ಬೆಂಗಳೂರು: ಐಫೋನ್ 15 ಆರ್ಡರ್ ಮಾಡಿದ್ದ ವ್ಯಕ್ತಿಗೆ ಪ್ಯಾಕೇಜ್ ಕೊಡಲು ಬಂದ ನಕಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್; ಆಮೇಲೇನಾಯ್ತು?
Oct 02, 2024 06:00 AM IST
ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಪ್ಯಾಕೇಜ್ ಕೊಡಲು ಬಂದ ನಕಲಿ ಡೆಲಿವರಿ ಬಾಯ್; ಆಮೇಲೇನಾಯ್ತು
- ತಾನು ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಎಂದು ಹೇಳಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಐಫೋನ್ 15 ಬದಲು ಬೇರೆಯೇ ಪ್ಯಾಕೇಜ್ ಕೊಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಆದರೆ, ಆರ್ಡರ್ ಮಾಡಿದ ವ್ಯಕ್ತಿಯು ಚಾಣಾಕ್ಷತನದಿಂದ ಮೋಸ ಹೋಗುವುದರಿಂದ ಪಾರಾಗಿದ್ದಾರೆ.
ತಾನು ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ವಂಚಿಸಲು ಪ್ರಯತ್ನಿಸಿ ವಿಫಲವಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ, ಅವರು ಆರ್ಡರ್ ಮಾಡಿದ ಐಫೋನ್ 15 ಎಂದು ಹೇಳಿ ಪಾರ್ಸೆಲ್ ಹಸ್ತಾಂತರಿಸಲು ನಕಲಿ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ ಪ್ರಯತ್ನಿಸಿದ್ದಾನೆ. ಈ ಕುರಿತು ಉದ್ಯಾನ ನಗರಿಯ ನಿವಾಸಿ ಆರೋಪಿಸಿದ್ದಾರೆ. ಪ್ಯಾಕೇಜ್ ಸ್ವೀಕರಿಸುವಂತೆ ಆ ವ್ಯಕ್ತಿ ತನ್ನನ್ನು ಓತ್ತಾಯಿಸಿದನು. ಆದರೆ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ಆರಂಭಿಸುವಾಗ ಓಡಿಹೋಗಿದ್ದಾಗಿ ವ್ಯಕ್ತಿ ದೂರಿದ್ದಾರೆ.
ತನ್ನ ಸಹೋದರಿ 256 ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 15 ಅನ್ನು ಆರ್ಡರ್ ಮಾಡಿದ್ದಳು. ಆ ಫೋನ್‌ಗೆ ಬುಕ್ ಮಾಡುವಾಗಲೇ ಪಾವತಿ ಮಾಡಿದ್ದಳು ಎಂದು ವ್ಯಕ್ತಿಯು ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಆರ್ಡರ್ ಮಾಡುವಾಗಲೇ ಓಪನ್ ಬಾಕ್ಸ್ ಡೆಲಿವರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಆಯ್ಕೆ ಮೂಲಕ ಆನ್‌ಲೈನ್ ಡೆಲಿವರಿ ವೇದಿಕೆಯು ಸೀಲ್ ಮಾಡಿದ ಡೆಲಿವರಿ ಬಾಕ್ಸ್ ಅನ್ನು ಬಳಕೆದಾರರ ಮುಂದೆ ತೆರೆದು ನೋಡಿ ಡೆಲಿವರಿ ಮಾಡುವ ಅವಕಾಶ ನೀಡುತ್ತದೆ. ಆ ಮೂಲಕ ಆರ್ಡರ್ ಸ್ವೀಕರಿಸುವ ಮೊದಲು ಬಾಕ್ಸ್ ಒಳಗಡೆ ಆರ್ಡರ್ ಮಾಡಿರುವ ವಸ್ತುವೇ ಇರುವುದನ್ನು ಖಚಿತಪಡಿಸಿಕೊಳ್ಳಬಹುದು.
