logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ವಾಕಥಾನ್ ಮೂಲಕ ಬೆಂಗಳೂರಿನ ಕಬ್ಬನ್ ಪಾರ್ಕ್ ಇತಿಹಾಸ ತಿಳಿಸಿದ ಇತಿಹಾಸ ತಜ್ಞ ಸಿದ್ದಾರ್ಥ ರಾಜ, ಭಾನುವಾರ ನಂದಿ ಬೆಟ್ಟ ವಿಹಾರ

Bengaluru News: ವಾಕಥಾನ್ ಮೂಲಕ ಬೆಂಗಳೂರಿನ ಕಬ್ಬನ್ ಪಾರ್ಕ್ ಇತಿಹಾಸ ತಿಳಿಸಿದ ಇತಿಹಾಸ ತಜ್ಞ ಸಿದ್ದಾರ್ಥ ರಾಜ, ಭಾನುವಾರ ನಂದಿ ಬೆಟ್ಟ ವಿಹಾರ

HT Kannada Desk HT Kannada

Dec 07, 2023 08:59 PM IST

google News

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಇತಿಹಾಸ ತಜ್ಞ ಸಿದ್ಧಾರ್ಥ ರಾಜ ಅವರೊಂದಿಗೆ ಇತಿಹಾಸದ ಅರಿವು ಪಡೆಯುತ್ತ ವಾಕಿಂಗ್ ಕಾರ್ಯಕ್ರಮದ ಒಂದು ನೋಟ.

  • ಬೆಂಗಳೂರಲ್ಲೇ ಇದ್ದರೂ, ಇಲ್ಲಿನ ಸ್ಥಳಗಳ ಇತಿಹಾಸದ ಅರಿವು ಬಹಳ‍ಷ್ಟು ಜನರಿಗೆ ಇಲ್ಲ. ಹೀಗಾಗಿ ಆ ಅರಿವು ಮೂಡಿಸುವಂತಹ ವಿಶೇಷ ವಾಕಥಾನ್ ಇಂದು (ಡಿ.7) ಬೆಳಗ್ಗೆ ಕಬ್ಬನ್‌ ಪಾರ್ಕ್‌ನಲ್ಲಿ ನಡೆಯಿತು. ಇತಿಹಾಸ ತಜ್ಞ ಸಿದ್ದಾರ್ಥ ರಾಜ ಅವರು ಈ ಕಾರ್ಯಕ್ರಮ ನಡೆಸಿದ್ದರು. ಇದೇ ಭಾನುವಾರ ನಂದಿ ಬೆಟ್ಟದ ಇತಿಹಾಸ ಹೇಳುತ್ತ ವಾಕ್‌ ಮಾಡಲಿದ್ದಾರೆ ಅವರು. ವರದಿ ಎಚ್. ಮಾರುತಿ

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಇತಿಹಾಸ ತಜ್ಞ ಸಿದ್ಧಾರ್ಥ ರಾಜ ಅವರೊಂದಿಗೆ ಇತಿಹಾಸದ ಅರಿವು ಪಡೆಯುತ್ತ ವಾಕಿಂಗ್ ಕಾರ್ಯಕ್ರಮದ ಒಂದು ನೋಟ.
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಇತಿಹಾಸ ತಜ್ಞ ಸಿದ್ಧಾರ್ಥ ರಾಜ ಅವರೊಂದಿಗೆ ಇತಿಹಾಸದ ಅರಿವು ಪಡೆಯುತ್ತ ವಾಕಿಂಗ್ ಕಾರ್ಯಕ್ರಮದ ಒಂದು ನೋಟ.

