ಪ್ರಸಿದ್ಧ ಕೆಫೆಗಳ ಟಾಯ್ಲಟ್ ಎಂದು ನಿರ್ಲಕ್ಷಿಸಬೇಡಿ, ಅಲ್ಲೂ ಇದ್ದೀತು ಕ್ಯಾಮೆರಾ ಕಣ್ಣು, ಬೆಂಗಳೂರಲ್ಲೊಂದು ಕಳವಳಕಾರಿ ಘಟನೆ
Aug 11, 2024 03:12 PM IST
ಪ್ರಸಿದ್ಧ ಕೆಫೆಗಳ ಟಾಯ್ಲಟ್ ಎಂದು ನಿರ್ಲಕ್ಷಿಸಬೇಡಿ, ಅಲ್ಲೂ ಇದ್ದೀತು ಕ್ಯಾಮೆರಾ ಕಣ್ಣು, ಬೆಂಗಳೂರಲ್ಲೊಂದು ಕಳವಳಕಾರಿ ಘಟನೆ ಶನಿವಾರ ವರದಿಯಾಗಿದೆ. (ಸಾಂಕೇತಿಕ ಚಿತ್ರ)
Viral News; ಕಾಮಾಂಧರ ಕೃತ್ಯಗಳು ನಿತ್ಯವೂ ಚರ್ಚೆಯಲ್ಲಿರುವ ವಿಚಾರ. ನಿತ್ಯವೂ ಒಂದಿಲ್ಲೊಂದು ಕೃತ್ಯ ಗಮನಸೆಳೆಯುತ್ತದೆ. ಆದ್ದರಿಂದ, ಪ್ರಸಿದ್ಧ ಕೆಫೆಗಳ ಟಾಯ್ಲಟ್ ಎಂದು ನಿರ್ಲಕ್ಷಿಸಬೇಡಿ, ಅಲ್ಲೂ ಇದ್ದಾವು ಕ್ಯಾಮೆರಾ ಕಣ್ಣು, ಬೆಂಗಳೂರಲ್ಲೊಂದು ಕಳವಳಕಾರಿ ಘಟನೆ ವರದಿಯಾಗಿದೆ. ಅದರ ವಿವರ ಇಲ್ಲಿದೆ ಗಮನಿಸಿ.
ಬೆಂಗಳೂರು: ಪ್ರಸಿದ್ದ ಕಾಫಿ ಔಟ್‌ಲೆಟ್ ಒಂದರ ಶೌಚಗೃಹದ ಕಸದ ಬುಟ್ಟಿಯಲ್ಲಿ 2 ಗಂಟೆಗೂ ಹೆಚ್ಚು ಹೊತ್ತಿನಿಂದ ರೆಕಾರ್ಡಿಂಗ್ ಸ್ಥಿತಿಯಲ್ಲಿದ್ದ ಮೊಬೈಲ್ ಪತ್ತೆಯಾಗಿರುವ ಕಳವಳಕಾರಿ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಮಹಿಳೆಯೊಬ್ಬರು ಈ ಅಹಿತಕರ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೇ ಪೋಸ್ಟ್‌ನ ಸ್ಕ್ರೀನ್ ಶಾಟ್ ಅನ್ನು ಮತ್ತೊಬ್ಬ ಮಹಿಳೆ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ್ದು, ಜನರ ಗಮನಸೆಳೆದಿದೆ.
ಬೆಂಗಳೂರಿನ ಬಿಇಎಲ್ ರೋಡ್‌ನಲ್ಲಿರುವ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನಲ್ಲಿ ಶನಿವಾರ (ಆಗಸ್ಟ್ 10) ಈ ಕಳವಳಕಾರಿ ಘಟನೆ ನಡೆದಿದ್ದು, ಆ ಫೋನ್ ಅದೇ ಔಟ್‌ಲೆಟ್‌ನ ಉದ್ಯೋಗಿಯದ್ದು ಎಂಬುದೂ ಆ ಹೊತ್ತಿನಲ್ಲೇ ದೃಢಪಟ್ಟಿತ್ತು. ಕೆಫೆಯ ಟಾಯ್ಲೆಟ್ ಸೀಟ್‌ಗೆ ಎದುರಾಗಿ ಇರಿಸಿದ್ದ ಡಸ್ಟ್ ಬಿನ್ ಒಳಗೆ ಮೊಬೈಲ್ ಫೋನ್ ಪತ್ತೆಯಾಗಿತ್ತು.
ಏನಿದು ಕಳವಳಕಾರಿ ಘಟನೆ
ಬೆಂಗಳೂರಿನ ಬಿಇಎಲ್ ರೋಡ್‌ನಲ್ಲಿರುವ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನ ಶೌಚಗೃಹದೊಳಗೆ ಟಾಯ್ಲೆಟ್ ಸೀಟ್‌ಗೆ ಎದುರೇ ಇರಿಸಿದ್ದ ಡಸ್ಟ್ ಬಿನ್‌ನಲ್ಲಿ ಸಣ್ಣ ತೂತು ಕೊರೆದು ಇರಿಸಲಾಗಿತ್ತು. ಅದಕ್ಕೆ ಸರಿಯಾಗಿ ಮೊಬೈಲ್ ಫೋನ್‌ನ ಕ್ಯಾಮೆರಾ ಸೆಟ್ ಮಾಡಿ ಇರಿಸಿದ್ದು, ಅದು 2 ಗಂಟೆಗೂ ಹೆಚ್ಚು ಹೊತ್ತಿನಿಂದ ಆನ್ ಆಗಿಯೇ ಇತ್ತು.
