ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಜನಸಾಗರ, ಪೊಲೀಸ್ ಸರ್ಪಗಾವಲು, ಡ್ರೋನ್ ಕಣ್ಗಾವಲು
Dec 31, 2023 09:11 PM IST
ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಹೊಸ ವರ್ಷದ ಸ್ವಾಗತಕ್ಕೆ ಬೆಂಗಳೂರು ಸಜ್ಜಾಗಿದ್ದು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಜನ ಸಾಗರ ಸೇರಿದೆ. ಪೊಲೀಸ್ ಸರ್ಪಗಾವಲು, ಸಿಸಿಟಿವಿ ಡ್ರೋನ್ ಕಣ್ಗಾವಲು ಇದ್ದು, ಒಂದೆರಡು ಅಹಿತಕರ ಘಟನೆಗಳು ಬಿಟ್ಟರೆ ಉಳಿದಂತೆ ಶಾಂತಿಯುತವಾಗಿದೆ. (ವರದಿ - ಎಚ್.ಮಾರುತಿ)
ಹೊಸ ವರ್ಷದ ಸ್ವಾಗತಕ್ಕೆ ಜಗತ್ತು ಸಜ್ಜಾಗಿರುವಂತೆ ಉದ್ಯಾನ ನಗರಿ ಬೆಂಗಳೂರು ಸಹ ತುದಿಗಾಲಲ್ಲಿ ನಿಂತಿದೆ. ರಾಜ್ಯ ರಾಜಧಾನಿಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಕೇಂದ್ರ ಬಿಂದುಗಳು. ಈ ರಸ್ತೆಗಳಲ್ಲಿ ನಿಂತು ಒಮ್ಮೆ ಬೈ ಬೈ 2023 ಮತ್ತು 2024ಕ್ಕೆ ಸ್ವಾಗತ ಕೋರಿದರೆ ಮಾತ್ರ ಸಮಾಧಾನ.
ಬೆಳಗ್ಗೆಯಿಂದಲೇ ಈ ರಸ್ತೆಗಳಲ್ಲಿ ಜನಜಂಗುಳಿಯೋ ಜನಜಂಗುಳಿ. ಸಾಮಾನ್ಯವಾಗಿ ವರ್ಷದ ಕೊನೆಯ ದಿನದಂದು ಒಂದು ಬಾರಿ ಈ ರಸ್ತೆಗಳಲ್ಲಿ ಓಡಾಡಿದರೆ ಅದೇನೋ ಉತ್ಸಾಹ, ಉಲ್ಲಾಸ. ಅದರಲ್ಲೂ ಕುಟುಂಬದ ಸದಸ್ಯರು ಮಕ್ಕಳೊಂದಿಗೆ ಕಾಲ ಕಳೆದರೆ ನೆಮ್ಮದಿ. ಇನ್ನು ತರುಣ ತರುಣಿಯರ ಉತ್ಸಾಹ ಹೇಳತೀರದು. ತಮ್ಮ ಸಂಗಾತಿಯೊಂದಿಗೆ ಕೈ ಕೈ ಹಿಡಿದು ಈ ರಸ್ತೆಗಳಲ್ಲಿ ಎರಡು ರೌಂಡ್ ಹೊಡೆದರೆ ಕೋಟಿ ಸಿಕ್ಕರೂ ಸಿಗದ ಸಂತೋಷ.
ಈಗಾಗಲೇ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಕಾಲಿಡಲೂ ಜಾಗವಿರದಷ್ಟು ಜನ ಸೇರಿದ್ದಾರೆ. ಎತ್ತ ನೋಡಿದರೂ ಜನವೋ ಜನ. ಸಂಜೆಯ ರಾಗಕೆ ಬಾನು ರಂಗಾದಂತೆ ಆಗಸದಲ್ಲಿ ರವಿ ಜಾರಿ ಶಶಿ ಮೂಡಿದಾಗ ಈ ರಸ್ತೆಗಳಲ್ಲೂ ಕಳೆ ಕಟ್ಟುತ್ತದೆ. ಈಗಾಗಲೇ ಈ ರಸ್ತೆಗಳಲ್ಲಿರುವ ಪಬ್, ಬಾರ್ ಹೋಟೆಲ್ ಗಳು ತುಂಬಿ ತುಳುಕುತ್ತಿವೆ. ಹಾಗೆಂದು ಮನಸೋ ಇಚ್ಚೆ ವರ್ತಿಸಲು ಅವಕಾಶ ಇರುವುದಿಲ್ಲ. ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲು, ಪ್ರತಿ ಕಂಬದಲ್ಲೂ ಸಿಸಿಟಿವಿ ಕಣ್ಗಾವಲು, ಅದೂ ಸಾಲದು ಎಂದು ಡ್ರೋನ್ ಕ್ಯಾಮೆರಾಗಳು ಸೆರೆಹಿಡಿಯುವ ನಿರಂತರ ದೃಶ್ಯಾವಳಿಗಳು ತಪ್ಪು ಎಸಗಿದವರನ್ನು ಕ್ಷಣ ಮಾತ್ರದಲ್ಲಿ ಹಿಡಿದು ಕೊಡುತ್ತವೆ.
