logo
ಕನ್ನಡ ಸುದ್ದಿ  /  ಕರ್ನಾಟಕ  /  ಸಿಗರೇಟ್ ತುಂಡು ಹಾಕಲು ಪ್ರತ್ಯೇಕ ಕಸದ ಬುಟ್ಟಿ; ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಬಿಬಿಎಂಪಿ ರಾಯಭಾರಿ; ರಾಜೀವ ಹೆಗಡೆ ಬರಹ

ಸಿಗರೇಟ್ ತುಂಡು ಹಾಕಲು ಪ್ರತ್ಯೇಕ ಕಸದ ಬುಟ್ಟಿ; ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಬಿಬಿಎಂಪಿ ರಾಯಭಾರಿ; ರಾಜೀವ ಹೆಗಡೆ ಬರಹ

Jayaraj HT Kannada

Oct 02, 2024 06:35 AM IST

google News

ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಬಿಬಿಎಂಪಿ ರಾಯಭಾರಿ; ರಾಜೀವ ಹೆಗಡೆ ಬರಹ

    • ಸಿಗರೇಟ್ ತಯಾರಕ ಐಟಿಸಿ ಸಹಯೋಗದೊಂದಿಗೆ, ಬೆಂಗಳೂರು ನಗರದಲ್ಲಿ ಸಿಗರೇಟ್ ಬಟ್ಸ್ ಸಂಗ್ರಹಕ್ಕಾಗಿ ನಗರದ ಹಾಟ್ ಸ್ಪಾಟ್‌ಗಳಲ್ಲಿ ಪ್ರತ್ಯೇಕ ‌ಬಿನ್‌ಗಳನ್ನು ಇರಿಸಲು‌ ಬಿಬಿಎಂಪಿ ಮುಂದಾಗಿದೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜೀವ ಹೆಗಡೆ ಅವರ ಬರಹ ಹೀಗಿದೆ.
ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಬಿಬಿಎಂಪಿ ರಾಯಭಾರಿ; ರಾಜೀವ ಹೆಗಡೆ ಬರಹ
ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಬಿಬಿಎಂಪಿ ರಾಯಭಾರಿ; ರಾಜೀವ ಹೆಗಡೆ ಬರಹ (Pixabay)

ಬೆಂಗಳೂರು ನಗರದಾದ್ಯಂತ ಸಿಗರೇಟ್ ಹಾಗೂ ಬೀಡಿ ತುಂಡುಗಳನ್ನು ಎಸೆಯುವುದಕ್ಕೆಂದೇ ಪ್ರತ್ಯೇಕ ಬುಟ್ಟಿಗಳನ್ನು (ಕಸದ ಬುಟ್ಟಿಯಂತೆ) ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಕಸ ವಿಲೇವಾರಿ ಒಂದು ದೊಡ್ಡ ಸವಾಲು. ಕಸದೊಂದಿಗೆ ವಿಲೇವಾರಿ ವೇಳೆ ಸವಾಲಾಗಿ ಕಾಣುವ ಸಿಗರೇಟ್ ಮತ್ತು ಬೀಡಿ ತುಂಡುಗಳ ವೈಜ್ಞಾನಿಕ ವಿಲೇವಾರಿ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2022ರಲ್ಲೇ ಮಾರ್ಗಸೂಚಿ ರೂಪಿಸಿತ್ತು. ಆದರೆ ಆ ಮಾರ್ಗಸೂಚಿಯು ಉದ್ಯಾನ ನಗರಿಯಲ್ಲಿ ಜಾರಿಯಾಗಿಲ್ಲ. ಇದೀಗ ಬಿಬಿಎಂಪಿ ಬಿನ್‌ಗಳನ್ನು ಇಡಲು ಮುಂದಾಗಿರುವುದು ಹಲವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಕಷ್ಟ. ಇದರಿಂದ ಪರಿಸರಕ್ಕೆ ಆಗುವ ಅನಾಹುತಗಳನ್ನು ತಡೆಯಲು ಬಿಬಿಎಂಪಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸಿಪಿಸಿಬಿ ಮಾರ್ಗಸೂಚಿಯಂತೆ ಸಿಗರೇಟ್ ತುಂಡುಗಳ ಸಂಗ್ರಹಕ್ಕೆ ಸೂಕ್ಷ್ಮ ಯೋಜನೆ ರೂಪಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಈ ಕುರಿತು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP), ಸಿಗರೇಟ್ ತಯಾರಕ ITC ಸಹಯೋಗದೊಂದಿಗೆ, ಸಿಗರೇಟ್ ತುಂಡುಗಳ (ಬಟ್) ಸಂಗ್ರಹಕ್ಕಾಗಿ ನಗರದ ಹಾಟ್ ಸ್ಪಾಟ್‌ಗಳಲ್ಲಿ ಪ್ರತ್ಯೇಕ ‌ಬಿನ್‌ಗಳನ್ನು ಇರಿಸಲು ಮುಂದಾಗಿದೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಜನರಿಗೆ ವಿಷ ಉಣಿಸಿ ಕ್ಯಾನ್ಸರ್‌ ಬರಿಸುತ್ತಿರುವ ಕಂಪನಿಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ ಎಂದು ಪತ್ರಕರ್ತ ರಾಜೀವ ಹೆಗಡೆ ಆರೋಪಿಸಿದ್ದಾರೆ. ಅವರ ಬರಹ ಹೀಗಿದೆ.

