BESCOM: ಮಾ 1ರಿಂದ ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ; ತಾಂತ್ರಿಕ ನಿರ್ವಹಣೆ ವೆಚ್ಚ ಎಲ್ಲಾ ಗ್ರಾಹಕರಿಗೂ ಹಂಚೋದಂತೆ
Published Mar 26, 2025 09:36 AM IST
ಮೀಟರ್ ಬೋರ್ಡ್ (ಸಾಂಕೇತಿಕ ಚಿತ್ರ)
- BESCOM Smart Meters: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾರ್ಚ್ 1 ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಪ್ರಾರಂಭಿಸಿದೆ. ಪ್ರತಿ ಮೀಟರ್‌ನ ತಿಂಗಳ 75ರೂ ತಾಂತ್ರಿಕ ನಿರ್ವಹಣಾ ವೆಚ್ಚವನ್ನು ಎಲ್ಲಾ ಗ್ರಾಹಕರಿಗೂ ಸೇರಿ ಹಂಚಿಕೆ ಮಾಡಲಿದೆ.

ಬೆಂಗಳೂರು: ರಾಜ್ಯದಲ್ಲಿ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಆದರೆ ಈಗಾಗಲೇ ಇರುವ ಸಂಪರ್ಕ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ ಎಂದು ಇಂಧನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.
ಮಾರ್ಚ್ 1 ರಿಂದಲೇ ಬೆಸ್ಕಾಂ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿದೆ. ಆದರೆ ಇದರ ತಾಂತ್ರಿಕ ನಿರ್ವಹಣಾ ವೆಚ್ಚವನ್ನು ಗ್ರಾಹಕರೇ ಭರಿಸಬೇಕಿದೆ, ಅಂದರೆ ತಾಂತ್ರಿಕ ನಿರ್ವಹಣಾ ವೆಚ್ಚವನ್ನು ಎಲ್ಲಾ ಗ್ರಾಹಕರಿಗೂ ಹಂಚಿಕೆ ಮಾಡಲಾಗುತ್ತದೆ ಎಂದು ಟೈಮ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಸುಂಕ ಹೆಚ್ಚಳದ ಮೂಲಕ ಪಿಂಚಣಿ ಮತ್ತು ಗ್ರಾಚ್ಯುಟಿ ಪಾವತಿಗಳ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದ ಕೆಲವೇ ದಿನಗಳಲ್ಲಿ ಈ ಆದೇಶ ಬಂದಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಎಲ್ಲಾ ಗ್ರಾಹಕರಿಂದ ಸ್ಮಾರ್ಟ್ ಮೀಟರ್ ನಿರ್ವಹಣಾ ವೆಚ್ಚವನ್ನು ವಸೂಲಿ ಮಾಡುವಂತೆ ಬೆಸ್ಕಾಂಗೆ ನಿರ್ದೇಶನ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಶುಲ್ಕದ ಪರಿಣಾಮವು ಬಹಳ ಕಡಿಮೆ ಇದೆ. ಪ್ರತಿ ಬಿಲ್‌ಗೆ ಕೇವಲ 0.01 ಪೈಸೆಯಷ್ಟಿರುತ್ತದೆ ಎಂದು ಹೇಳಲಾಗುತ್ತಿದೆ. ಎಸ್ಕಾಂಗಳು ನಿರ್ಧಾರದ ಪರಿಶೀಲನೆಗಾಗಿ ಕೆಇಆರ್‌ಸಿಗೆ ಮೇಲ್ಮನವಿ ಸಲ್ಲಿಸಬಹುದೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ ‘ಮೀಟರ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಬದಲಾಯಿಸುತ್ತಿರುವ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ಕರ್ನಾಟಕವು ಹಂತ ಹಂತವಾಗಿ ವಿದ್ಯುತ್ ಪೂರೈಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಇದರ ಪರಿಣಾಮವಾಗಿ, ಸ್ಮಾರ್ಟ್ ಮೀಟರ್‌ಗಳು ಹೊಸ ಮತ್ತು ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಕಡ್ಡಾಯವಾಗುತ್ತವೆ, ಇದು ಒಟ್ಟು ಗ್ರಾಹಕರ ಸಂಖ್ಯೆಯ ಸುಮಾರು ಶೇ 3-4ರಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ‘ ಎಂದಿದ್ದಾರೆ.
ಬೆಸ್ಕಾಂ ಅಧಿಕಾರಿಯೊಬ್ಬರು ಟೈಮ್ ಆಫ್ ಇಂಡಿಯಾಗೆ ವಿವರಿಸಿದ ಪ್ರಕಾರ ಪ್ರತಿ ಸ್ಮಾರ್ಟ್ ಮೀಟರ್‌ನ ಬೆಲೆ ₹4,998 ಆಗಿದ್ದು, ಗ್ರಾಹಕರು ಅದನ್ನು ಪೂರ್ಣವಾಗಿ ಪಾವತಿಸಬೇಕಾಗುತ್ತದೆ.
10 ವರ್ಷಗಳ ಕಾಲ ಬಾಳಿಕೆ ಬರುವ ಮೀಟರ್ ಅಳವಡಿಕೆ ಹಾಗೂ ಸಾಫ್ಟ್‌ವೇರ್ ನಿರ್ವಹಣೆ ಒಳಗೊಂಡಂತೆ ತಿಂಗಳ ಲೆಕ್ಕದಲ್ಲಿ 116 ರೂ ಮಾಸಿಕ ಶುಲ್ಕವಾಗಬಹುದು. ಹೆಚ್ಚುವರಿಯಾಗಿ, ಪ್ರತಿ ಮೀಟರ್‌ಗೆ ₹75 ಮಾಸಿಕ ನಿರ್ವಹಣಾ ಶುಲ್ಕವನ್ನು ಬೆಸ್ಕಾಂ ಭರಿಸುತ್ತದೆ. ಆದರೆ ವಾರ್ಷಿಕ ಸುಂಕ ಹೊಂದಾಣಿಕೆಯ ಆಧಾರದ ಮೇಲೆ ಇದನ್ನು ಎಲ್ಲಾ ಗ್ರಾಹಕರಿಗೂ ಹಂಚಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
15,568 ಕೋಟಿ ರೂ ಅವ್ಯವಹಾರ
ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಮತ್ತು ಇತರ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು ₹15,568 ಕೋಟಿ ಅವ್ಯವಹಾರ ನಡೆಸಿವೆ ಎಂದು ಬಿಜೆಪಿಯ ಸಿ ಎನ್ ಅಶ್ವತ್ಥ ನಾರಾಯಣ್ ಆರೋಪಿಸಿದ್ದಾರೆ.