ಬೆಂಗಳೂರಲ್ಲಿ ತಲೆಎತ್ತಲಿವೆ 89 ಹೊಸ ಐಟಿ ಪಾರ್ಕ್‌ಗಳು; ಕೊನೆಮುಟ್ಟದ ಪ್ಲಾನಿಂಗ್ ಸಾಕು, ಮೂಲಸೌಕರ್ಯ ಒದಗಿಸಿ ಎನ್ನುತ್ತಿದ್ದಾರೆ ಬೆಂಗಳೂರಿಗರು
Aug 31, 2024 07:46 PM IST
ಬೆಂಗಳೂರಲ್ಲಿ ತಲೆಎತ್ತಲಿವೆ 89 ಹೊಸ ಐಟಿ ಪಾರ್ಕ್‌ಗಳು; ಮೂಲಸೌಕರ್ಯ ಒದಗಿಸಲು ಬೆಂಗಳೂರಿಗರ ಆಗ್ರಹ. (ಸಾಂಕೇತಿಕ ಚಿತ್ರ)
Bengaluru News; ಮುಂದಿನ ಕೆಲವು ವರ್ಷಗಳ ಅವಧಿಯಲ್ಲಿ ಬೆಂಗಳೂರಲ್ಲಿ 89 ಹೊಸ ಐಟಿ ಪಾರ್ಕ್‌ಗಳು ತಲೆಎತ್ತಲಿವೆ. ಹೀಗಾಗಿ, ಕೊನೆಮುಟ್ಟದ ಪ್ಲಾನಿಂಗ್ ಸಾಕು ಮಾಡಿ, ಮೂಲಸೌಕರ್ಯ ಒದಗಿಸಿ ಎನ್ನುತ್ತಿದ್ದಾರೆ ಬೆಂಗಳೂರಿಗರು. ಏನಿದು ವಿದ್ಯಮಾನ ಇಲ್ಲಿದೆ ವಿವರ.
ಬೆಂಗಳೂರು: ಸಿಲಿಕಾನ್ ಸಿಟಿ ಮತ್ತು ಭಾರತದ ಐಟಿ-ಬಿಟಿ ಹಬ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಬೆಂಗಳೂರಲ್ಲಿ ಮುಂದಿನ ಕೆಲವು ವರ್ಷಗಳ ಅವಧಿಯಲ್ಲಿ ಒಟ್ಟು 89 ಹೊಸ ಐಟಿ ಪಾರ್ಕ್‌ಗಳು ತಲೆ ಎತ್ತಲಿವೆ. 54 ಉದ್ಯಮಗಳು ಈ ಮಹತ್ವಾಕಾಂಕ್ಷೆಯ ಅಭಿವೃದ್ಧಿ ಯೋಜನೆಯ ನಾಯಕತ್ವವಹಿಸಿಕೊಂಡಿವೆ. ಇದು ಬೆಂಗಳೂರು ಮಹಾನಗರವನ್ನು ಟೆಕ್ನೋಲಾಜಿಕಲ್ ಹಬ್ ಆಗಿ ಬೆಳೆಸಲಿದೆ. ಅಲ್ಲದೆ, ನಗಾರಭಿವೃದ್ಧಿಯ ಬೆಳವಣಿಗೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆ ಇದೆ.
ಈ ಹೊಸ ಟೆಕ್ ಪಾರ್ಕ್‌ಗಳನ್ನು ಉತ್ತರ ವಲಯ, ಮಹದೇವಪುರ ಮತ್ತು ಬೊಮ್ಮನಹಳ್ಳಿ ಸೇರಿ ಬೆಂಗಳೂರಿನ ಹಲವು ಪ್ರಮುಖ ವಲಯಗಳಲ್ಲಿ ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿ ಆರಂಭಿಸಲಾಗುತ್ತಿದೆ. ಇದಕ್ಕೆ ಬೇಕಾದ ಅತ್ಯಾಧುನಿಕ ಮೂಲ ಸೌಲಭ್ಯಗಳ ನಿರ್ಮಾಣವು ಮುಂದಿನ ಎರಡು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದು ನಗರದ ತ್ವರಿತ ಬೆಳವಣಿಗೆ ಮತ್ತು ರೂಪಾಂತರದ ಅವಧಿಯನ್ನು ಗುರುತಿಸಲಿದೆ ಎಂಬುದು ಸರ್ಕಾರದ ಪ್ರಸ್ತುತಿ. ಕಳೆದ ಫೆಬ್ರವರಿ ತಿಂಗಳಲ್ಲಿ ಈ ಕುರಿತು ಸರ್ಕಾರ ವಿವರ ನೀಡಿತ್ತು.
ಎಲ್ಲೆಲ್ಲಿ ಐಟಿ ಪಾರ್ಕ್‌ಗಳು ತಲೆ ಎತ್ತಲಿವೆ
ಹೊಸ ಐಟಿ ಪಾರ್ಕ್‌ಗಳ ಸ್ಥಾಪನೆಯು ಪ್ರಮುಖ ಐಟಿ ಮತ್ತು ವ್ಯಾಪಾರ ತಂತ್ರಜ್ಞಾನ ಕೇಂದ್ರವಾಗಿ ಬೆಂಗಳೂರು ಬೆಳೆಯುವುದನ್ನು ಖಾತರಿಪಡಿಸಲಿದೆ. ಅಲ್ಲದೆ ಈ ಬೆಳೆಯುತ್ತಿರುವ ವಲಯವನ್ನು ಬೆಂಬಲಿಸಲು ವರ್ಧಿತ ಮೂಲಸೌಕರ್ಯದ ಅಗತ್ಯವನ್ನು ಕೂಡ ಹೇಳುತ್ತಿದೆ. ಟೆಕ್ ಪಾರ್ಕ್‌ಗಳ ನಿರ್ಮಾಣವು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ, ಮಹಾನಗರದ ಡೈನಾಮಿಕ್ ಟೆಕ್ ಉದ್ಯಮದ ವಿಕಸನವನ್ನೂ ಬಿಂಬಿಸಲಿದೆ.
ಉತ್ತರ ವಲಯದ ಯಶವಂತಪುರದಲ್ಲಿ 10ಕ್ಕೂ ಹೆಚ್ಚು ಐಟಿ ಕಂಪನಿಗಳು ಬರಲಿವೆ. ಇದು ಈ ಭಾಗವನ್ನು ಪ್ರಮುಖ ಟೆಕ್ ಹಬ್ ಆಗಿ ಅಭಿವೃದ್ಧಿಪಡಿಸಲಿದೆ. ಇನ್ನು, ವೈಟ್‌ಫೀಲ್ಡ್‌ನಲ್ಲೂ 10 ಹೊಸ ಐಟಿ ಸಂಸ್ಥೆಗಳ ಸೇರ್ಪಡೆಯಾಗಲಿದೆ. ಬೆಳ್ಳಂದೂರು ಭಾಗದಲ್ಲಿ ಐದು ಹೊಸ ಐಟಿ ಕಂಪನಿಗಳು ಬರಲಿವೆ. ತುಮಕೂರು ರಸ್ತೆ ಭಾಗದಲ್ಲಿ 2 ಹೊಸ ಐಟಿ ಪಾರ್ಕ್‌ಗಳು, ಕೋರಮಂಗಲದಲ್ಲಿ ಒಂದು ಹೊಸ ಐಟಿ ಪಾರ್ಕ್ ಸ್ಥಾಪನೆಯಾಗಲಿದೆ. ಇದಲ್ಲದೆ, ಕುಂದಲಹಳ್ಳಿಯಲ್ಲಿ ಮೂರು ಹೊಸ ಐಟಿ ಪಾರ್ಕ್‌ಗಳು ತಲೆಎತ್ತಲಿವೆ.
