logo
ಕನ್ನಡ ಸುದ್ದಿ  /  ಕರ್ನಾಟಕ  /  ನೀರಿಗಾಗಿ ಬೆಂಗಳೂರಿಗರ ಪರದಾಟದ ನಡುವೆ, ಅಕ್ರಮ ನೀರು ಸಂಪರ್ಕದ ಪ್ರಕರಣಗಳನ್ನು ವಿಚಾರಣೆ ಇಲ್ಲದೆ ಮುಗಿಸುತ್ತಿದೆ ಬಿಟಿಎಂಎಫ್!

ನೀರಿಗಾಗಿ ಬೆಂಗಳೂರಿಗರ ಪರದಾಟದ ನಡುವೆ, ಅಕ್ರಮ ನೀರು ಸಂಪರ್ಕದ ಪ್ರಕರಣಗಳನ್ನು ವಿಚಾರಣೆ ಇಲ್ಲದೆ ಮುಗಿಸುತ್ತಿದೆ ಬಿಟಿಎಂಎಫ್!

Reshma HT Kannada

Mar 19, 2024 12:52 PM IST

google News

ಸಾಂಕೇತಿಕ ಚಿತ್ರ

    • ಮಹಾನಗರಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ಈ ನಡುವೆ ಅಕ್ರಮ ನೀರಿನ ಸಾಗಾಟವೂ ಎಗ್ಗಿಲ್ಲದೇ ನಡೆಯುತ್ತಿದೆ. ಈ ಎಲ್ಲದರ ಮಧ್ಯೆ ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್ ಫೋರ್ಸ್(ಬಿಎಂಟಿಎಫ್) ಅಕ್ರಮ ನಲ್ಲಿ ಸಂಪರ್ಕ ಪ್ರಕರಣಗಳೂ ಸೇರಿದಂತೆ ಕಳೆದ 5 ವರ್ಷಗಳಲ್ಲಿ 309 ಪ್ರಕರಣಗಳನ್ನು ವಿಚಾರಣೆಯೇ ಇಲ್ಲದೆ ಮುಕ್ತಾಯಗೊಳಿಸಿದೆ. (ವರದಿ: ಎಚ್‌. ಮಾರುತಿ)
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಹೆಚ್ಚುತ್ತಿದೆ. ನೀರಿಲ್ಲದೆ ಕೋಟ್ಯಂತರ ನಾಗರಿಕರು ಪರದಾಡುತ್ತಿದ್ದಾರೆ. ನೀರಿನ ಅಸಮರ್ಪಕ ಪೂರೈಕೆಗೆ ಅಕ್ರಮ ನೀರು ಸಂಪರ್ಕವು ಕೂಡ ಕಾರಣ. ಆದರೆ ಅತ್ತ ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್ ಫೋರ್ಸ್(ಬಿಎಂಟಿಎಫ್) ಅಕ್ರಮ ನಲ್ಲಿ ಸಂಪರ್ಕ ಪ್ರಕರಣಗಳೂ ಸೇರಿದಂತೆ ಕಳೆದ 5 ವರ್ಷಗಳಲ್ಲಿ 309 ಪ್ರಕರಣಗಳನ್ನು ಮುಕ್ತಾಯಗೊಳಿಸಿದೆ.

ಬೆಂಗಳೂರಿನಲ್ಲಿ ಅಕ್ರಮ ನೀರಿನ ಸಂಪರ್ಕಗಳು ಸರ್ವೇ ಸಾಮಾನ್ಯವಾಗಿದ್ದು, ನಗರದಾದ್ಯಂತ ಇಂತಹ ಪ್ರಕರಣಗಳನ್ನು ಕಾಣಬಹುದಾಗಿದೆ. ಹಾಗಾಗಿ ಅಕ್ರಮ ನೀರು ಸಂಪರ್ಕದ ಪ್ರಕರಣಗಳ ಸಂಖ್ಯೆಯೂ ಹೆಚ್ಚು ಎಂದು ಬಿಟಿಎಂಎಫ್ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳುತ್ತಾರೆ.

