ಮಣ್ಣಿನ ಮಕ್ಕಳ ನೆರವಿಗೆ ಬಂತು ಭೂಸಾರ ಆ್ಯಪ್; ಕೃಷಿಕರಿಗೆ ಭೂಫಲವತ್ತತೆ ಮಾಹಿತಿ, ಆರೋಗ್ಯ ಕಾರ್ಡ್ ಒದಗಿಸಲು ಸಹಕಾರಿ ಇದು
Aug 08, 2024 04:06 PM IST
ಮಣ್ಣಿನ ಮಕ್ಕಳ ನೆರವಿಗೆ ಬಂತು ಭೂಸಾರ ಆ್ಯಪ್; ಕೃಷಿಕರಿಗೆ ಭೂಫಲವತ್ತತೆ ಮಾಹಿತಿ, ಆರೋಗ್ಯ ಕಾರ್ಡ್ ಒದಗಿಸಲು ಸಹಕಾರಿ ಇದು. ಕೃಷಿ ಸಚಿವ ಚಲುವರಾಯಸ್ವಾಮಿ ಇದನ್ನು ಬಿಡುಗಡೆ ಮಾಡಿದರು.
ಕೃಷಿ ಉತ್ಪಾದನೆ, ಕೃಷಿಯ ಆದಾಯ ಹೆಚ್ಚಳದ ವಿಷಯ ಸದ್ಯ ಹೆಚ್ಚು ಚರ್ಚೆಯಲ್ಲಿರುವಂಥದ್ದು. ಇದಕ್ಕೆ ಪೂರಕವಾಗಿ ಈಗ ಕೃಷಿ ಇಲಾಖೆಯು ಮಣ್ಣಿನ ಮಕ್ಕಳ ನೆರವಿಗೆ ಭೂಸಾರ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭೂಫಲವತ್ತತೆ ಮತ್ತು ಇತರೆ ಮಾಹಿತಿ ಸೇರ್ಪಡೆಯಾಗಲಿದ್ದು. ಕೃಷಿಕರು ಆರೋಗ್ಯ ಕಾರ್ಡ್ ಪಡೆಯಲು ಸಹಕಾರಿಯಾಗಲಿದೆ.
ಬೆಂಗಳೂರು: ಕೃಷಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿಕರಿಗೆ ನೆರವಾಗಲು ಕೃಷಿ ಇಲಾಖೆ ಮುಂದಾಗಿದ್ದು, ಭೂಸಾರ ಎಂಬ ಹೊಸ ಆ್ಯಪ್ ಒಂದನ್ನು ಗುರುವಾರ (ಆಗಸ್ಟ್ 8) ಬಿಡುಗಡೆ ಮಾಡಿದೆ. ಮಣ್ಣಿನ ಆರೋಗ್ಯ ರಕ್ಷಣೆಯ ಮೂಲಕ ರೈತರಿಗೆ ಉತ್ಪಾದನೆ ಹೆಚ್ಚಳಕ್ಕೆ ನೆರವಾಗುವ ಈ ಆ್ಯಪ್ ಅನ್ನು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.
ಕೃಷಿ ಆಯುಕ್ತಾಲಯದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಹೊಸ ಕೃಷಿ ತಂತ್ರಜ್ಞಾನಗಳ ಕುರಿತ ಕಾರ್ಯಾಗಾರದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡುತ್ತ, ಈ ಭೂಸಾರ ಆ್ಯಪ್ ಅನ್ನು ಗರಿಷ್ಠ ಪ್ರಮಾಣದಲ್ಲಿ ಕೃಷಿಕರಿಗೆ ತಲುಪಿಸುವಂತೆ ಸೂಚಿಸಿದರು.
