Bengaluru News: 29 ವರ್ಷದ ಯೆಮನ್ ಯುವಕನ ತಲೆಯಲ್ಲಿ 18 ವರ್ಷಗಳಿಂದ ಇದ್ದ ಗುಂಡು ಹೊರತೆಗೆದ ಬೆಂಗಳೂರು ವೈದ್ಯರು, ಇದು ವೈದ್ಯಲೋಕದ ವಿಸ್ಮಯ
Dec 12, 2023 05:23 PM IST
ಯೆಮೆನ್‌ನ ವ್ಯಕ್ತಿ ಬುಲೆಟ್ ತಲೆಯೊಳಗೆ ಬಾಕಿ ಉಳಿದಿದ್ದ ಕಾರಣ ಪದೇಪದೆ ತಲೆನೋವು ಅನುಭವಿಸುತ್ತಿದ್ದ. ಕಿವಿ ಸೋರಿಕೆ ಸಮಸ್ಯೆ ಎದುರಿಸಿದ್ದ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗ ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.(ಸಾಂಕೇತಿಕ ಚಿತ್ರ)
ಯೆಮೆನ್‌ನ 29 ವರ್ಷದ ಯುವಕ 18 ವರ್ಷ ಕಾಲ ತನ್ನ ತಲೆಯೊಳಗೆ ಗುಂಡು ಇರುವುದು ಅರಿಯದೇ ತಲೆನೋವು, ಕಿವಿ ಸೋರುವಿಕೆ ಅನುಭವಿಸಿದ್ದ. ಬೆಂಗಳೂರಿನ ವೈದ್ಯರ ತಂಡ ಆ ಗುಂಡನ್ನು ಹೊರತೆಗೆದು ಆತನ ಆರೋಗ್ಯ ಸುಧಾರಿಸುವಂತೆ ಮಾಡಿದ್ದಾರೆ. ವೈದ್ಯಲೋಕದ ಮಟ್ಟಿಗೆ ಈ ವಿದ್ಯಮಾನ ಒಂದು ವಿಸ್ಮಯ.
ಹೌದು, ಇದು ವೈದ್ಯಲೋಕದ ವಿಸ್ಮಯ. 29 ವರ್ಷ ವಯಸ್ಸಿನ ಯೆಮೆನ್ ಯುವಕನ ತಲೆಯೊಳಗೆ 18 ವರ್ಷದಿಂದ ಬಾಕಿ ಉಳಿದಿದ್ದ ಬಂದೂಕಿನ ಗುಂಡನ್ನು ಹೊರತೆಗೆಯುವಲ್ಲಿ ಬೆಂಗಳೂರು ಯಶಸ್ವಿಯಾಗಿದ್ದಾರೆ. ಅದು 3 ಸೆಂಟಿ ಮೀಟರ್ ಉದ್ದ ಇತ್ತು.
ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುವ ವೇಳೆ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಈ ಯುವಕನ ತಲೆಯೊಳಗೆ ಬಂದೂಕಿನ ಗುಂಡು ನುಗ್ಗಿತ್ತು. ಆಗ ಈ ಯುವಕನ ವಯಸ್ಸು 10 ವರ್ಷ ಇತ್ತಷ್ಟೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಯುವಕನ ಹೆಸರು ಸಲೇಹ್. ಎರಡು ಮಕ್ಕಳ ತಂದೆ. ಗುಂಡು ತಲೆಯಲ್ಲಿದ್ದ ಕಾರಣ ಸಲೇಹ್‌ಗೆ ಕಿವಿ ಕೇಳ್ತಾ ಇರಲಿಲ್ಲ. ಪದೇಪದೆ ತಲೆನೋವು, ಕಿವಿ ಸೋರುವಿಕೆ ಸಮಸ್ಯೆ ಕಾಣ್ತಾ ಇತ್ತು. ಇದಕ್ಕೆ ಪರಿಹಾರ ಹುಡುಕಿಕೊಂಡು ಸಲೇಹ್ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.
ಎಡಕಿವಿಯ ಒಳಗೆ ಹೋಗಿರುವ 3 ಸೆಂಟಿ ಮೀಟರ್ ಉದ್ದದ ಗುಂಡು ಕಿವಿ ತಮಟೆ ಹಾನಿಗೊಳಿಸಿ ಎಲುಬಿಗೆ ಕಚ್ಚಿಕೊಂಡಿತ್ತು.ಇದರ ಪರಿಣಾಮ ಕಿವಿ ಸೋಂಕು ಉಂಟಾಗಿ ಪದೇಪದೆ ಕಿವಿ ಸೋರುವಿಕೆ ಕಾರಣವಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.
ಕಿವಿಯೊಳಗೆ ಹೋದ ಗುಂಡು ಅಲ್ಲೆ ಉಳಿದದ್ದು ಹೇಗೆ
ಸಲೇಹ್ ತಂದೆ ಕೃಷಿಕ. ತಾಯಿ ಗೃಹಿಣಿ. 10 ಮಕ್ಕಳ ಪೈಕಿ ಸಲೇಹ್ ಒಬ್ಬ. ಮೂವರು ಸಹೋದರಿಯರು. ಸಲೇಹ್ 10 ವರ್ಷದವನಿದ್ಧಾಗ ಮನೆ ಸಮೀಪದ ಅಂಗಡಿಗೆ ಹೋಗಿ ಹಿಂದಿರುಗುವಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಆಗ ಅವರು ಹಾರಿಸಿದ ಗುಂಡು ಸಲೇಹ್ ಕಿವಿಯೊಳಗೆ ಹೋಗಿತ್ತು. ಕಿವಿಯಿಂದ ರಕ್ತ ಸುರಿಯಿತ್ತಿದ್ದ ಸಲೇಹ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕಿವಿ ಕ್ಲೀನ್ ಮಾಡಿ ಔಷಧಕೊಟ್ಟು ಕಳುಹಿಸಿದ್ದರು. ಕಿವಿಯೊಳಗೆ ಹೋದ ಗುಂಡನ್ನು ಅವರು ಗುರುತಿಸಿರಲಿಲ್ಲ.
ಗುಂಡ ತಲೆಯೊಳಗೆ ಬಾಕಿ ಇರುವುದು ಯಾರ ಗಮನಕ್ಕೂ ಬಾರದೇ ಹೋಯಿತು. ಪದೇಪದೆ ಕಾಡುವ ತಲೆನೋವು, ಕಿವಿ ಸೋರುವಿಕೆ ಸಮಸ್ಯೆಗೆ ಪರಿಹಾರ ಹುಡುಕುತ್ತ ಬೆಂಗಳೂರಿಗೆ ಬಂದ್ದಿದ್ದರು. ತಲೆಯನ್ನು ಪರಿಶೀಲಿಸಿದಾಗ ಗುಂಡು ಇರುವುದು ಪತ್ತೆಯಾಗಿತ್ತು. ಕೊನೆಗೆ ಆಸ್ಟರ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಆ ಗುಂಡನ್ನು ಹೊರತೆಗೆದಿದೆ. ಯೆಮೆನ್ ಯುವಕನ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.