Bengaluru Metro: ಬೆಂಗಳೂರಿಗೆ ಹೊರಟಿದೆ ಚೀನಾ ಸಹಯೋಗದ ಚಾಲಕ ರಹಿತ ಮೆಟ್ರೋ ರೈಲು; ಹಳದಿ ಮಾರ್ಗದಲ್ಲಿ ಸಂಚಾರ ನಿರೀಕ್ಷೆ
Jan 28, 2024 10:06 PM IST
ಚೀನಾದಿಂದ ಬೆಂಗಳೂರಿಗೆ ಹೊರಟಿರುವ ಚಾಲಕ ರಹಿತ ಮೆಟ್ರೋ (ವಿಡಿಯೋ ಗ್ರ್ಯಾಬ್ ಚಿತ್ರ)
Driverless Train For Bengaluru Metro: ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕೆ ಮೊದಲ ಚಾಲಕ ರಹಿತ ಮೆಟ್ರೋ ರೈಲು ಆಗಮಿಸುತ್ತಿದೆ. ಸೆಪ್ಟೆಂಬರ್‌ನಲ್ಲಿ ಇದು ಸಂಚಾರ ಪ್ರಾರಂಭಿಸುವ ಸಾಧ್ಯತೆ ಇದೆ. ಚೀನಾ ಸಹಭಾಗಿತ್ವದಲ್ಲಿ ಈ ಮೆಟ್ರೋ ರೈಲು ನಿರ್ಮಿಸಲಾಗಿದ್ದು, ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಹೊಸ ದಾಖಲೆ ನಿರ್ಮಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಅಲ್ಲಿ ಚಾಲಕರಹಿತ ಮೆಟ್ರೋ ರೈಲು ಸಂಚರಿಸಲಿದೆ. ಚೀನಾ ಸಹಯೋಗದ ಮೆಟ್ರೋ ರೈಲುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಜನವರಿ 20 ರಂದು ಹಡಗಿನ ಮೂಲಕ ಚೆನ್ನೈ ಕಡೆಗೆ ಹೊರಟಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಅಧಿಕಾರಿಗಳು ನೀಡಿರುವ ಮಾಹಿತಿ ಆಧರಿಸಿ ಮನಿ ಕಂಟ್ರೋಲ್ ಈ ಕುರಿತು ವರದಿ ಮಾಡಿದೆ. ಇದರಂತೆ, ಆರು ಬೋಗಿಗಳ ಮೆಟ್ರೋ ರೈಲನ್ನು ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ 19 ಕಿ.ಮೀ. ದೂರದ ಪ್ರಯಾಣಿಕ ಸೇವೆಗೆ ಬಳಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಚೀನಾದಿಂದ ಹೊರಟಿರುವ ಈ ರೈಲು ಫೆಬ್ರವರಿ ತಿಂಗಳ ಮಧ್ಯಭಾಗ ಅಥವಾ ಕೊನೆಯಲ್ಲಿ ಚೆನ್ನೈ ಬಂದರಿಗೆ ತಲುಪಲಿದೆ. ಅಲ್ಲಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಟ್‌ಗೆ ರಸ್ತೆ ಮಾರ್ಗವಾಗಿ ಸಾಗಿಸಲಾಗುತ್ತದೆ. ಇದಾಗಿ ಮೂರು ತಿಂಗಳು ಕಾಲ ಹಳದಿ ಮಾರ್ಗದಲ್ಲಿ ಇದರ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದು ವರದಿ ಹೇಳಿದೆ.
ವಾಸ್ತವದಲ್ಲಿ ಈ ರೈಲುಗಳು 2023ರ ಸೆಪ್ಟೆಂಬರ್ ತಿಂಗಳು ಬರಬೇಕಾಗಿತ್ತು. ಆದರೆ ಹಲವು ರೀತಿಯ ಸವಾಲುಗಳು ಎದುರಾದ ಕಾರಣ ಸಾಗಣೆಯಲ್ಲಿ ವಿಳಂಬವಾಗಿದೆ. ಕೋವಿಡ್ 19 ಸಂಕಷ್ಟ, ವಿದೇಶಿ ನೇರ ಹೂಡಿಕೆ ನೀತಿ, ಚೀನಾದ ವಾಣಿಜ್ಯ ನಿರ್ಬಂಧಗಳು ವಿಳಂಬಕ್ಕೆ ನೇರ ಕಾರಣವಾದವು.
