logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಲ್ಲಿ ಹೊಸ ವರ್ಷಾಚರಣೆ; ಸಂಚಾರ ವ್ಯವಸ್ಥೆಯಲ್ಲಿ ಆಗಿದೆ ಬದಲಾವಣೆ, ವಿವರ ಹೀಗಿದೆ

Bengaluru News: ಬೆಂಗಳೂರಲ್ಲಿ ಹೊಸ ವರ್ಷಾಚರಣೆ; ಸಂಚಾರ ವ್ಯವಸ್ಥೆಯಲ್ಲಿ ಆಗಿದೆ ಬದಲಾವಣೆ, ವಿವರ ಹೀಗಿದೆ

Umesh Kumar S HT Kannada

Dec 31, 2023 03:06 PM IST

google News

ಬೆಂಗಳೂರು ಸಂಚಾರ ಪೊಲೀಸರು (ಸಾಂಕೇತಿಕ ಚಿತ್ರ)

  • ಬೆಂಗಳೂರು ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿದೆ. ಸಂಜೆಯಿಂದ ವಿವಿಧೆಡೆ ಹೊಸ ವರ್ಷದ ಸಂಭ್ರಮಾಚರಣೆ ಶುರುವಾಗಲಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ವಿವಿಧೆಡೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಇಲ್ಲಿದೆ ಆ ವಿವರ.

ಬೆಂಗಳೂರು ಸಂಚಾರ ಪೊಲೀಸರು (ಸಾಂಕೇತಿಕ ಚಿತ್ರ)
ಬೆಂಗಳೂರು ಸಂಚಾರ ಪೊಲೀಸರು (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ವಿವಿಧೆಡೆ ಅದ್ದೂರಿ ಹೊಸ ವರ್ಷಾಚರಣೆಗೆ ಸಿದ್ಧತೆ ನಡೆದಿದೆ. ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಭಾನುವಾರ ಸಂಜೆ ಶುರುವಾಗಲಿದ್ದು, ತಡರಾತ್ರಿವರೆಗೂ ನಡೆಯಲಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಮುಂತಾದೆಡೆ ಭಾರಿ ಜನದಟ್ಟಣೆ ಉಂಟಾಗಲಿದ್ದು ಪೊಲೀಸರು ಹೆಚ್ಚು ನಿಗಾವಹಿಸಿದ್ದಾರೆ.

ಭಾರಿ ಜನದಟ್ಟಣೆ ಸೇರಿ ಹೊಸ ವರ್ಷದ ರಾತ್ರಿ ಆಚರಣೆ ನಡೆಸುವಲ್ಲಿ ಸಂಚಾರ ವ್ಯವಸ್ಥೆಯಲ್ಲೂ ಪೊಲೀಸರು ಬದಲಾವಣೆ ಮಾಡಿದ್ದಾರೆ. ಕೆಲವು ಕಡೆ ವಾಹನ ಸಂಚಾರ ನಿರ್ಬಂಧವನ್ನೂ ಹೇರಲಾಗಿದೆ.

