Inter-Caste Marriages: ಬೆಂಗಳೂರಲ್ಲಿ ಹೆಚ್ಚಿದ ಅಂತರ್ಜಾತೀಯ ವಿವಾಹಗಳು; ರಾಜಧಾನಿಯಲ್ಲಿ ಈ ವರ್ಷ 853 ಮದುವೆ, ಹಿಂದಿನ ವರ್ಷ 629
Dec 28, 2023 09:40 PM IST
ಅಂತರ್ಜಾತಿ ವಿವಾಹ ಸಂಖ್ಯೆಯಲ್ಲಿ ಹೆಚ್ಚಳ (ಸಾಂಕೇತಿಕ ಚಿತ್ರ)
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 2022-23ರಲ್ಲಿ ನಡೆದ ಅಂತರ್ಜಾತೀಯ ವಿವಾಹಗಳು ಅಚ್ಚರಿ ಮೂಡಿಸುತ್ತವೆ. ಜಾತಿರಹಿತ ಸಮಾಜ ಸುಧಾರಣೆಯ ಪ್ರಬಲ ಅಸ್ತ್ರ ಈ ಅಂತರ್ಜಾತೀಯ ವಿವಾಹಗಳು. ಈ ವರ್ಷ 853 ಮದುವೆಗಳಾಗಿದ್ದರೆ, ಹಿಂದಿನ ವರ್ಷ 629 ಮದುವೆಗಳಾಗಿದ್ದವು. (ವರದಿ- ಎಚ್.ಮಾರುತಿ)
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಂತರ್ಜಾತೀಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ 2 ವರ್ಷಗಳಿಂದ ಇಂತಹ ಅಂತರ್ ಜಾತೀಯ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ. ಅಂತರ್ಜಾತೀಯ ವಿವಾಹವಾದವರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದ್ದು, ಈ ಕೊಡುಗೆ ಪಡೆಯಲು ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅಂತರ್ಜಾತೀಯ ವಿವಾಹ ನಿಷಿದ್ಧವಾದ ಭಾರತೀಯ ಸಮಾಜದಲ್ಲಿ ಅಂತರ್ ಜಾತೀಯ ವಿವಾಹಗಳು ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆಯೇ ಸರಿ.
ಕಳೆದ ಐದು ವರ್ಷಗಳಲ್ಲಿ ಅಂತರ್ಜಾತೀಯ ವಿವಾಹಗಳಿಗೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಏರಿಳಿತಗಳಾಗುತ್ತಿದ್ದರೂ ಹೆಚ್ಚಳವಾಗುತ್ತಿರುವುದು ಗಮನಾರ್ಹ ಸಂಗತಿ. 2018-19ರಲ್ಲಿ ಬೆಂಗಳೂರಿನಲ್ಲಿ 762 ಅಂತಾರ್ಜಾತೀಯ ವಿವಾಹಗಳು ನಡೆದಿದ್ದರೆ 2019-20 ರಲ್ಲಿ 657 ನಡೆದಿದ್ದು, 105 ವಿವಾಹಗಳು ಕಡಿಮೆಯಾಗಿವೆ.2020-21 ರಲ್ಲಿ ಮತ್ತಷ್ಟು ಇಳಿಮುಖವಾಗಿದ್ದು 629ಕ್ಕೆ ಕುಸಿದಿದೆ.
ಆದರೆ ನಂತರದ ವರ್ಷಗಳಲ್ಲಿ ಅಂತರ್ಜಾತೀಯ ವಿವಾಹಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿವೆ.2021-22ರಲ್ಲಿ 725 ಅಂತರ್ ಜಾತೀಯ ವಿವಾಹಗಳು ನೆರವೇರಿದ್ದರೆ 2022-23 ರಲ್ಲಿ 853ಕ್ಕೆ ಹೆಚ್ಚಳವಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ ಬೆಂಗಳೂರಿನಲ್ಲಿ 2018-19 ರಿಂದ 2022-23 ರವರೆಗೆ ಶೇ.11.4 ರಷ್ಟು ಬೆಳವಣಿಗೆಯಾಗಿದೆ.
