logo
ಕನ್ನಡ ಸುದ್ದಿ  /  ಕರ್ನಾಟಕ  /  ಅಪರಾಧ ಸುದ್ದಿಗಳು: ಶೀಲ ಶಂಕಿಸಿ ತಾಯಿಯ ಹತ್ಯೆ ಮಾಡಿದ ಅಪ್ರಾಪ್ತ ಪುತ್ರ ಅರೆಸ್ಟ್‌; ನಿವೇಶನ ಮಾಸಾಶನ ಉದ್ಯೋಗ ಹೆಸರಲ್ಲಿ ಬೃಹತ್‌ ವಂಚನೆ

ಅಪರಾಧ ಸುದ್ದಿಗಳು: ಶೀಲ ಶಂಕಿಸಿ ತಾಯಿಯ ಹತ್ಯೆ ಮಾಡಿದ ಅಪ್ರಾಪ್ತ ಪುತ್ರ ಅರೆಸ್ಟ್‌; ನಿವೇಶನ ಮಾಸಾಶನ ಉದ್ಯೋಗ ಹೆಸರಲ್ಲಿ ಬೃಹತ್‌ ವಂಚನೆ

Praveen Chandra B HT Kannada

Feb 07, 2024 02:18 PM IST

google News

ಬೆಂಗಳೂರು ಅಪರಾಧ ಸುದ್ದಿಗಳು

    • Bengaluru Crime News: ಬಿಬಿಎಂಪಿ ಕಾರ್‌ ಲೋನ್, ನಿವೇಶನ, ಕೆಲಸ, ವಿಧೆವೆಯವರ ಮಾಶಾಸನ ಕೊಡಿಸುವುದಾಗಿ 60 ಅಮಾಯಕರನ್ನು ವಂಚಿಸಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತಾಯಿಯನ್ನು ಕೊಂದ ಪತಿ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರನ ಬಂಧನವೂ ಆಗಿದೆ. ಮೂವರು ವಾಹನ ಕಳ್ಳರನ್ನು ಪೊಲೀಸರು ಜೈಲಿಗಟ್ಟಿದ್ದಾರೆ. (ವರದಿ: ಎಚ್‌. ಮಾರುತಿ)
ಬೆಂಗಳೂರು ಅಪರಾಧ ಸುದ್ದಿಗಳು
ಬೆಂಗಳೂರು ಅಪರಾಧ ಸುದ್ದಿಗಳು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಬ್ಸಿಡಿ ದರದಲ್ಲಿ ಕಾರ್‌ ಲೋನ್, ನಿವೇಶನ, ಕೆಲಸ, ವಿಧೆವೆಯವರ ಮಾಶಾಸನ ಕೊಡುವುದಾಗಿ ಹೇಳಿ, ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು 60 ಕ್ಕೂ ಹೆಚ್ಚು ಜನರಿಗೆ ವಂಚಿಸಿ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣವನ್ನು ಮೋಸ ಮಾಡಿ ವರ್ಗಾಯಿಸಿಕೊಂಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಇವರು ಅಮಾಯಕರನ್ನು ಗುರಿಯಾಗಿಸಿಕೊಂಡು ಆಮಿಷವೊಡ್ಡಿ ಹಣ ಪಡೆದುಕೊಂಡು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಗರ ನಿವಾಸಿ 22 ವರ್ಷದ ದೀಪಕ್ ಮತ್ತು 21 ವರ್ಷದ ಹರ್ಷಾ ಬಂಧಿತ ಆರೋಪಿಗಳು. ಭಾವನ, ಭಾವನಿ ಮತ್ತು ಸಂಜಯ್ ತಲೆ ಮರೆಸಿಕೊಂಡಿದ್ದಾರೆ. ಇವರು ಇತ್ತೀಚೆಗೆ ಯುವಕನೊಬ್ಬನಿಗೆ ಕರೆ ಮಾಡಿ ಬಿ.ಬಿ.ಎಂ.ಪಿ. ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್‌ ಅಪರೇಟರ್‌ ಕೆಲಸ ಕೊಡಿಸುವುದಾಗಿ ಹೇಳಿ, 8 ಸಾವಿರ ರೂ. ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಸಿಕೊಂಡು ಯಾವುದೇ ಕೆಲಸ ಕೊಡಿಸದೇ ಮೋಸ ಮಾಡಿದ್ದರು. ಈ ಯುವಕ ನೀಡಿದ ದೂರಿನ ಆಧಾರದಲ್ಲಿ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು 2 ಮೊಬೈಲ್ ಫೋನ್‌, 2 ಸಾವಿರ ರೂ. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ವಿಧವೆಯರು, ಗೃಹಿಣಿಯರನ್ನು ಗುರಿಯಾಗಿಸಿಕೊಂಡು ಮೊಬೈಲ್‌ನಿಂದ ಕರೆ ಮಾಡಿ ವಿಧವಾ ವೇತನ, ಯುವಕರಿಗೆ ಬಿ.ಬಿ.ಎಂ.ಪಿ ಕಛೇರಿಯಲ್ಲಿ ಕಂಪ್ಯೂಟರ್ ಅಪರೇಟರ್ ಕೆಲಸ, ಸಬ್ಸಿಡಿ ದರದಲ್ಲಿ ಕಾರು, ಸೈಟು ಕೊಡಿಸುತ್ತೇವೆಂದು ವಂಚಿಸಿ, ಅವರುಗಳಿಂದ ಹಣ ವರ್ಗಾವಣೆ ಮಾಡಿಸಿಕೊಂಡು ಮೋಜಿನ ಜೀವನ ನಡೆಸುತ್ತಿದ್ದರು.

