ಕರ್ನಾಟಕದಲ್ಲಿ ಹೊಸ ವರ್ಷ ದುಬಾರಿಯಾಗಲಿದೆ ವಾಹನ ಚಾಲನಾ ತರಬೇತಿ, 10 ವರ್ಷಗಳ ಬಳಿಕ ಶುಲ್ಕ ಪರಿಷ್ಕರಣೆ
Dec 15, 2023 06:54 AM IST
ಕರ್ನಾಟಕದಲ್ಲಿ 10 ವರ್ಷಗಳ ಬಳಿಕ ವಾಹನ ಚಾಲನಾ ತರಬೇತಿ ಶುಲ್ಕ ಪರಿಷ್ಕರಣೆ (ಸಾಂಕೇತಿಕ ಚಿತ್ರ)
ಡ್ರೈವಿಂಗ್ ಸ್ಕೂಲ್ಗಳಲ್ಲಿ ಹೋಗಿ ವಾಹನ ಚಾಲನಾ ತರಬೇತಿ ಪಡೆಯಬೇಕು ಎಂಬ ಆಲೋಚನೆ ಇದ್ದರೆ ಈ ತಿಂಗಳಲ್ಲೇ ಹೋಗಿ ಸೇರಿಕೊಳ್ಳುವುದು ಒಳಿತು. ಜನವರಿ 1ರಿಂದ ಡ್ರೈವಿಂಗ್ ಸ್ಕೂಲ್ಗಳ ವಾಹನ ಚಾಲನಾ ತರಬೇತಿ ಶುಲ್ಕ ಏರಿಕೆಯಾಗಲಿದೆ.
ಕರ್ನಾಟಕದ ಡ್ರೈವಿಂಗ್ ಸ್ಕೂಲ್ಗಳಲ್ಲಿ ವಾಹನ ಚಾಲನಾ ತರಬೇತಿ ಶುಲ್ಕವನ್ನು 10 ವರ್ಷಗಳ ಬಳಿಕ ಪರಿಷ್ಕರಿಸಲಾಗಿದ್ದು, 2024ರ ಜನವರಿ 1 ರಿಂದ ಚಾಲ್ತಿಗೆ ಬರಲಿದೆ. ಈ ಪರಿಷ್ಕರಣೆಯೊಂದಿಗೆ ವಾಹನ ಚಾಲನಾ ತರಬೇತಿ ಶುಲ್ಕ 800 ರೂಪಾಯಿಯಿಂದ 3,000 ರೂಪಾಯಿಯಷ್ಟು ದುಬಾರಿಯಾಗಲಿದೆ.
ಕರ್ನಾಟಕದಲ್ಲಿ ಡೈವಿಂಗ್ ಸ್ಕೂಲ್ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸುವುದಕ್ಕೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶ ಪ್ರಕಾರ, ವಾಹನ ಚಾಲನಾ ತರಬೇತಿ 2024ರ ಜ.1ರಿಂದ ಕೊಂಚ ದುಬಾರಿಯಾಗಲಿದೆ. ಕಾರು ಚಾಲನೆ ಕಲಿಯಬೇಕೆಂದರೆ 7,000 ರೂಪಾಯಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.
ವಾಹನ ಚಾಲನಾ ತರಬೇತಿಯನ್ನು ಲಘುಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಸಾರಿಗೆ ವಾಹನಗಳೆಂದು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಈ ವರ್ಗಗಳಿಗೆ ಅನುಗುಣವಾಗಿ ಶುಲ್ಕ ನಿಗದಿ ಮಾಡಿದ್ದು, ಲಘು ಮೋಟಾರು ವಾಹನ (ಕಾರು, ಜೀಪು ಇತ್ಯಾದಿ) ಚಾಲನಾ ತರಬೇತಿಗೆ ಪರಿಷ್ಕೃತ ದರ 7,000 ರೂಪಾಯಿ. ಕಲಿಕಾ ಪರವಾನಗಿಗೆ 350 ರೂಪಾಯಿ, ಚಾಲನಾ ಪರವಾನಗಿಗೆ 1,000 ರೂಪಾಯಿಯನ್ನು ಪ್ರತ್ಯೇಕವಾಗಿ ಆರ್ಟಿಒ ಕಚೇರಿಯಲ್ಲಿ ಪಾವತಿಸಬೇಕು. ಲಘು ಮೋಟಾರು ವಾಹನ (ಕಾರು, ಜೀಪು ಇತ್ಯಾದಿ) ಚಾಲನಾ ತರಬೇತಿಗೆ ಒಟ್ಟು 8.350 ರೂಪಾಯಿ ಖರ್ಚಾಗಲಿದೆ.
