logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕ, ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆ

ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕ, ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆ

Umesh Kumar S HT Kannada

May 17, 2024 09:22 AM IST

google News

ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕನ ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆಯ ಕ್ರಮಕ್ಕೆ ವ್ಯಾಪಕ ಶ್ಲಾಘನೆ. (ಸಾಂಕೇತಿಕ ಚಿತ್ರ)

  • ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಚಾಲಕನ ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆ, ಅದರ ಪೂರ್ಣ ವಿವರವನ್ನು ರೆಡ್ಡಿಟ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹೊಸ ಹೊಸ ವಂಚನಾ ಕ್ರಮಗಳ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದ್ದು, ಈ ವಿದ್ಯಮಾನದ ವಿವರ ಹೀಗಿದೆ.

ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕನ ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆಯ ಕ್ರಮಕ್ಕೆ ವ್ಯಾಪಕ ಶ್ಲಾಘನೆ. (ಸಾಂಕೇತಿಕ ಚಿತ್ರ)
ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕನ ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆಯ ಕ್ರಮಕ್ಕೆ ವ್ಯಾಪಕ ಶ್ಲಾಘನೆ. (ಸಾಂಕೇತಿಕ ಚಿತ್ರ) (Reddit/@Whyshnahwe)

ಬೆಂಗಳೂರು: ಸ್ಕ್ರೀನ್ ಶಾಟ್ ತೋರಿಸಿ ಹೆಚ್ಚು ಹಣ ವಸೂಲಿ ಮಾಡಲೆತ್ನಿಸಿದ ಓಲಾ ಚಾಲಕನೊಬ್ಬನ ಪ್ರಯತ್ನವನ್ನು ಒಂದೇಟಿಗೆ ವಿಫಲಗೊಳಿಸಿದ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ವೈಷ್ಣವಿ (Whyshnahwe) ಎಂಬ ಯೂಸರ್ ನೇಮ್ ಹೊಂದಿರುವ ರೆಡ್ಡಿಟ್‌ ಬಳಕೆದಾರರಾಗಿರುವ ಮಹಿಳೆ, ಈ ಘಟನೆಯ ಸಂಪೂರ್ಣ ವಿವರ ನೀಡಿದ್ದು, ಹಣಕಾಸು ವಂಚನೆಯ ಮತ್ತೊಂದು ಮುಖವನ್ನು ಪರಿಚಯಿಸಿ, ಬೆಂಗಳೂರಿಗರನ್ನು ಎಚ್ಚರಿಸಿದ್ದಾರೆ. 

ಹಣಕಾಸು ವಂಚನೆಯ ಮಾದರಿಗಳು ಹಲವು. ವಂಚಕರು, ಸುಲಭವಾಗಿ ಹಣ ಮಾಡುವ ದಂಧೆಗೆ ಇಳಿದವರು ನಿತ್ಯವೂ ಹೊಸ ಹೊಸ ಮಾದರಿಯನ್ನು ಹಣ ಸುಲಿಗೆ ಮಾಡಲು ಬಳಸುತ್ತಿರುವ ಕಾರಣ, ತಮ್ಮ ತಮ್ಮ ಅನುಭವಗಳನ್ನು ಈ ರೀತಿ ಹಂಚಿಕೊಂಡರೆ ಉಳಿದವರು ಜಾಗೃತರಾಗಲು ಅನುಕೂಲವಾಗುತ್ತದೆ ಎಂಬ ಪ್ರತಿಕ್ರಿಯೆಗಳೂ ಅಲ್ಲಿ ವ್ಯಕ್ತವಾಗಿವೆ. 

ಬೆಂಗಳೂರಿನ ರೆಡ್ಡಿಟ್ ಯೂಸರ್ ವೈಷ್ಣವಿ ಅವರಿಗಾದ ವಂಚನೆಯ ಅನುಭವ ಹೀಗಿದೆ

ವೈಷ್ಣವಿ ಅವರು ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಿರುವುದು ಇಷ್ಟು -

“ಬೆಂಗಳೂರಿನ ಜೆಪಿ ನಗರ 3ನೇ ಹಂತದಿಂದ ವಿಲ್ಸನ್‌ ಗಾರ್ಡನ್‌ಗೆ ಓಲಾ ಕ್ಯಾಬ್‌ ಬುಕ್ ಮಾಡಿದೆ. ಆದರೆ ಅದು ‘ಅಸಹಜ’ ರೀತಿಯಲ್ಲಿ ಮುಗಿಯಿತು. ಕಾರಣ, ಕ್ಯಾಬ್ ಚಾಲಕ ತನ್ನ ಫೋನ್ ತೆಗೆದು ತೋರಿಸುತ್ತ “ಮೇಡಂ 749 ರೂಪಾಯಿ ಆಯಿತು” ಎಂದು ಹೇಳಿದ್ದು!.