ಬೆಂಗಳೂರಲ್ಲಿ ಹೊಸವರ್ಷಾಚರಣೆ ನಿಮಿತ್ತ ಟ್ರಾಫಿಕ್ ನಿರ್ಬಂಧ ಎಲೆಲ್ಲಿ: ಬೆಂಗಳೂರಿನಲ್ಲಿ ಇರುವ ಪ್ರಮುಖ ಫ್ಲೈಓವರ್‌ಗಳನ್ನು ಭಾನುವಾರ ರಾತ್ರಿ 11 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಮುಚ್ಚಲಾಗುತ್ತಿದೆ. ಹೊಸ ವರ್ಷದ ಮುನ್ನಾದಿನವಾದ ಇಂದು (ಡಿ.31) ಹೆಣ್ಣೂರು ಮೇಲ್ಸೇತುವೆ, ಐಟಿಸಿ ಮೇಲ್ಸೇತುವೆ, ಬಾಣಸವಾಡಿ ಮುಖ್ಯರಸ್ತೆ ಮೇಲ್ಸೇತುವೆ, ಲಿಂಗರಾಜಪುರ ಮೇಲ್ಸೇತುವೆ, ಹೆಣ್ಣೂರು ಮುಖ್ಯರಸ್ತೆ ಮೇಲ್ಸೇತುವೆ, ಕಲ್ಪಲ್ಲಿ ರೈಲ್ವೆ ಗೇಟ್ ಮೇಲ್ಸೇತುವೆ, ದೊಮ್ಮಲೂರು ಮೇಲ್ಸೇತುವೆ, ನಾಗವಾರ ಫ್ಲೈಓವರ್, ಮೇಡಹಳ್ಳಿ ಫ್ಲೈಓವರ್, ಓಎಂ ರಸ್ತೆ ಮೇಲ್ಸೇತುವೆ, ದೇವರಬೀಸನಹಳ್ಳಿ ಮೇಲ್ಸೇತುವೆ, ಮಹದೇವಪುರ ಮೇಲ್ಸೇತುವೆ, ಮಹದೇವಪುರ ಮೇಲ್ಸೇತುವೆ ಬಂದ್ ಆಗಿರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ, ವೈಟ್‌ಫೀಲ್ಡ್‌ನಲ್ಲಿರುವ ಫಿಯೋನಿಕ್ಸ್ ಮಾಲ್‌ಗೆ ಭೇಟಿ ನೀಡುವ ಜನರು ಕ್ಯಾಬ್‌ಗಳನ್ನು ಮೀಸಲಾದ ಪಿಕ್ ಅಪ್ ಮತ್ತು ಡ್ರಾಪ್ ಪಾಯಿಂಟ್‌ಗಳನ್ನು ಹೊರತುಪಡಿಸಿ ಬೇರೆಡೆ ನಿಲ್ಲಿಸಲು ಅವಕಾಶ ಇಲ್ಲ. ಫೀನಿಕ್ಸ್ ಮಾಲ್‌ಗೆ ಬರುವವರಿಗೆ ಐಟಿಪಿಎಲ್ ಮುಖ್ಯರಸ್ತೆಯ ಬೆಸ್ಕಾಂ ಕಚೇರಿ ಬಳಿ ಡ್ರಾಪ್ ಪಾಯಿಂಟ್, ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣದ ಬಳಿ ಪಿಕ್ ಅಪ್ ಪಾಯಿಂಟ್.
ಇಂದಿರಾನಗರಕ್ಕೆ ಬರುವವರಿಗೆ ಇಂದಿರಾನಗರ 100 ಅಡಿ ರಸ್ತೆಯ 17ನೇ ಮುಖ್ಯರಸ್ತೆ ಜಂಕ್ಷನ್ ಬಳಿ ಡ್ರಾಪ್ ಪಾಯಿಂಟ್, ಇಂದಿರಾನಗರ 100 ಅಡಿ ರಸ್ತೆಯ ಬಿಎಂ ಶ್ರೀ ಜಂಕ್ಷನ್ ಬಳಿ ಪಿಕ್ ಅಪ್ ಪಾಯಿಂಟ್ ಇದೆ.

ಬೆಂಗಳೂರು ಪೊಲೀಸರು ಈ ಪ್ರದೇಶಗಳಲ್ಲಿ ಎಲ್ಲೆಂದರೆ ಅಲ್ಲಿ ವಾಹನ ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಹೊಸವರ್ಷಾಚರಣೆ ನಿಮಿತ್ತ ಯಾವೆಲ್ಲ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ: ಇಂದಿರಾನಗರ 100 ಅಡಿ ರಸ್ತೆ, ಹಳೆ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಫ್ಲೈಓವರ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲೂ ವಾಹನ ನಿಲುಗಡೆಗೆ ಅವಕಾಶ ಇಲ್ಲ. ಇಂದಿರಾನಗರ 12ನೇ ಮುಖ್ಯರಸ್ತೆ 80 ಅಡಿ ರಸ್ತೆಯಿಂದ ಇಂದಿರಾನಗರ ಡಬಲ್ ರೋಡ್ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕ್ ಮಾಡುವಂತಿಲ್ಲ. ಐಟಿಪಿಎಲ್ ಮುಖ್ಯರಸ್ತೆ ಬಿ ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್ ನಿಂದ ಗರುಡಾಚಾರ್ಪಾಳ್ಯ ಡೆಕಾಥ್ಲಾನ್ ರಸ್ತೆಯ ಎರಡೂ ಬದಿ ವಾಹನ ನಿಲ್ಲಿಸಬಾರದು.

ಇದಲ್ಲದೆ, ಹೊಸ ವರ್ಷದ ರಾತ್ರಿ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ ವಾಹನ ಪ್ರವೇಶಗಳನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು ಪೊಲೀಸರು ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನೈಟ್ ವಿಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ರೀತಿಯ ಸಹಾಯಕ್ಕಾಗಿ ಸಂಪರ್ಕಿಸಬಹುದು ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