ಅವೈಜ್ಞಾನಿಕ ಕೃಷಿ ಪದ್ಧತಿ, ಅತಿಯಾದ ರಾಸಾಯನಿಕ ಬಳಕೆಯ ಕಾರಣ ಮಣ್ಣಿನ ಸವಕಳಿ ಉಂಟಾಗಿ ಭೂ ಫಲವತ್ತತೆ ಕಡಿಮೆಯಾಗುತ್ತಿದೆ. ಇದಲ್ಲದೆ, ಮಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಅರಿವಿನ ಕೊರತೆ ಕಾರಣ ರೈತರು ಅವೈಜ್ಞಾನಿಕವಾಗಿ ಗೊಬ್ಬರ ಮತ್ತು ಕೀಟನಾಶಕ ಬಳಸುತ್ತಿದ್ದಾರೆ. ಇದು ಕೂಡ ಮಣ್ಣಿನ ಸತ್ತ್ವ ಹಾಳಾಗಲು ಕಾರಣ. ಅಂತಿಮ ನಷ್ಟವನ್ನವೂ ಸ್ವತಃ ಕೃಷಿಕರೇ ಅನುಭವಿಸುತ್ತಿದ್ದಾರೆ. ಇಂತಹ ಹಾನಿ ಪ್ರಮಾಣ ಕಡಿಮೆ ಮಾಡಿ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ಕೃಷಿಕರಿಗೆ ಈ ಆ್ಯಪ್ ನೆರವಾಗಲಿದೆ ಎಂದು ಸಚಿವ ಚಲುವರಾಯ ಸ್ವಾಮಿ ವಿವರಿಸಿದರು.
ಕನಿಷ್ಠ 5ಲಕ್ಷ ರೈತರ ಜಮೀನಿನ ಮಣ್ಣುಮಾದರಿ ಪರೀಕ್ಷೆ
ಕರ್ನಾಟಕ ರಾಜ್ಯ ಕೃಷಿ ಪ್ರಧಾನವಾಗಿದ್ದು ರೈತ ಸಬಲಿಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ, ಯಾಂತ್ರಿಕವಾಗಿ, ತಾಂತ್ರಿಕವಾಗಿ ಕೃಷಿಕರನ್ನು ಸದೃಡವನ್ನಾಗಿಸುವುದು ನಮ್ಮ ಗುರಿ. ಪ್ರಸಕ್ತ ವರ್ಷ ರಾಜ್ಯದ ಕನಿಷ್ಠ ಐದು ಲಕ್ಷ ರೈತರ ಜಮೀನಿನ ಮಣ್ಣು ಮಾದರಿಗಳನ್ನು ಪರೀಕ್ಷೆ ಮಾಡುವ ಗುರಿ ಇದೆ. ಎಲ್ಲಾ ರೈತರಿಗೂ ಈ ತಂತ್ರಜ್ಞಾನದ ಅರಿವು ಮೂಡಿಸಬೇಕು ಎಂದು ಸಚಿವರು ಹೇಳಿದರು.
ಕೃಷಿ ತಜ್ಞರು ಪರಿಶೋಧಕರು, ವಿಶ್ವವಿದ್ಯಾನಿಲಯಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಗಳು ರೈತರ ಮನೆಬಾಗಿಲನ್ನು ಸುಲಭವಾಗಿ ತಲುಪಬೇಕು ಹಾಗೂ ಅವರಿಗೆ ತರಬೇತಿ ನೀಡಬೇಕು. ಕಾರ್ಯಗಾರಗಳ ಮೂಲಕ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಈ ಜ್ಞಾನವನ್ನು ಕೃಷಿಕರಿಗೆ ವರ್ಗಾಯಿಸಬೇಕಿದೆ. ಕಳೆದ ಸಾಲಿನಲ್ಲಿ ಕೃಷಿ ಇಲಾಖೆ ಶೇಕಡಾ 100 ರಷ್ಟು ಗುರಿ ಸಾಧನೆ ಜೊತೆಗೆ ನಿಗಧಿಗಿಂತ ಹೆಚ್ಚಳ ಕೇಂದ್ರದ ಅನುದಾನ ಪಡೆದು ಕೃಷಿಕರಿಗೆ ತಲುಪಿಸಲಾಗಿದೆ. ಇದೇ ರೀತಿ ಈ ವರ್ಷವೂ ಹೆಚ್ಚಿನ ಕಾಳಜಿ ಹಾಗೂ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿವರಿಸಿದರು.
