ಬೆಂಗಳೂರಿನಲ್ಲಿ ಬತ್ತಿದ ಬೋರ್ವೆಲ್ಗಳು; 1000 ರೂ. ನೀಡಿ ಟ್ಯಾಂಕರ್ ಮೊರೆ ಹೋದ ಬಡಾವಣೆಗಳ ನಿವಾಸಿಗಳು
Sep 01, 2023 07:30 AM IST
ಟ್ಯಾಂಕರ್ ಮೊರೆ ಹೋದ ಬೆಂಗಳೂರು ಬಡಾವಣೆಗಳ ನಿವಾಸಿಗಳು (ಸಂಗ್ರಹ ಚಿತ್ರ)
- ಕಳೆದ ತಿಂಗಳಷ್ಟೇ ಕನಕಪುರ ರಸ್ತೆಯ ವಕೀಲ್ ಗಾರ್ಡನ್ ಸಿಟಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ 4 ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಆದರೆ, ಕೊರೆಸಿದ ಬೆರಳೆಣಿಕೆಯ ದಿನದಲ್ಲೇ ನೀರು ಬರದೆ ಬರಡಾಗಿದೆ. ಇದರಿಂದ ನಿವಾಸಿಗಳು ಸಾವಿರಕ್ಕೂ ಹೆಚ್ಚು ರೂಪಾಯಿ ನೀಡಿ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಇದರಿಂದ ರಾಜ್ಯದ ರೈತರು ಕಂಗಾಲಾಗಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ಬರ ಘೋಷಿಸುವ ಸಾಧ್ಯತೆ ಇದೆ. ಈ ನಡುವೆ ಬೆಂಗಳೂರಿನಲ್ಲೂ ನೀರಿಗೆ ಹಾಹಾಕಾರ ಎದುರಾಗಿದೆ.
ಸಿಲಿಕಾನ್ ಸಿಟಿಯ ಹೊರವಲಯಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ಕನಕಪುರ ರಸ್ತೆಯಲ್ಲಿ ಪ್ರತಿಷ್ಠಿತ ವಿಲ್ಲಾಗಳು, ವೈಟ್ ಫೀಲ್ಡ್, ಸರ್ಜಾಪುರ ರಸ್ತೆಗಳಲ್ಲಿರುವ ಕೋಟಿ ಕೋಟಿ ‘ಗಟ್ಟಲೆಯ ಗೇಟೆಡ್ ಕಮ್ಯುನಿಟಿ ವಿಲ್ಲಾಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ನೀರು ಇಂಗಿಹೋಗಿದೆ. ಇದರಿಂದ ಬೋರ್ ವೆಲ್ಗಳಿಂದ ನೀರು ಬರದ ಕಾರಣ ಅಲ್ಲಿನ ನಿವಾಸಿಗಳು ಟ್ಯಾಂಕರ್ಗಳ ಮೊರೆ ಹೋಗಿದ್ದಾರೆ.
ಕಳೆದ ತಿಂಗಳಷ್ಟೇ ಕನಕಪುರ ರಸ್ತೆಯ ವಕೀಲ್ ಗಾರ್ಡನ್ ಸಿಟಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ 4 ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಆದರೆ, ಕೊರೆಸಿದ ಬೆರಳೆಣಿಕೆಯ ದಿನದಲ್ಲೇ ನೀರು ಬರದೆ ಬರಡಾಗಿದೆ. ಇದರಿಂದ ನಿವಾಸಿಗಳು ಸಾವಿರಕ್ಕೂ ಹೆಚ್ಚು ರೂಪಾಯಿ ನೀಡಿ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದಾರೆ.
ಇನ್ನೂ ಬೆಂಗಳೂರಿನ ಉತ್ತರ ಮತ್ತು ಪೂರ್ವದ ಕಥೆಯೂ ಇದೇ ಆಗಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಟ್ಯಾಂರ್ಗಳು ಶೇ. 50 ರಷ್ಟು ಹಣ ದುಪ್ಪಟ್ಟು ಮಾಡಿವೆ. ಬೆಂಗಳೂರು ನಗರಕ್ಕೆ ಈ ಬಾರಿ ಅಂದರೆ ಜೂನ್ನಿಂದ ಆಗಸ್ಟ್ ವರೆಗೂ ಶೇ. 92ರಷ್ಟು ಮಳೆ ಕೊರತೆ ಉಂಟಾಗಿದೆ.
ಕಾವೇರಿ ನೀರು ಸರಬರಾಜಾಗುವ ಪ್ರದೇಶಗಳಲ್ಲೂ ಕೂಡ ಪರಿಸ್ಥಿತಿ ಬಿಗಡಾಯಿಸಿದೆ. ವಾರಕ್ಕೊಮ್ಮೆ ಬರುತ್ತಿದ್ದ ಕಾವೇರಿ, ತಿಂಗಳಾದರೂ ಇತ್ತ ಇಣುಕಿಯೂ ನೋಡುತ್ತಿಲ್ಲ ಎಂಬುದು ನಿವಾಸಿಗಳ ಅಳಲು. ಗೇಟೆಡ್ ಕಮ್ಯುನಿಟಿ ಒಂದರಲ್ಲಿ 12 ಕೊಳವೆ ಬಾವಿಗಳಿದ್ದು, 10 ಬಾವಿಗಳಲ್ಲಿ ನೀರು ಬರುತ್ತಿಲ್ಲ. ಟ್ಯಾಂಕರ್ಗಳ ಬೇಡಿಕೆಯಷ್ಟು ಹಣ ನೀಡಿದರೂ ಟ್ಯಾಂಕರ್ ನೀರು ಸಿಗುತ್ತಿಲ್ಲ ಎನ್ನುತ್ತಾರೆ ಸಿಗೇಹಳ್ಳಿ ನಿವಾಸಿಗಳು.
ಮತ್ತೊಂದೆಡೆ, ಟ್ಯಾಂಕರ್ಗಳ ಮಾಲೀಕರು ಹೊಸ ನಿವಾಸಿಗಳಿಗೆ ನೀರು ಕೊಡಲು ಮುಂದಾಗುತ್ತಿಲ್ಲ. ತಮ್ಮ ಹಳೆಯ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಲ್ಲದೇ, ಹೊಸ ಗ್ರಾಹಕರಿಗೆ 5 ವರ್ಷಗಳ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಮುಂದಿನ ವರ್ಷ ಮಳೆ ಬಂದು ನಮ್ಮ ಬೋರ್ ವೆಲ್ ಗಳಲ್ಲೇ ನೀರು ಬಂದರೆ ಒಪ್ಪಂದ ಮಾಡಿಕೊಂಡು ನಷ್ಟವಾಗಲಿದೆ ಎಂಬುದು ಉತ್ತರ ಭಾಗದ ನಿವಾಸಿಯೊಬ್ಬರ ಅಳಲು.
ಮತ್ತೊಂದೆಡೆ ಟ್ಯಾಂಕರ್ ಮಾಲೀಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಬೇಡಿಕೆ ಇದ್ದರೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಟ್ಯಾಂಕರ್ ಗೆ ತುಂಬಿಸುವ ನೀರಿನ ಬೋರ್ ವೆಲ್ಗಳು ಸಹ ಬತ್ತಿಹೋಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ಯಾಂಕರ್ ಮಾಲೀಕರೊಬ್ಬರು, ತಾವು 20 ವರ್ಷಗಳಿಂದ ದೊಡ್ಡನೆಕ್ಕುಂದಿಯಲ್ಲಿ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದೇವೆ. ಒಂದು ಬೋರ್ ವೆಲ್ನಲ್ಲಿ 50 ಲೋಡ್ ನೀರು ತೆಗೆಯುತ್ತಿದ್ದೆವು. ಆದರೆ, ಇದೀಗ 7 ಲೋಡ್ ಸಹ ತೆಗೆಯಲು ಆಗುತ್ತಿಲ್ಲ. ಬೋರ್ ವೆಲ್ಗಳು ಬತ್ತಿ ಹೋಗಿವೆ. ಹೀಗಾಗಿ, ಮಳೆಗಾಲದಲ್ಲೂ ನಮ್ಮಿಂದ ನೀರು ಪಡೆಯುವ ನಮ್ಮ ಗ್ರಾಹಕರಿಗೆ ಮಾತ್ರ ಒದಗಿಸುತ್ತಿದ್ದೇವೆ ಎಂದರು.
ಹೀಗಾಗಿ, ಅಪಾರ್ಟ್ ಮೆಂಟ್ಗಳಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೋರ್ ವೆಲ್ಗಳು ಬತ್ತಿರುವುದರಿಂದ ಮಾತ್ರ ಟ್ಯಾಂಕರ್ ಮೊರೆ ಹೋಗುವ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಟ್ಯಾಂಕರ್ ಮಾಲೀಕರು ಹೆಚ್ಚು ಒತ್ತು ನೀಡುತ್ತಿಲ್ಲ.
ಇದೆಲ್ಲದರ ನಡುವೆ ವೈಟ್ ಫೀಲ್ಡ್ನ ರಾಮಗೊಂಡನಹಳ್ಳಿಯಲ್ಲಿ ಅಕ್ರಮ ಬೋರ್ ವೆಲ್ಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಾಮಗೊಂಡನಹಳ್ಳಿಯಲ್ಲಿ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.
ಟ್ಯಾಂಕರ್ ನೀರಿನ ಬೆಲೆ
ಜೂನ್ನಲ್ಲಿ 6 ಸಾವಿರ ಲೀಟರ್ ನೀರಿನ ಬೆಲೆ 700ರೂ. - 850ರೂ. ಇತ್ತು. ಆಗಸ್ಟ್ 31 ರಂದು 800 ರೂ.- 1000 ರೂ.
ಜೂನ್ನಲ್ಲಿ 12 ಸಾವಿರ ಲೀಟರ್ ನೀರಿನ ಬೆಲೆ 1000 ರೂ. - 1200 ರೂ ಇತ್ತು. ಆಗಸ್ಟ್ 31 ರಂದು 1200 ರೂ. 1800 ರೂ. ಇದೆ.
ವರದಿ: ಅಕ್ಷರ ಕಿರಣ್