logo
ಕನ್ನಡ ಸುದ್ದಿ  /  ಕರ್ನಾಟಕ  /  Goa Murder Case: ಗೋವಾದಲ್ಲಿ ಮಗನ ಹತ್ಯೆ ಮಾಡಿದ ಸುಚನಾ ಸೇಠ್ ಟಿಶ್ಯೂ ಪೇಪರ್ ಮೇಲೆ ಬರೆದಿದ್ದೇನು

Goa Murder Case: ಗೋವಾದಲ್ಲಿ ಮಗನ ಹತ್ಯೆ ಮಾಡಿದ ಸುಚನಾ ಸೇಠ್ ಟಿಶ್ಯೂ ಪೇಪರ್ ಮೇಲೆ ಬರೆದಿದ್ದೇನು

Umesh Kumar S HT Kannada

Jan 12, 2024 02:18 PM IST

google News

ಸುಚನಾ ಸೇಠ್ (ಕಡತ ಚಿತ್ರ)

  • ಬೆಂಗಳೂರು ಮೂಲದ ಸಿಇಒ ಸುಚನಾ ಸೇಠ್ ತನ್ನ 4 ವರ್ಷದ ಮಗನ ಕೊಲೆ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಆಕೆಯ ಬ್ಯಾಗ್‌ನಿಂದ ಸಿಕ್ಕ ಟಿಶ್ಯೂ ಪೇಪರ್ ಕೊಲೆಯ ಕುರಿತಾದ ಮಹತ್ವದ ಸುಳಿವು ನೀಡಿದ್ದು, ಗೋವಾ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

ಸುಚನಾ ಸೇಠ್ (ಕಡತ ಚಿತ್ರ)
ಸುಚನಾ ಸೇಠ್ (ಕಡತ ಚಿತ್ರ)

ಬೆಂಗಳೂರು: ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸುಚನಾ ಸೇಠ್ ಅವರ ಬ್ಯಾಗ್‌ನಲ್ಲಿ ಸಿಕ್ಕ ಕೈಬರಹದ ಟಿಪ್ಪಣಿ ಈಗ ಕೊಲೆಯ ಕುರಿತು ಸುಳಿವು ನೀಡಬಹುದು ಎಂದು ಗೋವಾ ಪೊಲೀಸರು ಹೇಳಿದ್ದಾಗಿ ವರದಿಯಾಗಿದೆ.

ಟಿಶ್ಯೂ ಪೇಪರ್‌ ಮೇಲೆ ಆಂಗ್ಲ ಭಾಷೆಯಲ್ಲಿ ಐಲೈನರ್ ಅಥವಾ ಕಾಜಲ್ ಪೆನ್ಸಿಲ್ ಬಳಸಿ ಟಿಪ್ಪಣಿ ಬರೆದು ಆನಂತರ ಅದನ್ನು ಮುದ್ದೆ ಮಾಡಿಹಾಕಲಾಗಿತ್ತು. ಹೀಗಾಗಿ ಅಕ್ಷರಗಳು ಕೂಡ ಸ್ಪಷ್ಟವಾಗಿರಲಿಲ್ಲ ಎಂದು ಗೋವಾ ಪೊಲೀಸರು ಗುರುವಾರ ಹೇಳಿದ್ದಾರೆ. ಆ ಟಿಪ್ಪಣಿಯನ್ನು ಸರಿಪಡಿಸಿ ಬರೆದುದನ್ನು ಓದುವ ಪ್ರಯತ್ನವನ್ನು ತನಿಖಾಧಿಕಾರಿಗಳು ಮಾಡಿದ್ದರು. ಆ ಟಿಪ್ಪಣಿಯು ಸುಚನಾ ಸೇಠ್ ಅವರ ಮಾನಸಿಕ ಸ್ಥಿತಿಯ ಒಳನೋಟವನ್ನು ನೀಡಿದ್ದು, ಮಗು ಯಾರ ಜತೆಗೆ ಇರಬೇಕೆಂಬ ಕುರಿತಾದ ಬಿಕ್ಕಟ್ಟು ಅವರನ್ನು ತಲ್ಲಣಗೊಳಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇತ್ತೀಚೆಗೆ ನ್ಯಾಯಾಲಯ ನೀಡಿದ ಆದೇಶ ಪ್ರಕಾರ, ಗೊತ್ತುಪಡಿಸಿದ ದಿನಗಳಲ್ಲಿ ಮಗನನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಲಾಗಿತ್ತು. ಆದರೆ ಅದು ಸುಚನಾಗೆ ಇಷ್ಟವಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಮಗನ ಮುಖವು ತನ್ನ ಗಂಡನ ಮುಖವನ್ನು ನೆನಪಿಸುತ್ತದೆ ಎಂದು ಸಿಇಒ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಅವರು ಹೇಳಿದ್ದರು.