ಸರ್ಕಾರ ನಡೆಸುವ ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆಯು ಸಮಾಜದಿಂದ ವಿಮುಖವಾಗಿ ಆಲೋಚಿಸಲು ಆರಂಭಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಎಂದಿನಂತೆ ಬಿಬಿಎಂಪಿ ತಾಜಾ ಉದಾಹರಣೆ ನೀಡಿದೆ. ಸಿಗರೇಟ್‌ ಬಟ್ಸ್‌ ಹಾಕಲೆಂದೇ ಬೆಂಗಳೂರಿನ ʼಹಾಟ್‌ಸ್ಟಾಟ್‌ʼಗಳಲ್ಲಿ ಪ್ರತ್ಯೇಕ ಡಸ್ಟ್‌ಬಿನ್‌ ಇಡುವ ಕೆಲಸ ಮಾಡುತ್ತಿದೆ. ಜನರಿಗೆ ವಿಷ ಉಣಿಸಿ ಕ್ಯಾನ್ಸರ್‌ ಬರಿಸುತ್ತಿರುವ ಕಂಪನಿಯೊಂದಿಗೆ ಬಿಬಿಎಂಪಿಯು ಈ ಸಂಬಂಧ ಒಪ್ಪಂದ ಮಾಡಿಕೊಂಡು, ಕಸದ ಬುಟ್ಟಿಯನ್ನು ಇರಿಸಲು ಮುಂದಾಗಿದೆ. ಮೇಲ್ನೋಟಕ್ಕೆ ಇದೊಂದು ಸಾಮಾಜಿಕ ಕಳಕಳಿ ಹಾಗೂ ಸ್ವಚ್ಛತೆಗೆ ಪೂರಕವಾಗಿರುವ ಅಂಶವೆಂದು ತಲೆಯಿಲ್ಲದವರು ಪರಿಗಣಿಸಬಹುದು. ಆದರೆ ಸಮಾಜದ ಆರೋಗ್ಯ ಹಾಗೂ ಸಾರ್ವಜನಿಕ ಬದುಕಿನ ಬಗ್ಗೆ ಸಣ್ಣ ಕಾಳಜಿ ಇರುವ ಯಾವುದೇ ವ್ಯಕ್ತಿಯು ಇಂತಹ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಿರುವ ಕಾನೂನಿನ ಆಶಯಕ್ಕೆ ಈ ಒಪ್ಪಂದ ತದ್ವಿರುದ್ಧ ಆಶಯವನ್ನು ಹೊಂದಿದೆ.

ಧೂಮಪಾನಿಗಳಿಗೆ ಅಧಿಕೃತ ಅನುಮತಿ

ಈ ಒಪ್ಪಂದದ ಪ್ರಕಾರ ನಗರದಲ್ಲಿ ಒಂದಿಷ್ಟು ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಕಸದ ಬುಟ್ಟಿ ಹಾಕಲಾಗುತ್ತದೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಕಾರಣದಿಂದ ಶಾಲೆ, ಆಸ್ಪತ್ರೆ, ದೇವಸ್ಥಾನಗಳು ಎನ್ನುವ ಯಾವುದೇ ಬೇದಭಾವವಿಲ್ಲದೇ ತಂಬಾಕು ಉತ್ಪನ್ನಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದರ ಪರಿಣಾಮದಿಂದ ನಾವು ಅಲ್ಲಿ ನಡೆದುಕೊಂಡು ಹೋಗುವಾಗ, ಇಲ್ಲೇಕೆ ಧೂಮಪಾನ ಮಾಡುತ್ತಿದ್ದೀರಿ ಎಂದು ಕೇಳಿದರೆ, 'ಇದು ಸರ್ಕಾರದ ರಸ್ತೆ, ನಿಮ್ಮ ಅಪ್ಪನಮನೆ ರಸ್ತೆಯಲ್ಲ' ಎಂದು ಹೇಳುತ್ತಾರೆ. ಒಂದೊಮ್ಮೆ ಈ ಕಸದ ಬುಟ್ಟಿಯನ್ನು ಪ್ರತಿಷ್ಠಾಪಿಸಿದರೆ, ಧೂಮಪಾನಿಗಳಿಗೆ ಅಧಿಕೃತ ಮುದ್ರೆ ನೀಡಿದಂತಾಗುತ್ತದೆ. ಏಕೆಂದರೆ ಧೂಮಪಾನ ಮಾಡುವ ಬುದ್ಧಿವಂತರು ಎಂದಿಗೂ ಬಟ್ಸ್‌ಗಳನ್ನು ಕಿಸೆಯಲ್ಲಿರಿಸಿಕೊಂಡು ಓಡಾಡುವುದಿಲ್ಲ. ಅದು ಪ್ರಾಯೋಗಿಕವಾಗಿ ಸಾಧ್ಯವೂ ಇಲ್ಲ. ಆಗ ಬಿಬಿಎಂಪಿಯ ಕಸದ ಬುಟ್ಟಿ ಇರುವ ಹಾಟ್‌ಸ್ಪಾಟ್‌ ಎನ್ನುವುದು ಅನಧಿಕೃತ ಧೂಮಪಾನದ ಅಡ್ಡೆಯಾಗುತ್ತದೆ.

