ಕೃಷಿ ಬೆಳೆಗಳಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮತ್ತೆ ಅನ್ನದಾತರ ಹೋರಾಟ; ಏನಿದು ಕನಿಷ್ಠ ಬೆಂಬಲ ಬೆಲೆ?
Feb 15, 2024 10:32 PM IST
ದೆಹಲಿ ಚಲೋ ಪ್ರತಿಭಟನಾಗೆ ತೆರಳುವ ಮುನ್ನ ಪಟಿಯಾಲದ ಶಂಭು ಗಡಿಯಲ್ಲಿ ವಿಶ್ರಾಂತಿ ಪಡೆದ ವಿವಿಧ ಭಾಗಗಳಿಂದ ಬಂದಿದ್ದ ರೈತರು (ANI)
ದೇಶದ ವಿವಿಧ ಭಾಗಗಳಿಂದ ರಾಷ್ಟ್ರ ರಾಜಧಾನಿಯತ್ತ ಹೊರಟಿರುವ ರೈತರು ದೆಹಲಿ ಚಲೋಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಅನ್ನತದಾರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿರುವುದು ಯಾಕೆ ಅನ್ನೋದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಎರಡು ವರ್ಷಗಳ ಹಿಂದೆ ಪ್ರತಿಭಟನೆ ನಡೆಸಿದ್ದನ್ನು ಯಾರೂ ಮರೆತಿಲ್ಲ. ಇದೀಗ ಮತ್ತೆ ರೈತರು ಪ್ರತಿಭಟನೆಗೆ ಧುಮುಕಿದ್ದಾರೆ. ಪಂಜಾಬ್, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ರೈತರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಅನುಷ್ಠಾನಕ್ಕೆ ಕಾಯ್ದೆಯ ಖಾತರಿ ನೀಡಿ ಎನ್ನುವುದು ರೈತರ ಈ ಬಾರಿಯ ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿದೆ. ಈ ಭರವಸೆಯನ್ನು ಕೇಂದ್ರ ಸರ್ಕಾರವು ರೈತರಿಗೆ ನೀಡಿತ್ತು. ಆದರೆ ವರ್ಷಗಳು ಕಳೆದರೂ ಸರ್ಕಾರ ಕಾರ್ಯರೂಪಕ್ಕೆ ತಂದಿಲ್ಲ ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕನಿಷ್ಠ ಬೆಂಬಲ ಬೆಲೆ, ಹಾಗೆಂದರೇನು?
ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವ ಬೆಲೆಯನ್ನು ಕನಿಷ್ಠ ಬೆಂಬಲ ಬೆಲೆ ಎಂದು ಕರೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಕೃಷಿ ಬೆಳೆಗಳ ಬೆಲೆಯಲ್ಲಿ ಏರಿಳಿತಗಳಾದಾಗ ರೈತರಿಗೆ ಕನಿಷ್ಠ ಆದಾಯವನ್ನು ಖಾತ್ರಿ ಪಡಿಸುತ್ತದೆ.
ಕನಿಷ್ಠ ಬೆಂಬಲ ಬೆಲೆಯನ್ನು ಜಾರಿ ಗೊಳಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ನಂತರವಷ್ಟೇ 2020-21 ರಲ್ಲಿ ದೆಹಲಿಯ ಗಡಿಯಲ್ಲಿ ಒಂದು ವರ್ಷ ನಡೆಸಿದ ಪ್ರತಿಭಟನೆಯನ್ನು ರೈತರು ಹಿಂಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ 10 ವರ್ಷಗಳಲ್ಲಿ 18 ಲಕ್ಷ ಕೋಟಿ ರೂಪಾಯಿ ಗಳನ್ನು ಕನಿಷ್ಠ ಬೆಂಬಲ ಬೆಲೆ ರೂಪದಲ್ಲಿ ರೈತರಿಗೆ ವಿತರಿಸಲಾಗಿದೆ. ಇದು ಈ ಹಿಂದಿನ ದಶಕಕ್ಕೆ ಹೋಲಿಸಿದರೆ ಎರಡೂವರೆ ಪಟ್ಟು ಹೆಚ್ಚಳವಾಗಿದೆ. ಜೊತೆಗೆ ಎಣ್ಣೆಕಾಳು ಮತ್ತು ಬೇಳೆಕಾಳುಗಳನ್ನು ಬೆಳೆಯುವ ರೈತರು ಈಗಿನ ಸರ್ಕಾರದ ಅವಧಿಯಲ್ಲಿ ಕಳೆದ ದಶಕದಲ್ಲಿ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದರು.
23 ಬೆಳೆಗಳಿಗೆ ಬೆಂಬಲ ಬೆಲೆ
ಪ್ರಸ್ತುತ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಣೆ ಮಾಡಲಾಗಿದೆ. ಅವುಗಳ ವಿವರ ಇಲ್ಲಿದೆ.
ಸಿರಿಧಾನ್ಯಗಳು: ರಾಗಿ, ಭತ್ತ, ಗೋಧಿ, ಮೆಕ್ಕೆಜೋಳ, ಜೋಳ, ಸಜ್ಜೆ ಮತ್ತು ಬಾರ್ಲಿ
ಬೇಳೆಕಾಳುಗಳು: ಕಡಲೆ, ತೊಗರಿ, ಹೆಸರು, ಉದ್ದು, ಮಸೂರ್
ಎಣ್ಣೆಕಾಳುಗಳು: ನೆಲಗಡಲೆ, ಸೂರ್ಯಕಾಂತಿ, ಸಾಸಿವೆ, ಸೋಯಾಬೀನ್, ಸೀಸ್ಮಮ್, ಕುಸುಮೆ, ನೈಗರ್ ಸೀಡ್
ವಾಣಿಜ್ಯ ಬೆಳೆಗಳು: ಕೊಬ್ಬರಿ, ಕಬ್ಬು, ಹತ್ತಿ ಮತ್ತು ಕಚ್ಚಾ ಸೆಣಬು
ಆದರೆ ಭತ್ತ ಮತ್ತು ಗೋಧಿಯನ್ನು ಮಾತ್ರ ಸಂಗ್ರಹ ಮಾಡಲು ಸರ್ಕಾರದ ವ್ಯವಸ್ಥೆಯಿದೆ. ಹಾಗಾಗಿ ಈ ಎರಡು ಬೆಳೆಗಳ ಬೆಳೆಗಾರರಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆಯ ಪ್ರಯೋಜನವಾಗುತ್ತಿದೆ.ಪ್ರತಿವರ್ಷ ದೇಶದಲ್ಲಿ ಉತ್ಪಾದನೆಯಾಗುವ ಶೇ. 30ರಷ್ಟು ಗೋಧಿ ಮತ್ತು ಭತ್ತವನ್ನು ಸರಕಾರವೇ ಖರೀದಿ ಮಾಡುತ್ತದೆ. ಇತರೆ ಬೆಳಗಳ ಶೇ6ರಿಂದ 7ರಷ್ಟನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುತ್ತದೆ.
ಕನಿಷ್ಠ ಬೆಂಬಲ ಬೆಲೆಯಲ್ಲಿ, ಕಾರ್ಮಿಕರ ಕೂಲಿ, ಎತ್ತುಗಳ ಶ್ರಮ, ಯಂತ್ರಗಳ ಬಾಡಿಗೆ, ಗುತ್ತಿಗೆ ಭೂಮಿಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ಕಾರ್ಯ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಕಾರ್ಯಾಚರಣೆಗೆ ಡೀಸೆಲ್ ಅಥವಾ ವಿದ್ಯುತ್ ವೆಚ್ಚ, ವಿವಿಧ ವೆಚ್ಚಗಳು ಮತ್ತು ಕುಟುಂಬದ ಕಾರ್ಮಿಕರ ಕೂಲಿಯ ಮೌಲ್ಯ ಮತ್ತು ಕೃಷಿಗೆ ಬಳಕೆಯಾಗುವ ಇನ್ನಿತರ ವೆಚ್ಚಗಳು ಸೇರಿರುತ್ತವೆ.
ಎಂಎಸ್ಪಿಯಿಂದ ರೈತರಿಗೆ ಏನು ಪ್ರಯೋಜನ?
ಇದನ್ನೂ ಓದಿ: ಬೆಂಗಳೂರು ಕಬ್ಬನ್ ಪಾರ್ಕ್ 10 ಮಹಡಿ ಕಟ್ಟಡ ನಿರ್ಮಾಣ; ಪ್ರತಿಭಟನೆ ಕಾರಣ ನಿರ್ಧಾರ ಕೈಬಿಟ್ಟ ಸರ್ಕಾರ
ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಕನಿಷ್ಠ ಬೆಂಬಲ ಬೆಲೆ ರೈತರಿಗೆ ಕನಿಷ್ಠ ಮತ್ತು ಖಾತ್ರಿಯಾದ ಬೆಲೆ ಲಭ್ಯವಾಗುತ್ತದೆ. ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುವದರಿಂದ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿರುತ್ತದೆ. ಇದರಿಂದ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗುತ್ತದೆ. ಕನಿಷ್ಠ ಬೆಂಬಲ ಬೆಲೆ ನೀಡುವುದರಿಂದ ಕೃಷಿ ಉತ್ಪನ್ನಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡದಂತಾಗುತ್ತದೆ. ಒಟ್ಟಾರೆ ರೈತರಿಗೆ ಆದಾಯ ಭದ್ರತೆ, ಸ್ಥಿರವಾದ ಬೆಲೆ, ಉತ್ಪಾದನೆಗೆ ಪ್ರೋತ್ಸಾಹ ಮತ್ತು ಆಹಾರ ಭದ್ರತೆಗೆ ಕಾರಣವಾಗುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com).