ಬೆಂಗಳೂರಿನಲ್ಲಿ ದಿನ ನಿತ್ಯವೂ ಓಡಾಡುತ್ತಿರುತ್ತೇವೆ. ವಿಧಾನಸೌಧ, ಹೈ ಕೋರ್ಟ್, ಕಬ್ಬನ್ ಪಾರ್ಕ್, ಲಾಲ್ ಭಾಗ್, ಟಿಪ್ಪು ಅರಮನೆ ಹೀಗೆ ಹತ್ತಾರು ಸ್ಥಳಗಳಲ್ಲೇ ಹಾದು ಹೋಗಿರುತ್ತೇವೆ. ಆದರೆ ಆ ಸ್ಥಳದ ಇತಿಹಾಸ ಕುರಿತು ಚಿಂತನೆಯನ್ನೇ ಮಾಡಿರುವುದಿಲ್ಲ. ಮಾಡಿದ್ದರೂ ಧಾವಂತದ ಬದುಕಿನಲ್ಲಿ ಸ್ಪಷ್ಟ ಚಿತ್ರಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸ್ಥಳಗಳ ಇತಿಹಾಸ ಕುರಿತು ಮಾಹಿತಿ ಲಭ್ಯವಾಗುವ ಹಾಗಿದ್ದರೆ ಎಷ್ಟು ಚೆನ್ನ ಅಲ್ಲವೇ?

ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬದ (Unboxing BLR Habba) ಅಂಗವಾಗಿ ಖ್ಯಾತ ಇತಿಹಾಸ ತಜ್ಞ ಸಿದ್ದಾರ್ಥ ರಾಜ (Historian Siddharth Raja) ಅವರು ಕಬ್ಬನ್ ಪಾರ್ಕ್ (Cubbon Park) ಕುರಿತು ಕಬ್ಬನ್ ಪಾರ್ಕ್‌ನಲ್ಲೇ ವಿಹರಿಸುತ್ತಾ ಮಾಹಿತಿ ನೀಡಿದರು.

ಈ ವಾಯು ವಿಹಾರ ಇಂದು (ಡಿ.7) ಬೆಳಗ್ಗೆ 7 ಗಂಟೆಯಿಂದ 8.30 ರವರೆಗೆ ನಡೆಯಿತು. ಕಬ್ಬನ್ ಪಾರ್ಕ್ ನ ಪೂರ್ವ ದ್ವಾರದಿಂದ ಶೇಷಾದ್ರಿ ಮೆಮೋರಿಯಲ್ ಹಾಲ್, ಸೆಂಚುರಿ ಕ್ಲಬ್, ಹೈ ಕೋರ್ಟ್, ವಿಧಾನಸೌಧ, ಸರ್ ಮಾರ್ಕ್ ಕಬ್ಬನ್ ಪ್ರತಿಮೆ, ಬ್ಯಾಂಡ್ ಸ್ಟ್ಯಾಂಡ್ , ಹತ್ತನೇ ಚಾಮರಾಜ ಒಡೆಯರ್ ಪ್ರತಿಮೆ, ಕಿಂಗ್ ಎಡ್ವರ್ಡ್ ರಾಣಿ ವಿಕ್ಟೋರಿಯಾ ಪ್ರತಿಮೆ, ಅಂತಿಮವಾಗಿ ಕ್ವೀನ್ಸ್ ಸರ್ಕಲ್‌ನಲ್ಲಿ ಕೊನೆಗೊಂಡಿದೆ.

ಸಿದ್ದಾರ್ಥ ಅವರು ಈ ಕಬ್ಬನ್ ಪಾರ್ಕ್ ನಲ್ಲಿ ಈ ಪ್ರತಿಮೆಗಳ ಸ್ಥಾಪನೆಯ ಹಿನ್ನೆಲೆ ಮತ್ತು ಕಾರಣವನ್ನು ಬಿಚ್ಚಿಟ್ಟರು. ಬ್ರಿಟೀಷರ ಕಾಲದಲ್ಲಿ ಅಠಾರಾ ಕಚೇರಿಯಾಗಿದ್ದು ನಂತರ 1881 ರಲ್ಲಿ ಹೈಕೋರ್ಟ್ ಆಗಿ ಬದಲಾದ ಕತೆಯನ್ನು ವಿವರಿಸಿದರು.

