logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಸಮಸ್ಯೆ; ಖಾಸಗಿ ವಾಟರ್ ಟ್ಯಾಂಕರ್‌ ನೋಂದಣಿಗೆ ಬಿಬಿಎಂಪಿ ಕ್ರಮ, ಮಾ 7 ಡೆಡ್‌ಲೈನ್‌

ಬೆಂಗಳೂರು ನೀರಿನ ಸಮಸ್ಯೆ; ಖಾಸಗಿ ವಾಟರ್ ಟ್ಯಾಂಕರ್‌ ನೋಂದಣಿಗೆ ಬಿಬಿಎಂಪಿ ಕ್ರಮ, ಮಾ 7 ಡೆಡ್‌ಲೈನ್‌

Umesh Kumar S HT Kannada

Feb 29, 2024 10:26 AM IST

google News

ಬಿಬಿಎಂಪಿ (ಎಡಚಿತ್ರ), ನೀರಿನ ಟ್ಯಾಂಕರ್‌ಗಳು (ಬಲಚಿತ್ರ).

  • ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳತೊಡಗಿದೆ. ಖಾಸಗಿ ಟ್ಯಾಂಕರ್‌ಗಳ ಕುರಿತು ದೂರುಗಳು ಹೆಚ್ಚಾಗಿದ್ದು, ಅವುಗಳಿಗೆ ಮೂಗುದಾರ ಹಾಕಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಟ್ಯಾಂಕರ್‌ಗಳನ್ನು ನಿಯಮದ ಚೌಕಟ್ಟಿನೊಳಗೆ ತರುವುದಕ್ಕಾಗಿ ಮಾ.7ರೊಳಗೆ ನೋಂದಣಿ ಮಾಡಿಸಲು ಸೂಚಿಸಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬಿಬಿಎಂಪಿ (ಎಡಚಿತ್ರ), ನೀರಿನ ಟ್ಯಾಂಕರ್‌ಗಳು (ಬಲಚಿತ್ರ).
ಬಿಬಿಎಂಪಿ (ಎಡಚಿತ್ರ), ನೀರಿನ ಟ್ಯಾಂಕರ್‌ಗಳು (ಬಲಚಿತ್ರ).

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಈ ಕೊರತೆಯನ್ನು ಖಾಸಗಿ ಟ್ಯಾಂಕರ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಖಾಸಗಿ ಟ್ಯಾಂಕರ್‌ ಮಾಫಿಯಾವನ್ನು ನಿಯಂತ್ರಿಸಲು ಬಿಬಿಎಂಪಿ ಮುಂದಾಗಿದೆ. ಹೀಗಾಗಿ, ಎಲ್ಲ ಟ್ಯಾಂಕರ್‌ಗಳು ಮಾರ್ಚ್ 7ರೊಳಗೆ ನೋಂದಣಿಯನ್ನು ಮಾಡಿಕೊಳ್ಳಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸೂಚನೆ ನೀಡಿದೆ. ಒಂದು ವೇಳೆ ವಿಫಲವಾದಲ್ಲಿ ಅಂತಹ ಟ್ಯಾಂಕರ್‌ಗಳನ್ನು 110 ಹಳ್ಳಿಗಳಿಗೆ ಉಚಿತವಾಗಿ ನೀರು ಸರಬರಾಜು ಮಾಡಲು ಬಳಸಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.

ಖಾಸಗಿ ಟ್ಯಾಂಕರ್‌ಗಳ ಕುರಿತು ನಾಗರಿಕರು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿಗೆ (ಬಿಡಬ್ಲ್ಯೂ ಎಸ್ ಎಸ್ ಬಿ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ದೂರುಗಳನ್ನು ಸಲ್ಲಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಎರಡೂ ಸಂಸ್ಥೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಬಿಡಬ್ಲ್ಯೂ ಎಸ್ ಎಸ್ ಬಿ ಮತ್ತು ಬಿಬಿಎಂಪಿ ಆಯುಕ್ತರು ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಒಂದು ಟ್ಯಾಂಕರ್ ನೀರಿನ ಬೆಲೆ ಸರಾಸರಿ 2000 ರೂಪಾಯಿ ದಾಟಿದೆ. ಇದರಿಂದ ಎಚ್ಚೆತ್ತುಕೊಂಡ ಸರಕಾರ ಈ ಟ್ಯಾಂಕರ್ ಉದ್ಯಮವನ್ನು ನಿಯಂತ್ರಿಸುವ ಮೊದಲ ಹಂತವಾಗಿ ಮಾ.7ರೊಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದೆ.

ಎರಡು ಮೂರು ದಿನದೊಳಗೆ ಟ್ಯಾಂಕರ್ ನೀರು ದರ ನಿಗದಿ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗಷ್ಟೇ ಬೆಂಗಳೂರಿನ ಶೇ.25ರಷ್ಟು ನೀರಿನ ಬೇಡಿಕೆಯನ್ನು ಖಾಸಗಿ ಟ್ಯಾಂಕರ್ ಗಳು ಪೂರೈಸುತ್ತಿವೆ. ಖಾಸಗಿ ಟ್ಯಾಂಕರ್ ಗಳ ಮಾಲೀಕರು ಪರಿಸ್ಥಿತಿಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಬೆಲೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದ್ದರು.

ಇದರ ಮುಂದುವರಿದ ಭಾಗವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಂದಿನ ಎರಡು ದಿನಗಳಲ್ಲಿ ಸಂಬಂಧಪಟ್ಟ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಪ್ರತಿ ಟ್ಯಾಂಕರ್ ನೀರಿನ ಬೆಲೆಯನ್ನೂ ನಿಗದಿ ಮಾಡುವುದಾಗಿ ತಿಳಿಸಿದ್ದಾರೆ.

