logo
ಕನ್ನಡ ಸುದ್ದಿ  /  ಕರ್ನಾಟಕ  /  Janata Darshan: ಜಿಲ್ಲಾ ಸಮಸ್ಯೆ ಅಲ್ಲೇ ಬಗೆಹರಿಸಿ, ಬೆಂಗಳೂರಿಗೆ ಬೇಡ, ಜನತಾ ದರ್ಶನದಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Janata Darshan: ಜಿಲ್ಲಾ ಸಮಸ್ಯೆ ಅಲ್ಲೇ ಬಗೆಹರಿಸಿ, ಬೆಂಗಳೂರಿಗೆ ಬೇಡ, ಜನತಾ ದರ್ಶನದಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

HT Kannada Desk HT Kannada

Nov 27, 2023 06:26 PM IST

google News

ಸಿಎಂ ಜನತಾ ದರ್ಶನ ಕಾರ್ಯಕ್ರಮದ ಒಂದು ನೋಟ.

  • ಜಿಲ್ಲಾ ಮಟ್ಟದಲ್ಲೇ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನವರೆಗೂ ಬರಕೂಡದು ಬಂದರೆ ಅದು ನಿಮ್ಮ ವೈಫಲ್ಯ. ಇದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನ.27) ಜನತಾ ದರ್ಶನದ (CM Siddaramaiah Janata Darshan) ವೇಳೆ ಖಡಕ್ ಎಚ್ಚರಿಕೆ ನೀಡಿದರು.

ಸಿಎಂ ಜನತಾ ದರ್ಶನ ಕಾರ್ಯಕ್ರಮದ ಒಂದು ನೋಟ.
ಸಿಎಂ ಜನತಾ ದರ್ಶನ ಕಾರ್ಯಕ್ರಮದ ಒಂದು ನೋಟ. (CMO)

ಬೆಂಗಳೂರು: ಜಿಲ್ಲಾ ಮಟ್ಟದಲ್ಲೇ ಬಗೆಹರಿಯಬೇಕಾದ ಜನರ ಸಮಸ್ಯೆಗಳು ಬೆಂಗಳೂರಿನವರೆಗೂ ಬರಕೂಡದು. ಒಂದೊಮ್ಮೆ ಬಂದರೆ ಅದು ನಿಮ್ಮ ವೈಫಲ್ಯ ಎಂದು ಪರಿಗಣಿಸಬೇಕಾಗುತ್ತದೆ. ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಅವರು ಸೋಮವಾರ (ನ.27) ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದ ವೇಳೆ ಈ ಎಚ್ಚರಿಕೆ ನೀಡಿದರು.

ಜನ ದುಡ್ಡು ಖರ್ಚು ಮಾಡಿಕೊಂಡು ಬೆಂಗಳೂರಿನವರೆಗೂ ಬಂದರೆ ನಿಮ್ಮ ವೈಫಲ್ಯ ಎಂದರ್ಥ. ಕಾರ್ಯ ವಿಳಂಬವನ್ನು ಭ್ರಷ್ಟಾಚಾರದ ಮತ್ತೊಂದು ರೂಪ ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ ರವಾನಿಸಿದರು.

ಜನಸ್ಪಂದನೆ ಬಳಿಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನ ಸಾರ ಹೀಗಿದೆ

ಜನತಾ ದರ್ಶನ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇವತ್ತು ಜನಸ್ಪಂದನ ಕಾರ್ಯಕ್ರಮ ನಡೆಯಿತು. ಎರಡು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು. ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ; ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ. ಇದನ್ನು ಸಹಿಸಲ್ಲ ಎಂದು ಹೇಳಿದರು.

1.ಇದು ಜನತಾದರ್ಶನವಲ್ಲ ಜನತಾ ಸ್ಪಂದನ

ಅನೇಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಕೆಲವು ಅರ್ಜಿಗಳು ಕೂಡಲೇ ತೀರ್ಮಾನ ಮಾಡಲು ಆಗೊದಿಲ್ಲ. ಸಮಯ ಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಬೆಳೆಯುತ್ತಲೇ ಹೋಗುತ್ತವೆ.