ಬಿಬಿಎಂಪಿ ಮಾಡಬೇಕಿರುವುದು ಏನು?

ಸಮಾಜದ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಧೂಮಪಾನವನ್ನೇ ಸಾರ್ವಜನಿಕ ಪ್ರದೇಶಗಳಲ್ಲಿ ನಿಷೇಧಿಸಿರುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇದರ ಜತೆಗೆ ಅಲ್ಲಲ್ಲಿ ʼಧೂಮಪಾನ ವಲಯʼವನ್ನು ಸೃಷ್ಟಿಸಿಬಿಡಿ. ಅವರು ಬಿಟ್ಟ ಹೊಗೆಯನ್ನು ಅವರೇ ತೆಗೆದುಕೊಂಡು ಮಜಾ ಮಾಡಲಿ. ನಾವಾದರೂ ಆರಾಮಾಗಿ ಓಡಾಡಬಹುದು. ಅಲ್ಲಿಯೇ ಪಕ್ಕದಲ್ಲಿ ಬಟ್ಸ್‌ ಹಾಕುವ ಕಸದ ಬುಟ್ಟಿಯನ್ನು ಹಾಕಿಬಿಡಿ. ಬಿಬಿಎಂಪಿಯ ಸ್ವಚ್ಛತಾ ಕಾಳಜಿಗೂ ಬೆಲೆ ಬರುತ್ತದೆ. ಇದನ್ನು ಹೊರತುಪಡಿಸಿ ಬಾರ್‌-ರೆಸ್ಟೋರೆಂಟ್, ಪಬ್‌ನ ಹೊರಗಡೆ ಬೇಕಾದಷ್ಟು ಬಟ್ಸ್‌ ಕಸದಬುಟ್ಟಿಗಳನ್ನು ಇಡಿ. ಹಾಗೆಯ ಕಸ ವಿಲೇವಾರಿ ಮಾಡುವ ವಾಹನದ ಜತೆಗೆ ಬಟ್ಸ್‌ ಸಂಗ್ರಹಿಸಲೆಂದೇ ಒಂದು ಚೀಲವನ್ನು ಕೊಟ್ಟುಬಿಡಿ. ಇದನ್ನೆಲ್ಲ ಬಿಟ್ಟು ಬೀದಿ ಬೀದಿಯಲ್ಲಿ ಬಟ್ಸ್‌ ಹಾಕುವ ಕಸದ ಬುಟ್ಟಿ ನಿರ್ಮಿಸಿ ದುಡ್ಡು ಹೊಡೆಯುವ ಯೋಜನೆಯನ್ನು ಮಾಡಬೇಡಿ. ಈ ಮೂಲಕ ಪುಕ್ಕಟೆಯಾಗಿ ಐಟಿಸಿಗೆ ಮತ್ತಷ್ಟು ಪ್ರಚಾರ ನೀಡಿ, ಎಲ್ಲೆಡೆ ಹೊಗೆ ಹಾಕುವ ಕಾರ್ಯಕ್ರಮಕ್ಕೆ ರಾಯಭಾರಿಗಳಾಗಬೇಡಿ.

ಕೊನೆಯದಾಗಿ; ಸಾಮಾಜಿಕ ಬದ್ಧತೆ ಹೆಸರಿನಲ್ಲಿ ತಂಬಾಕು ಉತ್ಪನ್ನ ಮಾಡುವ ಕಂಪನಿ ಹೇಗೆ ತನ್ನ ಉತ್ಪನ್ನದ ಪ್ರಚಾರ ಮಾಡುತ್ತಿದೆ ಎನ್ನುವುದನ್ನು ʼಧೂಮಂʼ ಚಿತ್ರದಲ್ಲಿ ತೋರಿಸಿದ್ದರು. ಅದೇ ಕೆಲಸವನ್ನು ಬಿಬಿಎಂಪಿ ಮೂಲಕ ಮಾಡುತ್ತಿರುವಂತಿದೆ. ದಯವಿಟ್ಟು ಜನರ ಜೀವನ ಬೆಳಗಿಸುವ ಕೆಲಸವನ್ನು ಮಾಡುವ ಕಾಳಜಿ ಇರದಿದ್ದರೂ ತೊಂದರೆಯಿಲ್ಲ, ಹೊಗೆ ಹಾಕಿಸುವ ಕೆಲಸ ಮಾಡಬೇಡಿ. ಇಂತಹ ಕೆಲಸವನ್ನು ಜಪಿಸುವ ಬದಲು, ಕಾನೂನು ಹಾಗೂ ಸಾರ್ವಜನಿಕ ದೃಷ್ಟಿಯಿದ ನೋಡುವ ಔದಾರ್ಯವನ್ನು ತೋರಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