KSOU Scam: ಕೆಎಸ್‌ಒಯು 300 ಕೋಟಿ ರೂಪಾಯಿ ಹಗರಣದ ಸಿಬಿಐ ತನಿಖೆ ಶುರು, ಎಫ್‌ಐಆರ್ ದಾಖಲು
Oct 05, 2023 05:29 PM IST
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 300 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಗರಣದ ತನಿಖೆಯನ್ನು ಸಿಬಿಐ ಶುರುಮಾಡಿದ್ದು, ಎಫ್‌ಐಆರ್ ದಾಖಲಿಸಿದೆ.
ಕೆಎಸ್‌ಒಯುನಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ 300 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಗರಣದ ಸಿಬಿಐ ತನಿಖೆ ಶುರುವಾಗಿದೆ. ಈ ಸಂಬಂಧ ಅಪರಿಚಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಸಿಬಿಐ ತಂಡ, ತನಿಖೆ ಶುರುಮಾಡಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ವಿನಲ್ಲಿ ನಡೆದ 300 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಶುರುವಾಗಿದೆ. ಈ ಹಗರಣಕ್ಕೆ ಸಂಬಂಧಿಸಿ ಸಿಬಿಐ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕೆಎಸ್‌ಒಯುನ ಸಹಯೋಗದ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಅಪರಿಚಿತ ಅಧಿಕಾರಿಗಳು 300 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಮೈಸೂರು ಮೂಲದ ವಿಶ್ವವಿದ್ಯಾನಿಲಯವು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ತನ್ನ ಸಹಯೋಗದ ಸಂಸ್ಥೆಗಳನ್ನು ತೆರೆದಿದೆ. ಸಹಯೋಗ ಸಂಸ್ಥೆಗಳು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಮತ್ತು ವಿಶ್ವವಿದ್ಯಾನಿಲಯಕ್ಕೆ ಜಮಾ ಮಾಡಬೇಕಾದ ಇತರ ಶುಲ್ಕಗಳಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ಜಮಾ ಮಾಡುತ್ತಿವೆ ಎಂದು ಎಫ್ಐಆರ್ ಆರೋಪಿಸಿದೆ.
ಕೆಎಸ್‌ಒಯು ಹಣಕಾಸು ಅಕ್ರಮ ಬೆಳಕಿಗೆ ಬಂದದ್ದು ಹೇಗೆ
ಕೆಎಸ್‌ಒಯುಗೆ ಸಂಬಂಧಿಸಿದ 2013-14 ಮತ್ತು 2014-15 ರ ಆರ್ಥಿಕ ವರ್ಷಗಳ ಲೆಕ್ಕಪರಿಶೋಧನೆಯ ಸಮಯದಲ್ಲಿ ವಿವಿಧ ಸಹಯೋಗ ಸಂಸ್ಥೆಗಳಿಂದ ಜಮೆ ಆಗಿರುವ 50 ಕೋಟಿ ರೂಪಾಯಿ ಲೆಕ್ಕಪತ್ರದಲ್ಲಷ್ಟೇ ಇದ್ದು, ಹಣದ ರೂಪದಲ್ಲಿ ಇರಲಿಲ್ಲ.
"2009-10 ರಿಂದ 2012-2013 ರ ಆರ್ಥಿಕ ವರ್ಷಗಳಿಗೆ ಸಂಬಂಧಿಸಿ ಸುಮಾರು 250 ಕೋಟಿ ರೂಪಾಯಿ ವಿದ್ಯಾರ್ಥಿಗಳ ಪ್ರವೇಶ ಮತ್ತು ವಿಶ್ವವಿದ್ಯಾನಿಲಯದಿಂದ ಪಡೆದ ಮೊತ್ತ ಲೆಕ್ಕದಲ್ಲಿ ಇದ್ದರೂ, ಹಣದ ರೂಪದಲ್ಲಿ ಇಲ್ಲ ಕಾರಣ, ಅದರ ಆಧಾರದ ಮೇಲೆ ಲೆಕ್ಕಪರಿಶೋಧಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು" ಎಂದು ಎಫ್ಐಆರ್ ಆರೋಪಿಸಿದೆ.
ಕೆಎಸ್‌ಒಯು ಹಣಕಾಸು ಅಕ್ರಮ ಸಿಬಿಐ ತನಿಖೆಗೆ ಹಸ್ತಾಂತರಕ್ಕೆ ಮುನ್ನ
ಆಂತರಿಕ ಹಣಕಾಸು ಪರಿಶೋಧನೆ ವೇಳೆ ಹಣಕಾಸು ಅಕ್ರಮ ಎಸಗಿರುವುದು ಕಂಡಬಂತು. ಆದರೆ ಅದಕ್ಕೆ ಹೊಣೆಗಾರರು ಯಾರೆಂಬುದು ದೃಢಪಟ್ಟಿಲ್ಲ. ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ಕೆ ಒಪ್ಪಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿರ್ದೇಶಕರ ಮಂಡಳಿ ತೀರ್ಮಾನಿಸಿತು. ಈ ಕುರಿತು ರಾಜ್ಯ ಸರ್ಕಾರಕ್ಕೂ ಶಿಫಾರಸು ಮಾಡಿ, ಒಪ್ಪಿಗೆ ಪಡೆಯಿತು.
ತನ್ನ ಉಲ್ಲೇಖದಲ್ಲಿ, ರಾಜ್ಯ ಸರ್ಕಾರವು 2009-10 ರಿಂದ 2015-16 ರವರೆಗಿನ ಅವಧಿಯಲ್ಲಿ ಕೆಎಸ್‌ಒಯು, ಮೈಸೂರು ಮತ್ತು ಅದರ ಸಹಯೋಗದ ಸಂಸ್ಥೆಗಳಿಂದ ಭಾರತದಾದ್ಯಂತ ಹರಡಿರುವ ಶುಲ್ಕದ ದುರುಪಯೋಗದ ಕುರಿತು ತನಿಖೆ ನಡೆಸುವಂತೆ ಮತ್ತು ಅಪರಾಧಿಗಳನ್ನು ಗುರುತಿಸುವಂತೆ ಕೇಂದ್ರ ಏಜೆನ್ಸಿಯನ್ನು ಕೇಳಿದೆ.