ಭಾನುವಾರ ನಂದಿಬೆಟ್ಟದ ಕತೆ

ಇದೇ ಭಾನುವಾರ ನಂದಿ ಬೆಟ್ಟದ (Nandi Hills) ಕತೆಯನ್ನು ಹೇಳಲಿದ್ದಾರೆ ಸಿದ್ದಾರ್ಥ. ನಂದಿ ಬೆಟ್ಟದ ಮೇಲಿನ ನಡಿಗೆ ಬೆಟ್ಟದ ಕೆಳಗೆ ಇರುವ ಭೋಗಾನಂದಿಶ್ವರ ದೇವಸ್ಥಾನದಿಂದ ಆರಂಭವಾಗಲಿದೆ.

ನಂದಿ ಬೆಟ್ಟ ಕೇವಲ ಒಂದು ಬೆಟ್ಟ ಮಾತ್ರವಲ್ಲ. ಇದಕ್ಕೆ ಹೊಂದಿಕೊಂಡು 5 ಬೆಟ್ಟಗಳಿದ್ದು ನೆರೆಯ ಆಂಧ್ರ ಪ್ರದೇಶದವರೆಗೆ ವಿಸ್ತರಿಸಿರುವ ಕತೆಯನ್ನು ಅವರು ತಿಳಿಸಿಕೊಡಲಿದ್ದಾರೆ.

ಭೂಗರ್ಭ ಶಾಸ್ತ್ರದ ಮೂಲಗಳನ್ನು ಹುಡುಕಿ ಕೊಂಡು ಹೋದರೆ ದಕ್ಷಿಣ ಪ್ರಸ್ಥಭೂಮಿಯ ವಿವರಣೆ ಬೇಕಾಗುತ್ತದೆ. ನಂತರ 1200 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ದೇವಾಲಯದ ವಿವರಣೆ ನೀಡಲಿದ್ದಾರೆ.

ಭೋಗಾನಂದಿಶ್ವರ ದೇವಸ್ಥಾನ ನಿರ್ಮಾಣವಾಗಿ. 500-600 ವರ್ಷಗಳು ಕಳೆದಿವೆ. ಈ ದೇವಸ್ಥಾನದ ಮೇಲೆ ಚೋಳ, ಗಂಗರು, ರಾಷ್ಟ್ರಕೂಟ, ವಿಜಯನಗರ ಅರಸರು ಮತ್ತು ಹೊಯ್ಸಳ ರಾಜರ ಪ್ರಭಾವ ಇರುವುದನ್ನು ಸಿದ್ಧಾರ್ಥ ಗುರುತಿಸಿದ್ದಾರೆ. ಭಾನುವಾರದ ನಡಿಗೆಯಲ್ಲಿ ದೇವಸ್ಥಾನದ ಮೂರು ಗರ್ಭಗುಡಿಗಳ ಪರಿಚಯ ಮಾಡಿಕೊಡಲಿದ್ದಾರೆ. ಉತ್ತರ ಭಾಗದಲ್ಲಿ ಭೋಗನಂದೀಶ್ವರ, ದಕ್ಷಿಣದಲ್ಲಿ ಅರುಣಾಚಲೇಶ್ವರ ಮಧ್ಯಭಾಗದಲ್ಲಿ ಉಮಾ ನಂದೀಶ್ವರ ವಿಗ್ರಹಗಳಿರುವುದನ್ನು ವಿವರಿಸಲಿದ್ದಾರೆ.

ದೇವಾಲಯದ ಆವರಣದಲ್ಲಿರುವ ಕಲ್ಯಾಣಿ ಮೊದಲಾದ ಸ್ಥಳಗಳನ್ನು ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಅಂತಿಮವಾಗಿ ನಡಿಗೆಯು ಸುಲ್ತಾನ ಪೇಟೆಯಲ್ಲಿರುವ ಬ್ರಿಟೀಷರ ಕಾಲದ ಸ್ಮಶಾಣದಲ್ಲಿ ಕೊನೆಯಾಗಲಿದೆ. ಇಲ್ಲಿ ಬ್ರಿಟೀಷರ 12 ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರನ್ನು ಹೂಳಿರುವುದನ್ನು ಕಾಣಬಹುದಾಗಿದೆ. ನಂದಿ ಬೆಟ್ಟದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 12.30 ರವರೆಗೆ ಈ ವಾಕಥಾನ್‌ ನಡೆಯಲಿದೆ.

ವರದಿ - ಎಚ್. ಮಾರುತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