ಈ ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಸೈದುಲು ಅಡಾವತ್ ಯಶವಂತಪುರ ಉಪ ವಿಭಾಗ ಎಸಿಪಿ ಮೇರಿ ಶೈಲಜ ಇವರ ನೇತೃತ್ವದಲ್ಲಿ ಸಿ.ಇ.ಎನ್. ಪೊಲೀಸ್ ಇನ್ಸ್ಪೆಕ್ಟರ್ ಶಿವರತ್ನ ಎಸ್. ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಮೂವರು ವಾಹನ ಕಳ್ಳರ ಬಂಧನ, 5 ಕಾರು ಮತ್ತು 2 ದ್ವಿಚಕ್ರ ವಾಹನಗಳ ವಶ

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ 5 ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋರಮಂಗಲ, ರಾಜರಾಜೇಶ್ವರಿ ನಗರ, ಜಯನಗರ, ಹನುಮಂತನಗರ, ಸುಬ್ರಮಣ್ಯನಗರ, ಬನಶಂಕರಿ ಮತ್ತು ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ವಾಹನ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ವಾಹನಗಳ ಮೌಲ್ಯ ಅಂದಾಜು 11ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ಉಪ ಪೊಲೀಸ್ ಆಯುಕ್ತ ಸಿ.ಕೆ ಬಾಬಾ ಮಾರ್ಗದರ್ಶನದಲ್ಲಿ ಕೋರಮಂಗಲ ಪೊಲೀಸ್ ಠಾಣೆಯ ಹಿಂದಿನ ಪೊಲೀಸ್ ಇನ್ಸ್ಪೆಕ್ಟರ್ ಡಿ.ಎನ್ ನಟರಾಜ್ ಸಿಬ್ಬಂದಿ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ತಾಯಿಯನ್ನು ಕೊಂದ ಪತಿ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರನ ಬಂಧನ

ಬೆಂಗಳೂರು: ತಾಯಿಯ ಶೀಲವನ್ನು ಶಂಕಿಸಿ ತಂದೆಯೊಂದಿಗೆ ಕೈ ಜೋಡಿಸಿ ಕೊಲೆ ಮಾಡಿದ್ದ ತಂದೆ ಮಗನನ್ನು ಕೆ.ಆರ್.ಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಗನಿಗೆ 17 ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಬೆಂಗಳೂರಿನ, ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಸ್ಟೀಸ್ ಬೀಮಯ್ಯ ಲೇಔಟ್‌ನಲ್ಲಿ ತಂದೆ, ತಾಯಿ ಹಾಗೂ ಮಗ ವಾಸಿಸುತ್ತಿದ್ದರು.

ತಾಯಿಗೆ 40 ವರ್ಷ ವಯಸ್ಸಾಗಿದ್ದು, ಈಕೆಯ ನಡತೆಯ ಬಗ್ಗೆ ಪತಿರಾಯ ಶಂಕಿಸಿ ಗಲಾಟೆ ಮಾಡುತ್ತಿದ್ದ. ಮೂರು ದಿನಗಳ ಹಿಂದೆ ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ನಿದ್ರಾವಸ್ಥೆಯಲ್ಲಿದ್ದ ಹೆಂಡತಿಯನ್ನು ತಂದೆ ಮತ್ತು ಮಗ ಸೇರಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುತ್ತಾರೆ. ಈ ಕುರಿತು ಮೃತ ತಾಯಿಯ ಸಹೋದರ ಕೆ.ಆರ್.ಪುರ ಠಾಣೆಯಲ್ಲಿ ದೂರು ನೀಡಿದ್ದು ಕೊಲೆ ಪ್ರಕರಣ ದಾಖಲಾಗಿರುತ್ತದೆ.

ತನಿಖೆಯನ್ನು ಮುಂದುವರೆಸಿದ ಪೊಲೀಸರು, ಮೃತಳ ಗಂಡ ಮತ್ತು 17 ವರ್ಷದ ಪುತ್ರನನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಚರಣೆಯನ್ನು ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ|ಶಿವಕುಮಾರ್‌ , ಸಹಾಯಕ ಪೊಲೀಸ್ ಆಯುಕ್ತೆ ರೀನಾ ಸುವರ್ಣ ಮಾರ್ಗದರ್ಶನದಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

(ವರದಿ: ಎಚ್‌. ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