2. ವೈಯಕ್ತಿಕ ಅಹವಾಲುಗಳ ಇತ್ಯರ್ಥ

ಇಂದು ಬಂದ ಅರ್ಜಿಗಳಲ್ಲಿ ಬಹುತೇಕವಾಗಿ ಕಂದಾಯ, ಪೊಲೀಸ್‌ ಇಲಾಖೆ, ಗೃಹಲಕ್ಷ್ಮಿ ಯೋಜನೆ, ಬಿಬಿಎಂಪಿ, ಪಿಂಚಣಿ, ಗ್ರಾಚ್ಯುಟಿ ಇತ್ಯರ್ಥ, ವಸತಿ ಕೊಡಿ, ಉದ್ಯೋಗ ಕೊಡಿಸಿ ಎಂಬ ಮನವಿಗಳು ಬಂದಿದ್ದವು. ಅವುಗಳನ್ನು ಬಹುತೇಕ ಇತ್ಯರ್ಥ ಮಾಡಲು ಸೂಚಿಸಲಾಗಿದೆ. ವಿಶೇಷವಾಗಿ ಅಂಗವಿಕಲರು ಉದ್ಯೋಗ ಕೊಡಿಸಿ, ತ್ರಿಚಕ್ರ ವಾಹನ ಕೊಡಿಸಿ ಎಂದು ಮನವಿ ಸಲ್ಲಿಸಿದ್ದಾರೆ. 4000 ತ್ರಿಚಕ್ರ ವಾಹನಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

3. ಜಿಲ್ಲಾ ಮಟ್ಟದ ಸಮಸ್ಯೆ ಅಲ್ಲೇ ಬಗೆಹರಿಯಬೇಕು

ವಿಶೇಷವಾಗಿ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಖಾತೆ, ಪಹಣಿ, ಪೋಡಿ ಮಾಡಲು ನನ್ನ ಬಳಿ ಬರಬೇಕಾ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು ಕೆಲಸ ಮಾಡಿದರೆ ಜನರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ಕುರಿತು ಕಟ್ಟುನಿಟ್ಟಿನ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

4. ಕಾರ್ಯ ವಿಳಂಬ ಎಂದರೆ ಭ್ರಷ್ಟಾಚಾರ

ಕಾರ್ಯ ವಿಳಂಬ ಮಾಡುವುದು ಎಂದರೆ, ಅದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವುದು ಎಂದರ್ಥ. ಆದ್ದರಿಂದ ಕೂಡಲೇ ಜನರಿಗೆ ಸ್ಪಂದಿಸಲು ಸೂಚಿಸಿದರು. ಕಾನೂನು ರೀತ್ಯ ಮಾಡಲು ಸಾಧ್ಯವಾಗದಿದ್ದರೆ, ಹಿಂಬರಹ ನೀಡಬೇಕು.

ಕನಿಷ್ಠ 3 ತಿಂಗಳಿಗೊಮ್ಮೆ ಜನತಾಸ್ಪಂದನ ಕಾರ್ಯಕ್ರಮ ಮಾಡುತ್ತೇನೆ. ಮುಂದಿನ ಬಾರಿ ಹೆಚ್ಚು ಜನ ಬಂದರೆ, ತಳಹಂತದ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ಪರಿಗಣಿಸಲಾಗುವುದು ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂದು (ನ.27) ಮೂರುವರೆ ಸಾವಿರ ಅರ್ಜಿ ಸ್ವೀಕರಿಸಲಾಗಿದೆ. ಇವುಗಳನ್ನು ಪರಿಶೀಲಿಸಿ, ಕಾನೂನು ರೀತ್ಯ ಪರಿಹಾರ ನೀಡಬೇಕು. ಸಾಧ್ಯವಾಗದಿದ್ದರೆ ಹಿಂಬರಹ ನೀಡಬೇಕು.

5. ಜನತಾ ದರ್ಶನದ ಅರ್ಜಿಗಳು 15 ದಿನಗಳ ಒಳಗೆ ಇತ್ಯರ್ಥ

ಇಂದು ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. ಹದಿನೈದು ದಿನದೊಳಗೆ ಇವುಗಳನ್ನು ವಿಲೇವಾರಿ ಮಾಡಬೇಕು. ನಿಯಮಾವಳಿಗಳಲ್ಲಿ ಇತ್ಯರ್ಥಗೊಳಿಸಲು ಅವಕಾಶವಿಲ್ಲದೆ ಇದ್ದರೆ, ಹಿಂಬರಹ ನೀಡಬೇಕು. ಕೆಳಹಂತದ ಅಧಿಕಾರಿಗಳಿಗೆ ನೀವು ಕೂಡಲೇ ಸ್ಪಂದಿಸಬೇಕು. ಕೆಳಹಂತದ ಅಧಿಕಾರಿಗಳು ಅರ್ಜಿಯನ್ನು ಇತ್ಯರ್ಥಪಡಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಬೇಕು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