ಶಾಲೆಗಳಿಗೆ ಬಾಂಬ್ ಬೆದರಿಕೆ ಬಗ್ಗೆ ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ; ಇದು ಕಳವಳಕಾರಿ ಎಂದ ಮಾಜಿ ಸಿಎಂ ಹೆಚ್‌ಡಿಕೆ
Dec 01, 2023 01:07 PM IST
ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ (Bengaluru) ಬರೋಬ್ಬರಿ 44 ಶಾಲೆಗಳಿಗೆ ಬಾಂಬ್ ಬೆದರಿಕೆಯ (Bomb Threat) ಇ-ಮೇಲ್ ಸಂದೇಶ ಬಂದಿದ್ದು, ಶಾಲೆಗಳ ಆಡಳಿತ ಮಂಡಳಿ ಬೆಚ್ಚಿ ಬಿದ್ದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೋಷಕರು ತಮ್ಮ ಮಕ್ಕಳಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮತ್ತೊಂದೆಡೆ ಬಾಂಬ್ ನಿಷ್ಕ್ರಿಯ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿವೆ.
ಸೂಕ್ತ ಭದ್ರತೆ ಒದಗಿಸುವಂತೆ ಸೂಚನೆ
ಬಾಂಬ್ ಬೆದರಿಕೆ ಸಂದೇಶದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಗಂಭೀರವಾಗಿ ತನಿಖೆಗೆ ಸೂಚಿಸಿದ್ದೇನೆ, ಶಾಲೆಗಳಿರಬಹುದು, ದೇವಸ್ಥಾನಗಳಿರಬಹದು ಸೂಕ್ತ ಭದ್ರತೆ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು, ಶಾಲೆಗಳಿಗೆ ಅನಾಮಧೇಯ ವ್ಯಕ್ತಿಗಳು ಬಾಂಬ್ ಬೆದರಿಕೆ ಒಡ್ಡಿರುವುದು ಕಳವಳಕಾರಿ ಎಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಹೆಚ್‌ಡಿಕೆ, ಈ ಬೆಳವಣಿಗೆಯಿಂದ ಮಕ್ಕಳು, ಪೋಷಕರು ತೀವ್ರವಾಗಿ ಕಳವಳಗೊಂಡಿದ್ದು, ಅವರಲ್ಲಿ ಭೀತಿ ಸೃಷ್ಟಿಸಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದಲೇ ದುಷ್ಟಶಕ್ತಿಗಳು ಇಂತಹ ಹುನ್ನಾರ ನಡೆಸಿರಬಹುದು ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಯಾವುದೇ ಕಾರಣಕ್ಕೂ ಈ ಘಟನೆಯನ್ನು ಲಘುವಾಗಿ ಪರಿಗಣಿಸಬಾರದು. ಪೋಷಕರು ಮಕ್ಕಳನ್ನು ಧೈರ್ಯವಾಗಿ ಶಾಲೆಗಳಿಗೆ ಕಳಿಸುವಂತಹ ಸುರಕ್ಷತೆ, ಭದ್ರತೆಯ ಖಾತರಿಯನ್ನು ನೀಡಬೇಕು.
ಈ ಬೆದರಿಕೆಗಳ ಬಗ್ಗೆ ಅಮೂಲಾಗ್ರ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ? ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚಿ ದುಷ್ಟರ ಹೆಡೆಮುರಿ ಕಟ್ಟಬೇಕು. ಈ ಬಗ್ಗೆ ಕೇಂದ್ರ ಸರಕಾರದ ನೆರವು ಪಡೆಯುವ ಬಗ್ಗೆ ರಾಜ್ಯ ಸರಕಾರ ಮೀನಾಮೇಷ ಎಣಿಸಬಾರದು ಎಂದಿದ್ದಾರೆ.