ಆದರೆ ಮಾಹಿತಿ ಹಕ್ಕು ಕಾರ್ಯಕರ್ತರು ಮತ್ತು ದೂರುದಾರರು ಬೇರೆಯದ್ದೇ ಆದ ವಾದವನ್ನು ಮಂಡಿಸುತ್ತಾರೆ. ಅಕ್ರಮ ನೀರಿನ ಸಂಪರ್ಕಗಳನ್ನು ಕುರಿತು ವಿಚಾರಣೆ ನಡೆಸದೆ ಇತ್ಯರ್ಥಗೊಳಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ಇನ್ನಷ್ಟು ಅಕ್ರಮ ಸಂಪರ್ಕಗಳು ಹೆಚ್ಚುತ್ತವೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಅಕ್ರಮ ನೀರು ಸಂಪರ್ಕದ ಪ್ರಕರಣಗಳನ್ನು ತಡೆಯುವುದು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಲಿಯ ಜವಬ್ದಾರಿ. ಅಕ್ರಮ ನೀರು ಸಂಪರ್ಕಗಳನ್ನು ತಡೆಯಲು ಆಸ್ತಿ ಗುರುತು ಸಂಖ್ಯೆ (ಪಿಐಡಿ ನಂಬರ್) ಯನ್ನು ಜಲ ಮಂಡಲಿಯ ಆರ್‌ಆರ್ ನಂಬರಿನ ಜೊತೆ ಜೋಡಿಸಿದರೆ ಅಕ್ರಮ ಸಂಪರ್ಕ ಮತ್ತು ನೀರಿನ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ. ಇದೇನೂ ಹೊಸ ಅನ್ವೇಷಣೆಯಲ್ಲ. 9 ವರ್ಷಗಳ ಹಿಂದೆಯೇ ಇಂತಹದ್ದೊಂದು ಯೋಜನೆಯನ್ನು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿತ್ತು. ಆಗ ಅಲ್ಲಿ 26 ಸಾವಿರ ಗ್ರಾಹಕರಿದ್ದು, 23,500

ಗ್ರಾಹಕರು ತಮ್ಮ ಆರ್‌ಆರ್ ನಂಬರ್‌ಗಳನ್ನು ಪಿಐಡಿ ನಂಬರ್ ಜೊತೆ ಜೋಡಿಸಿದ್ದರು. ಆಗ ಮಂಡಳಿಯ ಈ ಪ್ರಯೋಗ ಯಶಸ್ವಿಯಾಗಿತ್ತು. ಒಂದು ವೇಳೆ ಬೆಂಗಳೂರು ನಗರದಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಿದ್ದರೆ ಸಾವಿರಾರು ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ಜಲ ಮಂಡಲಿ ಮುಂದುವರೆಸಲಿಲ್ಲ.

ಸಧ್ಯ ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಮೂರು ತಿಂಗಳ ಹಿಂದೆಯಷ್ಟೇ ಜಲಮಂಡಲಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಅಕ್ರಮ ನೀರಿನ ಸಂಪರ್ಕ ಕಲ್ಪಿಸಿಕೊಂಡಿದ್ದರೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಬೆಂಗಳೂರಿನಲ್ಲಿ ಶೇ 35 ರಷ್ಟು ನೀರು ಎಲ್ಲಿ ಹೋಗುತ್ತಿದೆ ಎನ್ನುವುದು ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಅವರೇ ಹೇಳಿದ್ದರು.

