logo
ಕನ್ನಡ ಸುದ್ದಿ  /  ಕರ್ನಾಟಕ  /  Rameshwaram Cafe Blast: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದು ಬಾಂಬ್ ಸ್ಫೋಟ; ದೃಢೀಕರಿಸಿದ ಡಿಜಿಪಿ ಅಲೋಕ್ ಮೋಹನ್, 9 ಜನರಿಗೆ ಗಾಯ

Rameshwaram Cafe Blast: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದು ಬಾಂಬ್ ಸ್ಫೋಟ; ದೃಢೀಕರಿಸಿದ ಡಿಜಿಪಿ ಅಲೋಕ್ ಮೋಹನ್, 9 ಜನರಿಗೆ ಗಾಯ

Umesh Kumar S HT Kannada

Mar 01, 2024 07:07 PM IST

google News

ನಿಗೂಢ ಸ್ಫೋಟ ಸಂಭವಿಸಿದ ದಿ ರಾಮೇಶ್ವರಂ ಕೆಫೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

  • ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ಮಧ್ಯಾಹ್ನ ಸಂಭವಿಸಿದ್ದು ಬಾಂಬ್ ಸ್ಫೋಟ ಎಂದು ಡಿಜಿಪಿ ಅಲೋಕ್ ಮೋಹನ್ ದೃಢೀಕರಿಸಿದ್ದಾರೆ. ಪರಿಣತರ ತಂಡದ ಪರಿಶೀಲನೆ ಬಳಿಕ ಅವರು ಈ ಹೇಳಿಕೆ ನೀಡಿದರು. ಈ ವಿಚಾರವಾಗಿ ವ್ಯಾಪಕ ಕಳವಳ ವ್ಯಕ್ತವಾಗಿದೆ.

ನಿಗೂಢ ಸ್ಫೋಟ ಸಂಭವಿಸಿದ ದಿ ರಾಮೇಶ್ವರಂ ಕೆಫೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ನಿಗೂಢ ಸ್ಫೋಟ ಸಂಭವಿಸಿದ ದಿ ರಾಮೇಶ್ವರಂ ಕೆಫೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರು: ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಯಲ್ಲಿ ಇಂದು(ಮಾ.1) ಮಧ್ಯಾಹ್ನ ಸಂಭವಿಸಿದ್ದು ಬಾಂಬ್ ಸ್ಫೋಟ ಎಂದು ಡಿಜಿಪಿ ಅಲೋಕ್ ಮೋಹನ್ ಖಚಿತಪಡಿಸಿದರು.

ಎಫ್‌ಎಸ್‌ಎಲ್ ತಂಡ ಮತ್ತು ಪೊಲೀಸರ ತಂಡ ಸ್ಥಳಪರಿಶೀಲನೆ ಮಾಡಿದ್ದು, ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಇದರ ವಿಶ್ಲೇಷಣೆ ಮಾಡಿದ ಬಳಿಕ ಸಿಲಿಂಡರ್ ಸ್ಫೋಟ ಅಥವಾ ಬಾಯ್ಲರ್ ಸ್ಫೋಟದ ಸಾಧ್ಯತೆ ಅಲ್ಲಗಳೆಯಲಾಗಿದೆ. ಇದು ಬಾಂಬ್ ಸ್ಪೋಟ ಎಂಬುದು ಖಚಿತವಾಗಿದೆ ಎಂದು ಡಿಜಿಪಿ ಅಲೋಕ್ ಮೋಹನ್ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತ ತಿಳಿಸಿದರು.

ಈ ಸ್ಫೋಟಕ್ಕೆ ಸಂಬಂಧಿಸಿದ ಯಾರ ಮೇಲಾದರೂ ಅನುಮಾನ ಇದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಯಾರ ಮೇಲೂ ಅನುಮಾನ ಇಲ್ಲ. ತನಿಖೆ ಪ್ರಗತಿಯಲ್ಲಿದೆ. ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಕೇಂದ್ರ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರ ತಂಡವೂ ಸ್ಥಳಕ್ಕೆ ಬರಲಿದೆ ಎಂದು ಅಲೋಕ್ ಮೋಹನ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮಾಹಿತಿ ಪಡೆದಿದ್ದಾರೆ. ಎಫ್ಎಸ್​ಎಲ್ ತಂಡ ಸಂಪೂರ್ಣ ಪರಿಶೀಲನೆ ಬಳಿಕ ಮಾಹಿತಿ ನೀಡುತ್ತೇವೆ. ಎಫ್‌ಎಸ್‌ಎಲ್ ತಂಡದ ವರದಿ ಬಂದ ಬಳಿಕ ಸ್ಫೋಟಕ್ಕೆ ಬಳಸಿರುವುದು ಏನು ಎಂಬುದು ಗೊತ್ತಾಗಲಿದೆ ಎಂದು ಅಲೋಕ್ ಮೋಹನ್ ಹೇಳಿದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ; ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಗೃಹ ಸಚಿವ ಡಾ ಜಿ ಪರಮೇಶ್ವರ್

“ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿ ಯಾವುದೇ ಊಹಾತ್ಮಕ ಮಾಹಿತಿ ನೀಡುವುದಿಲ್ಲ. ಘಟನಾ ಸ್ಥಳಕ್ಕೆ ಶುಕ್ರವಾರ ಸಂಜೆ ಅಥವಾ ಶನಿವಾರ ಭೇಟಿ ನೀಡುತ್ತೇನೆ” ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಕುಣಿಗಲ್‌ನಲ್ಲಿ ಶುಕ್ರವಾರ (ಮಾ.1) ತಿಳಿಸಿದರು.

ಸ್ಫೋಟಕ್ಕೆ ಐಇಡಿ ಬಳಕೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಲು ಮಾದರಿ ಸಂಗ್ರಹಿಸಿದ್ದಾರೆ. ಅದರ ಕುರುಹು ಸಿಕ್ಕರೆ ತನಿಖೆ ಮಾಡಲಾಗುತ್ತದೆ. ಐಇಡಿ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಹೇಳುತ್ತಾರೆ. ಆದರೆ ನಿರ್ದಿಷ್ಟವಾದ ಮಾಹಿತಿ ಬರಬೇಕು. ನಾನು ಊಹೆ ಮಾಡಲು ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಡಾ ಜಿ ಪರಮೇಶ್ವರ್ ಅವರ ಜೊತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ರಾಮೇಶ್ವರ ಕೆಫೆ ಸ್ಪೋಟ, ತನಿಖೆ ತೀವ್ರ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟದ ತನಿಖೆ ತೀವ್ರಗೊಂಡಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಾಥಮಿಕ ತನಿಖೆಯ ಪ್ರಕಾರ ಅದು ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕವಾಗಿತ್ತು ಎಂದು ತಿಳಿದುಬಂದಿದೆ. ಪೂರ್ಣ ವರದಿಗಾಗಿ ಕಾಯುತ್ತಿದ್ದೇನೆ. ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ ಎಂದರು.

ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು.

ರಾಜ್ಯದಲ್ಲಿ ಇಂಥದ್ದು ನಡೆಯಬಾರದಿತ್ತು. ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನಃ ಇಂಥ ಘಟನೆ ಸಂಭವಿಸಿದೆ. ಯಾರು ಇದನ್ನು ಮಾಡಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿರೋಧ ಪಕ್ಷಗಳು ಈ ವಿಷಯಗಳ ಬಗ್ಗೆ ರಾಜಕಾರಣ ಮಾಡಬಾರದು. ಎಲ್ಲರೂ ಸಹಕರಿಸಬೇಕು ಎಂದರು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