ಈ ರಸ್ತೆಗಳಲ್ಲಿ ವರ್ಷದಿಂದ ವರ್ಷಕ್ಕೆ ಭದ್ರತೆ ಹೆಚ್ಚಾಗುತ್ತದೆ. ಸುಖಾ ಸುಮ್ಮನೆ ಒಂದು ಬಾರಿ ಖುಷಿಯಿಂದ ಓಡಾಡಿಕೊಂಡು ಹೋಗಬಹುದೇ ಹೊರತು ಯಾವುದೇ ಚೇಷ್ಟೆಗಳಿಗೆ ಅವಕಾಶ ಇರುವುದಿಲ್ಲ. ಹತ್ತಲ್ಲ, ಇಪ್ಪತ್ತಲ್ಲ, 200 ಸಿಸಿಟಿವಿಗಳು ನಮ್ಮ ನಡವಳಿಕೆಯನ್ನು ದಾಖಲಿಸುತ್ತಿರುತ್ತವೆ. ಈ ದೃಶ್ಯಾವಳಿಗಳನ್ನು ವೀಕ್ಷಿಸಲೆಂದೇ ಪ್ರತ್ಯೇಕ ವಾರ್ ರೂಂ ಆರಂಭಿಸಲಾಗಿದೆ.
ಇಂತಹ ಸಂದರ್ಭಗಳಲ್ಲಿ ಕಿಡಿಗೇಡಿಗಳ ಕಾಟ ಸಹಜ. ಇವರ ಮೇಲೆ ಕಣ್ಣಿಡಲು 8 ಸಾವಿರ ಪೊಲೀಸರನ್ನು ಬಂದೋಬಸ್ತ್ ಗಾಗಿ ನಿಯೋಜಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಐಲ್ಯಾಂಡ್ ಗಳನ್ನು ಆರಂಭಿಸಲಾಗಿದೆ. ಈ ಸ್ಥಳಗಳಲ್ಲಿ ಅವರು ವಿರಮಿಸಬಹುದು.
ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ ವ್ಯಾಪಾರಿಗಳ ಸಂಘ ಈ ರಸ್ತೆಗಳಿಗೆ ವಿಶೇಷ ಅಲಂಕಾರ ಮಾಡಿದೆ. ಝಗಮಗಿಸುವ ಬೆಳಕಿನ ದೀಪಗಳು ಪ್ರತ್ಯೇಕ ಲೋಕವನ್ನೇ ಸೃಷ್ಟಿಸುತ್ತವೆ. ಜನಜಂಗುಳಿ ಮಿತಿ ಮೀರುವ ಕಾರಣ ಈ ರಸ್ತೆಗಳಲ್ಲಿರುವ ಮಳಿಗೆಗಳನ್ನು 9 ಗಂಟೆಗೆ ಮುಚ್ಚಲು ಪೊಲೀಸ್ ಇಲಾಖೆ ಆದೇಶಿಸಿದೆ. ರಾತ್ರಿಯಾಗುತ್ತಿದ್ದಂತೆ ತಂಡ ತಂಡವಾಗಿ ಸಾರ್ವಜನಿಕರು ಅದರಲ್ಲೂ ಯುವ ಸಮೂಹ ಈ ರಸ್ತೆಗಳಲ್ಲಿ ಜಮಾವಣೆಗೊಳ್ಳುತ್ತಾರೆ. ಏಕ ಕಾಲದಲ್ಲಿ ಸುಮಾರು 2 ಲಕ್ಷ ಜನ ಜನ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.
ಇದು ರಸ್ತೆಗಳ ಕಥೆಯಾದರೆ ಈ ರಸ್ತೆಗಳಲ್ಲಿರುವ ಪಬ್ ಮತ್ತು ರೆಸ್ಟೋರೆಂಟ್ ಗಳದ್ದು ಮತ್ತೊಂದು ಮದ್ಯ ಲೋಕ. ಮಧ್ಯಾಹ್ನದಿಂದಲೇ ಬಹತೇಕ ಪಬ್ ಮತ್ತು ರೆಸ್ಟೋರೆಂಟ್ ಗಳು ತುಂಬಿ ತುಳುಕುತ್ತಿವೆ. ಗ್ರಾಹಕರನ್ನು ಮನೆಗೆ ತಲುಪಿಸಲು ಕ್ಯಾಬ್ ಗಳ ವ್ಯವಸ್ಥೆಯನ್ನು ಪಬ್ ಗಳು ಮಾಡಿವೆ.
ಈ ರಸ್ತೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು ಬೆಸ್ಕಾಂ ಸಿಬ್ಬಂದಿ ಸ್ಥಳದಲ್ಲೇ ಇರುತ್ತಾರೆ. ಅಕಸ್ಮಾತ್ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಕ್ಷಣ ಮಾತ್ರದಲ್ಲಿ ರಿಪೇರಿಯಾಗಲಿದೆ. ಇಂದಿರಾನಗರ, ಕೋರಮಂಗಲ, ವೈಟ್ ಫೀಲ್ಡ್, ವಿವಿಧ ಮಾಲ್ ಗಳಲ್ಲೂ ಸಂಭ್ರಮಾಚರಣೆ ಕಳೆಗಟ್ಟಿದ್ದು, ಜನ ಜಾತ್ರೆಯೇ ಸೇರಿದೆ.
ಈ ನಡುವೆ, ಯುವತಿಯೊಬ್ಬರ ಜತೆಗೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಆ ಯುವತಿ ಬಾಯ್‌ಫ್ರೆಂಡ್ ಮತ್ತು ಸ್ಥಳದಲ್ಲಿದ್ದವರು ಥಳಿಸಿದ ಘಟನೆ ವರದಿಯಾಗಿದೆ.