ಕರ್ತವ್ಯ ಲೋಪ, ನಿರ್ಲಕ್ಷ್ಯ ಸಲ್ಲದು; ಸಚಿವರ ಎಚ್ಚರಿಕೆ
ಕೃಷಿ ಇಲಾಖೆಯ ಕಾರ್ಯಚಟುವಟಿಕೆ ಚುರುಕುಗೊಳಿಸುವುದಕ್ಕಾಗಿ ಇಲಾಖೆಯಲ್ಲಿ ನೆನಗುದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸುಮಾರು 950 ಹುದ್ದೆಗಳ ನೇರ ನೇಮಕಾತಿ ನಡೆಯಲಿದೆ. ಸರ್ಕಾರ ಕೃಷಿಗೆ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸಹ ಬೆಳೆ ವಿಮೆ ಎನ್.ಡಿ.ಆರ್.ಎಫ್ ಪರಿಹಾರ ಹಾಗೂ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರೈತರ ಸಂಕಷ್ಟವನ್ನು ಕಡಿಮೆ ಮಾಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಇದೇ ವೇಳೆ ಎಚ್ಚರಿಸಿದರು.
ಭೂಸಾರ ಆ್ಯಪ್ ವಿಶೇಷ: ಭೂಸಾರ ಮೊಬೈಲ್ ಆ್ಯಪ್ ಮೂಲಕ ಗ್ರಾಮಗಳ ನಕ್ಷೆಯ ಜೊತೆಗೆ ಮಣ್ಣು ಮಾದರಿ ಮಾಹಿತಿ, ಜಮೀನಿನ ಭೌಗೋಳಿಕ ವಿವರ ಹಾಗೂ ಸಂಬಂಧಿಸಿದ ರೈತರ ವಿವರವನ್ನು ಇದೇ ಆ್ಯಪ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದಲ್ಲದೆ, ಬೆಳೆ ವಿವರ, ನೀರಾವರಿ ವಿವರ ಹಾಗೂ ಮಣ್ಣಿನ ವಿವಿಧ ವಿವರಗಳೊಂದಿಗೆ ಫೋಟೋ ಹಾಗೂ ವಿಡಿಯೊ ಮಾಹಿತಿಯನ್ನು ದಾಖಲಿಸಬಹುದು. ಈ ತಂತ್ರಾಂಶದ ಮೂಲಕ ಸಂಗ್ರಹಿಸಿದ ಮಣ್ಣು ಮಾದರಿಗಳಿಗೆ ಪ್ರತ್ಯೇಕ ಐಡಿ ರಚನೆಯಾಗುತ್ತದೆ. ಸದರಿ ಪ್ರತ್ಯೇಕ ಐಡಿಗಳ ಪ್ರತಿಯಾಗಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಿದ ಮಣ್ಣು ಪರೀಕ್ಷಾ ಫಲಿತಾಂಶವನ್ನು ರೈತರ ಮಾಹಿತಿಯೊಂದಿಗೆ ಸಂಯೋಜಿಸಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ತಯಾರಿಸಲಾಗುತ್ತದೆ.
ಕೃಷಿ ಆಯುಕ್ತ ವೈ.ಎಸ್.ಪಾಟೀಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕೃಷಿ ಇಲಾಖೆಯಲ್ಲಿ ಜಾರಿಗೊಳಿಸಿರುವ ಹೊಸ ಯೋಜನೆಗಳು ಮುಂದಿನ ಕಾರ್ಯಸೂಚಿಗಳ ಬಗ್ಗೆ ಅವರು ವಿವರಿಸಿದರು. ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಪದ್ಮಯ್ಯನಾಯಕ್ ಹಾಗೂ ಇಲಾಖೆಯ ಜಂಟಿ ನಿರ್ದೆಶಕರು, ಉಪ ನಿರ್ದೇಶಕರು ಸೇರಿ ಇತರ ಅಧಿಕಾರಿಗಳು ಭಾಗವಹಿಸಿದ್ದರು.