ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ಬಿಬಿಎಂಪಿ ಸಿದ್ಧತೆ; ಇದೇ ಮೊದಲ ಬಾರಿಗೆ ವಲಯವಾರು ಆಯವ್ಯಯ ಮಂಡನೆಗೆ ಚಿಂತನೆ
Jan 06, 2024 08:00 AM IST
ಬೆಂಗಳೂರು ಮಹಾನಗರ ಪಾಲಿಕೆ
Bengaluru News: ಈ ಬಾರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಲೋಚನೆಗಳು ಮತ್ತು ಆಶಯಗಳಿಗೆ ಅನುಗುಣವಾಗಿ ಬಜೆಟ್ ಮಂಡನೆಯಾಗಲಿದೆ. ಅತಿ ಎತ್ತರದ ಗೋಪುರ ನಿರ್ಮಾಣ, ಬಿಬಿಎಂಪಿ ಶಾಲೆಗಳಿಗೆ ಕಾಯಕಲ್ಪ, ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡುವ ಲಕ್ಷಣಗಳಿವೆ.
Bengaluru News: 2024–25ನೇ ಸಾಲಿನ ಬಜೆಟ್ ಮಂಡನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಈ ವರ್ಷದಲ್ಲಿ ವಲಯವಾರು ಬಜೆಟ್ ಮಂಡನೆಗೆ ಬಿಬಿಎಂಪಿ ನಿರ್ಧಾರ ಮಾಡಿದೆ. ಈ ಸಂಬಂಧ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ವಿಭಾಗಗಳ ವಿಶೇಷ ಆಯುಕ್ತರು ಸೇರಿದಂತೆ ಎಲ್ಲಾ 8 ವಲಯಗಳ ಆಯುಕ್ತರೊಂದಿಗೆ ಈಗಾಗಲೇ ಸಭೆ ಪ್ರಾರಂಭಿಸಿದ್ದಾರೆ. ಈ ಆರ್ಥಿಕ ವರ್ಷದಲ್ಲಿನ ವೆಚ್ಚ ಹಾಗೂ ಯೋಜನೆಗಳ ಸ್ಥಿತಿ ಹಾಗೂ ಮಾಹಿತಿ ನೀಡಲು ಸೂಚಿಸಿದ್ದಾರೆ.
ಈ ವರ್ಷ ವಲಯವಾರು ಬಜೆಟ್ ಮಂಡನೆ
ಜ. 15ರೊಳಗೆ ಎಲ್ಲಾ ವಿವರಗಳನ್ನು ಒದಗಿಸುವಂತೆ ಬಿಬಿಎಂಪಿಯ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ. ವಿಭಾಗವಾರು ಪ್ರಗತಿ ಹಾಗೂ ಯೋಜನೆಗಳ ಸಮಾಲೋಚನೆ ಸಭೆಗಳು ಆರಂಭವಾಗಿವೆ. ಕಳೆದ ವರ್ಷವೇ ವಲಯವಾರು ಬಜೆಟ್ ಮಂಡಿಸುವುದಾಗಿ ಆಯುಕ್ತರು ಹೇಳಿದ್ದರು. ಆದರೆ ವಿಧಾನಸಭೆ ಚುನಾವಣೆ ಎದುರಾಗಿದ್ದರಿಂದ ಅವಕಾಶ ಸಿಕ್ಕಿರಲಿಲ್ಲ. ಸಾಮಾನ್ಯ ಬಜೆಟ್ ಮಂಡಿಸಲಾಗಿತ್ತು. ಈ ವರ್ಷ ವಲಯವಾರು ಬಜೆಟ್ ಮಂಡನೆ ಮಾಡಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ವಲಯವಾರು ಬಜೆಟ್ ಹೇಗಿರುತ್ತದೆ ಎಂಬ ಕಲ್ಪನೆ ಸ್ಪಷ್ಟವಾಗಿಲ್ಲ. ಪ್ರತಿ ವಲಯಕ್ಕೂ ಬಜೆಟ್ ಹಂಚಿಕೆ ಮಾಡಬಹುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ವಲಯವಾರು ಬಜೆಟ್ ಕುರಿತು ಚಿಂತನೆ ಆರಂಭವಾಗಿದೆ. ಆದರೆ ಇನ್ನೂ ಅಂತಿಮಗೊಂಡಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರತಿ ವಲಯಕ್ಕೂ ಆಯುಕ್ತರು ಮುಖ್ಯಸ್ಥರಾಗಿರುತ್ತಾರೆ. ಅಲ್ಲಿನ ಕಾಮಗಾರಿಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. ಕಾಮಗಾರಿಗಳು, ಅಗತ್ಯ ಅನುದಾನ ಮತ್ತು ಯೋಜನೆಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ನಂತರ ಅಗತ್ಯಕ್ಕೆ ಅನುಗುಣವಾಗಿ ಹಣಕಾಸು ಒದಗಿಸುವ ಉದ್ದೇಶ ಹೊಂದಲಾಗಿದೆ. ಈ ವರ್ಷದಲ್ಲಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಒತ್ತು