ಕೊನೆಮುಟ್ಟದ ಪ್ಲಾನಿಂಗ್ ಸಾಕು, ಮೂಲಸೌಕರ್ಯ ಒದಗಿಸಿ ಎನ್ನುತ್ತಿದ್ದಾರೆ ಬೆಂಗಳೂರಿಗರು
ಬೆಂಗಳೂರಲ್ಲಿ ಹೊಸ ಹೊಸ ಐಟಿ ಪಾರ್ಕ್ ಬರುವುದಕ್ಕೆ ಯಾರ ಅಡ್ಡಿಯೂ ಇಲ್ಲ. ಆದರೆ ಈಗ ಬಂದಿರುವ ಐಟಿ ಪಾರ್ಕ್‌ಗಳಿಗೆ, ಈಗಾಗಲೇ ಇರುವ ಜನರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂಬುದು ಬೆಂಗಳೂರಿಗರ ಆಗ್ರಹ.
ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಸಿಟಿಜನ್ ಮೂವ್‌ಮೆಂಟ್, ಈಸ್ಟ್ ಬೆಂಗಳೂರು ಖಾತೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಈಸ್ಟ್ ಬೆಂಗಳೂರಿನ ಸಿಟಿಜನ್ಸ್ ಮೂವ್‌ಮೆಂಟ್ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂಬ ಆಗ್ರಹದ ಅಭಿಯಾನ ನಡೆಸುತ್ತಿದ್ದು, ಮೂಲಸೌಕರ್ಯದ ಕೊರತೆಯನ್ನು ಸದಾ ಎತ್ತಿ ತೋರಿಸುತ್ತ ಬಂದಿದೆ.
ಆಗಸ್ಟ್ 22 ರಂದು ಮಾಡಿರುವ ಈ ಟ್ವೀಟ್‌ನಲ್ಲಿ ಬೆಂಗಳೂರಿಗೆ 89 ಐಟಿ ಪಾರ್ಕ್ ಬರುವುದು ಖುಷಿಯ ವಿಚಾರವೇ. ಇದು ಮಹಾನಗರಕ್ಕೆ ಮತ್ತು ದೇಶಕ್ಕೆ ಸಂಬಂಧಿಸಿ ಉತ್ತಮ ಬೆಳವಣಿಗೆಯೇ ಸರಿ. ಆದರೆ ಬೆಂಗಳೂರು ಮಹಾನಗರ ಇಷ್ಟು ದೊಡ್ಡ ಸಂಖ್ಯೆ ಪಾರ್ಕ್‌ಗಳನ್ನು ಬರಮಾಡಿಕೊಳ್ಳುವುದಕ್ಕೆ ಅಗತ್ಯ ಮೂಲಸೌಕರ್ಯ ಇದೆಯೇ?, ಮಾನವ ಸಂಪನ್ಮೂಲ, ಲಾಜಿಸ್ಟಿಕ್ಸ್ ಸೇರಿ ಅನೇಕ ವಿಚಾರಗಳು ಇಲ್ಲಿ ಅಡಕವಾಗಿವೆ. ಈ ಬಗ್ಗೆ ಗಮನಹರಿಸಬೇಕು. ಕೊನೆಮುಟ್ಟದ ಪ್ಲಾನಿಂಗ್ ಸಾಕು, ಅನುಷ್ಠಾನದ ಕಡೆಗೆ ಮೂಲಸೌಕರ್ಯ ಒದಗಿಸುವ ಕಡೆಗೆ ಗಮನಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂಬಿ ಪಾಟೀಲ್ ಅವರನ್ನು ಟ್ಯಾಗ್ ಮಾಡಿ ಆಗ್ರಹಿಸಿದೆ.
ಇತ್ತೀಚೆಗೆ ಹೊರವರ್ತುಲ ರಸ್ತೆ ಟೆಕ್ ಕಾರಿಡಾರ್‌ಗೆ ಮೂಲಸೌಕರ್ಯ ಒದಗಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.