ಯಾವುದೇ ರೀತಿಯ ವಂಚನೆ ಆಗಬಾರದೆಂದು ತಡೆಯಲು ಉನ್ನತ ಮಟ್ಟದ ಉತ್ಪನ್ನಗಳನ್ನು ವಿತರಿಸುವಾಗ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂಥ ಆನ್‌ಲೈನ್ ಮಾರುಕಟ್ಟೆಗಳು ಇಂಥಾ ಆಯ್ಕೆಯ ಅವಕಾಶ ಒದಗಿಸುತ್ತವೆ.
ಆತ ಬಾಕ್ಸ್ ತೆರೆಯಲು ಅನುಮತಿಸಲಿಲ್ಲ
“ನನ್ನ ಸಹೋದರಿ ಫ್ಲಿಪ್‌ಕಾರ್ಟ್‌ನಲ್ಲಿ ವಿಐಪಿ ಹೊಂದಿರುವ ಐಫೋನ್ 15 ಅನ್ನು ಆರ್ಡರ್ ಮಾಡಿದ್ದಳು. ಅದು ತೆರೆದ ಬಾಕ್ಸ್ ಡೆಲಿವರಿಯಾಗಿತ್ತು. ಆದರೆ ನಕಲಿ ಡೆಲಿವರಿ ವ್ಯಕ್ತಿ (ಬಿಳಿ ಬಣ್ಣದ ಬಟ್ಟೆ ತೊಟ್ಟಿರುವ ವ್ಯಕ್ತಿ) ಪೆಟ್ಟಿಗೆ ತೆರೆಯಲು ಸಾಧ್ಯವಿಲ್ಲ ಎಂದು ಹೇಳಿ ಹೇಳಿದ್ದಾನೆ” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಡೆಲಿವರಿ ಬಾಯ್ ಬಾಕ್ಸ್ ತೆರೆಯಲು ಅವಕಾಶ ನೀಡಲಿಲ್ಲ. ಅದನ್ನು ಹಾಗೆಯೇ ಸ್ವೀಕರಿಸುವಂತೆ ಒತ್ತಾಯಿಸಲು ಪ್ರಯತ್ನಿಸಿದನು. ಪ್ಯಾಕೇಜ್‌ನಲ್ಲಿ ಇರುವುದನ್ನು ಪರಿಶೀಲಿಸಲು ಬಿಡಲಿಲ್ಲ. ಹೀಗಾಗಿ ಪುರಾವೆಯಾಗಿ ಇಡೀ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ಆರಂಭಿಸಿದೆ ಎಂದು ವ್ಯಕ್ತಿ ಹೇಳಿದರು. “ನಾನು ಇಡೀ ಸಂವಾದವನ್ನು ರೆಕಾರ್ಡ್ ಮಾಡಿದಾಗ ಆತನಿಗೆ ಭಯವಾಯ್ತು. ನಾನು ಪ್ಯಾಕೇಜ್ ಸ್ವೀಕರಿಸಲಿಲ್ಲ” ಎಂದು ಅವರು ಹೇಳಿದ್ದಾರೆ.
ನಕಲಿ ಡೆಲಿವರಿ ಬಾಯ್ ಕಾಲಿಗೆ ಬುದ್ಧಿ ಹೇಳಲು ನಿರ್ಧರಿಸಿದನು. ಅದಾದ ಕೆಲವೇ ನಿಮಿಷಗಳ ನಂತರ, ನಿಜವಾದ ಫ್ಲಿಪ್‌ಕಾರ್ಟ್ ಡೆಲಿವರಿ ಎಕ್ಸಿಕ್ಯೂಟಿವ್ ಸ್ಥಳಕ್ಕೆ ಬಂದು ನಿಜವಾದ ಐಫೋನ್ 15 ಅನ್ನು ವಿತರಿಸಿದರು. ನಾನು ಎಲ್ಲವನ್ನೂ ರೆಕಾರ್ಡ್ ಮಾಡಿದ್ದರಿಂದ ನಿಜವಾದ ಉತ್ಪನ್ನವನ್ನು ಪಡೆದಿದ್ದೇವೆ. ಇಲ್ಲದಿದ್ದರೆ ಅವರು ನನಗೆ ವಂಚಿಸುತ್ತಿದ್ದರು ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದ್ದಾರೆ.