ಟ್ಯಾಂಕರ್ ನೀರಿನ ಬೆಲೆಯನ್ನು ವಿಪರೀತ ಹೆಚ್ಚಿಸಲಾಗಿದೆ. ಅದರಲ್ಲೂ ಕಳೆದ 15 ದಿನಗಳಲ್ಲಿ ರಾಕೆಟ್ ವೇಗದಲ್ಲಿ ಬೆಲೆ ಹೆಚ್ಚಳವಾಗಿದೆ ಎಂಬ ಅನೇಕ ದೂರುಗಳು ಕೇಳಿ ಬಂದಿದ್ದವು. ಆದ್ದರಿಂದ ಈ ಉದ್ಯಮವನ್ನು ನಿಯಂತ್ರಿಸುವ ಮೊದಲ ಹೆಜ್ಜೆಯಾಗಿ ನೋಂದಣಿ ಮಾಡುವ ಕ್ರಮವನ್ನು ಜಾರಿಗೆ ತಂದಿದ್ಧೇವೆ ಎಂದರು.

ನೀರಿನ ಟ್ಯಾಂಕರ್ ಉದ್ಯಮವನ್ನು ವ್ಯಾಪಾರ ಎಂದು ಪರಿಗಣಿಸುತ್ತಿರಲಿಲ್ಲ. ಟ್ಯಾಂಕರ್‌ಗಳನ್ನು ಬಿಡಬ್ಲ್ಯೂ ಎಸ್ ಎಸ್ ಬಿ ಅಥವಾ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡಿರಲಿಲ್ಲ. ಆದರೆ ಸಾರಿಗೆ ಇಲಾಖೆಯ ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿ 3,500 ಟ್ಯಾಂಕರ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿದು ಬಂದಿದೆ.

ನಾಳೆಯಿಂದ ನೀರಿನ ಟ್ಯಾಂಕರ್‌ಗಳ ಆನ್‌ಲೈನ್ ನೋಂದಣಿ

ನೀರಿನ ಟ್ಯಾಂಕರ್‌ಗಳ ಆನ್‌ಲೈನ್ ನೋಂದಣಿಯನ್ನು ಮಾರ್ಚ್ 1 ರಿಂದ ಆರಂಭಿಸಲಿದ್ದೇವೆ. ಎಲ್ಲಾ ಟ್ಯಾಂಕರ್‌ಗಳು ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳಲೇಬೇಕು. ಒಂದು ವೇಳೆ ಮಾ.7 ರೊಳಗೆ ವಿಫಲವಾದರೆ ಅಂತಹ ಟ್ಯಾಂಕರ್ ಗಳನ್ನು 110 ಹಳ್ಳಿಗಳಿಗೆ ನಿರು ಸರಬರಾಜು ಮಾಡಲು ಬಳಸಿಕೊಳ್ಳುವುದಾಗಿ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮುಂದಿನ ಒಂದರೆಡು ದಿನಗಳಲ್ಲಿ ಎಲ್ಲಾ ಖಾಸಗಿ ಟ್ಯಾಂಕರ್ ಗಳ ಮಾಲೀಕರ ಸಭೆಯನ್ನು ಕರೆಯುತ್ತೇವೆ. ಅವರೊಂದಿಗೆ ಚರ್ಚಿಸಿ ಅವರಿಗೂ ನಷ್ಟ ಉಂಟಾಗದ ರೀತಿಯಲ್ಲಿ ಬೆಲೆಯನ್ನು ನಿಗದಿಡಿಸುತ್ತೇವೆ ಎಂದೂ ತಿಳಿಸಿದರು.

ಕೆಲವು ಪ್ರದೇಶಗಳಲ್ಲಿ ನೀರಿನ ಬೆಲೆಯನ್ನು ವಿಪರೀತ ಹೆಚ್ಚಿಸಲಾಗಿದೆ. ಇದು ಸರಿಯಾದ ಕ್ರಮ ಅಲ್ಲ. ಅವರ ಖರ್ಚುವೆಚ್ಚದ ಬೆಲೆಯನ್ನು ಪಡೆದುಕೊಂಡು ಮಾರುಕಟ್ಟೆ ದರದ ಆಧಾರದ ಮೇಲೆ ಬೆಲೆಯನ್ನು ನಿಗಧಿಪಡಿಸಲಾಗುತ್ತದೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುತ್ತದೆ ಎಂದು ಜಲ ಮಂಡಲಿ ತಿಳಿಸಿದೆ.

ಆದರೆ ಸರಕಾರದ ಈ ಕ್ರಮವನ್ನು ಖಾಸಗಿ ಟ್ಯಾಂಕರ್ ಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬೋರ್ ವೆಲ್ ಗಳಿಂದ ನೀರನ್ನು ಹೊರ ತೆಗೆಯುವ ಬೆಲೆ ಹೆಚ್ಚಾಗಿದೆ.20 ಕಿಮೀ ವರೆಗೂ ನೀರು ಸರಬರಾಜು ಮಾಡುತ್ತಿದ್ದೇವೆ. ನಮ್ಮನ್ನು ಮಾಫಿಯಾ ಎಂದು ಕರೆಯುವುದನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾರೆ. ಸರ್ಕಾರ ನಾಗರಿಕರನ್ನು ಈ ಮಾಫಿಯಾದಿಂದ ಯಾವ ರೀತಿ ರಕ್ಷಿಸುತ್ತದೆ ಎಂದು ಕಾದು ನೋಡಬೇಕಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