ಒಗ್ಗರಣೆಗೆ ಬೆಳ್ಳುಳ್ಳಿ ಬಿದ್ರೇನೇ ಟೇಸ್ಟ್ ಅಂತೀರಾ, ಬೆಂಗಳೂರಲ್ಲಿ ಬೆಳ್ಳುಳ್ಳಿ ಸ್ವಲ್ಪ ದುಬಾರಿ, ಕಿಲೋಗೆ 400 ರೂ ನೆನಪಿರಲಿ
Aug 28, 2024 11:09 PM IST
ಬೆಂಗಳೂರಲ್ಲಿ ಬೆಳ್ಳುಳ್ಳಿ ಸ್ವಲ್ಪ ದುಬಾರಿ, ಕಿಲೋಗೆ 400 ರೂ (ಸಾಂಕೇತಿಕ ಚಿತ್ರ)
Garlic Price hike; ಬೆಂಗಳೂರಲ್ಲಿ ಬೆಳ್ಳುಳ್ಳಿ ಸ್ವಲ್ಪ ದುಬಾರಿಯಾಗಿದ್ದು, ಕಿಲೋಗೆ 400 ರೂಪಾಯಿ ದಾಟಿದೆ. ಇದು ಈ ವಾರದಲ್ಲಿ 450 ರೂಪಾಯಿ ಕೂಡ ದಾಟಬಹುದು ಎಂದು ವ್ಯಾಪಾರಸ್ಥರು ಹೇಳುತ್ತಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.
ಬೆಂಗಳೂರು: ನೀವು ಏನೇ ಹೇಳಿ, ಒಗ್ಗರಣೆಗೆ ಬೆಳ್ಳುಳ್ಳಿ ಬಿದ್ರೇನೇ ಟೇಸ್ಟ್ ಅಂತ ಹೇಳ್ತಾನೇ ಇರ್ತೀರಾ!, ಬೆಂಗಳೂರಲ್ಲಿ ಬೆಳ್ಳುಳ್ಳಿ ಸ್ವಲ್ಪ ದುಬಾರಿಯಾಗಿದ್ದು, ಕಿಲೋಗೆ 400 ರೂಪಾಯಿ ದಾಟಿದೆ ನೆನಪಿರಲಿ. ಈ ತಿಂಗಳ ಆರಂಭದಲ್ಲಿ ಬೆಳ್ಳುಳ್ಳಿ ದರ 400 ರೂಪಾಯಿ ಗಡಿ ದಾಟಿತ್ತಾದರೂ ಮತ್ತೆ ಇಳಿದಿತ್ತು. ಆದರೆ ಈಗ ಮತ್ತೆ 400 ರೂಪಾಯಿ ದಾಟಿ ಮುನ್ನಡೆದಿದೆ. ಈ ವರ್ಷ ಫೆಬ್ರವರಿಯಲ್ಲಿ ಬೆಳ್ಳುಳ್ಳಿ ದರ 500 ರೂಪಾಯಿ ದಾಟಿ ಗಗನಮುಖಿಯಾಗಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತೆ ಮಾಡಿತ್ತು.
ಹಬ್ಬ ಹರಿದಿನಗಳು ಶುರುವಾಗಿವೆ. ಇನ್ನೇನು ಶುಭ ಕಾರ್ಯಗಳು ಕೂಡ ಶುರುವಾಗಿರುವ ಕಾರಣ, ಶ್ರಾವಣ ಮುಗಿಯುತ್ತಿದ್ದಂತೆ ನಾನ್ ವೆಜ್ ಅಡುಗೆ, ಮಸಾಲೆ ಪದಾರ್ಥಗಳ ಬಳಕೆ ಕೂಡ ಹೆಚ್ಚಾಗಲಿದ್ದು, ಬೆಳ್ಳುಳ್ಳಿ ಬೇಡಿಕೆಯೂ ಹೆಚ್ಚಾಗಲಿದೆ. ಹೀಗಾಗಿ ದರವೂ ಏರಿಕೆಯಾಗಬಹುದು ಎನ್ನುತ್ತಿದ್ದಾರೆ ವ್ಯಾಪಾರಿಗಳು.
ಕರ್ನಾಟಕದಲ್ಲಿ ಹೇಗಿದೆ ಬೆಳ್ಳುಳ್ಳಿ ಆವಕದ ಸ್ಥಿತಿಗತಿ
ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ರೈತರು ಬೆಳ್ಳುಳ್ಳಿ ಬೆಳೆಯುತ್ತಾರೆ. ಇದು ಬಿಟ್ಟರೆ, ಭಾರತದಲ್ಲಿ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಮಧ್ಯಪ್ರದೇಶದಲ್ಲೇ ಹೆಚ್ಚು (ಶೇಕಡ 70) ಬೆಳೆಯೋದು. ಅದಾಗಿ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶ.
ಕರ್ನಾಟಕದಲ್ಲಿ ಬೆಳ್ಳುಳ್ಳಿ ಬೆಳೆಯುವುದು ಕಡಿಮೆಯಾದ ಕಾರಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದಲೇ ರಾಜ್ಯಕ್ಕೆ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಆದರೆ, ಈ ಭಾರಿ ಮಳೆಯಿಂದಾಗಿ ಈ ಎರಡೂ ರಾಜ್ಯಗಳಲ್ಲಿ ಬೆಳ್ಳುಳ್ಳಿ ಇಳುವರಿ ಕುಸಿದಿದೆ. ಆದ್ದರಿಂದ ಕರ್ನಾಟಕದ ಮಾರುಕಟ್ಟೆಗೆ ಆವಕ ಕಡಿಮೆಯಾಗಿದ್ದು, ದರ ಹೆಚ್ಚಳವಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.
ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ಈ ಮೊದಲು ಪ್ರತಿದಿನ 5,000 ದಿಂದ 6000 ಚೀಲ (ಪ್ರತಿ ಚೀಲ 50 ಕೆ.ಜಿ) ಬೆಳ್ಳುಳ್ಳಿ ಆವಕವಾಗುತ್ತಿತ್ತು. ಸದ್ಯ 3000 ಚೀಲ ಆವಕವಾಗುತ್ತಿದೆ. ಇಲ್ಲಿಂದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರಿಗೂ ರವಾನೆಯಾಗುತ್ತದೆ. ಬೆಂಗಳೂರಿನ ಗಡಿ ಭಾಗದಲ್ಲಿ ಇರುವ ತಮಿಳುನಾಡಿನ ಹೊಸೂರು ಸೇರಿ ಹಲವು ಪ್ರದೇಶಗಳಿಗೂ ಇಲ್ಲಿಂದಲೇ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ ಎಂದು ಪ್ರಜಾವಾಣಿ ವರದಿ ವಿವರಿಸಿದೆ.
ಬೆಳ್ಳುಳ್ಳಿ ದಾಸ್ತಾನಿಲ್ಲ, ಸುಂಕ ಏರಿಕೆ ಸೇರಿ ಹಲ ವಿಧ ಸಂಕಷ್ಟ
ದೇಶದ ಬಹುಪಾಲು ಬೆಳ್ಳುಳ್ಳಿ ಪೂರೈಕೆದಾರ ರಾಜ್ಯ ಮಧ್ಯಪ್ರದೇಶದಲ್ಲೇ ಬೆಳ್ಳುಳ್ಳಿ ದಾಸ್ತಾನು ಲಭ್ಯವಿಲ್ಲ. ಅಲ್ಲಿ ರೈತರ ಬಳಿ ಬೆಳ್ಳುಳ್ಳಿ ದಾಸ್ತಾನು ಇದೆ. ಆದರೆ ಅವರು ಮಾರುಕಟ್ಟೆ ಬೆಲೆ ನೋಡಿಕೊಂಡು ಅವಲೋಕನ ಮಾಡಿ ಬಳಿಕ ಮಾರಾಟ ಮಾಡುತ್ತಾರೆ. ಸದ್ಯ ಹೊಸ ಬೆಳ್ಳುಳ್ಳಿ ಜನವರಿಯಲ್ಲಿ ಕಟಾವಿಗೆ ಬರಲಿದೆ. ಅಲ್ಲಿವರೆಗೆ ದರ ಏರಿಕೆಯಾಗುತ್ತಲೆ ಇರಲಿದೆ ಎಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ವಿವರಿಸಿದ್ದಾಗಿ ಪ್ರಜಾವಾಣಿ ವರದಿ ವಿವರಿಸಿದೆ.
ಭಾರತಕ್ಕೆ ಅಕ್ರಮವಾಗಿ ಚೀನಾದಿಂದ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ಆದರೆ, ಅದು ಗುಣಮಟ್ಟದಿಂದ ಕೂಡಿಲ್ಲ. ಗ್ರಾಹಕರು ಇದನ್ನು ಖರೀದಿಸುವುದು ಕಡಿಮೆ ಎನ್ನುವ ಮಾತಿದೆ. ಇನ್ನು, ಯಶವಂತಪುರದ ಮಾರುಕಟ್ಟೆಯಲ್ಲಿ ಮಂಗಳವಾರ (ಆಗಸ್ಟ್ 27) ‘ಎ’ ದರ್ಜೆಯ ಹೈಬ್ರೀಡ್ ಬೆಳ್ಳುಳ್ಳಿಯ ಸಗಟು ಧಾರಣೆ ಕಿಲೋಗೆ 420 ರೂಪಾಯಿ ಆಗಿತ್ತು. ಹಾಗಾಗಿ, ಈ ವಾರ ಚಿಲ್ಲರೆ ದರ ಕೂಡ 450 ರೂಪಾಯಿ ತಲುಪಬಹುದು ಎಂದು ವ್ಯಾಪಾರಸ್ಥರು ಅಂದಾಜಿಸಿದ್ದಾರೆ.
ಈ ನಡುವೆ, ಕೇಂದ್ರ ಸರ್ಕಾರವು ದೇಶದ ರೈತರ ಹಿತಕಾಯುವ ದೃಷ್ಟಿಯಿಂದ ಬೆಳ್ಳುಳ್ಳಿ ಮೇಲಿನ ಆಮದು ಸುಂಕವನ್ನು ಶೇ 100ರಷ್ಟು ಹೆಚ್ಚಿಸಿದೆ. ಹಾಗಾಗಿ ಈಜಿಪ್ಟ್ ಮತ್ತು ಇರಾನ್ ದೇಶಗಳಿಂದ ವರ್ತಕರು ಬೆಳ್ಳುಳ್ಳಿ ಆಮದು ಮಾಡಿಕೊಂಡರೂ ಸ್ಥಳೀಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಕಷ್ಟ’ ಎಂದು ವ್ಯಾಪಾರಿಯೊಬ್ಬರು ಹೇಳಿದ್ದನ್ನು ವರದಿ ಉಲ್ಲೇಖಿಸಿದೆ.