logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಜನವರಿ ತಿಂಗಳ ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಕೆ ಸಾಧ್ಯತೆ

Bengaluru News: ಜನವರಿ ತಿಂಗಳ ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಕೆ ಸಾಧ್ಯತೆ

Umesh Kumar S HT Kannada

Jan 03, 2024 09:40 PM IST

google News

ಬೆಸ್ಕಾಂ ಗ್ರಾಹಕರಿಗೆ ಜನವರಿ ತಿಂಗಳ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

  • ಬೆಸ್ಕಾಂ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ. ಜನವರಿ ತಿಂಗಳ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಕೆಯಾಗುವ ಸಾಧ್ಯತೆ ಇದೆ. ಕಂಪನಿಗಳ ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚದ ಹೊಂದಾಣಿಕೆ (ಎಫ್‌ಪಿಪಿಸಿಎ)ಯಲ್ಲಿ ಇಳಿಕೆ ಕಂಡುಬಂದಿರುವುದು ಇದಕ್ಕೆ ಕಾರಣ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಬೆಸ್ಕಾಂ ಗ್ರಾಹಕರಿಗೆ ಜನವರಿ ತಿಂಗಳ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೆಸ್ಕಾಂ ಗ್ರಾಹಕರಿಗೆ ಜನವರಿ ತಿಂಗಳ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ಬೆಸ್ಕಾಂ ಗ್ರಾಹಕರಿಗೆ ಒಂದು ಶುಭ ಸುದ್ದಿ. ಜನವರಿ ತಿಂಗಳ ವಿದ್ಯುತ್ ಬಳಕೆಯ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಕಡಿಮೆಯಾಗಲಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದ ಹೊಂದಾಣಿಕೆ ಶುಲ್ಕದಲ್ಲಿ ಇಳಿಕೆಯಾಗಿರುವುದು ಬಿಲ್‌ನಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 37 ಪೈಸೆ ಕಡಿಮೆಯಾಗಲು ಕಾರಣ ಎಂದು ದ ಹಿಂದೂ ವರದಿ ಮಾಡಿದೆ.

ಬೆಸ್ಕಾಂ ಗ್ರಾಹಕರ ಪಾಲಿಗೆ 2024ರ ಆರಂಭ ಮುದ ನೀಡುವ ಅಚ್ಚರಿಯೊಂದಿಗೆ ಶುರುವಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳ ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚದ ಹೊಂದಾಣಿಕೆ (ಎಫ್‌ಪಿಪಿಸಿಎ)ಯಲ್ಲಿ ಇಳಿಕೆ ಕಂಡುಬಂದಿದೆ. ಈ ಇಳಿಕೆಯ ಕಾರಣ ವಿದ್ಯುತ್ ಸರಬರಾಜು ಕಂಪನಿ ಕಂಪನಿಗಳಿಗೂ ಹೊರೆ ಸ್ವಲ್ಪ ಕಡಿಮೆಯಾಗಿದ್ದು, ಅದನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲು ಕಂಪನಿಗಳು ತೀರ್ಮಾನಿಸಿವೆ.

ಈ ಸಂಬಂಧ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಒಂದನ್ನು ಹೊರಡಿಸಿದೆ. ಅದರಲ್ಲಿ, ನವೆಂಬರ್ ತಿಂಗಳಲ್ಲಿ ಎಲ್ಲ ಕೆಟಗರಿಯ ಬೆಸ್ಕಾಂ ಗ್ರಾಹಕರಿಗೆ ಅನ್ವಯವಾಗುವ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆ ಇಳಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವ ವಿಚಾರವಿದೆ.

ಸರಳವಾಗಿ ಇದನ್ನು ವಿವರಿಸುವುದಾದರೆ, ಒಬ್ಬ ವಿದ್ಯುತ್ ಬಳಕೆದಾರ 100 ಯೂನಿಟ್ ವಿದ್ಯುತ್ ಬಳಸಿದರೆ, ಆ ಬಳಕೆದಾರನಿಗೆ ಬರುವ ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್‌ಗೆ 37 ಪೈಸೆಯಂತೆ 3.7 ರೂಪಾಯಿ ಇಳಿಕೆಯಾಗಲಿದೆ.

ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚದ ಹೊಂದಾಣಿಕೆ (ಎಫ್‌ಪಿಪಿಸಿಎ) ಇಳಿಕೆಯಾಗುವುದು ಇದೇ ಮೊದಲ ಸಲವೇನಲ್ಲ. ಇದೇ ಹಣಕಾಸು ವರ್ಷದಲ್ಲಿ ಒಮ್ಮೆ 9 ಪೈಸೆ, ಮತ್ತೊಮ್ಮೆ 6 ಪೈಸೆ ಇಳಿಕೆಯಾಗಿತ್ತು. ಇದರಿಂದಾಗಿ ಗ್ರಾಹಕರ ಬಿಲ್‌ನಲ್ಲಿ ವಿದ್ಯುತ್ ದರ ಕಡಿಮೆಯಾಗಿತ್ತು.

ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಪಿಸಿಎಲ್) ನಿಂದ ಖರೀದಿಸಲು ಕೆಇಆರ್‌ಸಿ ಅನುಮೋದಿಸಿದ ವಿದ್ಯುತ್ ಖರೀದಿ ವೆಚ್ಚ ಮತ್ತು ನಿಜವಾದ ವಿದ್ಯುತ್ ಖರೀದಿ ವೆಚ್ಚದ ನಡುವೆ 150 ಕೋಟಿ ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಇದು ಎಫ್‌ಪಿಪಿಸಿಎ ಇಳಿಕೆಗೆ ಕಾರಣವಾಗಿರುವಂಥದ್ದು ಎಂದು ಬೆಸ್ಕಾಂ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಬೆಸ್ಕಾಂ ಹೊರತುಪಡಿಸಿ, ಕೆಇಆರ್‌ಸಿಯು ಮೆಸ್ಕಾಂಗೆ ಪ್ರತಿ ಯೂನಿಟ್‌ಗೆ -31, ಹೆಸ್ಕಾಂಗೆ -3 ಪೈಸೆ, ಗೆಸ್ಕಾಂಗೆ -51 ಪೈಸೆ, ಮತ್ತು ಸಿಇಎಸ್‌ಸಿಗೆ -39 ಪೈಸೆಯ ಅದೇ ಬಿಲ್ಲಿಂಗ್ ಸೈಕಲ್‌ಗೆ ಎಫ್‌ಪಿಪಿಸಿಎ ಶುಲ್ಕ ಇಳಿಕೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ. ಇದಲ್ಲದೆ, ಕಲ್ಲಿದ್ದಲು ಖರೀದಿ ಪ್ರಕ್ರಿಯೆಗೆ ಮಾಡಿರುವ ವೆಚ್ಚದಲ್ಲೂ ಇಳಿಕೆಯಾಗಿರುವುದು ಕೂಡ ಈ ಸಲದ ಬಿಲ್‌ ದರ ಇಳಿಕೆ ಕಾರಣವಾಗಿದೆ ಎಂದು ವರದಿ ವಿವರಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