ಪ್ರಸ್ತುತ ಲಘು ಮೋಟಾರು ವಾಹನ (ಕಾರು, ಜೀಪು ಇತ್ಯಾದಿ) ಚಾಲನಾ ತರಬೇತಿಗೆ 4,000 ರೂಪಾಯಿ ಶುಲ್ಕ ಇದ್ದು, ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಶುಲ್ಕ ಎಲ್ಲವೂ ಸೇರಿ 8,000 ರೂಪಾಯಿಯನ್ನು ಡ್ರೈವಿಂಗ್ ಸ್ಕೂಲ್ಗಳು ಕಲಿಕಾರ್ಥಿಯಿಂದ ಪಡೆಯುತ್ತಿವೆ. ಡೈವಿಂಗ್ ಸ್ಕೂಲ್ ಗಳ ನಿರ್ವಹಣೆ, ಇಂಧನ ಬಳಕೆ, ಕಲಿಕೆ ವೇಳೆ ವಾಹನಗಳ ಡ್ಯಾಮೇಜ್, ಇನ್ಸುರೆನ್ಸ್, ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಇದಕ್ಕಾಗಿ ಪರಿಗಣಿಸುತ್ತವೆ.
ಈ ಎಲ್ಲವನ್ನೂ ಪರಿಗಣಿಸಿ ಸರ್ಕಾರವೇ ಡೈವಿಂಗ್ ಸ್ಕೂಲ್ಗಳಲ್ಲಿ ತರಬೇತಿ ಶುಲ್ಕವನ್ನು ಹೆಚ್ಚಿಸುವುದಕ್ಕೆ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್ಟಿಒಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಎರಡು ವರ್ಷ ಹಿಂದೆಯೇ ವರದಿ ಸಲ್ಲಿಸಿತ್ತು. ಈ ವರದಿಯನ್ನು ಆಧರಿಸಿ ಈಗ ಸರ್ಕಾರ ದರ ಪರಿಷ್ಕರಣೆ ಆದೇಶ ಹೊರಡಿಸಿದೆ. ಸರ್ಕಾರವೇ ಚಾಲನಾ ತರಬೇತಿ ದರ ಪರಿಷ್ಕರಿಸಿದರೂ, ಡ್ರೈವಿಂಗ್ ಸ್ಕೂಲ್ಗಳಲ್ಲಿ ಈ ಶುಲ್ಕ ವಿಧಿಸಿದರೂ, ಕಲಿಕಾ ವೆಚ್ಚ ಹೆಚ್ಚಾಗಲಿದೆ.
ಪ್ರಸ್ತುತ ಮೋಟಾರು ಸೈಕಲ್ ವಾಹನ ಚಾಲನಾ ತರಬೇತಿಗೆ 2,200 ರೂಪಾಯಿ ಶುಲ್ಕ ಇದ್ದು, ಇದು 3,000 ರೂಪಾಯಿ ಆಗಲಿದೆ. ಆಟೋ ರಿಕ್ಷಾ ಚಾಲನಾ ತರಬೇತಿಗೆ 3,000 ರೂಪಾಯಿ ಶುಲ್ಕ ಇದ್ದು, 4,000 ರೂಪಾಯಿ ಆಗಲಿದೆ. ಕಾರು ಮತ್ತು ಇತರೆ ಲಘು ವಾಹನಗಳ ಚಾಲನಾ ತರಬೇತಿಗೆ ಈಗ 4,000 ರೂಪಾಯಿ ಶುಲ್ಕ ಇದ್ದು, ಇದು 7,000 ರೂಪಾಯಿ ಆಗಲಿದೆ. ಅದೇ ರೀತಿ ಸಾರಿಗೆ ವಾಹನ ಚಾಲನಾ ತರಬೇತಿಗೆ 6,000 ರೂಪಾಯಿ ಶುಲ್ಕ ಇದ್ದು, ಇದು 9,000 ರೂಪಾಯಿ ಆಗಲಿದೆ.
ಈಗ ಚಾಲನಾ ತರಬೇತಿ ಶುಲ್ಕದ ಜತೆಗೆ ಹೆಚ್ಚುವರಿ 4,000 ರೂಪಾಯಿಯನ್ನು ಹೆಚ್ಚುವರಿಯಾಗಿ ಡ್ರೈವಿಂಗ್ ಸ್ಕೂಲ್ ವಸೂಲಿ ಮಾಡುತ್ತಿವೆ. ವಾಹನ ಕಲಿಕೆಯ ಇಂಧನ ಬಳಕೆ, ವೇಳೆ ವಾಹನಗಳ ಡ್ಯಾಮೇಜ್, ಇನ್ಸುರೆನ್ಸ್, ಚಾಲಕರ ಸಂಬಳ ಇನ್ನಿತರ ಅಂಶಗಳನ್ನು ಶಾಲೆಗಳು ಪರಿಗಣಿಸುವ ಕಾರಣ, ಕಲಿಕಾರ್ಥಿಗಳು ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ. ಎಲ್ಲ ಕಲಿಕಾರ್ಥಿಗಳ ಕಲಿಕಾ ವೇಗ ಒಂದೇ ರೀತಿ ಇಲ್ಲದ ಕಾರಣ ಕ್ಲಾಸುಗಳಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಆಗ ಹೆಚ್ಚುವರಿ ವೆಚ್ಚವನ್ನು ಕಲಿಕಾರ್ಥಿ ಭರಿಸಬೇಕಾದ್ದು ಅನಿವಾರ್ಯ ಎನ್ನುತ್ತಾರೆ ಡ್ರೈವಿಂಗ್ ಸ್ಕೂಲ್ನ ಉದ್ಯೋಗಿಯೊಬ್ಬರು.