪಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಸಿಲ್ಕ್ ಹೌಸ್‌ವೊಂದರಲ್ಲಿ ಸೀರೆಗಳನ್ನು ಕಳವು ಮಾಡುತ್ತಿದ್ದ 6 ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಈ ಮಹಿಳೆಯರು ರೇಷ್ಮೆ ಸೀರೆಗಳ ಖರೀದಿ ನೆಪದಲ್ಲಿ ಆಗಮಿಸಿ ವಿವಿಧ ಬಗೆಯ ಸೀರೆಗಳನ್ನು ನೋಡುತ್ತಿದ್ದರು. ಈ ವೇಳೆ ಕೆಲಸದವರ ಗಮನವನ್ನು ಬೇರೆಡೆ ಸೆಳೆದು, ಸೀರೆ ಕಳವುಗೈದಿದ್ದಾರೆ. ಆರು ಮಹಿಳೆಯರ ಪೈಕಿ ಇಬ್ಬರು ಮಹಿಳೆಯರು ಅವರು ಧರಿಸಿದ್ದ ಸೀರೆಯೊಳಗೆ 8 ರೇಷ್ಮೆ ಸೀರೆಗಳನ್ನು ಬಚ್ಚಿಟ್ಟುಕೊಂಡು ಎಸ್ಕೇಪ್ ಆಗಿದ್ದರು.

ಇನ್ನುಳಿದ ನಾಲ್ವರು ಮಹಿಳೆಯರು ಅಂಗಡಿಯಲ್ಲೇ ಉಳಿದು ಇತರೆ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡುವಂತೆ ನಟಿಸುತ್ತಾ, ಮತ್ತೊಮ್ಮೆ ಕೆಲಸದವರ ಗಮನವನ್ನು ಬೇರೆಡೆ ಸೆಳೆದು, 10 ಸೀರೆಗಳನ್ನು ಕಳವುಗೈದು ಎಸ್ಕೇಪ್ ಆಗಲು ಮುಂದಾಗಿದ್ದಾರೆ. ಆ ವೇಳೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಸಂಶಯ ಬಂದು ಕೂಡಲೇ ಅವರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ರೇಷ್ಮೆ ಸೀರೆಗಳು ಪತ್ತೆಯಾಗಿವೆ.

ಕೂಡಲೇ ಕಳ್ಳಿಯರನ್ನು ಕದ್ದ ಸೀರೆಗಳ ಸಹಿತ ಪೊಲೀಸರಿಗೊಪ್ಪಿಸಿ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಈ ಹಿಂದೆಯೂ ಸೀರೆ ಕಳ್ಳತನ ಮಾಡಿರುವ ಬಗ್ಗೆ ತಿಳಿದಿ ಬಂದಿದೆ. ಆಗಸ್ಟ್ 8 ರಂದು ಜೆ.ಪಿ.ನಗರದಲ್ಲಿರುವ ಸಿಲ್ಕ್ ಹೌಸ್ ಒಂದರಲ್ಲಿ 10 ರೇಷ್ಮೆ ಸೀರೆಗಳು, ಆಗಸ್ಟ್ 24ರಂದು ಜಯನಗರದ ಸಿಲ್ಕ್ ಹೌಸ್‍ನಲ್ಲಿ 10 ರೇಷ್ಮೆ ಸೀರೆಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳ್ಳಿಯರಿಂದ ಸುಮಾರು 17.50 ಲಕ್ಷ ರೂಪಾಯಿ ಮೌಲ್ಯದ 38 ರೇಷ್ಮೆ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