Bengaluru News: ಬೆಂಗಳೂರು - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾಪಟ್ಟಿ, ಟಿಕೆಟ್ ದರ, ಪ್ರಯಾಣದ ಅವಧಿ ವಿವರ ಹೀಗಿದೆ
Jan 01, 2024 12:37 PM IST
ವಂದೇ ಭಾರತ್ ಎಕ್ಸ್‌ಪ್ರೆಸ್ (ಸಾಂಕೇತಿಕ ಚಿತ್ರ)
ಬೆಂಗಳೂರು - ಕೊಯಮತ್ತೂರು ನಡುವಿನ ವಂದೇ ಬಾರತ್ ಎಕ್ಸ್‌ಪ್ರೆಸ್ ರೈಲಿನ ನಿಯತ ಸಂಚಾರ ಇಂದು (ಜ.1) ಶುರು. ಈ ರೈಲು ಸಂಚಾರದ ವೇಳಾಪಟ್ಟಿ, ಪ್ರಯಾಣದ ಅವಧಿ, ಟಿಕೆಟ್ ದರ ಮತ್ತು ಇತರೆ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕೊಯಮತ್ತೂರು ನಡುವೆ ಸಂಚರಿಸುವ ವಂದೇ ಬಾರತ್ ಎಕ್ಸ್‌ಪ್ರೆಸ್ ಇಂದು (ಜನವರಿ 1) ತನ್ನ ನಿಯತ ಸಂಚಾರವನ್ನು ಆರಂಭಿಸುತ್ತಿದೆ.
ಬಹುನಿರೀಕ್ಷಿತ ಸೆಮಿ ಸ್ಪೀಡ್ ರೈಲು ವಂದೇ ಭಾರತ್ ಬೆಂಗಳೂರು ಮತ್ತು ಕೊಯಮತ್ತೂರು ನಡುವಿನ ಪ್ರಯಾಣದ ಸಮಯವನ್ನು ಸುಮಾರು ಆರು ಗಂಟೆಗಳವರೆಗೆ ಕಡಿತಗೊಳಿಸುತ್ತದೆ. ತಿರುಪುರ್, ಈರೋಡ್, ಧರ್ಮಪುರಿ ಮತ್ತು ಹೊಸೂರ್‌ನಲ್ಲಿ ಈ ರೈಲು ನಿಲುಗಡೆ ಹೊಂದಿದೆ. ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 30ರಂದು ಹಸಿರು ನಿಶಾನೆ ತೋರಿದ್ದರು.
ಬೆಂಗಳೂರು- ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರದೊಂದಿಗೆ ಕರ್ನಾಟಕ- ತಮಿಳುನಾಡು ನಡುವೆ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಶುರುವಾದಂತಾಗಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ 20 ನಿಮಿಷ ಪ್ರಯಾಣದ ಅವಧಿಯನ್ನು ಉಳಿಸುತ್ತದೆ. ಸದ್ಯ ಇದೇ ಮಾರ್ಗದಲ್ಲಿ ಸಂಚರಿಸುವ ಕೊಯಮತ್ತೂರು- ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12678) 6 ಗಂಟೆ 50 ನಿಮಿಷದಲ್ಲಿ ಈ ಎರಡು ನಿಲ್ದಾಣಗಳ ನಡುವೆ ಸಂಚರಿಸುತ್ತದೆ.
ಉತ್ತಮ ಪ್ರಯಾಣ ಸೌಕರ್ಯ, ವೇಗ, ಆರಾಮದಾಯಕ ಒಳಾಂಗಣ ವಿನ್ಯಾಸ, ಅಗ್ನಿ ಸುರಕ್ಷತೆ, ಸಿಸಿಟಿವಿ, ಸಿಬ್ಬಂದಿ ಮತ್ತು ಚಾಲಕರೊಂದಿಗೆ ಮಾತನಾಡುವುದಕ್ಕೆ ಸೌಕರ್ಯ ಇತ್ಯಾದಿ ವಿಶೇಷಗಳು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿವೆ.
ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ರೈಲಿನ ಪ್ರಯಾಣ ದರ, ಸಮಯ ಮತ್ತು ಮಾರ್ಗ ವಿವರ:
ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಗುರುವಾರ ಹೊರತುಪಡಿಸಿ ಕೊಯಮತ್ತೂರು ಜಂಕ್ಷನ್ - ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು ಜಂಕ್ಷನ್ ನಡುವೆ ಸಂಚರಿಸುವ ವೇಳಾಪಟ್ಟಿ ಪ್ರಕಟವಾಗಿದೆ. ಇದರ ಪ್ರಕಾರ, ತಿರುಪ್ಪೂರ್‌ನಲ್ಲಿ ಎರಡು ನಿಮಿಷಗಳ ನಿಲುಗಡೆ, ಈರೋಡ್ ಮತ್ತು ಸೇಲಂ ಜಂಕ್ಷನ್‌ಗಳಲ್ಲಿ ಮೂರು ನಿಮಿಷಗಳ ನಿಲುಗಡೆ ಮತ್ತು ಧರ್ಮಪುರಿ ಮತ್ತು ಹೊಸೂರುಗಳಲ್ಲಿ ಎರಡು ನಿಮಿಷಗಳ ನಿಲುಗಡೆಯನ್ನು ಹೊಂದಿದೆ.
ಕೊಯಮತ್ತೂರು-ಬೆಂಗಳೂರು (ರೈಲು ಸಂಖ್ಯೆ.20642): ಕೊಯಮತ್ತೂರಿನಿಂದ ನಿರ್ಗಮನ - ಬೆಳಿಗ್ಗೆ 5 ಗಂಟೆಗೆ, ತಿರುಪ್ಪೂರ್ - ಬೆಳಗ್ಗೆ 5.36/ 5.38 (ಆಗಮನ/ ನಿರ್ಗಮನ) , ಈರೋಡ್ ಜಂಕ್ಷನ್ - ಬೆಳಗ್ಗೆ 6.17/ 6.20 (ಆಗಮನ/ ನಿರ್ಗಮನ), ಸೇಲಂ ಜಂಕ್ಷನ್ - ಬೆಳಗ್ಗೆ 7.12/ 7.15 (ಆಗಮನ/ ನಿರ್ಗಮನ), ಧರ್ಮಪುರಿಗೆ ಬೆಳಗ್ಗೆ 7.12/ 7.15 (ಆಗಮನ/ ನಿರ್ಗಮನ). ಹೊಸೂರು ನಿಲ್ದಾಣಕ್ಕೆ ಬೆಳಗ್ಗೆ 9.48/ 9.50 (ಆಗಮನ/ ನಿರ್ಗಮನ), ಮತ್ತು ಬೆಂಗಳೂರು ಕಂಟೋನ್ಮೆಂಟ್‌ಗೆ ಪೂರ್ವಾಹ್ನ 11.30 ಕ್ಕೆ ತಲುಪುತ್ತದೆ.
ಬೆಂಗಳೂರು-ಕೊಯಮತ್ತೂರು (ರೈಲು ಸಂಖ್ಯೆ. 20641): ಬೆಂಗಳೂರು ಕಂಟೋನ್ಮೆಂಟ್‌ನಿಂದ ನಿರ್ಗಮನ - ಮಧ್ಯಾಹ್ನ 1.40, ಹೊಸೂರು - ಅಪರಾಹ್ನ 2.38/ 2.40ಕ್ಕೆ(ಆಗಮನ/ ನಿರ್ಗಮನ), ಧರ್ಮಪುರಿ - ಸಂಜೆ 4.08/ 4.10 ಕ್ಕೆ (ಆಗಮನ/ ನಿರ್ಗಮನ), ಸೇಲಂ ಜಂಕ್ಷನ್ - ಸಂಜೆ 5.27/ 5.30ಕ್ಕೆ (ಆಗಮನ/ ನಿರ್ಗಮನ). ತಿರುಪ್ಪೂರ್‌ಗೆ ಸಂಜೆ 7.03 / 7.05ಕ್ಕೆ (ಆಗಮನ/ ನಿರ್ಗಮನ) ಮತ್ತು ಕೊಯಮತ್ತೂರು ಜಂಕ್ಷನ್‌ಗೆ ರಾತ್ರಿ 8 ಗಂಟೆಗೆ ತಲುಪುತ್ತದೆ.
ಕೊಯಮತ್ತೂರು - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಯಾಣದರ 403 ಕಿ.ಮೀ.ಗೆ ಚೇರ್ ಕಾರ್‌ಗೆ 940 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್‌ಗೆ 1,860 ರೂಪಾಯಿ.