ವಿಶೇಷವಾಗಿ ಸ್ಥಳೀಯ ಉತ್ಪಾದನಾ ಕಂಪನಿಯನ್ನು ಗುರುತಿಸುವುದು ಕೂಡ ವಿಳಂಬವಾಯಿತು. ಇದು ಶೇಕಡ 75 ದೇಶೀಯ ಕಂಪನಿಯ ಉತ್ಪಾದನೆಯನ್ನು ಹೊಂದಿದೆ. ಮೇಕ್ ಇನ್ ಇಂಡಿಯಾ ಉಪಕ್ರಮದ ಮಾನದಂಡವನ್ನು ಇದರಲ್ಲೂ ಅನುಸರಿಸಲಾಗಿದೆ.
ಮೇಕ್ ಇನ್ ಇಂಡಿಯಾ ಉಪಕ್ರಮದ ಮಾನದಂಡಗಳನ್ನು ಪೂರ್ಣಗೊಳಿಸುವುದಕ್ಕೆ ಚೀನಾದ ಸಿಆರ್‌ಆರ್‌ಸಿ, ಕೋಲ್ಕತ್ತ ಮೂಲದ ತಿತಾಗಢ ರೈಲ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿತು. ಈ ಕಂಪನಿ ಬೋಗಿಗಳ ಉತ್ಪಾದನೆ ಮತ್ತು ಪೂರೈಕೆಯ ಹೊಣೆಗಾರಿಕೆ ವಹಿಸಿಕೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 15 ರೈಲುಗಳು
ದಕ್ಷಿಣ ಬೆಂಗಳೂರು ಮತ್ತು ಇಲೆಕ್ಟ್ರಾನಿಕ್ಸ್ ಸಿಟಿ ನಡುವೆ ಸಂಪರ್ಕ ಒದಗಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 15 ರೈಲುಗಳು ಸಂಚರಿಸಲಿವೆ. ಮೆಟ್ರೋ ಕಾರಿಡಾರ್‌ನಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಒಟ್ಟು 21 ಆರು ಬೋಗಿಗಳ ರೈಲು ಸಂಚಾರ ಇದೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರ್ ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ (ಹೆಚ್‌ಎಸ್‌ಆರ್ ಲೇಔಟ್), ಹೊಂಗಸಂದ್ರ (ಆಕ್ಸ್‌ಫರ್ಡ್ ಕಾಲೇಜು), ಕೂಡ್ಲು ಗೇಟ್ (ಮುನೇಶ್ವರ ನಗರ), ಸಿಂಗಸಂದ್ರ (ಚಿಕ್ಕಬೇಗೂರು), ಹೊಸಾ ರೋಡ್ (ಬಸಾಪುರ ರಸ್ತೆ), ಬೆರಟೇನಾ ಅಗ್ರಹಾರ (ಹೊಸಾ ರೋಡ್), ಇಲೆಕ್ಟ್ರಾನಿಕ್ಸ್ ಸಿಟಿ, ಇನ್‌ಫೋಸಿಸ್ ಫೌಂಡೇಶನ್, ಕೋನಪ್ಪನ ಅಗ್ರಹಾರ (ಇಲೆಕ್ಟ್ರಾನಿಕ್ ಸಿಟಿ- 2ನೇ ಹಂತ), ಹಸ್ಕರ್ ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ ಎಂಬ 16 ನಿಲ್ದಾಣಗಳಿವೆ.
ಹಳದಿ ಮಾರ್ಗದ ಕಾಮಗಾರಿ 2021ರಲ್ಲಿ ಪೂರ್ಣಗೊಂಡು ಸಂಚಾರ ಶುರುವಾಗಬೇಕಾಗಿತ್ತು. ಆದಾಗ್ಯೂ, ಇದರ ಉದ್ಘಾಟನೆ ಮುಂದಕ್ಕೆ ಹೋಗುತ್ತಲೇ ಇದೆ. ಈಗ ರೈಲುಗಳು ಬರಬೇಕಾಗಿದ್ದು, ಸೆಪ್ಟೆಂಬರ್‌ನಲ್ಲಿ ಕಾರ್ಯಾಚರಣೆ ಶುರುವಾಗುವ ನಿರೀಕ್ಷೆ ಇದೆ ಎಂದು ವರದಿ ವಿವರಿಸಿದೆ.