logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಓಲಾ ಉಬರ್‌ಗೆ ಸೆಡ್ಡು ಹೊಡೆದ ಬೆಂಗಳೂರು ಕ್ಯಾಬ್‌ ಚಾಲಕನ ನಾನೋ ಟ್ರಾವೆಲ್ಸ್; ಮನೆ ಮಾತಾಗುತ್ತಿರುವ ನವೋದ್ಯಮ

Bengaluru News: ಓಲಾ ಉಬರ್‌ಗೆ ಸೆಡ್ಡು ಹೊಡೆದ ಬೆಂಗಳೂರು ಕ್ಯಾಬ್‌ ಚಾಲಕನ ನಾನೋ ಟ್ರಾವೆಲ್ಸ್; ಮನೆ ಮಾತಾಗುತ್ತಿರುವ ನವೋದ್ಯಮ

Umesh Kumar S HT Kannada

Dec 22, 2023 05:30 PM IST

google News

ಬೆಂಗಳೂರು ನಗರದ ಹೊಸ ನವೋದ್ಯಮ ನಾನೋ ಟ್ರಾವೆಲ್ಸ್‌ ಸದ್ಯ ಸಾಮಾಜಿಕ ತಾಣಗಳಲ್ಲಿ ಬಿಸಿಬಿಸಿ ಚರ್ಚೆಯ ಕೇಂದ್ರ ಬಿಂದು.

  • ಬೆಂಗಳೂರಲ್ಲಿ ಓಲಾ, ಉಬರ್ ಸೇವೆ ಪಡೆಯದವರಿಲ್ಲ. ಆದರೆ ಇದರಿಂದ ತೊಂದರೆ ಒಳಗಾದವರ ಪ್ರಮಾಣವೂ ಕಡಿಮೆ ಅಲ್ಲ. ಕ್ಯಾಬ್‌, ರಿಕ್ಷಾ ಚಾಲಕರಿಗೂ ಈ ಅಗ್ರಿಗೇಟರ್ ಸೇವೆ ಕುರಿತು ಅಸಮಾಧಾನವಿದೆ. ಇತ್ತೀಚೆಗೆ ನಮ್ಮ ಯಾತ್ರಿ ಆಪ್‌, ಮೆಟ್ರೋ ಮಿತ್ರ ಆಪ್‌ಗಳು ಗಮನಸೆಳೆದಿತ್ತು. ಈಗ ಒಬ್ಬನೇ ಚಾಲಕನ ಮಾಲೀಕತ್ವದ ನಾನೋ ಟ್ರಾವೆಲ್ಸ್ ಗಮನಸೆಳೆದಿದೆ. 

ಬೆಂಗಳೂರು ನಗರದ ಹೊಸ ನವೋದ್ಯಮ ನಾನೋ ಟ್ರಾವೆಲ್ಸ್‌ ಸದ್ಯ ಸಾಮಾಜಿಕ ತಾಣಗಳಲ್ಲಿ ಬಿಸಿಬಿಸಿ ಚರ್ಚೆಯ ಕೇಂದ್ರ ಬಿಂದು.
ಬೆಂಗಳೂರು ನಗರದ ಹೊಸ ನವೋದ್ಯಮ ನಾನೋ ಟ್ರಾವೆಲ್ಸ್‌ ಸದ್ಯ ಸಾಮಾಜಿಕ ತಾಣಗಳಲ್ಲಿ ಬಿಸಿಬಿಸಿ ಚರ್ಚೆಯ ಕೇಂದ್ರ ಬಿಂದು.

ಹೈಟೆಕ್ ಸಿಟಿ ಬೆಂಗಳೂರಲ್ಲಿ ಬಹುಬೇಗ ಗಮನಸೆಳೆಯುವ ವಿದ್ಯಮಾನಗಳ ಅರ್ಥಾತ್ ಪೀಕ್ ಬೆಂಗಳೂರು ಕ್ಷಣಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ. ಬೆಂಗಳೂರು ಮಹಾನಗರದ ಟ್ಯಾಕ್ಸಿ ಚಾಲಕರೊಬ್ಬರು ಮುಂಚೂಣಿಯ ಓಲಾ ಮತ್ತು ಉಬರ್‌ ಸೇವೆಗಳಿಗೆ ಸೆಡ್ಡು ಹೊಡೆಯುವಂತೆ ತನ್ನದೇ ಆದ ಆಪ್‌ ಮಾಡಿಕೊಂಡು ಸೇವೆ ಒದಗಿಸುತ್ತ ಗಮನಸೆಳೆದಿದ್ದಾರೆ.

‘ದ ಬೆಂಗಳೂರು ಮ್ಯಾನ್’ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ ವಿಚಾರವನ್ನು ಎರಡು ದಿನ ಹಿಂದೆ ಟ್ವೀಟ್ ಮಾಡುವ ಮೂಲಕ ಬೆಳಕಿಗೆ ತಂದಿದ್ದಾರೆ. ಇದು ಈಗಾಗಲೇ 49 ಸಾವಿರದಷ್ಟು ವೀಕ್ಷಣೆ ಪಡೆದುಕೊಂಡಿದ್ದು 850ರಷ್ಟು ಮೆಚ್ಚುಗೆಯನ್ನೂ ಪಡೆದಕೊಂಡಿದೆ.

ನ್ಯಾನೋ ಟ್ರಾವೆಲ್ಸ್ ಎಂಬ ತನ್ನದೇ ಆದ ಆ್ಯಪ್ ಅನ್ನು ಬಿಡುಗಡೆ ಮಾಡಿರುವುದಾಗಿ ತನ್ನ ಉಬರ್ ಕ್ಯಾಬ್ ಡ್ರೈವರ್ ತಿಳಿಸಿದ್ದಾಗಿ ‘ದ ಬೆಂಗಳೂರು ಮ್ಯಾನ್’ ಹೇಳಿಕೊಂಡಿದ್ದಾರೆ.

“ಪೀಕ್ ಬೆಂಗಳೂರು: ನನ್ನ ಉಬರ್ ಕ್ಯಾಬ್ ಚಾಲಕ ಲೋಕೇಶ್ ಅವರು ಉಬರ್ ಮತ್ತು ಓಲಾಗೆ ಪೈಪೋಟಿ ನೀಡಲು ತಮ್ಮದೇ ಆದ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದಾರೆ. ಈ ಅಪ್ಲಿಕೇಶನ್‌ನಲ್ಲಿ ಈಗಾಗಲೇ 600 ಕ್ಕೂ ಹೆಚ್ಚು ಡ್ರೈವರ್‌ಗಳು ನೋಂದಾಯಿಸಿರುವುದಾಗಿ ಅವರು ನನಗೆ ತಿಳಿಸಿದರು. ಇದಲ್ಲದೆ, ಇಂದು ಅವರು ತಮ್ಮ ಐಒಎಸ್ ಆವೃತ್ತಿಯನ್ನು ಆಪಲ್‌ ಫೋನ್‌ ಬಳಕೆದಾರರಿಗಾಗಿಯೂ ಬಿಡುಗಡೆ ಮಾಡಿದರು”ಎಂದು ದ ಬೆಂಗಳೂರು ಮ್ಯಾನ್‌ ಬರೆದುಕೊಂಡಿದ್ದಾರೆ.

ಸಾರಿಗೆ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ಸದಾ ಸುದ್ದಿಯಲ್ಲಿದೆ. ಆಟೋ, ಟ್ಯಾಕ್ಸಿ ಚಾಲಕರು, ಅಗ್ರಿಗೇಟರ್ ಕಂಪನಿಗಳು ಗ್ರಾಹಕರ ಮೇಲೆ ಬೇಕಾಬಿಟ್ಟಿ ಶುಲ್ಕ ವಿಧಿಸುತ್ತಿರುವ ವಿಚಾರ ಕೂಡ ಪದೇಪದೆ ಗಮನಸೆಳೆಯುತ್ತಿದೆ. ಕಳೆದ ವರ್ಷವಷ್ಟೇ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ನಿಯಮ ಬಿಗಿಗೊಳಿಸಿತ್ತು.

ಓಲಾ ಮತ್ತು ಉಬರ್‌ಗೆ ಪೈಪೋಟಿ ನೀಡುವಂತೆ ಇನ್ನೂ ಅನೇಕ ಟ್ಯಾಕ್ಸಿ, ಆಟೋ ಚಾಲಕರ ಯೂನಿಯನ್‌ಗಳು ಕೂಡ ಆಸಕ್ತಿ ತೋರಿವೆ. ಇತ್ತೀಚೆಗೆ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್‌ ನಮ್ಮ ಯಾತ್ರಿ ಆಪ್‌ ಅನ್ನು ಬಿಡುಗಡೆ ಮಾಡಿತ್ತು. ಇನ್ನೊಂದು ಆಟೋ ಚಾಲಕರ ತಂಡ ಮೆಟ್ರೋ ಮಿತ್ರ ಆಪ್ ಬಿಡುಗಡೆ ಮಾಡಿ ಸೇವೆ ಶುರುಮಾಡಿದೆ.

ಕ್ಯಾಬ್ ಚಾಲಕರು ಏರಿದ ಇಂಧನ ದರ, ವೆಚ್ಚಗಳ ಕಾರಣ ತಮಗೆ ಸಿಗುತ್ತಿರುವ ಪ್ರಯಾಣ ಶುಲ್ಕದ ವಿಚಾರವಾಗಿ ಭಾರಿ ಅಸಮಾಧಾನದಿಂದ ಇದ್ದಾರೆ. ಆಟೋ, ಕ್ಯಾಬ್ ಶುಲ್ಕ ಪರಿಷ್ಕರಣೆಯನ್ನು ಎಲ್ಲರೂ ಎದುರುನೋಡುತ್ತಿದ್ದಾರೆ.

ಈ ಆಪ್‌ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಅದೇ ರೀತಿ ಐಒಎಸ್ ಬಳಕೆದಾರರಿಗೂ ಲಭ್ಯವಿದ್ದು, ಸೇಫ್ಟಿ ಫಸ್ಟ್ ಮನೆ ನೆಕ್ಸ್ಟ್ ಎಂಬ ಟ್ಯಾಗ್‌ಲೈನ್ ಹೊಂದಿದೆ.

ದ ಬೆಂಗಳೂರು ಮ್ಯಾನ್ ಮಾಡಿರುವ ಪೋಸ್ಟ್‌ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಟ್ಯಾಕ್ಸಿ ಚಾಲಕ ಲೋಕೇಶ್ ನನ್ನನ್ನೂ ಒಮ್ಮೆ ಏರ್‌ಪೋರ್ಟ್‌ಗೆ ತಲುಪಿಸಿದ್ದರು. ಅವರಲ್ಲಿ ಬಹಳ ಉದ್ಯಮಶೀಲತೆ ಇದೆ. ಮುಂದೆ ಏರ್‌ಪೋರ್ಟ್‌ ಸವಾರಿ ಇದ್ದರೆ ತನಗೆ ಕರೆ ಮಾಡುವಂತೆ ವಿನಂತಿಸಿದ್ದರು. ಅವರೊಂದಿಗೆ ಟ್ಯಾಕ್ಸಿ ಚಾಲಕರ ದೊಡ್ಡ ನೆಟ್‌ವರ್ಕ್‌ ಇದೆ. ಅದೇ ಲೋಕೇಶ್ ಎಂದರೆ ನಿಜಕ್ಕೂ ಖುಷಿಯ ವಿಚಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಇದೇ ಅದೇ ವ್ಯಕ್ತಿ. ಲೋಕೇಶ್ ನಿಜಕ್ಕೂ ಉದ್ಯಮಶೀಲ ವ್ಯಕ್ತಿ. ಅಂದೇ ನನಗೆ ಈ ಕಂಪನಿಯ ಐಡಿಯಾ ಶೇರ್ ಮಾಡಿದ್ದರು. ನಿಮಗೂ ಕ್ಯಾಬ್‌ ಬೇಕಾದರೆ ಲೋಕೇಶ್‌ಗೇ ಕರೆ ಮಾಡಿ ಎಂದು ವಿನಂತಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