ನೀಡಿದೆ. ಗರಿಷ್ಠ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದು ಪಾಲಿಕೆ ಕಾರ್ಯೋನ್ಮುಖವಾಗಿದೆ. ಹಾಗಾಗಿ ಆಸ್ತಿ ತೆರಿಗೆ ಸೇರಿದಂತೆ ಎಲ್ಲ ರೀತಿಯ ಶುಲ್ಕ ಮತ್ತು ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಲು ನಿರ್ಧರಿಸಿರುವುದರಿಂದ ವರಮಾನದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಹೀಗಾಗಿ ಪಾಲಿಕೆ ಅನುದಾನದಲ್ಲೇ ವೈಟ್ ಟಾಪಿಂಗ್, ಮೇಲು ಸೇತುವೆ ಸೇರಿದಂತೆ ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಪ್ರಸ್ತಾಪವೂ ಈ ಬಾರಿ ಬಜೆಟ್‌ನಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ಅವರ ಆಲೋಚನೆಗಳಿಗೆ ಅನುಗುಣವಾಗಿ ಬಜೆಟ್ ಮಂಡನೆ
ಗುತ್ತಿಗೆದಾರರಿಗೆ ವಲಯವಾರು ಮುಖ್ಯ ಎಂಜಿನಿಯರ್‌ಗಳಿಂದಲೇ ಬಿಲ್ ಪಾವತಿ ಮಾಡಲಾಗುತ್ತಿದೆ. ಹೀಗಾಗಿ ಬಜೆಟನ್ನು ವಲಯವಾರು ಮಂಡಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿದು ಬಂದಿದೆ. ನಗರ ಯೋಜನೆ, ಬೃಹತ್ ನೀರುಗಾಲುವೆ, ಯೋಜನೆ, ಘನತ್ಯಾಜ್ಯ, ಕೆರೆಗಳು, ರಸ್ತೆ ಮೂಲಸೌಕರ್ಯದಂತಹ ಪ್ರಮುಖ ಯೋಜನೆಗಳನ್ನು ನಿರ್ವಹಿಸುವ ವಿಭಾಗಗಳ ಬಜೆಟ್ ಪ್ರತ್ಯೇಕವಾಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಬಜೆಟ್‌ಗಾಗಿಯೇ ಡಿಸೆಂಬರ್‌ನಲ್ಲೇ ಸಾರ್ವಜನಿಕರಿಂದ ಸಲಹೆಗಳನ್ನು ಕೇಳಲಾಗಿತ್ತು. ಈ ಬಾರಿ ಅಂತಹ ಪ್ರಸ್ತಾಪ ಇಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಲೋಚನೆಗಳು ಮತ್ತು ಆಶಯಗಳಿಗೆ ಅನುಗುಣವಾಗಿ ಬಜೆಟ್ ಮಂಡನೆಯಾಗಲಿದೆ. ಅತಿ ಎತ್ತರದ ಗೋಪುರ ನಿರ್ಮಾಣ, ಬಿಬಿಎಂಪಿ ಶಾಲೆಗಳಿಗೆ ಕಾಯಕಲ್ಪ, ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡುವ ಲಕ್ಷಣಗಳಿವೆ.
2022–23ನೇ ಸಾಲಿನ ಬಜೆಟನ್ನು 2023 ಮಾರ್ಚ್ 31ರಂದು ರಾತ್ರಿ 11.30ಕ್ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತವು 2020 ಸೆ. 10ಕ್ಕೆ ಅಂತ್ಯಗೊಂಡಿದ್ದು ಇದುವರೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ, ಪಾಲಿಕೆ ಅಧಿಕಾರಿಗಳೇ ಸತತ ಮೂರು ವರ್ಷಗಳಿಂದ ಬಜೆಟ್ ಮಂಡಿಸುತ್ತಿದ್ದಾರೆ. ನಗರದ ಪುರಭವನದಲ್ಲಿ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಮಾರ್ಚ್ 2ರಂದು 11,163.97 ಕೋಟಿ ರೂ. ಆದಾಯ ನಿರೀಕ್ಷಿಸಿ, 11,157.83 ಕೋಟಿ ರೂ. ವೆಚ್ಚದ ಬಜೆಟ್ ಮಂಡನೆ ಮಾಡಿದ್ದರು. ರಾಜ್ಯ ಬಜೆಟ್ ಮಂಡನೆಯಾದ ನಂತರ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳು
ಪಶ್ಚಿಮ ವಲಯಕ್ಕೆ ನೂತನ ಡಿಐಜಿಪಿ; ಕೋಮುವಾದ, ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಚುರುಕು