Bengaluru News: ಹೂ ವ್ಯಾಪಾರಿಗಳೇ ಗಮನಿಸಿ, ಕಟ್ಟಿದ ಹೂಗಳನ್ನು ಕೈ ಮಾರು ಅಳತೆಯಲ್ಲಿ ಮಾರುವಂತಿಲ್ಲ; ಕಾನೂನು ಮಾಪನ ಶಾಸ್ತ್ರ ಇಲಾಖೆಯ ಆದೇಶ
Dec 08, 2023 09:55 AM IST
ಕೆಆರ್ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ (ಸಾಂದರ್ಭಿಕ ಚಿತ್ರ)
- ಬೀದಿ ಬದಿಯ ಹೂ ವ್ಯಾಪಾರಿಗಳು ಸಾಮಾನ್ಯವಾಗಿ ಕಟ್ಟಿದ ಹೂವಿನ ಮಾಲೆಗಳನ್ನು ಕೈ ಅಳತೆಯಲ್ಲಿ ಮಾರು/ಮೊಳ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ಹೂವಿನ ಅಳತೆಯಲ್ಲಿ ಮೋಸವಾಗುತ್ತದೆ ಎಂಬ ದೂರು ಬಂದಿರುವುದರಿಂದ ಕಾನೂನು ಮಾಪನ ಶಾಸ್ತ್ರವು ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಆದೇಶ ನೀಡಿದೆ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ. ಪ್ರತಿನಿತ್ಯ ಮನೆಯಲ್ಲಿ ದೇವರ ಪೂಜೆ ಮಾಡುವವರು, ರಿಕ್ಷಾ ಕಾರು ಬಸ್ ಚಾಲಕರು, ದೇಗುಲಗಳ ಆರ್ಚಕರು, ತಲೆಜುಟ್ಟಿಗೊಂದು ಹೂವ್ವ ಇರಲಿ ಎಂದು ಭಾವಿಸುವ ಹೆಂಗಳೆಯರು ಪ್ರತಿನಿತ್ಯ ಹೂವುಗಳನ್ನು ಖರೀದಿಸುತ್ತಾರೆ. ಹಬ್ಬ ಹರಿದಿನಗಳು ಬಂದರಂತೂ ಬೆಂಗಳೂರಿನಲ್ಲಿ ಹೂವುಗಳ ಬೇಡಿಕೆ ಹೆಚ್ಚಾಗುತ್ತದೆ, ದರವೂ ಹೆಚ್ಚಾಗುತ್ತದೆ. ಪ್ರತಿಬೀದಿಬೀದಿಯಲ್ಲೂ ಹೂವು ಮಾರುವವರು ಮೊಳಕ್ಕಿಷ್ಟು, ಮಾರಿಗಿಷ್ಟು ಎಂದು ಮಾರುತ್ತ ಇರುತ್ತಾರೆ.
ಕಾನೂನು ಮಾಪನ ಶಾಸ್ತ್ರದ ಆದೇಶ
ಅಕ್ಕಾ ಸೇವಂತಿಗೆ ಮೊಳಕ್ಕೆಷ್ಟು ಎಂದು ಕೇಳುವಾಗ ಹೂ ಮಾರುವವರು ತಮ್ಮ ಕೈ ಅಳತೆಯಲ್ಲೇ ಮಾರಾಟ ಮಾಡುತ್ತಾರೆ. ಆದರೆ, ಹೂವು ಮಾರಾಟಗಾರರ ಎಲ್ಲರ ಕೈ ಒಂದೇ ರೀತಿ ಇರುವುದಿಲ್ಲ. ಉದ್ದ ಕೈಯವರು ಇರುತ್ತಾರೆ, ಗಿಡ್ಡ ಕೈಯವರು ಇರುತ್ತಾರೆ. ಹೂವು ಖರೀದಿಸುವಾಗ ಈ ರೀತಿ ಅಳತೆಯಲ್ಲಿ ಮೋಸವಾಗುತ್ತದೆ ಮತ್ತು ಇದರ ಬದಲು ಮೆಟ್ರಿಕ್ ಪದ್ಧತಿಯಲ್ಲಿ ಮಾರಾಟ ಮಾಡಲು ಸೂಚಿಸಬೇಕು ಎಂಬ ದೂರು ಬಂದ ಹಿನ್ನಲೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಹಿರಿಯ ಅಧಿಕಾರಿಗಳು ನವೆಂಬರ್ 16ರಂದು ಆದೇಶ ಹೊರಡಿಸಿದ್ದರು.
ತೂಕ ಮತ್ತು ಅಳತೆಗೆ ಮೆಟ್ರಿಕ್ ಪದ್ಧತಿ ಜಾರಿಗೆ ಬಂದಿದೆ. ಆದರೆ, ಕಟ್ಟಿದ ಹೂವಿನ ಮಾರಾಟ ಇನ್ನೂ ಮೊಳ ಮತ್ತು ಮಾರಿನ ಲೆಕ್ಕದಲ್ಲಿಯೇ ಮಾರಾಟವಾಗುತ್ತಿದೆ. ಇದರಿಂದ ಮಾರಾಟಗಾರರ ದೇಹದಾರ್ಢ್ಯತೆಗೆ ತಕ್ಕಂತೆ ಹೂವಿನ ಅಳತೆಯಲ್ಲಿ ವ್ಯತ್ಯಾಸವಾಗುತ್ತದೆ. ಹೂವನ್ನು ಮೀಟರ್ ಲೆಕ್ಕದಲ್ಲಿ ಅಳೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಬಸನವಗುಡಿಯ ಸಾಮಾಜಿಕ ಕಾರ್ಯಕರ್ತರಾದ ಬಿಎಸ್ ಮನೋಹರ್ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಮನವಿ ಮಾಡಿದ್ದರು ಎಂದು ಬೆಂಗಳೂರುವೈರ್.ಕಾಂ ವೆಬ್ ಪೋರ್ಟಲ್ ವರದಿ ತಿಳಿಸಿದೆ.
ಹೂವಿನ ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಲು ಸೂಚನೆ
ಈ ದೂರಿಗೆ ಪ್ರತಿಕ್ರಿಯೆ ನೀಡಿರುವ ಮಾಪನಶಾಸ್ತ್ರ ಇಲಾಖೆಯು "ಹೂವನ್ನು ಮಾರಾಟ ಲೆಕ್ಕದಲ್ಲಿ ಮಾರಾಟ ಮಾಡಲು ಹೂವಿನ ವ್ಯಾಪಾರಿಗಳಿಗೆ ಸೂಚನೆ ನೀಡಿ" ಎಂದು ರಾಜ್ಯದ ಎಲ್ಲಾ ಉಪನಿಯಂತ್ರಕರು, ಸಹಾಯಕ ನಿಯಂತ್ರಕರು, ನಿರೀಕ್ಷರಿಗೆ ಆದೇಶ ನೀಡಿದೆ.
ಈ ಆದೇಶವು ಹೂವಿನ ವ್ಯಾಪಾರಿಗಳಿಗೆ ಈ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಿದೆ. ಸಾಕಷ್ಟು ಹೂವಿನ ವ್ಯಾಪಾರಿಗಳು ಅನಕ್ಷರಸ್ಥರಾಗಿರುವುದರಿಂದ ಅವರಿಗೆ ಈ ಕುರಿತು ಅರಿವು ಮೂಡಿಸುವ ಪ್ರಯತ್ನವಾಗಬೇಕಿದೆ. ಬೆಂಗಳೂರಿನಲ್ಲಿ ಬಿಡಿ ಹೂವುಗಳನ್ನು ಸಾಕಷ್ಟು ಹೂವು ವ್ಯಾಪಾರಿಗಳು ತೂಕ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ.
"ಮೈಸೂರಿನಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ ಮಲ್ಲಿಗೆಯಂತಹ ಹೂವುಗಳನ್ನು ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಿನ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ರಾಜ್ಯಾದ್ಯಂತ ಈ ಕುರಿತು ಜಾಗೃತಿ ಮೂಡಿಸಲು ಕ್ರಮವಹಿಸಬೇಕಿದೆ. ಬೀದಿ ವ್ಯಾಪಾರಿಗಳು ಸಣ್ಣ ಸ್ಕೇಲ್‌ನಂತಹ ಒಂದು ಮೀಟರ್ ಉದ್ದದ ಅಳತೆಗೋಲು ಇಟ್ಟುಕೊಂಡು ಮಾರಾಟ ಮಾಡಿದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ" ಎಂದು ಬಿಎಸ್ ಮನೋಹರ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿ ಬೆಂಗಳೂರು ವೈರ್ ವರದಿ ಮಾಡಿದೆ.
"ನಮಗೆ ಗ್ರಾಹಕರು ಮುಖ್ಯ. ಇಂದು ಬಂದವರು ನಾಳೆಯೂ ನಮ್ಮಲ್ಲಿಗೆ ಬರುತ್ತಾರೆ. ಮೀಟರ್ ಅಳತೆ ಕುರಿತು ನಮಗೆ ಯಾರೂ ಇನ್ನೂ ತಿಳಿಸಿಲ್ಲ. ಕೈಯಲ್ಲಿಯೇ ಅಳತೆ ಮಾಡುತ್ತಿದ್ದೇವೆ. ಪ್ರತಿನಿತ್ಯ ಬರುವವರಿಗೆ ನಾವು ಪ್ರೀತಿಯಿಂದ ತುಸು ಹೆಚ್ಚೇ ಹೂವು ನೀಡುತ್ತೇವೆ. ನಮಗೆ ಮಾರ್ಕೆಟ್‌ನಲ್ಲಿ ಎಷ್ಟು ದರಕ್ಕೆ ಹೂವು ಸಿಗುತ್ತದೆಯೋ ಅದಕ್ಕೆ ತಕ್ಕಂತೆ ಬೆಲೆ ಇರುತ್ತದೆ. ಹೂವು ಮಾರಿ ಮೋಸ ಮಾಡಕ್ಕೆ ಆಗೋಲ್ಲ ಸ್ವಾಮಿ" ಎಂದು ಇಟ್ಟಮಡುವಿನ ಹೂವಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ. "ದೊಡ್ಡ ಕೈ, ಚಿಕ್ಕ ಕೈ ಅಂತ ಏನಿಲ್ಲ, ನಮಗೆ ಒಂದು ಮಾರು ಎಂದರೆ ಒಂದು ಅಂದಾಜು ಇರುತ್ತದೆ, ಅಷ್ಟೇ ನೀಡುತ್ತೇವೆ, ಮೋಸಗೀಸ ಇಲ್ಲ" ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಕಟ್ಟುನಿಟ್ಟಾಗಿ ಜಾರಿ
ಹೂವನ್ನು ಕೈ ಅಳತೆಯಲ್ಲಿ ಮಾರುವವರ ವಿರುದ್ಧ ಹಲವು ರಾಜ್ಯಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಪಕ್ಕದ ಕೇರಳದಲ್ಲಿ ಕೈ ಅಳತೆಯಲ್ಲಿ ಹೂವನ್ನು ಮಾರುವಂತೆ ಇಲ್ಲ. ಇದೇ ವರ್ಷ ಆಗಸ್ಟ್‌ನಲ್ಲಿ ಕೈ ಅಳತೆಯಲ್ಲಿ ಮಲ್ಲಿಗೆ ಮಾಲೆ ಮಾರಿದ ಆರು ಜನರ ವಿರುದ್ಧ ಪ್ರಕರಣವನ್ನು ಕೇರಳ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ದಾಖಲಿಸಿಕೊಂಡಿದ್ದರು. ಅಂತಹ ವ್ಯಾಪಾರಿಗಳಿಗೆ ತಲಾ 2000 ರೂಪಾಯಿಯಷ್ಟು ದಂಡ ವಿಧಿಸಿದ್ದರು. ಕರ್ನಾಟಕದಲ್ಲಿ ಈಗ ಈ ಕುರಿತು ವ್ಯಾಪಾರಿಗಳಿಗೆ ಅರಿವು, ಜಾಗೃತಿ ಮೂಡಿಸುವ ಪ್ರಯತ್ನ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲೂ ದಂಡ, ದೂರು ದಾಖಲು ಇತ್ಯಾದಿ ಕ್ರಮಗಳು ಆರಂಭವಾಗಬಹುದು.