ಆದರೆ ಈಗಲೂ ಅಕ್ರಮ ಸಂಪರ್ಕ ಪಡೆದಿರುವ ಸಾವಿರಾರು ಪ್ರಕರಣಗಳಿವೆ. ಆದರೆ ಜಲಮಂಡಳಿ ಪತ್ತೆ ಹಚ್ಚುವ ಗೋಜಿಗೆ ಹೋಗುತ್ತಿಲ್ಲ. ಇನ್ನು ದಂಡ ವಿಧಿಸಿ ಜೈಲಿಗೆ ಕಳುಹಿಸಿರುವ ಪ್ರಕರಣಗಳು ಬೆರಳೆಣಿಕೆಯಷ್ಟೂ ಇಲ್ಲ ಎಂದು ಹೇಳಲಾಗುತ್ತಿದೆ.

ಬಿಟಿಎಂಎಫ್ ಕಾರ್ಯವೈಖರಿ

ಸರ್ಕಾರದ ಆಸ್ತಿಗಳನ್ನು ರಕ್ಷಿಸುವಲ್ಲಿ ಬಿಟಿಎಂಎಫ್ ವಿಫಲಗೊಂಡಿದೆ. ಈ ಸಂಸ್ಥೆಯಲ್ಲಿ ಅನೇಕ ಹುಳುಕುಗಳನ್ನು ಕಾಣಬಹುದಾಗಿದೆ. ಆದ್ದರಿಂದ ಬಿಟಿಎಂಎಫ್ ಸಂಸ್ಥೆಯನ್ನು ಪುನರ್ ರಚಿಸುವ ಅಗತ್ಯವಿದೆ. ಬಿಟಿಎಂಎಫ್ ದೂರುಗಳನ್ನು ಸ್ವೀಕರಿಸುತ್ತದೆಯಾದರೂ ನ್ಯಾಯವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್. ರಮೇಶ್ ಹೇಳುತ್ತಾರೆ.

ಪ್ರಕರಣ ದಾಖಲುಗೊಂಡಾಗಲೆಲ್ಲಾ ಯಾರ ವಿರುದ್ಧ ದೂರು ಸಲ್ಲಿಕೆಯಾಗಿರುತ್ತದೆಯೋ ಅಂತಹ ಅಧಿಕಾರಿಯನ್ನು ಕರೆಸುತ್ತಾರೆ. ಪ್ರಕರಣ ದಾಖಲಿಸುವುದಾಗಿ, ತನಿಖೆ ನಡೆಸುವುದಾಗಿ ಅವರನ್ನು ಬೆದರಿಸುತ್ತಾರೆ. ಅವರಿಂದ ಲಂಚ ಪಡೆದು ಪ್ರಕರಣವನ್ನು ಮುಗಿಸುತ್ತಾರೆ ಎಂದು ರಮೇಶ್ ಹೇಳುತ್ತಾರೆ.

ಒಟ್ಟಾರೆ ಬಿಟಿಎಂಎಫ್‌ನಲ್ಲಿ ಪಾರದರ್ಶಕತೆ ಎನ್ನುವುದೇ ಇಲ್ಲವಾಗಿದೆ. ಅವರು ಪ್ರಾಮಾಣಿಕರು ಎನ್ನುವುದಾದರೆ ಅಂಕಿ-ಅಂಶಗಳನ್ನು ಒದಗಿಸಲು ಹಿಂಜರಿಕೆ ಏಕೆ? ಮಾಹಿತಿಯನ್ನು ಒದಗಿಸಲು ಹಿಂದೇಟು ಹಾಕುತ್ತಿರುವುದು ಬಿಟಿಎಂಎಫ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಮತ್ತೊಬ್ಬ ಆರ್‌ಟಿಐ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.

ಬೆಂಗಳೂರು ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದ ಈ ಸ್ಟೋರಿಗಳನ್ನು ಓದಿ

Bangalore News: ಬೆಂಗಳೂರು ನಗರದ ನೀರಿನ ಕೊರತೆ ಆಲಿಸಲು ಸಹಾಯವಾಣಿ ಜತೆಗೆ ಕಾರ್ಯಪಡೆಗೂ ಹೊಣೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