logo
ಕನ್ನಡ ಸುದ್ದಿ  /  ಕರ್ನಾಟಕ  /  Caste Census Report: ಜಾತಿ ಗಣತಿ ವರದಿ ಸಲ್ಲಿಕೆ ಮುಂದೂಡಿಕೆಗೆ ತಾಂತ್ರಿಕ ಕಾರಣ ನೀಡಿದ ಸರ್ಕಾರ, ರಾಜಕೀಯ ಪರಿಣಾಮದ ವಿಶ್ಲೇಷಣೆ

Caste Census Report: ಜಾತಿ ಗಣತಿ ವರದಿ ಸಲ್ಲಿಕೆ ಮುಂದೂಡಿಕೆಗೆ ತಾಂತ್ರಿಕ ಕಾರಣ ನೀಡಿದ ಸರ್ಕಾರ, ರಾಜಕೀಯ ಪರಿಣಾಮದ ವಿಶ್ಲೇಷಣೆ

HT Kannada Desk HT Kannada

Nov 22, 2023 08:42 PM IST

google News

ಜಾತಿ ಗಣತಿ ವರದಿ ಸಲ್ಲಿಕೆ ಮುಂದೂಡಿಕೆಗೆ ತಾಂತ್ರಿಕ ಕಾರಣ ನೀಡಿದ ಸರ್ಕಾರ (ಸಾಂಕೇತಿಕ ಚಿತ್ರ)

  • ಜಾತಿ ಗಣತಿ ವರದಿ ಸಲ್ಲಿಕೆ ಮುಂದೂಡಿಕೆಗೆ ಕರ್ನಾಟಕ ಸರ್ಕಾರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟಿದೆ. ಈ ವರದಿ ಸ್ವೀಕರಿಸುವುದಕ್ಕೆ ಆಡಳಿತ ಪಕ್ಷದೊಳಗೆ ಭಿನ್ನಮತ ಏರ್ಪಟ್ಟಿದೆ. ಇದರ ರಾಜಕೀಯ ಪರಿಣಾಮದ ವಿಶ್ಲೇಷಣೆ ನೀಡಿದ್ದಾರೆ ಎಚ್.ಮಾರುತಿ.

ಜಾತಿ ಗಣತಿ ವರದಿ ಸಲ್ಲಿಕೆ ಮುಂದೂಡಿಕೆಗೆ ತಾಂತ್ರಿಕ ಕಾರಣ ನೀಡಿದ ಸರ್ಕಾರ (ಸಾಂಕೇತಿಕ ಚಿತ್ರ)
ಜಾತಿ ಗಣತಿ ವರದಿ ಸಲ್ಲಿಕೆ ಮುಂದೂಡಿಕೆಗೆ ತಾಂತ್ರಿಕ ಕಾರಣ ನೀಡಿದ ಸರ್ಕಾರ (ಸಾಂಕೇತಿಕ ಚಿತ್ರ)

ಜಾತಿ ಗಣತಿ ಕುರಿತು ಸರಕಾರ, ಸಚಿವರು, ಆಡಳಿತ ಮತ್ತು ಪ್ರತಿಪಕ್ಷಗಳು ಮತ್ತು ವಿವಿಧ ಸಮುದಾಯಗಳ ನಡುವೆ ರಾಜ್ಯದಲ್ಲಿ ರೋಚಕ ವಿದ್ಯಮಾನಗಳು ನಡೆಯುತ್ತಿವೆ. ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಜಾತಿ ಗಣತಿ ವರದಿಯನ್ನು ಒಪ್ಪಿಕೊಳ್ಳದಂತೆ ಮತ್ತು ಹಿಂದುಳಿದ ವರ್ಗಗಳು ಒಪ್ಪಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿವೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವಂಬರ್ 22ರಂದು ಈ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಈಗಿನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಬೇಕಾಗಿತ್ತು. ನ.24ಕ್ಕೆ ಅವರ ಅವಧಿಯೂ ಕೊನೆಗೊಳ್ಳುವುದಿತ್ತು. ಆದರೆ ಮುಖ್ಯಮಂತ್ರಿಗಳು ವರದಿ ಸಲ್ಲಿಸುವವರೆಗೆ ಅವರ ಅವಧಿ ಮುಂದುವರೆಯುತ್ತದೆ. ಡಿಸೆಂಬರ್‌ನಲ್ಲಿ ಕೂಡ ಅವರು ವರದಿ ಸಲ್ಲಿಸಲೂಬಹುದು ಎಂದು ಹೇಳಿದ್ದಾರೆ. ಈ ಮೂಲಕ ಅವರು ಈ ವರದಿಯನ್ನು ಅಂಗೀಕರಿಸಲು ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ.

ಜಾತಿ ಗಣತಿ ವರದಿ ಕುರಿತು ಸಿಎಂ, ಡಿಸಿಎಂ ನಡುವೆ ಭಿನ್ನಮತ

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಒಕ್ಕಲಿಗ ಸಮುದಾಯದ ನಿಯೋಗ ಮನವಿ ಸಲ್ಲಿಸಿ, ಆ ವರದಿಯನ್ನು ಅಂಗೀಕರಿಸದಂತೆ ಮನವಿ ಮಾಡಿಕೊಂಡಿದೆ. ಈ ಮನವಿ ಪತ್ರಕ್ಕೆ ಸಮುದಾಯದ ಸ್ವಾಮೀಜಿಗಳು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಒಕ್ಕಲಿಗ ಸಚಿವರು, ಶಾಸಕರು ಮತ್ತು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಹಿ ಹಾಕಿದ್ದಾರೆ.

ತಮ್ಮ ತಮ್ಮ ಹೇಳಿಕೆಗಳ ಮೂಲಕವೇ ತಮ್ಮ ನಡುವೆ ಈ ವರದಿ ಕುರಿತು ಭಿನ್ನಮತ ಇದೆ ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ತೋರಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ನಿಲುವಿಗೆ ಬದ್ಧ ಎನ್ನುವ ಸಂದೇಶವನ್ನೂ ರವಾನಿಸುತ್ತಿದ್ದಾರೆ.

ರಾಹುಲ್ ಗಾಂಧಿ ನಿಲುವಿಗೆ ಬದ್ಧ ಎಂದ ಸಿಎಂ, ಮನವಿಗೆ ಸಹಿ ಹಾಕಿದರೆ ತಪ್ಪೇನು ಎಂದ ಡಿಸಿಎಂ

ಒಕ್ಕಲಿಗ ಮುಖಂಡರು ಮನವಿಯನ್ನು ಕೊಟ್ಟ ಬೆನ್ನಲ್ಲೇ ಸಿದ್ದರಾಮಯ್ಯ, ಎಕ್ಸ್ ನಲ್ಲಿ ನಮ್ಮ ಹೆಮ್ಮೆಯ ನಾಯಕ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಸಹಮತವಿದೆ. ದೇಶಾದ್ಯಂತ ಜಾತಿ ಗಣತಿ ನಡೆದು ಸರ್ವರಿಗೂ ಸಮಬಾಳು ಮತ್ತು ಸಮ ಪಾಲು ದಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಅತ್ತ ಶಿವಕುಮಾರ್ ಜಾತಿ ಗಣತಿ ವೈಜ್ಞಾನಿಕವಾಗಿರಬೇಕು. ಮನವಿ ಪತ್ರಕ್ಕೆ ಏಕೆ ಸಹಿ ಹಾಕಬಾರದು ಎಂದು ಪ್ರಶ್ನಿಸಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಚಿವ ಈಶ್ವರ ಖಂಡ್ರೆ ವರದಿಯನ್ನು ಅಂಗೀಕರಿಸದಂತೆ ಒತ್ತಡ ಹೇರಿದ್ದಾರೆ. ಮತ್ತೊಂದು ಕಡೆ ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಮೊದಲಾದವರು ಈ ವರದಿಯನ್ನು ಅಂಗೀಕರಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಜಾತಿ ಗಣತಿ ಪರವಾಗಿದ್ದರೆ ರಾಜ್ಯದಲ್ಲಿ ಪಕ್ಷದೊಳಗಿನ ಮುಖಂಡರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಲೋಕಸಭಾ ಚುನಾವಣೆಗೆ ಜಾತಿ ಗಣತಿ ವರದಿಯೇ ಪ್ರಬಲ ಅಸ್ತ್ರ

ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ವೇಳೆಗೆ ಜಾತಿ ಗಣತಿ ಪ್ರತಿಪಕ್ಷಗಳ ಕೈಗೆ ಪ್ರಬಲ ಅಸ್ತ್ರವಾಗುವುದರಲ್ಲಿ ಸಂಶಯವಿಲ್ಲ. ಜಾತಿ ಗಣತಿಯನ್ನು ಒಪ್ಪಿಕೊಂಡರೆ ಪ್ರಬಲ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಒಪ್ಪಿಕೊಳ್ಳದಿದ್ದರೆ ಹಿಂದುಳಿದ ಮತ್ತು ದಲಿತ ವರ್ಗಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಪ್ರತಿಪಕ್ಷಗಳಿಗೂ ಇದೇ ಗೊಂದಲ ಮುಂದುವರೆಯುವುದು ಬೇಕಾಗಿದೆ. ಈ ವರದಿ ಚುನಾವಣೆಯಲ್ಲಿ ಪ್ರಬಲ ಹೊಡೆತ ಕೊಡುಬಹುದು ಎಂಬ ಆತಂಕ ಸರಕಾರದಲ್ಲಿ ಮನೆ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿದ ಕಾರಣಕ್ಕೆ ಸ್ಪಷ್ಟ ಬಹುಮತ ದೊರಕಿದೆ. ಈಗ ಯಾವುದೇ ನಿರ್ಧಾರ ಕೈಗೊಂಡರೂ ಕೆಲವು ಸಮುದಾಯಗಳು ದೂರಾಗುವ ಸಂಭವವಿದ್ದು, 10 ಲೋಕಸಭಾ ಕ್ಷೇತ್ರಗಳಲ್ಲಿ ಹಿನ್ನಡೆ ಆಗಬಹುದು ಎಂಬ ಆತಂಕ ಮನೆ ಮಾಡಿದೆ.

ನೆರವಿಗೆ ಬರಲಿವೆಯೇ ತಾಂತ್ರಿಕ ಕಾರಣಗಳು?

ಈ ಮಧ್ಯೆ ಮೂಲ ವರದಿ ಕಾಣೆಯಾಗಿದೆ, ಮುದ್ರಿತ ವರದಿಗೆ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲ ಎಂಬ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ವರದಿ ಸ್ವೀಕಾರವನ್ನು ಮುಂದೂಡುವ ಸಾಧ್ಯತೆಗಳಿವೆ. ಇಲ್ಲವೇ ಚುನಾವಣೆ ಹತ್ತಿರವಾದಾಗ ಸ್ವೀಕರಿಸಿ ನೀತಿ ಸಂಹಿತೆ ಜಾರಿಯ ನೆಪವೊಡ್ಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದು. ಎರಡೂ ಸಾಧ್ಯತೆಗಳು ವಿಫಲವಾದರೆ ವರದಿಯನ್ನು ಸ್ವೀಕರಿಸಿ ಪರಾಮರ್ಶೆಗೆ ಸಚಿವ ಸಂಪುಟ ಉಪ ಸಮಿತಿ ಹೆಗಲಿಗೆ ವರ್ಗಾಯಿಸಿ ನಿಟ್ಟುಸಿರು ಬಿಡಬಹುದು. ಒಟ್ಟಿನಲ್ಲಿ ಯಾವುದೇ ದೃಷ್ಟಿಯಿಂದ ನೋಡಿದರೂ ಜಾತಿ ಗಣತಿ ವರದಿ ಸರ್ಕಾರಕ್ಕೆ ಹಿನ್ನಡೆಯಾಗುವುದರಲ್ಲಿ ಸಂದೇಹವೇ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