ನನ್ನ ಫೋನ್‌ನಲ್ಲಿ ಓಲಾ ಆಪ್‌ 254 ರೂಪಾಯಿ ತೋರಿಸುತ್ತಿತ್ತು. ಅಚ್ಚರಿಯಿಂದ ಇದ್ಯಾಕೆ ಹೀಗೆ ಎಂದು ಚಾಲಕನನ್ನು ಕೇಳಿದೆ. ಆತನೂ “ಆಘಾತ”ಕ್ಕೆ ಒಳಗಾದವನಂತೆ ನಟಿಸಿ, ಬಹುಶಃ ನಿಮ್ಮ ಓಲಾ ಮನಿ ಬಾಕಿ ಇದ್ದಿರಬಹುದು, ಈಗ ಕೊಡಿ. ನಂತರ ಆಪ್‌ನಲ್ಲಿ ದೂರು ನೀಡಿ ಆ ಹಣ ವಾಪಸ್ ಪಡ್ಕೊಳ್ಳಿ ಎಂದ.  

ಆತನ ನಡವಳಿಕೆ ಮತ್ತು ಮಾತುಗಳು ನನ್ನ ಸಂದೇಹವನ್ನು ಇನ್ನಷ್ಟು ಹೆಚ್ಚಿಸಿತು. ಫೋನ್ ಕೊಡುವಂತೆ ಕೇಳಿದೆ. ಆತ ಫೋನ್ ಹತ್ತಿರ ಹಿಡಿದು ತೋರಿಸಿದ. ಬಳಿಕ ಆತನ ಅದನ್ನು ನನ್ನ ಕೈಗೆ ಕೊಟ್ಟ. ಆ ಇಮೇಜ್ ಹಿನ್ನೆಲೆಯಲ್ಲಿ ಓಲಾ ಆಪ್ ಇನ್ನೂ ಚಾಲ್ತಿಯಲ್ಲಿರುವುದು ಕಂಡುಬಂತು. (ಓಲಾ ಆಪ್ ಓಪನ್ ಇದ್ದರೆ ಅದರ ಪುಟ್ಟ ಲೋಗೋ ಮೇಲೆ ಕಾಣುತ್ತಿರುತ್ತದೆ). ಅಲ್ಲಿಗೆ ಅದೊಂದು ಹಗರಣ ಎಂಬುದು ಖಚಿತವಾಯಿತು. ಆತ ತೋರಿಸುತ್ತಿದ್ದುದು ಸ್ಕ್ರೀನ್ ಶಾಟ್ ಎಂಬುದು ಮನವರಿಕೆಯಾಯಿತು. 

ಓಲಾ ಆಪ್ ಲೋಗೋವನ್ನು ಮುಟ್ಟಿದೆ. ಅದು ಓಪನ್ ಆಯಿತು. ಅಲ್ಲಿ ಆತ ಟ್ರಿಪ್ ಕೊನೆಗೊಳಿಸದೇ ಇರುವುದು ಕಂಡುಬಂತು. ನನಗೇನೂ ಗೊತ್ತಿಲ್ಲದಂತೆ ಓಲಾ ಟ್ರಿಪ್ ಕೊನೆಗೊಳಿಸಿಲ್ವಾ ಎಂದು ಕೇಳಿದೆ. ಅನಿರೀಕ್ಷಿತ ಪ್ರಶ್ನೆಗೆ ತಡಬಡಾಯಿಸಿದ ಚಾಲಕ ನನ್ನ ಕೈಯಿಂದ ಫೋನ್ ಎಳೆದು ತಗೊಂಡ.

ಓಲಾ ಟ್ರಿಪ್ ಕೊನೆಗೊಂಡಿದೆಯೇ ಎಂದು ಒಮ್ಮೆ ನೋಡ್ತೇನೆ, ಫೋನ್ ಕೊಡಿ ಒಮ್ಮೆ ಎಂದು ಆತನಲ್ಲಿ ಕೇಳಿದೆ. ಈ ಸಲ ಆತ ಫೋನ್ ಕೊಡಲಿಲ್ಲ. ಆತ ಫೋನ್ ಹಿಡಿದು ತೋರಿಸಿದ, ಕೂಡಲೇ ನಾನು ಅಲ್ಲಿ ಎಂಡ್ ಟ್ರಿಪ್‌ ಅಂತ ಇದ್ದ ಕೆಂಪು ಐಕಾನ್‌ ಅನ್ನು ಕ್ಲಿಕ್ ಮಾಡಿದೆ. 

ಈಗ ಟ್ರಿಪ್ ಕೊನೆಗೊಂಡಿತು ಅಲ್ವ ಸರ್ ಎಂದು ಆತನನ್ನು ಕೇಳಿದೆ. ಕ್ಯಾಬ್ ಚಾಲಕನಿಗೆ ಭಾರಿ ಮುಖಭಂಗವಾಯಿತು. ನಿಜವಾದ ಪ್ರಯಾಣ ಶುಲ್ಕ ಪಾವತಿಸಿ ಕ್ಯಾಬ್ ಇಳಿದು ಮುನ್ನಡೆದೆ" 

ಬೆಂಗಳೂರಿನ ರೆಡ್ಡಿಟ್ ಯೂಸರ್ ವೈಷ್ಣವಿ ಅವರ ಪೋಸ್ಟ್‌

ಬೆಂಗಳೂರಿನ ರೆಡ್ಡಿಟ್ ಯೂಸರ್ ವೈಷ್ಣವಿ ಅವರ ರೆಡ್ಡಿಟ್ ಪೋಸ್ಟಿನ ಸ್ಕ್ರೀನ್ ಶಾಟ್‌

ಓದುಗರ ಪ್ರತಿಕ್ರಿಯೆ, ಪ್ರಶಂಸೆ, ಮೆಚ್ಚುಗೆ

ವೈಷ್ಣವಿ ಅವರ ಪೋಸ್ಟ್‌ಗೆ ರೆಡ್ಡಿಟ್ ಬಳಕೆದಾರರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ತಮ್ಮ ಆಲೋಚನೆಗಳನ್ನೂ ಹಂಚಿಕೊಂಡಿದ್ಧಾರೆ.

"ಯಾರಾದರೂ ಅವಸರದಲ್ಲಿದ್ದರೆ, ಅವರು ಕೇವಲ ಪಾವತಿಸಿ ಹೋಗುತ್ತಾರೆ ಎಂದು ಊಹಿಸಿ ಆತ ಹಾಗೆ ಮಾಡಿರಬೇಕು. ಆದರೆ ಈ ಮಹಿಳೆ ಇಲ್ಲಿ ಉತ್ತಮ ಕೆಲಸ ಮಾಡಿದರು" ಎಂದು ಒಬ್ಬ ಪ್ರತಿಕ್ರಿಯೆ ನೀಡಿದ್ದಾರೆ.

"ಅದಕ್ಕಾಗಿಯೇ ನಾನು ಓಲಾಗಿಂತ ಉಬರ್‌ಗೆ ಆದ್ಯತೆ ನೀಡುತ್ತೇನೆ. ಕೊನೆಯಲ್ಲಿ ನಾನು ಚಾಲಕನಿಗೆ ಎಷ್ಟು ಪಾವತಿಸಬೇಕು ಎಂದು ಅಪ್ಲಿಕೇಶನ್ ನನಗೆ ಹೇಳುತ್ತದೆ. ನನ್ನ ಪ್ರವಾಸ ಅನುಭವವನ್ನು ಹಂಚಿಕೊಳ್ಳಲು ನನಗೆ ಅವಕಾಶ ನೀಡುತ್ತದೆ ಎಂದು ಇನ್ನೊಬ್ಬರು ಹೇಳಿಕೊಂಡಿದ್ದಾರೆ.

"ವಂಚನಾ ಕ್ರಮಗಳು ವಿಕಸನಗೊಳ್ಳುತ್ತಿವೆ. ನೀವು ಅದಕ್ಕೆ ಬಲಿಯಾಗದಿರುವುದು ಒಳ್ಳೆಯದು, ಮತ್ತು ಅದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಈ ವಂಚನಾ ಕ್ರಮಗಳನ್ನು ಕಂಡುಹಿಡಿದು ಅಳವಡಿಸುತ್ತಿರುವ ಚಾಲಕರ ಕೌಶಲದಿಂದ ಪ್ರಭಾವಿತನಾಗಿದ್ದೇನೆ" ಎಂದು ಮೂರನೆಯವರು ಪ್ರತಿಕ್ರಿಯಿಸಿದ್ದಾರೆ.

"ನಾನು ನಿನ್ನೆ ಅಂತಹ ವಂಚನೆಗೆ ಒಳಗಾದೆ. ಚಾಲಕ ತನ್ನ ಬಿಲ್ 1946 ಎಂದು ನನಗೆ ತೋರಿಸಿದನು. ಆದರೆ ನನ್ನ ಉಬರ್ ಬಿಲ್‌ 678 ಎಂದು ತೋರಿಸುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಹೆತ್ತವರು ನನ್ನೊಂದಿಗೆ ಇದ್ದ ಕಾರಣ ಮತ್ತು ಅವನು ರಂಪ ಮಾಡುತ್ತಿದ್ದುದರಿಂದ ದುಡ್ಡು ಪಾವತಿಸಬೇಕಾಗಿ ಬಂತು. ಎಂದು ಮತ್ತೊಬ್ಬರು ಹೇಳಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