ಮಹಿಳೆಯೊಬ್ಬರು ಅದೇ ಟಾಯ್ಲೆಟ್ ಹೋದಾಗ ಸಂದೇಹಗೊಂಡು ಡಸ್ಟ್ ಬಿನ್ ತೆರೆದು ನೋಡಿದಾಗ ಅದರಲ್ಲಿ ವಿಡಿಯೋ ರೆಕಾರ್ಡಿಂಗ್ ಮೋಡ್‌ನಲ್ಲಿದ್ದ ಸ್ಮಾರ್ಟ್‌ಫೋನ್ ಪತ್ತೆಯಾಗಿತ್ತು. ಕೂಡಲೇ ಕಾಫಿ ಔಟ್‌ಲೆಟ್‌ನ ಮ್ಯಾನೇಜರ್ ಅನ್ನು ಕರೆದು ಎಚ್ಚರಿಸಿದ್ದಲ್ಲದೆ, ಅದು ಅದೇ ಹೋಟೆಲ್ ಉದ್ಯೋಗಿಯದ್ದು ಎಂದು ದೃಢಪಟ್ಟಿತು. ಕೂಡಲೇ ಅವರು ಪೊಲೀಸರಿಗೂ ವಿಷಯ ಮುಟ್ಟಿಸಿದರು. ಅದಾಗುತ್ತಿದ್ದಂತೆ ಪೊಲೀಸರು ಕೂಡ ಹೆಚ್ಚು ತಡವಿಲ್ಲದೇ ಕೆಫೆ ಬಂದು ವಿಚಾರಣೆ ನಡೆಸಿದರು. ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆರೋಪಿ ಉದ್ಯೋಗಿ ಕೆಲಸದಿಂದ ವಜಾ; ಮಹಿಳೆ ಕಳವಳಕಾರಿ ಘಟನೆಯ ವಿವರ ನೀಡಿದ್ದು ಹೀಗೆ
"ಫೋನ್ ಅಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಒಬ್ಬರಿಗೆ ಸೇರಿದ್ದಾಗಿತ್ತು. ಬಹುಬೇಗನೆ ಆ ವ್ಯಕ್ತಿಯನ್ನು ಕೆಫೆಯ ಸಿಬ್ಬಂದಿ ಪತ್ತೆ ಹಚ್ಚಿದರು. ಕೂಡಲೇ ಪೊಲೀಸರಿಗೆ ಕರೆ ಮಾಡಲಾಯಿತು. ಅವರು ಬೇಗ ಕೆಫೆಗೆ ಆಗಮಿಸಿದ್ದಲ್ಲದೆ, ಆ ಆರೋಪಿಯ ವಿರುದ್ಧ ಕ್ರಮ ಜರುಗಿಸಿದರು. ಇದು ಅತ್ಯಂತ ಕಳವಳಕಾರಿ, ಭೀತಿ ಹುಟ್ಟಿಸುವಂತಹ ಕೃತ್ಯ. ಯಾವುದೇ ಕೆಫೆ ಅಥವಾ ರೆಸ್ಟೋರೆಂಟ್‌ಗೆ ಹೋದರೆ ಅಲ್ಲಿ ಶೌಚಗೃಹ ಬಳಸುವ ಮೊದಲು ಪೂರ್ತಿಯಾಗಿ ಪರಿಶೀಲಿಸಿ. ಅವು ಎಷ್ಟೇ ಪ್ರಸಿದ್ದವಾಗಿದ್ದರೂ ನಿರ್ಲಕ್ಷಿಸಬೇಡಿ. ನಾನು ಇನ್ನು ಮುಂದೆ ಬಳಸುವ ಯಾವುದೇ ವಾಶ್‌ರೂಮ್‌ನಲ್ಲಿ ಜಾಗರೂಕಳಾಗಿರುತ್ತೇನೆ. ನೀವೂ ಅಷ್ಟೆ, ಇದನ್ನು ಪಾಲಿಸಿ”ಎಂದು ಮಹಿಳೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಈ ಪೋಸ್ಟ್‌ನ ಸ್ಕ್ರೀನ್ ಶಾಟ್ ಅನ್ನು ಮತ್ತೊಬ್ಬ ಮಹಿಳೆ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ್ದು, ಜನರ ಗಮನಸೆಳೆದಿದೆ.
ಇದೇ ವೇಳೆ, ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಥರ್ಡ್ ವೇವ್ ಕಾಫಿಯ ಆಡಳಿತ ಮಂಡಳಿ ಪ್ರತಿನಿಧಿ, "ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಯೋಗಕ್ಷೇಮ ಯಾವಾಗಲೂ ನಮ್ಮ ಆದ್ಯತೆಯಾಗಿದೆ. ಆಗಸ್ಟ್ 10 ರಂದು ಬಿಇಎಲ್ ರೋಡ್ ಕೆಫೆಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗೆ ಸಂಬಂಧಿಸಿ, ಆರೋಪಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ. ನಾವು ಇಂತಹ ವಿಚಾರವನ್ನು ಸಹಿಸುವುದೇ ಇಲ್ಲ. ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸುತ್ತೇವೆ. ಸೂಕ್ತ ಕ್ರಮಕ್ಕಾಗಿ ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.