ಟಿಶ್ಯೂ ಪೇಪರ್‌ನಲ್ಲಿ ಸುಚನಾ ಸೇಠ್ ಬರೆದುದೇನು

ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸುಚನಾ ಸೇಠ್ ಅವರು ಸಾಗಿಸುತ್ತಿದ್ದ ಲಗೇಜ್ ಬ್ಯಾಗ್ ಒಂದರಲ್ಲಿ ಚೂರುಚೂರಾದ ಟಿಶ್ಯೂ ಪೇಪರ್ ಪತ್ತೆಯಾಗಿತ್ತು. ಆ ಟಿಪ್ಪಣಿಯ ಕೈಬರಹ ಗಮನಿಸಿದರೆ ಅದು ತರಾತುರಿಯಲ್ಲಿ ಬರೆದುದು ಎಂದು ತೋರುತ್ತದೆ ಎಂದು ಪೊಲೀಸರು ಹೇಳಿದ್ದರು.

ಆದಾಗ್ಯೂ, ಸುಚನಾ ಸೇಠ್ ಅವರ ಬ್ಯಾಗ್‌ನಲ್ಲಿ ಸಿಕ್ಕ ಟಿಪ್ಪಣಿಯ ನಿಖರವಾದ ವಿಷಯವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಟಿಪ್ಪಣಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯಲಾದ ಐದು ವಾಕ್ಯಗಳಿದ್ದವು ಎಂದು ಹೇಳಿದರು.

" ಮಗ ತಂದೆಯೊಂದಿಗೆ ಹೋಗುವುದನ್ನು ಬಯಸುವುದಿಲ್ಲ ಎಂಬ ಅಂಶ ಟಿಪ್ಪಣಿಯಲ್ಲಿತ್ತು. ಅದು ಸುಚನಾ ಮನಸ್ಸಿನ ಸ್ಥಿತಿಯ ಒಳನೋಟಗಳನ್ನು ನೀಡುತ್ತದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಬಹುಶಃ ಸುಚನಾ ತನ್ನ ಮಗುವನ್ನು ಕೊಂದ ಸಮಯದಲ್ಲಿ ಟಿಪ್ಪಣಿಯನ್ನು ಗೀಚಿರಬಹುದು ಎಂದು ಹೇಳಿದರು.

ಸುಚನಾ ಅವರು ಜನವರಿ 6 ರಿಂದ 10 ರ ತನಕ ಗೋವಾದ ಹೋಟೆಲ್‌ನಲ್ಲಿ ಕೊಠಡಿ ಬುಕ್‌ ಮಾಡಿದ್ದರು. ಜನವರಿ 7ರಂದು ಮಗನನ್ನು ಕೊಲೆ ಮಾಡಿರುವ ಸುಚನಾ, ಆತನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಹೋಟೆಲ್ ಕೊಠಡಿಯಲ್ಲಿ ರಕ್ತದ ಕಲೆ ಕಂಡ ಕಾರಣ ಮತ್ತು ಮಗುವನ್ನು ಆಕೆಯ ಜತೆಗೆ ಕಾಣದ ಕಾರಣ ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರ ಗಮನಕ್ಕೆ ತಂದಿದ್ದರು. ಕೂಡಲೇ ಗೋವಾ ಪೊಲೀಸರು ಸುಚನಾ ತೆರಳಿದ್ದ ಟ್ಯಾಕ್ಸಿ ಚಾಲಕನನ್ನು ಸಂಪರ್ಕಿಸಿ ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದ್ದರು. ಅಲ್ಲಿಂದ ಅವರು ಸುಚನಾರನ್ನು ವಶಕ್ಕೆ ತೆಗೆದುಕೊಂಡರು.

ಆರಂಭಿಕ ವಿಚಾರಣೆಯಲ್ಲಿ ಮಗನ ಕೊಲೆಯನ್ನು ಒಪ್ಪಿಕೊಳ್ಳದ ಸುಚನಾರ ಬ್ಯಾಗ್ ಪರಿಶೀಲಿಸಿದಾಗ ಸಿಕ್ಕ ಟಿಶ್ಯೂ ಪೇಪರ್ ಕೊಲೆಯ ಸುಳಿವನ್ನು ಪೊಲೀಸರಿಗೆ ನೀಡಿತ್ತು. ಕೈಬರಹದ ಟಿಪ್ಪಣಿ ಪತ್ತೆಯಾದ ನಂತರ, ಪೊಲೀಸರು ಸುಚನಾ ನೀಡಿದ ಕೈಬರಹದ ಮಾದರಿಯನ್ನು ಹುಡುಕಿದರು. ಸುಚನಾ ಬಳಿಕ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