ಇದೇ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದಿರುವ ಅಂತರ್ಜಾತೀಯ ವಿವಾಹಗಳ ಒಟ್ಟು ಸಂಖ್ಯೆಗೆ ಬೆಂಗಳೂರು ಅತಿ ಹೆಚ್ಚು ಕೊಡುಗೆ ನೀಡಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 50,365 ಅಂತರ್ಜಾತೀಯ ವಿವಾಹಗಳು ನೆರವೇರಿದ್ದರೆ ಬೆಂಗಳೂರು ಒಂದರಲ್ಲೇ 3,626 ವಿವಾಹಗಳು ನಡೆದಿವೆ. ಇದು ರಾಜ್ಯದ ಒಟ್ಟು ಅಂತರ್ಜಾತೀಯ ವಿವಾಹಗಳ ಬೆಳವಣಿಗೆಗೆ ಬೆಂಗಳೂರಿನ ಕೊಡುಗೆ ಶೇ.17.8ರಷ್ಟಿದೆ. 2014-15 ರಿಂದ 5018-19ರವರೆಗೆ ರಾಜ್ಯದಲ್ಲಿ ಒಟ್ಟು 15,620 ಅಂತರ್ ಜಾತೀಯ ವಿವಾಹಗಳು ನೆರವೇರಿವೆ.
ಅಂತರ್ಜಾತೀಯ ವಿವಾಹ ಕುರಿತು ಹೆಚ್ಚಿದ ಅರಿವು: ಅಂತರ್ಜಾತೀಯ ವಿವಾಹಗಳಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲು ವಿವಿಧ ಹಂತಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 2018-19ರಲ್ಲಿ 64.27 ಕೋಟಿ ರೂ. ಪ್ರೋತ್ಸಾಹ ಧನವನ್ನು ವಿತರಿಸಿದ್ದರೆ 2019-20ರಲ್ಲಿ 90.42 ಕೋಟಿ ರೂಪಾಯಿ, 2021-22 ರಲ್ಲಿ 171.84 ಕೋಟಿ ರೂಪಾಯಿ ಮತ್ತು 2022-23 ರಲ್ಲಿ 94.62 ಕೋಟಿ ರೂಪಾಯಿ ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದಾರೆ.
ಸರ್ಕಾರದ ವಿಶಾಲವಾದ ಸಾಮಾಜಿಕ ಬದಲಾವಣೆಯ ಕಲ್ಪನೆಯ ಹಿನ್ನೆಲೆಯಲ್ಲಿ ಅಂತರ್ ಜಾತೀಯ ವಿವಾಹವಾದವರಿಗೆ ಪ್ರೋತ್ಸಾಹ ಮತ್ತು ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಸರಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಅಂತರ್ ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಲು ಈ ರೀತಿಯ ಪ್ರೋತ್ಸಾಹ ಧನವನ್ನು ನೀಡುತ್ತಾ ಬಂದಿದ್ದು, ದಂಪತಿಗಳಲ್ಲಿ ಒಬ್ಬರು ಎಸ್ ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಅರ್ಜಿ ಸಲ್ಲಿಸುವುದಕ್ಕೂ ಮುನ್ನ 18 ತಿಂಗಳೊಳಗೆ ವಿವಾಹವಾಗಿರಬೇಕು ಮತ್ತು ಈ ಪ್ರೋತ್ಸಾಹ ಧನವನ್ನು ಪಡೆಯಲು ರಾಜ್ಯದ ನಿವಾಸಿಯಾಗಿರಬೇಕು ಹಾಗೂ ಅವರ ಆದಾಯ ಮಿತಿ 5 ಲಕ್ಷ ರೂಪಾಯಿಯನ್ನು ಮೀರಿರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಈ ಪ್ರೋತ್ಸಾಹ ಧನವನ್ನು ಪಡೆಯಲು ವಿವಾಹವಾದ ಒಂದು ವರ್ಷದೊಳಗಾಗಿ ಅರ್ಜಿ ಸಲ್ಲಿಸಬೇಕು. ಪರಿಷ್ಕೃತ ಪ್ರೋತ್ಸಾಹ ಧನ ಯೋಜನೆ 2018ರ ಏಪ್ರಿಲ್ 01ರಂದು ಜಾರಿಗೆ ಬಂದಿದೆ. ಈ ಪರಿಷ್ಕೃತ ಯೋಜನೆಯಡಿಯಲ್ಲಿ ಪುರುಷ 2.5 ಲಕ್ಷ ರೂಪಾಯಿ ಮತ್ತು ಮಹಿಳೆಯು 3 ಲಕ್ಷ ರೂ. ಪ್ರೋತ್ಸಾಹ ಧನ ಪಡೆಯಲು ಅರ್ಹರು. ಈ ದಿನಾಂಕದ ನಂತರ ವಿವಾಹವಾದವರು ಈ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಎಸ್ ಸಿ ಸಮುದಾಯದೊಳಗೆ ಅಂತರ್ ಜಾತಿಯ ವಿವಾಹಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ಆರ್ಥಿಕ ಚೈತನ್ಯವನ್ನು ತುಂಬಲು ಈ ರೀತಿಯ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ.