BBMP Fire Accident: ಬೆಂಗಳೂರಿನ ಬಿಬಿಎಂಪಿ ಕಚೇರಿಯ ಗುಣನಿಯಂತ್ರಣ ಪ್ರಯೋಗಾಲಯ ಅಗ್ನಿ ದುರಂತ; ಮೂವರ ಸ್ಥಿತಿ ಗಂಭೀರ, ಉಳಿದವರು ಸುರಕ್ಷಿತ
Aug 12, 2023 10:00 PM IST
ಬಿಬಿಎಂಪಿ ಕಚೇರಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅನಾಹುತ
Breaking News: ಬಿಬಿಎಂಪಿ ಕಚೇರಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಇದರಲ್ಲಿ ಹಲವರಿಗೆ ಗಾಯವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯ ಗುಣನಿಯಂತ್ರಣ ಮತ್ತು ಪ್ರಯೋಗಾಲಯ ವಿಭಾಗದಲ್ಲಿ ಶುಕ್ರವಾರ ಅಪರಾಹ್ನ ಅಗ್ನಿ ಅನಾಹುತ ಸಂಭವಿಸಿದೆ.
ಈ ದುರಂತದಲ್ಲಿ 8ರಿಂದ 10 ಸಿಬ್ಬಂದಿ ಗಾಯಗೊಂಡಿದ್ದಾರೆ. ದುರಂತ ನಡೆದು ಅರ್ಧ ಗಂಟೆಯಾದರೂ ಅಲ್ಲಿಗೆ ಅಗ್ನಿಶಾಮಕ ಸಿಬ್ಬಂದಿ ತಲುಪಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದಾಗ್ಯೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಅಗ್ನಿ ಅನಾಹುತಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳದಲ್ಲಿದ್ದವರನ್ನು ಮಾತನಾಡಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಹೇಳಿರುವುದು ಇಷ್ಟು - ಪ್ರಯೋಗಾಲಯದಲ್ಲಿ ಯಾವುದೇ ವಸ್ತು ಸ್ಪೋಟವಾಗಿ ದುರಂತ ಸಂಭವಿಸಿದೆ. ಏಳರಿಂದ 8 ಜನ ಅಲ್ಲಿದ್ದರು. ನಿಖರವಾಗಿ ಎಷ್ಟು ಜನ ಅಂತ ಗೊತ್ತಿಲ್ಲ. ಗಾಯಾಳುಗಳನ್ನು ಪೊಲೀಸರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸ್ಫೋಟ ಸಂಭವಿಸಿದ ಬೆನ್ನಿಗೆ ಪ್ರಯೋಗಾಲಯದ ಒಳಗೆ ಬೆಂಕಿ ಕೆನ್ನಾಲಗೆ ಚಾಚಿಕೊಂಡಿದ್ದು, ಒಳಗಿದ್ದವರು ಹೊರಗೆ ಬರುವುದಕ್ಕೂ ಹರಸಾಹಸ ಪಡೆಬೇಕಾಯಿತು. ಹೊರಗೆ ಬಂದವರು ಬೆಂಕಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಬೆಂಕಿ ಬೇಗನೆ ಆವರಿಸಿದ ಕಾರಣ ಅಲ್ಲಿ ದಟ್ಟ ಹೊಗೆ ಆವರಿಸಿತ್ತು. ಬೆಂಕಿ ದುರಂತದಲ್ಲಿ ಹಲವು ದಾಖಲೆಗಳೆಲ್ಲ ಸುಟ್ಟು ಹಾಳಾಗಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ, 9 ಸಿಬ್ಬಂದಿ ಗಾಯಗೊಂಡಿದ್ದಾರೆ. ಮುಖ್ಯ ಇಂಜಿನಿಯರ್ ಶಿವಕುಮಾರ್, ಕಾರ್ಯನಿರ್ವಾಹಕ ಇಂಜಿನಿರ್ ಸಂತೋಷ್ ಕುಮಾರ್, ವಿಜಯಲಕ್ಷ್ಮಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿರ್ ಶ್ರೀಧರ್, ಸಹಾಯ ಇಂಜಿನಿರ್ ಜ್ಯೋತಿ, ಶ್ರೀನಿವಾಸ್,ಕಂಪ್ಯೂಟರ್ ಆಪರೇಟರ್ ಮನೋಜ್, ಎಫ್‌ಡಿಎ ಸಿರಾಜ್ ಗಾಯಗೊಂಡವರು ಎಂದು ವರದಿಗಳು ಹೇಳಿವೆ.
ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ಸಾಣದಿಂದ ನೇರವಾಗಿ ವಿಕ್ಡೋರಿಯಾ ಆಸ್ಪತ್ರೆಗೆ ಭೇಟಿದರು. ಬಿಬಿಎಂಪಿ ಕಚೇರಿಯ ಅಗ್ನಿ ಅನಾಹುತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿ ಎಲ್ಲರನ್ನೂ ಟ್ರಾಮಾ ಸೆಂಟರ್ ಗೆ ಶಿಫ್ಟ್ ಮಾಡಿ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದರು. ಘಟನೆ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರ
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡ ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಈ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಒಂಬತ್ತು ಸಿಬ್ಬಂದಿ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಡೀನ್ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದು, ಉಳಿದ ಆರು ಮಂದಿ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಡಯಾಲಿಸಿಸ್ ರೋಗಿಯಾಗಿರುವ ಕಿರಣ್ ಸ್ಥಿತಿ ಗಂಭೀರವಾಗಿದೆ. ನಿನ್ನೆಯೂ ಡಯಾಲಿಸಿಸ್ ಮಾಡಲಾಗಿತ್ತು. ಈಗ ಮತ್ತೆ ಡಯಾಲಿಸಿಸ್ ಮಾಡಲು ಸೂಚಿಸಲಾಗಿದೆ. ರೋಗಿಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ನಿಗಾ ವಹಿಸಲಾಗಿದೆ. ಉಳಿದ ಆರು ಮಂದಿ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.